Previous ಸಾಂಖ್ಯಯೋಗ ಸಾದಾಖ್ಯ Next

ಸಾಗರ ತರಂಗ ನ್ಯಾಯ

ಸಾಗರ ತರಂಗ ನ್ಯಾಯ

ಪರಶಿವ ಮತ್ತು ಜೀವರ ನಡುವಿನ ಸಂಬಂಧ ಪರಶಿವ ಮತ್ತು ಪ್ರಪಂಚದ ನಡುವಿನ ಸಂಬಂಧ - ಇವುಗಳ ವಿಚಾರವಾಗಿ ಮಾತನಾಡುವಾಗ ವಚನಕಾರರು ಸಾಗರ ತರಂಗ ನ್ಯಾಯವನ್ನು ಬಳಸಿಕೊಳ್ಳುತ್ತಾರೆ. ಜೀವನ ದೋಷಗಳೂ, ಪ್ರಪಂಚದ ದೋಷಗಳೂ ಪರಶಿವನಿಗೆ ತಟ್ಟುವುದಿಲ್ಲವೆ, ಎಂದು ಯಾರಾದರೂ ಆಕ್ಷೇಪಿಸಿದರೆ, ಅದಕ್ಕೆ ವಚನಕಾರರು ಹೀಗೆ ಉತ್ತರಿಸುತ್ತಾರೆ: ತೃಣ ಮತ್ತು ಕಣಗಳು ಸಾಗದರಲ್ಲಿವೆ ಎಂದರೆ, ಸಾಗರದ ಆಳ ಮತ್ತು ಗಾಂಭೀರ್ಯ ತೃಣ ಮತ್ತು ಕಣಗಳಲ್ಲಿವೆ ಎಂದಾಗುವುದಿಲ್ಲ. ತೃಣ ಮತ್ತು ಕಣಗಳು ಅಥವಾ ನೊರೆ ಮತ್ತು ತೆರೆಗಳು ಸಾಗರದ ಕ್ಷಣಿಕ ಅವಸ್ಥೆಗಳೇ ಹೊರತು, ಅದರ ಸಾರಸ್ವಭಾವವಲ್ಲ. ಅದೇ ರೀತಿ, ಬ್ರಹ್ಮ, ವಿಷ್ಣು ಮುಂತಾದವರೂ, ಹುಲುಮಾನವರೂ ಪರಶಿವನಲ್ಲಿದ್ದರೂ ಅವರಾರೂ ಪರಶಿವನಂತೆ ಪರಿಪೂರ್ಣರಲ್ಲ, ನಿತ್ಯರಲ್ಲ, ಶುದ್ದರಲ್ಲ. ಅದೇ ರೀತಿ, ನೊರೆ ತೆರೆಗಳು, ತೃಣಕಣಗಳು ಸಾಗರವನ್ನಲಂಬಿಸುವಂತೆ ಬ್ರಹ್ಮ, ವಿಷ್ಣು, ಮೊದಲಾದ ಅಧಿದೇವತೆಗಳೂ ಮಾನವರೂ, ಪ್ರಾಣಿಗಳೂ, ಭೌತ ವಿಶ್ವವೂ, ಪರಶಿವನನ್ನೇ ಅವಲಂಬಿಸುತ್ತವೆ. ಅವರ ದೋಷಗಳು, ಅವರ ಅನಿತ್ಯತೆ, ಪರಶಿವನಿಗೆ ತಾಗುವುದಿಲ್ಲ. ಒಂದು ವೇಳೆ, ಚರಾಚರ ವಸ್ತುಗಳನ್ನೂ ಅಧಿದೇವತೆಗಳನ್ನೂ ಒಳಗೊಂಡ ಇಡೀ ಜಗತ್ತನ್ನೇ ಪರಶಿವನ ಶರೀರವೆಂದು ಪರಿಗಣಿಸಿದರೂ, ಆ ಶರೀರದ ದೊಷಗಳು ಅವನಿಗೆ ತಾಗುವುದಿಲ್ಲ. ಲಿಂಗಾಂಗ ಸಾಮರಸ್ಯ ಪಡೆದ ಮಾನವನನ್ನೇ ದೈಹಿಕ ಮತ್ತು ಪರಿಸರದ ಬಾಧೆಗಳು ಪೀಡಿಸುವುದಿಲ್ಲವೆಂದ ಮೇಲೆ, ನಿತ್ಯಮುಕ್ತನಾದ ಪರಶಿವನನ್ನು ೩೫ ತತ್ವಗಳ ಶರೀರವು ಹೇಗೆ ಪೀಡಿಸಬಲ್ಲವು? (೧೧:೧೩೦೪).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಸಾಂಖ್ಯಯೋಗ ಸಾದಾಖ್ಯ Next