Previous ನವವಿಧ ಭಕ್ತಿ ಪಂಚಜ್ಞಾನ Next

ಪಂಚಕೋಶ

ಪಂಚಕೋಶ

ಉಪನಿಷತ್ತುಗಳಲ್ಲಿ ಪ್ರಥಮ ಬಾರಿಗೆ ಉಲ್ಲೇಖಿತವಾಗಿರುವ ಪಂಚಕೋಶ ಪರಿಕಲ್ಪನೆ ವಚನಗಳಲ್ಲೂ ಪ್ರಸ್ತಾಪಿಸಲ್ಪಟ್ಟಿದೆ. ಪರಿಕಲ್ಪನೆಯ ಮೂಲ ಅರ್ಥವನ್ನು ವಚನಕಾರರು ಬದಲಾಯಿಸಿಲ್ಲ. ಆದರೆ ಅದನ್ನು ತಮ್ಮ ಸಿದ್ಧಾಂತಕ್ಕನುಗುಣವಾಗಿ ಹಿಗ್ಗಿಸಿದ್ದಾರೆ.

ಪಂಚಕೋಶದ ಸಿದ್ಧಾಂತದ ಪ್ರಕಾರ, ಪರಬ್ರಹ್ಮ ಸ್ವರೂಪವಾದ ಜೀವಾತ್ಮನು ಮಾನವನ ಐದು ಕೋಶಗಳಲ್ಲಿ ಅಡಗಿದ್ದಾನೆ. ಅವುಗಳ ವಿವರ ಹೀಗಿದೆ :

೧. ಅನ್ನಮಯ ಕೋಶ = ಅನ್ನಮಯ ಕೋಶವೆಂದರೆ ನಾವು ತಿಂದ ಅನ್ನ (ಆಹಾರ)ದಿಂದ ರೂಪುಗೊಂಡ ಸ್ಥೂಲ ಶರೀರ, ವಚನಕಾರರು ಈ ಮಾತನ್ನು ಒಪ್ಪಿಕೊಂಡರೂ, ಈ ಅನ್ನವು ಪ್ರಸಾದ ರೂಪದ್ದೆಂದೂ, ಆದುದರಿಂದ, ಅದು ಪ್ರಸಾದಕಾಯವೆಂದೂ ಹೇಳುತ್ತಾರೆ.

೨. ಪ್ರಾಣಮಯಕೋಶ = ಅನ್ನಮಯಕೋಶದೊಳಗಿರುವ ಪ್ರಾಣಮಯ ಕೋಶವು ಪ್ರಾಣಸ್ವರೂಪದ್ದಾಗಿದೆ. ಪ್ರಾಣಲಿಂಗಿಯಾದವನು ತನ್ನ ಪ್ರಾಣವನ್ನೆ ಲಿಂಗವನ್ನಾಗಿ ಮಾಡಿಕೊಳ್ಳುತ್ತಾನೆ. (ಪ್ರಾಣವಿರುವ ಪ್ರತಿ ಸ್ಥಳದಲ್ಲಿಯೂ ಲಿಂಗವನ್ನು ಪ್ರತಿಷ್ಠಾಪಿಸಿಕೊಳ್ಳುತ್ತಾನೆ).

೩. ಮನೋಮಯಕೋಶ = ಪ್ರಾಣಮಯ ಕೋಶದೊಳಗಿರುವ ಮನಸ್ಸು ಅಥವಾ ಮನೋಮಯಕೋಶ ಯಾವಾಗಲೂ ಶಿವಧ್ಯಾನದಲ್ಲೇ ನಿರತವಾಗಿ, ಮತ್ತೊಂದನ್ನು ಯೋಚಿಸುವುದಿಲ್ಲ.

೪. ವಿಜ್ಞಾನಮಯ ಕೋಶ = ಮನೋಮಯಕೋಶದೊಳಗಿರುವ ವಿಜ್ಞಾನವು (ವಿಜ್ಞಾನಮಯಕೋಶವು) ಚಿತ್‌ಸ್ವರೂಪದಾಗಿದ್ದು, ಭವಾಂತರದಲ್ಲಿ ಕಲುಷಿತಗೊಂಡಿದೆ. ಲಿಂಗಸಾಧಕನು ಆಧ್ಯಾತ್ಮಿಕ ಸಾಧನೆಯ ಮೂಲಕವೂ ಧ್ಯಾನದ ಮೂಲಕವೂ ಅದರ ಜ್ಞಾನಸ್ವರೂಪವನ್ನು ಅನುಭವಿಸುತ್ತಾನೆ.

೫. ಆನಂದಮಯಕೋಶ = ವಿಜ್ಞಾನಮಯಕೋಶದಲ್ಲಿರುವ ಆನಂದಮಯವಾದ ವಿಜ್ಞಾನವು (ಆತ್ಮನು) ಸದಾ ಶಿವನೊಂದಿಗೆ ಐಕ್ಯವಾಗಿ ತೃಪ್ತಿಯಿಂದ ಇರುತ್ತಾನೆ.

ವಾಸ್ತವವಾಗಿ, ಪಂಚಕೋಶಗಳನ್ನು ಪ್ರಸ್ತಾಪಿಸುವ ಗುಮ್ಮಳಾಪುರದ ಸಿದ್ಧಲಿಂಗದೇವನು ಪ್ರತಿಕೋಶವನ್ನು ಪ್ರಸ್ತಾಪಿಸುವಾಗಲೂ ಬಸವಣ್ಣನ ಹೆಸರನ್ನು ತರುತ್ತಾನೆ. ಉದಾಹರಣೆಗೆ “...ಎನ್ನ ಅನ್ನಮಯವ ಪ್ರಸಾದಸ್ವರೂಪವಾಗಿ ಬಂದು ಒಳಕೊಂಡನಯ್ಯಾ ಬಸವಣ್ಣ, ಎನ್ನ ಪ್ರಾಣಮಯ ಲಿಂಗಸ್ವರೂಪವಾಗಿ ಬಂದು ಒಳಕೊಂಡನಯ್ಯಾ ಬಸವಣ್ಣ... (ಇತ್ಯಾದಿ) ಹೀಗೆ ಎನ್ನ ಅಂಗ, ಮನ, ಪ್ರಾಣೇಂದ್ರಿಯಗಳಲ್ಲಿ ಪರಿಪೂರ್ಣವಾಗಿ ಬಸವಣ್ಣನೇ ಇಷ್ಟವಾಗಿ ತೊಳಗಿ ಬೆಳಗುತ್ತಿಪ್ಪ ಭೇದವನು....”(11:784) ಎಂದು ಅವನು ಹೇಳುವಲ್ಲಿ ಬಸವಣ್ಣನೇ ಶಿವನೆಂಬ ಅಭಿಪ್ರಾಯ ಹೊರಹೊಮ್ಮುತ್ತದೆ.

ಪಂಚಕೋಶಗಳನ್ನು ಕೆಡಿಸುವುದು

ಶಿವಸ್ವರೂಪನಾದ ಅಂಗನು, ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ, ಎಂಬ ಪಂಚಕೋಶದೊಳಗೆ ಬಂಧಿತನಾಗಿದ್ದು, ಅವುಗಳಿಂದಾಗಿ ಅನೇಕ ದುಃಖಗಳಿಗೆ ಈಡಾಗಿದ್ದಾನೆ. ಆದರೆ ಅವುಗಳ ದುಷ್ಪರಿಣಾಮಗಳನ್ನು ಇಲ್ಲವಾಗಿಸಿದರೆ, ಲಿಂಗಾಂಗ ಸಾಮರಸ್ಯ ಪಡೆಯಬಹುದು. ವಚನಕಾರರು ಪಂಚಕೋಶಗಳ ದುಷ್ಪರಿಣಾಮಗಳನ್ನು ಹೇಗೆ ಕಡಿಮೆ ಮಾಡಬಹುದೆಂಬುದನ್ನು ಈ ಕೆಳಗಿನಂತೆ ಸೂಚಿಸಿದ್ದಾರೆ.

ಎಲ್ಲ ಪದಾರ್ಥಗಳನ್ನೂ ಲಿಂಗಾರ್ಪಿತ ಮಾಡಿ, ಲಿಂಗ ಭೋಗಿಸಿದ ನಂತರವೇ ತಾನು ಭೋಗಿಸುತ್ತೇನೆಂದು ನಿರ್ಧರಿಸಿ, ಅದರಂತೆ ಮಾಡಿದಾಗ ಅವನ ಅನ್ನಮಯ ಕೋಶ ಕೆಟ್ಟು, ಪ್ರಸಾದಕಾಯವಾಗುತ್ತದೆ ಪಂಚವಾಯುಗಳನ್ನು ನಿಯಂತ್ರಿಸಿ, ಲಿಂಗವು ಪ್ರಾಣಮಯವಾದಾಗ, ಪ್ರಾಣಮಯಕೋಶ ಕೆಡುತ್ತದೆ. ಮನಸ್ಸಿನಲ್ಲಿದ್ದ ಐಹಿಕ ಆಸೆಗಳೆಲ್ಲಾ ಹೋಗಿ, ಅಲ್ಲಿ ಲಿಂಗ ನೆಲೆಗೊಂಡರೆ, ಮನೋಮಯ ಕೋಶ ಕೆಡುತ್ತದೆ, ಧ್ಯಾನದಲ್ಲಿ ಜ್ಞಾತೃ-ಜ್ಞೇಯಗಳೆರೆಡೂ ಒಂದಾದರೆ, ವಿಜ್ಞಾನಮಯಕೋಶ ಕೆಡುತ್ತದೆ. ಅನುಭಾವದಲ್ಲಿ ಆನಂದವನ್ನು ಪಡೆದು ಐಹಿಕ ಆನಂದವನ್ನು ಕಡೆಗಣಿಸಿದರೆ ಆನಂದಮಯಕೋಶ ಕೆಡುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಆತ್ಮನು (ಅಂಗನು) ಕೋಶಗಳಲ್ಲಿ ಬಂಧಿತನಾಗಿದ್ದು, ಆ ಬಂಧನದಿಂದ ಅವನನ್ನು ಬಿಡಿಸುವುದು. ಆ ಬಿಡಿಸುವ ಪ್ರಯತ್ನದಲ್ಲಿ ಕೋಶಗಳೇನೂ ನಾಶವಾಗುವುದಿಲ್ಲ. ಅವುಗಳ ದುರ್ಗುಣಗಳಷ್ಟೇ ನಾಶವಾಗಿ, ಆತ್ಮನು ಮೊದಲಿನಂತೆ ಪ್ರಕಾಶಿಸುತ್ತಾನೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ನವವಿಧ ಭಕ್ತಿ ಪಂಚಜ್ಞಾನ Next