Previous ಆದಿ ಅನಾದಿ ಇಲ್ಲದಂದು ಆರತಿ Next

ಆನಂದ

ಆನಂದ

ಆನಂದವು ಸುಖಕ್ಕಿಂತ ಎರಡು ರೀತಿಯಲ್ಲಿ ಭಿನ್ನ. ಸುಖವು ಇಂದ್ರಿಯವೊಂದು ತನ್ನ ವಿಷಯದೊಡನೆ ಸಂಪರ್ಕ ಪಡೆದಾಗ ಮನಸ್ಸಿನಲ್ಲಾಗುವ ಪರಿಣಾಮ. ಈ ಕಾರಣಕ್ಕಾಗಿ ಅದನ್ನು ಇಂದ್ರಿಯ ಸುಖ" ಎಂದು ಕರೆಯುತ್ತಾರೆ. ಆದರೆ ಆನಂದ ಇಂದ್ರಿಯ ಜನ್ಯ ಅಥವಾ ಇಂದ್ರಿಯ ವಿಷಯ ಜನ್ಯವಲ್ಲ. ಎರಡನೆಯದಾಗಿ ಇಂದ್ರಿಯ ಸುಖ ಕ್ಷಣಿಕ. ಆದರೆ ಆನಂದ ನಿತ್ಯ.

ಆನಂದವು ಲಿಂಗಾಂಗ ಸಾಮರಸ್ಯದ ಪರಿಣಾಮ. ಇದು ಎರಡು ಹಂತಗಳಲ್ಲಿ ಪರಿಣಮಿಸುತ್ತದೆ. ಸಾಧಕನು ಧ್ಯಾನ ಪ್ರಾರಂಭಿಸಿ, ಇಂದ್ರಿಯ ಮತ್ತು ಅಂತಃಕರಣಗಳ ವ್ಯಾಪಾರವನ್ನು ತಾತ್ಕಾಲಿಕವಾಗಿ ತಡೆಹಿಡೆದಾಗ, ಆತ್ಮವು ತಾನೊಂದೇ ಇರುತ್ತದೆ. ಕೇವಲ ಒಂದೇ ಇರುವ ಆತ್ಮದ ಈ ಸ್ಥಿತಿಗೆ ಕೈವಲ್ಯಾನಂದ ಎಂದು ಹೆಸರು. ದೇಹದ ಭಾರವಾಗಲಿ ಮಾನಸಿಕ ದುಃಖ ದುಮ್ಮಾನಗಳಾಗಲಿ ಇಲ್ಲದ ಆತ್ಮಕ್ಕೆ ತಾನೊಂದೇ ಇರುವುದು ಆನಂದದಾಯಕ ಸ್ಥಿತಿ.

ಲಿಂಗಾಂಗ ಸಾಮರಸ್ಯ ಮುಗಿದಾಗ ಆತ್ಮನಿಗೆ ತಾನು ಪರಮ ಧೈಯವನ್ನು ಸಾಧಿಸಿದ ತೃಪ್ತಿ ಉಂಟಾಗುತ್ತದೆ. ಅರಿಷಡ್ವರ್ಗ ಮುಂತಾದ ಚಿತ್ತ ವೃತ್ತಿಗಳಿಲ್ಲದವನಿಗಷ್ಟೇ ಅನುಭಾವ (ಲಿಂಗಾಂಗ ಸಾಮರಸ್ಯ ) ಸಾಧ್ಯ. ಚಿತ್ತವೃತ್ತಿಗಳಿಲ್ಲದ ಮನಸ್ಸು ಆಸೆಗಳಿಂದ ಮುಕ್ತ, ಪೂರ್ವಕರ್ಮಗಳಿಂದಲೂ ಮುಕ್ತ. ಹೀಗೆ ಅತ್ಯಂತ ಹೆಚ್ಚಿನ ಧ್ಯೇಯವನ್ನು ಸಾಧಿಸಿದ, ಆಸೆ ಮತ್ತು ವಾಸನೆಗಳಿಲ್ಲದ ಮನಸ್ಸಿನಲ್ಲಿ ನೆಲೆಯೂರುವ ಶಾಂತಿ, ತೃಪ್ತಿ, ಸಮಾಧಾನಗಳೇ ಅನಂದದ ಮತ್ತೊಂದು ಹೆಸರು.

ವಚನಕಾರರು ಆನಂದವು ಅಂಗನಿಗೆ ಹೊಸತೇನಲ್ಲ ಎನ್ನುತ್ತಾರೆ. ಲಿಂಗದ ಭಾಗವಾಗಿದ್ದಾಗ, ಶಿವ ಸಾನಿಧ್ಯದಿಂದಾಗಿ ಅವನು ಸದಾ ಅನಂದಿಯೇ ಆಗಿದ್ದ. ಸಂಸಾರ ಬಂಧನದಲ್ಲಿ ಅವಿದ್ಯೆಯಿಂದಾಗಿಯೂ ಅಂಗ ಸಂಗದಿಂದಾಗಿಯೂ ಅದನ್ನು ಮರೆತಿದ್ದನಷ್ಟೇ. ಮಲತ್ರಯಗಳನ್ನು ಕೊಡವಿಕೊಂಡು ಮುನ್ನಿನ ಲಿಂಗಾಂಗ ಸಾಮರಸ್ಯವನ್ನು ಪಡೆದಾಗ, ಅದರ ಜೊತೆಗಿನ ಆನಂದವೂ ಅವನಿಗೆ ಲಭ್ಯವಾಗುತ್ತದೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಆದಿ ಅನಾದಿ ಇಲ್ಲದಂದು ಆರತಿ Next