Previous ಅಂಗಲಿಂಗ ಸಂಬಂಧ ಅಧಿದೇವತೆಗಳು ಮತ್ತು ಶಕ್ತಿಗಳು Next

ಅಂಗಸ್ಥಲ-ಲಿಂಗಸ್ಥಲ ಸಂಬಂಧ

ಅಂಗಸ್ಥಲ-ಲಿಂಗಸ್ಥಲ ಸಂಬಂಧ

ವಚನಕಾರರ ಪ್ರಕಾರ, ಪರಶಿವನು ಸೃಷ್ಟಿ ಮಾಡಿದ ಮೇಲೆ ಅವನು ಮಾನವ ಮತ್ತು ಪ್ರಪಂಚದಿಂದ ದೂರ ಉಳಿಯದೆ, ಮಾನವನಲ್ಲಿಯೂ ಪ್ರಪಂಚದಲ್ಲಿಯೂ ಅಂತರ್ಗತನಾಗಿರುತ್ತಾನೆ. ಮನುಷ್ಯನು ಪರಶಿವನನ್ನು ಆರು ಸ್ಥಲಗಳಲ್ಲಿ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ಹೀಗೆ ಸಾಕ್ಷಾತ್ಕಾರ ಮಾಡಿಕೊಳ್ಳುವ ಅಂಗನು ಆರುಸ್ಥಲಗಳಲ್ಲಿರಬೇಕಾಗುತ್ತದೆ. ಅಂಗನ ಈ ಆರು ಅಂಗಸ್ಥಲಗಳೆಂದರೆ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ. ಅವನು ಸಾಕ್ಷಾತ್ಕಾರ ಮಾಡಿಕೊಳ್ಳುವ ಶಿವನ ಸ್ಥಲಗಳಿಗೆ ಲಿಂಗಸ್ಥಲವೆಂಬ ಹೆಸರಿದ್ದು, ಅವು ಕ್ರಮವಾಗಿ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ ಮತ್ತು ಮಹಾಲಿಂಗ ಎನಿಸಿಕೊಳ್ಳುತ್ತವೆ. ಈ ಆರು ಅಂಗಸ್ಥಲಗಳು ಆರು ಲಿಂಗಸ್ಥಳಗಳಿಗೆ ಹೇಗೆ ಸಂಬಂಧಿಸಿವೆ ಎಂಬುದನ್ನು ಇಲ್ಲಿ ನೋಡಬಹುದು.

ಮನುಷ್ಯನ ದೇಹೇಂದ್ರಿಯಾದಿಗಳು ಪರಶಿವನ ಶಕ್ತಿಯ ರೂಪಾಂತರ. ಮನುಷ್ಯನು ಬಂಧನದಲ್ಲಿರುವವರೆಗೆ ಅಥವಾ ತಾನು ಬಂಧನಕ್ಕೊಳಗಾಗುವಂತೆ ಅವುಗಳನ್ನು ಬಳಸುವವರೆಗೆ ಅವು ಶಕ್ತಿ ಅಥವಾ ಅಧೋಮಾಯೆ ಎನಿಸಿಕೊಳ್ಳುತ್ತವೆ. ಒಂದು ವೇಳೆ ಅವನು ಅವುಗಳನ್ನು ಆಧ್ಯಾತ್ಮಿಕ ಉದ್ದೇಶಕ್ಕಾಗಿ ಬಳಸಿದರೆ ಅವೇ ಶಕ್ತಿಗಳು ಭಕ್ತಿ ಅಥವಾ ಊರ್ಧ್ವಮಾಯೆ ಎನಿಸಿಕೊಳ್ಳುತ್ತವೆ. ಹೀಗೆ ಪ್ರತಿಯೊಂದು ಶಕ್ತಿಯೂ ಭಕ್ತಿಯಾಗಿ ಮಾರ್ಪಡುವ ಸಾಧ್ಯತೆಯಿದೆ.

ಮೊಟ್ಟಮೊದಲನೆ ಆಧ್ಯಾತ್ಮಿಕ ಸಾಧನೆಯ ಹಂತದಲ್ಲಿರುವ ಸಾಧಕನು ಭಕ್ತನೆನಿಸಿಕೊಳ್ಳುತ್ತಾನೆ. ಪರಶಿವನ ಕ್ರಿಯಾಶಕ್ತಿಯು ಭಕ್ತನಲ್ಲಿ ಘ್ರಾಣೇಂದ್ರಿಯವಾಗಿ ರೂಪಾಂತರಗೊಂಡಿದ್ದು ಅದರಲ್ಲಿ ಪರಶಿವನು ಆಚಾರಲಿಂಗ ರೂಪದಲ್ಲಿ ಅಂತರ್ಗತವಾಗಿದ್ದಾನೆ. ಆಚಾರಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಭಕ್ತನು ತನ್ನ ಚಿತ್ತವನ್ನೇ ಹಸ್ತವನ್ನಾಗಿ ಮಾಡಿಕೊಂಡು ಆಚಾರಲಿಂಗಕ್ಕೆ ಪರಿಮಳ ದ್ರವ್ಯಗಳನ್ನು ಅರ್ಪಿಸುತ್ತಾನೆ, ಹಾಗೂ ಆ ಅರ್ಪಿತವು ಗಂಧವೆಂಬ ಪ್ರಸಾದವಾಗುತ್ತದೆ. ಭಕ್ತನ ಈ ಭಕ್ತಿಗೆ ವಿಶ್ವಾಸಭಕ್ತಿ ಅಥವಾ ಶ್ರದ್ಧಾಭಕ್ತಿ ಅಥವಾ ಸದ್ಭಕ್ತಿ ಎಂದು ಹೆಸರು. ಹೀಗೆ ಅರ್ಪಿಸಿದ ಚಿತ್ತವು ಸುಚಿತ್ರವೆನಿಸಿಕೊಳ್ಳುತ್ತದೆ. ಪ್ರಾಣದ್ರಿಯದಲ್ಲಿರುವ ಆಚಾರಲಿಂಗಕ್ಕೆ ಅವನು ಅರ್ಪಿಸುವದರಿಂದ ಘ್ರಾಣೇಂದ್ರಿಯವು (ಮೂಗು) ಪರಶಿವನ (ಆಚಾರಲಿಂಗದ) ಬಾಯಿ (ಮುಖ) ಎನಿಸಿಕೊಳ್ಳುತ್ತದೆ.

ಎರಡನೆ ಆಧ್ಯಾತ್ಮಿಕ ಸಾಧನೆಯ ಹಂತದಲ್ಲಿರುವ ಸಾಧಕನಿಗೆ ಮಹೇಶ (ಮಹೇಶ್ವರ) ಎಂದು ಹೆಸರು. ಪರಶಿವನ ಜ್ಞಾನಶಕ್ತಿಯು ಮಹೇಶಸ್ಥಲದಲ್ಲಿರುವ ಸಾಧಕನಲ್ಲಿ ಜಿಹೇಂದ್ರಿಯವಾಗಿ (ನಾಲಗೆಯಾಗಿ) ರೂಪಾಂತರಗೊಂಡಿದ್ದು, ಪರಶಿವನು ಅದರಲ್ಲಿ ಗುರುಲಿಂಗವಾಗಿ ಅಂತರ್ಗತವಾಗಿದ್ದಾನೆ. ಗುರುಲಿಂಗವನ್ನು ಸಾಕ್ಷಾತ್ಕಾರಿಸಿಕೊಳ್ಳಬೇಕೆಂಬ ಮಹೇಶನು ತನ್ನ ಬುದ್ಧಿಯನ್ನೇ ಹಸ್ತವನ್ನಾಗಿ ಮಾಡಿಕೊಂಡು, ರಸವೆಂಬ ದ್ರವ್ಯವನ್ನು ಅರ್ಪಿಸಿ, ಅದನ್ನು ರುಚಿಯೆಂಬ ಪ್ರಸಾದವನ್ನಾಗಿ ಮಾಡಿಕೊಳ್ಳುತ್ತಾನೆ. ಮಹೇಶನ ಈ ಭಕ್ತಿಗೆ ನೈಷ್ಠಿಕಾಭಕ್ತಿ ಎಂದು ಹೆಸರು. ರಸವನ್ನು ಅರ್ಪಿಸುವ ಮಹೇಶನ ಬುದ್ದಿಗೆ ಸುಬುದ್ಧಿಯೆಂದು ಹೆಸರು, ನಾಲಗೆಯಲ್ಲಿರುವ ಗುರುಲಿಂಗಕ್ಕೆ ಅವನು ರುಚಿಯನ್ನು ಅರ್ಪಿಸುವುದರಿಂದ, ಆ ಅರ್ಪಣೆಯನ್ನು ಸ್ವೀಕರಿಸುವ ಜಿಹೇಂದ್ರಿಯವು (ನಾಲಗೆಯು) ಪರಶಿವನ (ಗುರುಲಿಂಗದ) ಬಾಯಿ (ಮುಖ) ಎನಿಸಿಕೊಳ್ಳುತ್ತದೆ.

ಆಧ್ಯಾತ್ಮಿಕ ಸಾಧನೆಯ ಮೂರನೆಯ ಹಂತದಲ್ಲಿರುವ ಸಾಧಕನಿಗೆ ಪ್ರಸಾದಿ ಎಂದು ಹೆಸರು. ಪರಶಿವನ ಇಚ್ಛಾಶಕ್ತಿಯು ಸಾಧಕನ ನೇತ್ರವಾಗಿ ರೂಪಾಂತರಗೊಂಡಿದ್ದು, ಅದರಲ್ಲಿ ಅಂತಸ್ಥವಾಗಿರುವ ಪರಶಿವನಿಗೆ ಶಿವಲಿಂಗ ಎಂದು ಹೆಸರು. ಶಿವಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಪ್ರಸಾದಿಯು ತನ್ನ ಅಹಂಕಾರವನ್ನೆ ಹಸ್ತವನ್ನಾಗಿ ಮಾಡಿಕೊಂಡು ಬೆಳಕನ್ನು ಶಿವಲಿಂಗಕ್ಕೆ ಅರ್ಪಿಸಿ, ಅದನ್ನು ರೂಪ ಎಂಬ ಪ್ರಸಾದವನ್ನಾಗಿ ಮಾಡಿಕೊಳ್ಳುತ್ತಾನೆ. ಪ್ರಸಾದಿಯ ಈ ಭಕ್ತಿಗೆ ಸಾವಧಾನ ಭಕ್ತಿ ಎಂದು ಹೆಸರು. ಬೆಳಕನ್ನು ಅರ್ಪಿಸುವ ಪ್ರಸಾದಿಯ ಅಹಂಕಾರಕ್ಕೆ ನಿರಹಂಕಾರವೆಂದು ಹೆಸರು. ನೇತ್ರದಲ್ಲಿರುವ ಶಿವಲಿಂಗಕ್ಕೆ ಅವನು ಬೆಳಕನ್ನು ಅರ್ಪಿಸುವುದರಿಂದ ಆ ಅರ್ಪಣೆಯನ್ನು ಸ್ವೀಕರಿಸುವ ನೇಂದ್ರಿಯವು (ಕಣ್ಣು) ಪರಶಿವನ (ಶಿವಲಿಂಗದ) ಬಾಯಿ (ಮುಖ) ಎನಿಸಿಕೊಳ್ಳುತ್ತದೆ.

ಆಧ್ಯಾತ್ಮಿಕ ಸಾಧನೆಯ ನಾಲ್ಕನೆ ಹಂತದಲ್ಲಿರುವ ಸಾಧಕನಿಗೆ ಪ್ರಾಣಲಿಂಗಿಯೆಂದು ಹೆಸರು. ಪರಶಿವನ ಆದಿಶಕ್ತಿಯು ಸಾಧಕನ ತ್ವಗಿಂದ್ರಿಯವಾಗಿ ರೂಪಾಂತರಗೊಂಡಿದ್ದು, ಅದರಲ್ಲಿ ಅಂತಸ್ಥವಾಗಿರುವ ಪರಶಿವನಿಗೆ ಜಂಗಮಲಿಂಗವೆಂದು ಹೆಸರು. ಜಂಗಮಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಪ್ರಾಣಲಿಂಗಿಯು ತನ್ನ ಮನಸ್ಸನ್ನೇ ಹಸ್ತವನ್ನಾಗಿ ಮಾಡಿಕೊಂಡು, ಸೋಂಕನ್ನು ಜಂಗಮಲಿಂಗಕ್ಕೆ ಅರ್ಪಿಸಿ, ಅದನ್ನು ಸ್ಪರ್ಶನವೆಂಬ ಪ್ರಸಾದವನ್ನಾಗಿ ಮಾಡಿಕೊಳ್ಳುತ್ತಾನೆ. ಪ್ರಾಣಲಿಂಗಿಯ ಈ ಭಕ್ತಿಗೆ ಅನುಭಾವ ಭಕ್ತಿ ಎಂದು ಹೆಸರು. ಸೋಂಕನ್ನು ಅರ್ಪಿಸುವ ಪ್ರಾಣಲಿಂಗಿಯ ಮನಸ್ಸಿಗೆ ಸುಮನವೆಂದು ಹೆಸರು. ತ್ವಗಿಂದ್ರಿಯ (ಚರ್ಮ)ದಲ್ಲಿರುವ ಜಂಗಮಲಿಂಗಕ್ಕೆ ಅವನು ಸೋಂಕನ್ನು ಅರ್ಪಿಸುವುದರಿಂದ, ಅದನ್ನು ಸ್ವೀಕರಿಸುವ ತ್ವಗಿಂದ್ರಿಯವು ಪರಶಿವನ (ಜಂಗಮಲಿಂಗದ) ಬಾಯಿ (ಮುಖ) ಎನಿಸಿಕೊಳ್ಳುತ್ತದೆ.

ಐದನೆ ಹಂತದಲ್ಲಿರುವ ಸಾಧಕನಿಗೆ ಶರಣನೆಂದು ಹೆಸರು. ಪರಶಿವನ ಪರಾಶಕ್ತಿಯು ಶರಣನ ಶ್ರೋತೇಂದ್ರಿಯವಾಗಿ ರೂಪಾಂತರಗೊಂಡಿದ್ದು, ಅದರಲ್ಲಿ ಅಂತಸ್ಥವಾಗಿರುವ ಪರಶಿವನಿಗೆ ಪ್ರಸಾದಲಿಂಗವೆಂದು ಹೆಸರು. ಪ್ರಸಾದಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಶರಣನು ತನ್ನ ಜ್ಞಾನವನ್ನೇ ಹಸ್ತವನ್ನಾಗಿ ಮಾಡಿಕೊಂಡು, ಶಬ್ದವನ್ನು ಪ್ರಸಾದಲಿಂಗಕ್ಕೆ ಅರ್ಪಿಸಿ, ಸುಶಬ್ದವೆಂಬ ಪ್ರಸಾದವನ್ನು ಪಡೆಯುತ್ತಾನೆ. ಶರಣನ ಈ ಭಕ್ತಿಗೆ ಆನಂದಭಕ್ತಿ ಎಂದು ಹೆಸರು. ಶಬ್ದವನ್ನು ಅರ್ಪಿಸುವುದರಿಂದ, ಆ ಅರ್ಪಣೆಯನ್ನು ಸ್ವೀಕರಿಸುವ ಶ್ರೋತ್ರೇಂದ್ರಿಯವು ಪರಶಿವನ (ಪ್ರಸಾದಲಿಂಗದ) ಬಾಯಿ (ಮುಖ) ಎನಿಸಿಕೊಳ್ಳುತ್ತದೆ.

ಕೊನೆಯ ಹಂತದ ಸಾಧಕನಿಗೆ ಐಕ್ಯನೆಂದು ಹೆಸರು. ಪರಶಿವನ ಚಿತ್‌ಶಕ್ತಿಯು ಐಕ್ಯನ ಭಾವ (ಹೃದಯ)ವಾಗಿ ರೂಪಾಂತರಗೊಂಡಿದ್ದು, ಅದರಲ್ಲಿ ಅಂತಸ್ಥವಾಗಿರುವ ಪರಶಿವನಿಗೆ ಮಹಾಲಿಂಗವೆಂದು ಹೆಸರು. ಮಹಾಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಐಕ್ಯನು ತನ್ನ ಭಾವವನ್ನೇ (ಜೀವಾತ್ಮನನ್ನೆ) ಹಸ್ತವನ್ನಾಗಿ ಮಾಡಿಕೊಳ್ಳುತ್ತಾನೆ. ಐಕ್ಯನು ತೋರಿಸುವ ಭಕ್ತಿಗೆ ಸಮರಸಭಕ್ತಿ ಎಂದು ಹೆಸರು. ತೃಪ್ತಿಯನ್ನು ಅರ್ಪಿಸುವ ಐಕ್ಯನ ಭಾವಕ್ಕೆ ಕೆಲವು ವೇಳೆ ಸದ್ಭಾವವೆಂದು ಕರೆಯಲಾಗುತ್ತದೆ. ಹೃದಯದಲ್ಲಿರುವ ಮಹಾಲಿಂಗಕ್ಕೆ ಅವನು ತೃಪ್ತಿಯನ್ನು ಅರ್ಪಿಸುವುದರಿಂದ, ಆ ಅರ್ಪಣೆಯನ್ನು ಸ್ವೀಕರಿಸುವ ಹೃದಯವು ಪರಶಿವನ (ಮಹಾಲಿಂಗನ) ಬಾಯಿ (ಮುಖ) ಎನಿಸಿಕೊಳ್ಳುತ್ತದೆ.

ಅಂಗಸ್ಥಲ ಹಾಗೂ ಲಿಂಗಸ್ಥಲಗಳ ಸಂಬಂಧವನ್ನು ಯಾವ ಶಕ್ತಿ ಯಾವ ಇಂದ್ರಿಯವಾಗಿ ರೂಪಾಂತರಗೊಂಡಿದೆ ಮುಂತಾದ ಮೇಲಿನ ವಿವರಗಳನ್ನು ಈ ಕೆಳಗಿನಂತೆ ಸಂಕ್ಷಿಪ್ತವಾಗಿ ತೋರಿಸಬಹುದು.


ಅಂಗ ಸ್ಥಲಗಳು ಲಿಂಗ ಸ್ಥಲಗಳು ಲಿಂಗದ ಶಕ್ತಿಗಳು ಅಂಗನ ಭಕ್ತಿಗಳು ಲಿಂಗದ ಮುಖಗಳು ಅಂಗನ ಹಸ್ತಗಳು ಅರ್ಪಿತಗಳು ಪ್ರಸಾದಗಳು
ಭಕ್ತ ಆಚಾರಲಿಂಗ ಕ್ರಿಯಾಶಕ್ತಿ ವಿಶ್ವಾಸ (ಶ್ರದ್ದಾ), ಫ್ರಾಣ ಸುಚಿತ್ರ ಪರಿಮಳ ಗಂಧ
ಮಹೇಶ ಗುರುಲಿಂಗ ಜ್ಞಾನಶಕ್ತಿ ನೈಷ್ಠಿಕಾ ಭಕ್ತಿ ಜಿಹ್ವೆ ಸುಬುದ್ದಿ ರಸ ರುಚಿ
ಪ್ರಸಾದಿ ಶಿವಲಿಂಗ ಇಚ್ಛಾಶಕ್ತಿ ಸಾವಧಾನ ಭಕ್ತಿ ನೇತ್ರ ನಿರಹಂಕಾರ ರೂಪ(ಬೆಳಕು) ರೂಪ
ಪ್ರಾಣಲಿಂಗಿ ಜಂಗಮಲಿಂಗ ಆದಿಶಕ್ತಿ ಅನುಭಾವ ತ್ವಕ್ಕು ಸುಮನ ಸೋಂಕು ಸ್ಪರ್ಶನ
ಶರಣ ಪ್ರಸಾದಲಿಂಗ ಪರಾಶಕ್ತಿ ಆನಂದ ಭಕ್ತಿ ಶ್ರೋತ್ರ ಸುಜ್ಞಾನ ಶಬ್ದ ಸುಶಬ್ದ
ಐಕ್ಯ ಮಹಾಲಿಂಗ ಚಿತ್‌ಶಕ್ತಿ ಸಮರಸ ಭಕ್ತಿ ಹೃದಯ ಭಾವ ತೃಪ್ತಿ ಪರಿಣಾಮ

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅಂಗಲಿಂಗ ಸಂಬಂಧ ಅಧಿದೇವತೆಗಳು ಮತ್ತು ಶಕ್ತಿಗಳು Next