ಅಷ್ಟಾಂಗ ಯೋಗ | ಆಚಾರ |
ಅರಿವು (ಆರುಹು) |
ಇದಕ್ಕೆ ಕನಿಷ್ಠ ಮೂರು ಅರ್ಥಗಳಿವೆ.
೧. ವಿವೇಕ. ವಿವೇಕಿಯು ತನ್ನ ನೈಜಸ್ವರೂಪವಾವುದು, ತನ್ನ ಈಗಿನ ಸ್ಥಿತಿಗೆ ಕಾರಣವೇನು, ಮುಂತಾದವುಗಳನ್ನು ತಿಳಿದುಕೊಂಡಿದ್ದರೆ, ಅರಿವುಗೇಡಿ ದೇಹವೇ ಆತ್ಮವೆಂದೂ, ದೇಹಸೌಖ್ಯವೇ ಜೀವನದ ಪರಮಗುರಿ ಎಂದೂ ಭ್ರಮಿಸುತ್ತಾನೆ.
೨. ಜ್ಞಾತೃ-ಜ್ಞೇಯ, ಪೂಜ್ಯ-ಪೂಜಕ ಮುಂತಾದ ದೈತಗಳನ್ನೊಳಗೊಂಡ ಅರಿವು. “ ಅರಿವು ಉಳ್ಳನಕ್ಕ ಕುರುಹು` ಎಂಬ ವಚನದ ಪ್ರಕಾರ (೭:೧೦೭೯), ಅರಿವು ಎಂಬುದಕ್ಕೆ ಯಾವುದೇ ಇಂದ್ರಿಯಗೋಚರ ವಸ್ತುವಿನ ಜ್ಞಾನ ಎಂಬರ್ಥವಿದೆ. ಇಂಥ ಅರಿವು ವಿವೇಕಿಗೂ ಇದೆ, ಅರಿವುಗೇಡಿಗೂ ಇದೆ.
೩. ಜ್ಞಾನ, ಚಿತ್, ಅಥವಾ ಪರಶಿವ. ನಮಗೆ ಅನೇಕ ವಸ್ತುಗಳ ಜ್ಞಾನವಿದೆ, ಚಿತ್ರದಲ್ಲಿ ಅನೇಕರೀತಿಯ ಲೋಭ, ಮೋಹ, ಮುಂತಾದ ಸಂವೇಗಗಳೂ ಇವೆ; ಅದನ್ನು ಸಾಧಿಸಬೇಕು, ಇದನ್ನು ಸಾಧಿಸಬೇಕು ಎಂಬ ಆಸೆ, ಧ್ಯೇಯ ಇತ್ಯಾದಿಗಳೂ ಇವೆ; ನಾನು ಎಂಬ ಅಹಂಭಾವವು ಇವೆಲ್ಲದರ ಜೊತೆಯಲ್ಲಿಯೂ ಇರುತ್ತದೆ. ಆದರೆ ಅನುಭಾವದಲ್ಲಿ ಬುದ್ಧಿಯ, ಮನಸ್ಸಿನ, ಚಿತ್ತದ ಮತ್ತು ಅಹಂಕಾರದ ಕ್ರಿಯೆಗಳೆಲ್ಲ ಸ್ತಬ್ಧವಾಗುತ್ತದೆ. ಆಗ ಚಿತ್ ಅಥವಾ ಆತ್ಮ ಒಂದೇ ಉಳಿಯುತ್ತದೆ, ಹಾಗೂ ಅದಕ್ಕೆ ತಾನು ಅನಂತ ಪರಶಿವನಲ್ಲಿ ಒಂದಾಗುತ್ತಿದ್ದೇನೆಂಬ ಅನುಭವವಾಗುತ್ತದೆ. ಹೀಗೆ ಯಾವುದೇ ಸಂಗವಿಲ್ಲದ ಚಿತ್ತೇ ಜ್ಞಾನ ಅಥವಾ ಅರಿವು. ಈ ಅರಿವು ಯಾವುದೇ ವಸ್ತುವಿನ ಅರಿವಲ್ಲ, ಅದು ಶುದ್ಧ ಅರಿವು; ವಿವೇಕಿಯಲ್ಲಿ ಇರುವಂತೆ ಅವಿವೇಕಿಯಲ್ಲೂ ಇರುತ್ತದೆ. ಆದರೆ ಅದನ್ನು ಶಿವಯೋಗದ ಮೂಲಕ ಸಾಕ್ಷಾತ್ಕರಿಸಿಕೊಳ್ಳಬೇಕಷ್ಟೆ.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಅಷ್ಟಾಂಗ ಯೋಗ | ಆಚಾರ |