Previous ಅರವತ್ತು ಮೂರು ಪುರಾತನರು ಅಷ್ಟಮದಗಳು Next

ಅಷ್ಟತನು ನಿವೃತ್ತಿ ಮಾರ್ಗ

ಅಷ್ಟತನು ನಿವೃತ್ತಿ ಮಾರ್ಗ

ಕೆಲವು ವಚನಕಾರರು ಶ್ವೇತಾಶ್ವತರ ಉಪನಿಷತ್ತನ್ನು ಅನುಸರಿಸಿ, ಮನುಷ್ಯನು ಅಷ್ಟತನು ಉಳ್ಳ ಪಿಂಡಾಂಡವೆಂದೂ, ಪರಶಿವನು ಅಷ್ಟತನುವುಳ್ಳ ಬ್ರಹ್ಮಾಂಡವೆಂದೂ ಹೇಳುವರು. ಪಿಂಡಾಂಡದಲ್ಲಿರುವ ಎಂಟು ಅಂಶಗಳೆಂದರೆ - ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ, ಆತ್ಮ, ಸೂರ್ಯ ಮತ್ತು ಚಂದ್ರ, ಈ ತತ್ವಗಳನ್ನು ಇಲ್ಲದಂತೆ ಮಾಡಿದರೆ ಅಥವಾ ಈ ತತ್ವಗಳು ಕಾರ್ಯನಿರ್ವಹಿಸದಂತೆ ಮಾಡಿದರೆ ದುಃಖಗಳು ಇಲ್ಲದಂತಾಗುತ್ತವೆ ಎಂದು ಅವರು ಹೇಳುವುದಿಲ್ಲ; ಅದರ ಬದಲು ಆ ತತ್ವಗಳನ್ನು ಚಿತ್ ತತ್ವಗಳನ್ನಾಗಿ ಪರಿವರ್ತಿಸಿದರೆ ಅವು ದುಃಖಕ್ಕೆ ಕಾರಣಾವಾಗುವುದರ ಬದಲು ದುಃಖದಿಂದ ಬಿಡುಗಡೆಯಾಗಲು ಹಾಗೂ ಆನಂದವನ್ನುಂಟುಮಾಡಲು ಸಹಾಯಕವಾಗುತ್ತವೆ ಎಂದು ಹೇಳುತ್ತಾರೆ. ಈ ಪರಿವರ್ತನಕಾರ್ಯಕ್ಕೆ ನಿವೃತ್ತಿಯೆಂದು ಹೆಸರು. ಈಗ ಈ ಅಷ್ಟತನುವನ್ನು ನಿವೃತ್ತಿ ಮಾಡುವ ಮಾರ್ಗವಾವುದೆಂಬುದನ್ನು ನೋಡೋಣ :

ಪೃಥ್ವಿ ತತ್ವವು ಕರ್ಮೇಂದ್ರಿಯಗಳಿಗೆ ಕಾರಣ. ಶಿವಯೋಗಿಯು ಭಕ್ತನನ್ನು ನಿಜದೃಷ್ಟಿಯಿಂದ ನೋಡಿ, ಸುಚಿತ್ತವೆಂಬ ಸೂಕ್ಷ್ಮ (ಆಧ್ಯಾತ್ಮಿಕ) ಹಸ್ತದಿಂದ ಮುಟ್ಟಿದರೆ ಆ ಪೃಥ್ವಿಯು ಚಿದ್‌ಪೃಥ್ವಿಯಾಗುವುದು (ಅಂದರೆ, ಪೃಥ್ವಿಯ ದುರ್ಗುಣಗಳಲ್ಲ ನಿವೃತ್ತಿಯಾಗುವುದು); ಹಾಗೂ ಭಕ್ತನು ಸಯಗಳಲ್ಲಿ ನಿರತನಾಗುವನು; ಅಪ್‌ತತ್ವವು ಜ್ಞಾನೇಂದ್ರಿಯಗಳಿಗೆ ಕಾರಣ. ಶಿವಯೋಗಿಯು ಮಹೇಶನನ್ನು ನಿಜದೃಷ್ಟಿಯಿಂದ ನೋಡಿ, ಸುಬುದ್ಧಿಯೆಂಬ ಸೂಕ್ಷ್ಮಹಸ್ತದಿಂದ ಮುಟ್ಟಿದರೆ, ಅಪ್ಪುವಿನ ದುರ್ಗುಣಗಳೆಲ್ಲಾ ನಿವೃತ್ತಿ ಹೊಂದಿ, ಅದು ಚಿದಪ್ ಎನಿಸಿಕೊಳ್ಳುವುದು; ಇದರಿಂದಾಗಿ, ಅವನ ಜ್ಞಾನೇಂದ್ರಿಯಗಳು ಸಮ್ಯಗ್‌ಜ್ಞಾನವನ್ನು ಪಡೆಯಲು ಸಹಾಯಕವಾಗುವವು;

ಅಗ್ನಿತತ್ವವು ಇಂದ್ರಿಯ ವಿಷಯಗಳಿಗೆ ಕಾರಣ. ಶಿವಯೋಗಿಯು ಪ್ರಸಾದಿಯನ್ನು ನಿಜದೃಷ್ಟಿಯಿಂದ ನೋಡಿ ನಿರಹಂಕಾರವೆಂಬ ಹಸ್ತದಿಂದ ಮುಟ್ಟಿದರೆ, ಅಗ್ನಿತತ್ವದ ದುರ್ಗುಣಗಳೆಲ್ಲಾ ನಿವೃತ್ತಿಹೊಂದಿ, ಅದು ಚಿದಗ್ನಿ ಎನಿಸಿಕೊಳ್ಳುವುದು. ಇದರಿಂದಾಗಿ, ಪ್ರಸಾದಿಯು ಪ್ರತಿಯೊಂದು ಇಂದ್ರಿಯ ವಿಷಯವನ್ನೂ (ರೂಪರಸಾದಿ ವಿಷಯಗಳನ್ನು) ಶಿವನ ಪ್ರಸಾದವೆಂದು ತಿಳಿಯುವನು.
ವಾಯುತತ್ವವು ಪ್ರಾಣಾದಿ ವಾಯು ಪಂಚಕಗಳಿಗೆ ಕಾರಣ; ಇವುಗಳ ವಿವಿಧ ಚಲನೆಯಿಂದಾಗಿ ನಮ್ಮಲ್ಲಿ ಅನೇಕ ಗುಣದೋಷಗಳುಂಟಾಗುವವು. ಶಿವಯೋಗಿಯು ಪ್ರಾಣಲಿಂಗಿಯನ್ನು ನಿಜದೃಷ್ಟಿಯಿಂದ ನೋಡಿ, ಸುಮನವೆಂಬ ಹಸ್ತದಲ್ಲಿ ಸ್ಪರ್ಶಿಸಿದರೆ, ವಾಯುತತ್ವದ ದುರ್ಗುಣಗಳೆಲ್ಲಾ ನಿವೃತ್ತಿ ಹೊಂದಿ, ಅದು ಚಿಪ್ಪಾಯು ಎನಿಸಿಕೊಳ್ಳುವುದು. ಇದರಿಂದ ವಾಯುಪಂಚಕಗಳು ಸರಿಯಾದ ರೀತಿಯಲ್ಲಿ ಕೆಲಸಮಾಡಿ, ಪ್ರಾಣಲಿಂಗಿಯು ಅನುಭಾವಕ್ಕೆ ಬೇಕಾದ ಏಕಾಗ್ರತೆಯನ್ನು ಪಡೆಯಲು ಸಹಾಯಕವಾಗುವುವು.

ಆಕಾಶತತ್ವವು ಅಂತಃಕರಣಗಳಿಗೆ ಕಾರಣ. ಅಂತಃಕರಣಗಳೇ ನಮ್ಮ ಎಲ್ಲ ಕರ್ಮಗಳ ಮೂಲ: ನಮ್ಮ ಎಲ್ಲ ಸುಖದುಃಖಗಳಿಗೆ ನಮ್ಮ ಕರ್ಮಗಳೇ ಮೂಲ. ಶಿವಯೋಗಿಯು ಶರಣನನ್ನು ನಿಜದೃಷ್ಟಿಯಿಂದ ನೋಡಿ, ಸುಜ್ಞಾನವೆಂಬ ಹಸ್ತದಿಂದ ಮುಟ್ಟಿದರೆ ಅವನಲ್ಲಿದ್ದ ಆಕಾಶತತ್ವದ ದುರ್ಗುಣಗಳೆಲ್ಲ ನಿವೃತ್ತಿ ಹೊಂದಿ, ಅದು ಚಿದಾಕಾಶವೆನಿಸಿಕೊಳ್ಳುವುದು. ಇದರಿಂದಾಗಿ ಅವನ ಅಂತಃಕರಣಗಳು ಶುದ್ಧವಾಗುವುವಲ್ಲದೆ, ಅವನ ನಡೆ ನುಡಿಗಳೂ, ಪವಿತ್ರವಾಗುವುವು; ಲಿಂಗನಿಷ್ಠೆಯೂ ವೃದ್ಧಿಸುತ್ತದೆ.
ಆತ್ಮತತ್ವವು, ಜಾಗ್ರತ, ಸ್ವಪ್ನ, ಮುಂತಾದ ಅವಸ್ಥೆಗಳಿಗೆ ಕಾರಣ. ಈ ಅವಸ್ಥೆಗಳಲ್ಲಿ ನಾವು ಅನೇಕ ರೀತಿಯ ಸುಖದುಃಖಗಳನ್ನು ಅನುಭವಿಸುತ್ತೇವೆ. ಶಿವಯೋಗಿಯು ಐಕ್ಯನನ್ನು ನಿಜದೃಷ್ಟಿಯಿಂದ ನೋಡಿ, ಸದ್ಭಾವವೆಂಬ ಸೂಕ್ಷ್ಮಹಸ್ತದಿಂದ ಮುಟ್ಟಿದರೆ, ಅವಸ್ಥೆಗಳಲ್ಲಿ ಪಡುವ ಸುಖದುಃಖಗಳು ಮಾಯವಾಗಿ ಆತ್ಮವು ಚಿದಾತ್ಮವೆನಿಸುವುದು. ಇದು ಶುದ್ಧವಾದ ಆತ್ಮವಾದುದರಿಂದ, ಅದು ಲಿಂಗಕ್ಕೆ ಸ್ಥಾನವಾಗಿರಲು ಯೋಗ್ಯವಾಗುತ್ತದೆ.

ಕೊನೆಯದಾಗಿ ಸೂರ್ಯ ಮತ್ತು ಚಂದ್ರ ಎಂಬ ತತ್ವಗಳು ನಮ್ಮಲ್ಲಿರುವ ಅದೇ ಹೆಸರಿನ ಎರಡು ನಾಡಿಗಳ ಹೆಸರುಗಳು, ಸಂಸಾರಬಂಧನದಲ್ಲಿರುವ ವ್ಯಕ್ತಿಯಲ್ಲಿರುವ ಈ ನಾಡಿಗಳು ಅನೇಕ ಕಾರಣಗಳಿಂದಾಗಿ ಪ್ರಕಾಶಮಯನಾದ ಪರಶಿವನನ್ನು ನೋಡಲು ಅಡ್ಡಿ ಮಾಡುವವು. ಆದರೆ ಶಿವಯೋಗಿಯು ನಿರವಯ ಮೂರ್ತಿಯನ್ನು ನಿಜದೃಷ್ಟಿಯಿಂದ ನೋಡಿ, ಪರಿಣಾಮವೆಂಬ ಸೂಕ್ಷ್ಮಹಸ್ತದಿಂದ ಮುಟ್ಟಿದರೆ, ಈ ಸೂರ್ಯಚಂದ್ರರ ದೋಷಗಳು ನಿವೃತ್ತಿಹೊಂದಿ, ಅವು ಚಿತ್ಸೂರ್ಯಚಂದ್ರರೆನ್ನಿಸಿಕೊಳ್ಳುವವು. ಇದರಿಂದಾಗಿ ಸಾಧಕನು ಮಹಾಬೆಳಕೆಂಬ ಪರಾತ್ಪರಶಿವನನ್ನು ತನ್ನ ಚಿದಕ್ಷಿಯಿಂದ ನೋಡಲು ಸಾಧ್ಯವಾಗುವುದು.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅರವತ್ತು ಮೂರು ಪುರಾತನರು ಅಷ್ಟಮದಗಳು Next