Previous ಅಷ್ಟಸಿದ್ಧಿಗಳು (ಅಷ್ಟಮಹದೈಶ್ವರ್ಯ) ಅರಿವು (ಆರುಹು) Next

ಅಷ್ಟಾಂಗ ಯೋಗ

ಅಷ್ಟಾಂಗ ಯೋಗ

ರಾಜಯೋಗದಲ್ಲಿ ಎಂಟು ಅಂಗಗಳಿರುವುದರಿಂದ ಅದಕ್ಕೆ ಅಷ್ಟಾಂಗಯೋಗವೆಂಬ ಹೆಸರು ಬಂದಿದೆ. ಈ ಎಂಟು ಅಂಗಗಳೆಂದರೆ : ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ.

ಯಮದಲ್ಲಿ ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಹಿಂಸೆ ಮತ್ತು ಅಪರಿಗ್ರಹ ಎಂಬ ಐದು ಉಪಾಂಗಗಳಿವೆ; ಇದೇ ರೀತಿ ನಿಯಮದಲ್ಲಿ ಶೌಚ, ತಪ, ಸ್ವಾಧ್ಯಾಯ, ಸ್ವಸಂತೋಷ ಮತ್ತು ಈಶ್ವರ ಪ್ರಣಿಧಾನ ಎಂಬ ಐದು ಉಪಾಂಗಗಳಿವೆ. ಯಮವು ನೈತಿಕ ಶಿಕ್ಷಣ: ನಿಯಮವು ಆಧ್ಯಾತ್ಮಿಕ ಶಿಕ್ಷಣ.

ಆಸನ ಮತ್ತು ಪ್ರಾಣಾಯಾಮಗಳನ್ನು ಮಾಡುವುದರಿಂದ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಿದೆ. ಪ್ರತ್ಯಾಹಾರವು ಸಮಾಧಿಯ ಮೊದಲನೆ ಪಾಠ. ಅದರಲ್ಲಿ ಇಂದ್ರಿಯಗಳ ಆಹಾರಗಳನ್ನು (ಅಂದರೆ, ರೂಪರಸಗಂಧ ಸ್ಪರ್ಶಶಬ್ದಗಳನ್ನು) ಆಯಾ ಇಂದ್ರಿಯಗಳು ಗ್ರಹಿಸದಂತೆ ಮಾಡುವುದನ್ನೂ ಮನಸ್ಸು ಮತ್ತು ಬುದ್ಧಿ ಅವುಗಳ ಬಗ್ಗೆ ಯೋಚಿಸದಂತೆ ಮಾಡುವುದನ್ನೂ ಕಲಿಸಿಕೊಡಲಾಗುತ್ತದೆ.
ಪ್ರತ್ಯಾಹಾರದ ಮೂಲಕ ಮನಸ್ಸು ಖಾಲಿಯಾದ ಮೇಲೆ ಧಾರಣವು ಪ್ರಾರಂಭವಾಗುತ್ತದೆ. ಮನಸ್ಸಿನಲ್ಲಿ ವಿಷಯಗಳು ತುಂಬಿರುವಾಗ ಏಕಾಗ್ರತೆ ಸಾಧ್ಯವಾಗಲಾರದು; ಆದರೆ ಖಾಲಿಯಾದ ಮನಸ್ಸಿಗೆ ಅದು ಸಾಧ್ಯ. ಈ ಏಕಾಗ್ರತೆಯನ್ನೇ ಮುಂದುವರೆಸಿದರೆ, ಧ್ಯಾನ. ಅದರಲ್ಲಿ ಆತ್ಮಕ್ಕೆ ತಾನೊಂದೇ ಇರುವುದು ಅರಿವಾಗುತ್ತದಲ್ಲದೇ, ಅದಕ್ಕೆ ಯಾವ ಉಪಾಧಿಗಳ ಸೋಂಕು ಇಲ್ಲದಿರುವುದರಿಂದ ಅತೀವ ಆನಂದವೂ ಆಗುತ್ತದೆ. ಈ ಸ್ಥಿತಿ ಮುಂದುವರೆದರೆ ಯಾವುದೇ ಮಾನಸಿಕ ಸ್ಥಿತಿಯಿಲ್ಲದ ಒಂದು ಸ್ಥಿತಿ ಉಂಟಾಗುತ್ತದೆ. ಅದನ್ನೇ ಪಾತಂಜಲ ಮಹರ್ಷಿಗಳು ಸಮಾಧಿಯೆಂದಿದ್ದಾರೆ.

ಪಾತಂಜಲ ಮಹರ್ಷಿಗಳ ಪ್ರಕಾರ, ಹೀಗೆ ಪ್ರಕೃತಿಯಿಂದ ವಿಚ್ಛೇದನ ಪಡೆದು ಆತ್ಮತಾನೊಂದೇ (ಕೇವಲ) ಇರುವುದು ಅಥವಾ ಕೈವಲ್ಯವನ್ನು ಪಡೆಯುವುದು ಜೀವನದ ಪರಮಗುರಿಯಾಗಿದೆ. ಆದರೆ ವಚನಕಾರರು ಅಷ್ಟಾಂಗಯೋಗವನ್ನು ಒಪ್ಪಿಕೊಂಡರೂ, ತಮ್ಮ ಗುರಿಯನ್ನು ಕೈವಲ್ಯಕ್ಕಿಂತ ಇನ್ನೂ ಎತ್ತರದಲ್ಲಿರಿಸಿದ್ದಾರೆ. ಅವರ ಪ್ರಕಾರ, ಆತ್ಮವೊಂದೇ ಉಳಿಯುವುದು ಕೊನೆಯಲ್ಲ, ಹಾಗೆ ಒಂದೇ ಉಳಿದ ಆತ್ಮ (ಅಂಗ)ವನ್ನು ಲಿಂಗದಲ್ಲಿ ಐಕ್ಯ ಮಾಡುವುದು ಅವರ ಗುರಿ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅಷ್ಟಸಿದ್ಧಿಗಳು (ಅಷ್ಟಮಹದೈಶ್ವರ್ಯ) ಅರಿವು (ಆರುಹು) Next