Previous ಅವಸ್ಥೆ ಅಷ್ಟಾಂಗ ಯೋಗ Next

ಅಷ್ಟಸಿದ್ಧಿಗಳು (ಅಷ್ಟಮಹದೈಶ್ವರ್ಯ)

ಅಷ್ಟಸಿದ್ಧಿಗಳು (ಅಷ್ಟಮಹದೈಶ್ವರ್ಯ)

ಸತತ ಹಾಗೂ ಶ್ರದ್ಧೆಯಿಂದ ಕೂಡಿದ ಯೋಗ ಸಾಧನೆ ಮಾಡುವುದರಿಂದಾಗಿ ಸಾಧಕನಿಗೆ ಎಂಟು ಅಪ್ರಾಕೃತಿಕ ಶಕ್ತಿಗಳು ಲಭಿಸುತ್ತವೆ. ಇವೇ ಅಷ್ಟಸಿದ್ಧಿಗಳು ಅಥವಾ ಅಷ್ಟಮಹಾಸಿದ್ದಿಗಳು, ಇವೆಂದರೆ : ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶತ್ವ, ವಶಿತ್ವ, ಸಾಧಕನು ತನ್ನ ಇಚ್ಛೆಯಂತೆ, ಅತ್ಯಂತ ಸಣ್ಣ ಪ್ರಮಾಣದ ವ್ಯಕ್ತಿ ಅಥವಾ ಪ್ರಾಣಿಯಾದರೆ, ಅವನಿಗೆ ಅಣಿಮಾ (ಅಣುವಿನಷ್ಟು ಸೂಕ್ಷ್ಮವಾಗುವ ಶಕ್ತಿ) ಸಿದ್ಧಿಸಿದೆ ಎಂದರ್ಥ; ತನ್ನ ಇಚ್ಛೆಯಂತೆ ಅತ್ಯಂತ ಮಹಿಮೆಯುಳ್ಳ ವಸ್ತುವಾದರೆ ಅವನಿಗೆ ಮಹಿಮಾ ಸಿದ್ದಿಸಿದೆ ಎಂದು ಅರ್ಥ; ಅತ್ಯಂತ ಭಾರವಾದ ವಸ್ತುವಾಗುವ ಶಕ್ತಿ ಅವನಿಗೆ ಬಂದರೆ, ಅವನಿಗೆ ಗರಿಮಾ ಸಿದ್ದಿಸಿದೆಯೆಂದೂ, ಅತ್ಯಂತ ಹಗುರ (ಲಘು)ವಾದ ವಸ್ತುವಾಗುವ ಶಕ್ತಿ ಬಂದರೆ ಲಘಿಮಾ ಸಿದ್ಧಿಸಿದೆಯೆಂತಲೂ ಅರ್ಥ. ಜನರ ದೃಷ್ಟಿಯಲ್ಲಿ ಅವನು ಸಕಲ ಮರ್ಯಾದೆ ಗೌರವಗಳನ್ನು ಪಡೆಯುವುದು ಪ್ರಾಪ್ತಿ ತನಗಿಷ್ಟವಾದ ವಸ್ತುಗಳನ್ನು ತಕ್ಷಣವೇ ಪಡೆಯುವುದು ಪ್ರಾಕಾಮ್ಯ; ಜನರನ್ನೂ ವಸ್ತುಗಳನ್ನೂ ನಮ್ಮಿಷ್ಟದಂತೆ ಚಲಿಸುವಂತೆ ಮಾಡುವುದು ಈಶತ್ವ; ಮತ್ತು ಎಲ್ಲರ ಮೇಲೆ ಪ್ರಭುತ್ವ ಸಾಧಿಸುವುದು ಹಾಗೂ ನಮ್ಮಿಚ್ಛೆಯನ್ನು ಅವರು ಕಾರ್ಯಗತಗೊಳಿಸುವಂತೆ ಮಾಡಿಸುವುದು ವಶಿತ್ವ.

ಪತಂಜಲಿ ಮಹರ್ಷಿಯು ಯೋಗಿಗೆ ಇವೆಲ್ಲ ಸಾಧ್ಯವೆಂದು ಹೇಳಿದ್ದಾನಲ್ಲದೆ, ಯೋಗಿಯ ಲಕ್ಷ ಅಲ್ಲಿ ನಿಲ್ಲಬಾರದೆಂದು ಎಚ್ಚರಿಸುತ್ತಾನೆ. ಒಂದು ವೇಳೆ ಯೋಗಿಯ ಮನಸ್ಸು ಅಷ್ಟಸಿದ್ಧಿಗಳನ್ನು ಕಾರ್ಯಗತಗೊಳಿಸುವುದರಲ್ಲಿ ಸಿಕ್ಕಿಹಾಕಿಕೊಂಡರೆ, ಅದನ್ನು ಅಲ್ಲಿಂದ ಕೀಳುವುದು ಕಷ್ಟ, ಯೋಗಿಯು ಯೋಗಸಾಧನೆಯಲ್ಲಿ ಇನ್ನೂ ಮುಂದೆ ಹೋಗಬೇಕಾಗಿರುವುದರಿಂದ, ಅಷ್ಟಸಿದ್ಧಿಯಂತಹ ಆಕರ್ಷಣೆಗೆ ಒಳಗಾಗಬಾರದೆಂಬುದೇ ಪತಂಜಲಿ ಆದೇಶ.

ಶರಣರೂ ಸಹ ಪತಂಜಲಿಯ ಮಾತನ್ನು ಅನುಮೋದಿಸಿ, ಅಷ್ಟಸಿದ್ಧಿಯಲ್ಲಿ ಸಾಧಕನು ಸಿಕ್ಕಿಹಾಕಿಕೊಳ್ಳಬಾರದೆಂದು ಎಚ್ಚರಿಸುತ್ತಾರೆ. ಇವಕ್ಕೆ ಅಷ್ಟಮಹದೈಶ್ವರ್ಯವೆಂದೂ ಕರೆಯುತ್ತಾರೆ. ಐಶ್ವರ್ಯವೆಂದರೆ ಪ್ರಭುತ್ವ, ಮನಸ್ಸಿನಿಚ್ಛೆಯಂತೆ ಪರಿಣಾಮವನ್ನುಂಟುಮಾಡುವುದೇ ಐಶ್ವರ್ಯ. ಈ ಅರ್ಥದಲ್ಲಿ ಎಲ್ಲರೂ ಈಶ್ವರರೇ. ಆದರೆ ಯೋಗಿಯು ಪಡೆದಿರುವುದು ಮಹದೈಶ್ಚರ್ಯ- ಸಾಧಾರಣ ಐಶ್ವರ್ಯವಲ್ಲ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅವಸ್ಥೆ ಅಷ್ಟಾಂಗ ಯೋಗ Next