Previous ಅಷ್ಟಮದಗಳು ಅರವತ್ತುನಾಲ್ಕು ವಿದ್ಯೆ Next

ಅಷ್ಟವಿಧ ಸಕೀಲಗಳು

ಅಷ್ಟವಿಧ ಸಕೀಲಗಳು

ಅಷ್ಟವಿಧ ಸಕೀಲದಲ್ಲಿ ಎಂಟು ವಿಷಯಗಳಿವೆ. ಅಂಗ, ಲಿಂಗ, ಹಸ್ತ, ಜ್ಞಾನೇಂದ್ರಿಯ, ಭಕ್ತಿ, ಶಕ್ತಿ, ಅರ್ಪಿತ ಮತ್ತು ಪದಾರ್ಥ. ಆರು ಸ್ಥಲಗಳಲ್ಲಿ ಸಾಧಕನು ಈ ಎಂಟು ವಿಷಯಗಳನ್ನುಳ್ಳ ಸಾಧನೆ ಮಾಡಬೇಕು. ಇಲ್ಲಿ ಇಂದ್ರಿಯ ಗೋಚರ ವಿಷಯ ಯಾವುದು ಇಲ್ಲ ಎಂಬುದನ್ನು ನಾವು ಸುಲಭವಾಗಿ ಗುರುತಿಸಬಹುದು.

(೧) ಸಾಧಕ ಭಕ್ತಸ್ಥಲದಲ್ಲಿರುವಾಗ ಭಕ್ತನೇ ಅಂಗ, ಅವನು ಅರ್ಚಿಸುವುದು ಆಚಾರಲಿಂಗ, ಅವನು ಸುಚಿತ್ತವೆಂಬ ಹಸ್ತದಿಂದ, ಆಚಾರಲಿಂಗದ ಘ್ರಾಣೇಂದ್ರಿಯ ಎಂಬ ಬಾಯಿಗೆ ಸದ್ಭಕ್ತಿ. (ಶ್ರದ್ಧಾಭಕ್ತಿಯಿಂದ, ಕ್ರಿಯಾಶಕ್ತಿಯ ಗುಣವಾದ ಪರಿಮಳ ದ್ರವ್ಯವನ್ನು ಅರ್ಪಿಸಿ, ಸುಗಂಧವೆಂಬ ಪ್ರಸಾದ ಪಡೆಯುತ್ತಾನೆ.

(೨) ಸಾಧಕ ಎರಡನೆ ಸ್ಥಲದಲ್ಲಿರುವಾಗ, ಅವನೇ ಮಹೇಶನೆಂಬ ಅಂಗ, ಅವನು ಅರ್ಚಿಸುವುದು ಗುರುಲಿಂಗವನ್ನು ಅಂದರೆ ಸುಬುದ್ಧಿಯೆಂಬ ಹಸ್ತದಿಂದ, ಗುರುಲಿಂಗದ ಜಿಹ್ವೆಯೆಂಬ ಬಾಯಿಗೆ (ಮುಖಕ್ಕೆ) ನಿಷ್ಠಾಭಕ್ತಿಯಿಂದ, ಜ್ಞಾನಶಕ್ತಿಯ ಗುಣವಾದ ರಸವನ್ನು ಅರ್ಪಿಸಿ, ಸುರಸವನ್ನು ಪ್ರಸಾದವಾಗಿ ಪಡೆಯುತ್ತಾನೆ.

(೩) ಸಾಧಕ ಮೂರನೆಯ ಸ್ಥಲದಲ್ಲಿರುವಾಗ, ಪ್ರಸಾದಿಯೆಂಬ ಅಂಗನೆನಿಸಿಕೊಳ್ಳುತ್ತಾನೆ; ಹಾಗೂ ಅವನು ಶಿವಲಿಂಗವನ್ನು ಅರ್ಚಿಸುತ್ತಾನೆ. ಅಂದರೆ, ಅವನು ನಿರಹಂಕಾರವೆಂಬ ಹಸ್ತದಿಂದ ಶಿವಲಿಂಗದ ನೇತ್ರವೆಂಬ ಬಾಯಿಗೆ ಅವಧಾನ ಭಕ್ತಿಯಿಂದ ಇಚ್ಛಾಶಕ್ತಿಯ ಗುಣವಾದ ರೂಪವನ್ನು ಅರ್ಪಿಸಿ, ಸುರೂಪವನ್ನು ಪ್ರಸಾದವನ್ನಾಗಿ ಪಡೆಯುತ್ತಾನೆ.

(೪) ಪ್ರಾಣಲಿಂಗಿಯೆಂಬ ಅಂಗನು ಜಂಗಮಲಿಂಗವನ್ನು ಆರಾಧಿಸುತ್ತಾನೆ. ಅಂದರೆ, ಅವನು ಸುಮನೆಂಬ ಹಸ್ತದಿಂದ ತ್ವಗಿಂದ್ರಿಯೆಂಬ ಲಿಂಗದ ಬಾಯಿಗೆ ಅನುಭಾವ ಭಕ್ತಿಯಿಂದ ಆದಿಶಕ್ತಿಯ ಗುಣವಾದ ಸೋಂಕನ್ನು ಅರ್ಪಿಸಿ ಸುಸ್ಪರ್ಶನೆಂಬ ಪ್ರಸಾದವನ್ನು ಪಡೆಯುತ್ತಾನೆ.

(೫) ಶರಣನೆಂಬ ಅಂಗನಿಗೆ ಪ್ರಸಾದ ಲಿಂಗವೇ ಆರಾಧ್ಯವಸ್ತು. ಅವನು ಸುಜ್ಞಾನವೆಂಬ ಹಸ್ತದಿಂದ ಲಿಂಗದ ಶೋತ್ರವೆಂಬ ಬಾಯಿಗೆ ಆನಂದ ಭಕ್ತಿಯಿಂದ ಪರಾಶಕ್ತಿಯ ಗುಣವಾದ ಶಬ್ದವನ್ನು ಅರ್ಪಿಸಿ, ಸುಶಬ್ದವನ್ನು ಪ್ರಸಾದವಾಗಿ ಪಡೆಯುತ್ತಾನೆ.

(೬) ಐಕ್ಯನೆಂಬ ಅಂಗನಿಗೆ ಮಹಾಲಿಂಗವೇ ಅರಾಧ್ಯ ದೈವ. ಅವನು ಭಾವವೆಂಬ ಹಸ್ತದಿಂದ ಮಹಾಲಿಂಗದ ಹೃದಯವೆಂಬ ಬಾಯಿಗೆ ಸಮರಸಭಕ್ತಿಯಿಂದ, ಚಿತ್‌ಶಕ್ತಿಯ ಗುಣವಾದ ತೃಪ್ತಿಯನ್ನು ಅರ್ಪಿಸಿ, ಪರಿಣಾಮವೆಂಬ ಪ್ರಸಾದವನ್ನು ಪಡೆಯುತ್ತಾನೆ. (೨:೯೮೬).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅಷ್ಟಮದಗಳು ಅರವತ್ತುನಾಲ್ಕು ವಿದ್ಯೆ Next