Previous ಆಚಾರ ಪ್ರಭೇದ ಆದಿ ಅನಾದಿ ಇಲ್ಲದಂದು Next

ಆತ್ಮ

ಆತ್ಮ

(೧) “ಅಂಗ”, “ಜೀವ”, “ಜೀವಾತ್ಮ” ಇವು ಆತ್ಮ”ದ ಪರ್ಯಾಯ ಪದಗಳು. ಎಲ್ಲ ಭಾರತೀಯ ದಾರ್ಶನಿಕರಂತೆ (ಚಾರ್ವಾಕರನ್ನುಳಿದು), ವಚನಕಾರರು ಆತ್ಮವು ಚಿದ್ವಸ್ತುವೆಂದೂ, ಅದು ಭೌತ ಶರೀರದಿಂದ ಭಿನ್ನವೆಂದೂ ನಂಬುತ್ತಾರೆ. ದೇಹ ನಶ್ವರ, ಆತ್ಮ ಅಮರ, ದೇಹವು ಪ್ರಾದೇಶಿಕ ಮತ್ತು ಇಂದ್ರಿಯ ಗೋಚರ ಗುಣ (ರೂಪರಸಾದಿಗಳಂತಹ ಗುಣಗಳುಳ್ಳದ್ದು, ಆತ್ಮಕ್ಕೆ ಪ್ರಾದೇಶಿಕ ಗುಣವಾಗಲಿ ಇಂದ್ರಿಯಗೋಚರಗುಣವಾಗಲಿ ಇಲ್ಲ.

ಆತ್ಮವು ಮೂಲತಃ ಪರಶಿವನ ಅಂಗ. ಆದರೆ ಅದು ಅಜ್ಞಾನದಿಂದಾಗಿ ತನ್ನ ಸ್ವರೂಪವನ್ನು ಮರೆತಿರುವುದೂ ಅಲ್ಲದೆ, ಸಂಸಾರಬಂಧನಕ್ಕೆ ಸಿಲುಕಿ ಅನೇಕ ರೀತಿಯ ದುಃಖಗಳನ್ನು ಅನುಭವಿಸುತ್ತದೆ. ಗುರುವಿನ ಮೂಲಕ ಜ್ಞಾನೋದಯ ಸಾಧ್ಯವಾದಾಗ, ಆತ್ಮವು ಮತ್ತೆ ಲಿಂಗದಲ್ಲಿ ಐಕ್ಯವಾಗುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪರಶಿವ ಮತ್ತು ಆತ್ಮ ಸ್ವರೂಪದಲ್ಲಿ ಒಂದೇ, ಅಂದರೆ ಇಬ್ಬರೂ ಚಿದ್‌ವಸ್ತುಗಳೇ ಆಗಿರುವುದರಿಂದ, ಆತ್ಮ ಪರಶಿವನಲ್ಲಿ ಬೇರಾಗದಂತೆ ಬೆರೆಯಬಲ್ಲ. ನೀರು ಎಣ್ಣೆಯಲ್ಲಿ ಬೆರೆಯಲಾರದು. ಏಕೆಂದರೆ ನೀರಿನ ಸ್ವರೂಪವೇ ಬೇರೆ, ಎಣ್ಣೆಯ ಸ್ವರೂಪವೇ ಬೇರೆ. ಆದರೆ ನೀರು ನೀರಿನಲ್ಲಿ, ಎಣ್ಣೆ ಎಣ್ಣೆಯಲ್ಲಿ ಬೆರೆಯಬಲ್ಲವು, ಏಕೆಂದರೆ ಅವುಗಳ ಸ್ವರೂಪ ಒಂದೇ ಇರುವುದರಿಂದ. ಆಭರಣಗಳು ಬೇರೆ ಬೇರೆ ಇದ್ದರೂ ಅವುಗಳಲ್ಲಿರುವ ಮೂಲವಸ್ತುವಾದ ಚಿನ್ನ ಒಂದೇ ಆಗಿರುವುದರಿಂದ, ಅವು ಕರಗಿದಾಗ ಮತ್ತೆ ಚಿನ್ನವೇ ಆಗುತ್ತದೆ. ಅದೇ ರೀತಿ ಪರಶಿವನೆಂಬ ಚಿದ್‌ವಸ್ತುವಿನಿಂದ ಬಂದ ಆತ್ಮಗಳು ಲಿಂಗೈಕ್ಯವಾದಾಗ ಮತ್ತೆ ಪರಶಿವನೇ ಆಗುತ್ತವೆ. ಆದರೆ ಅವು ತಮ್ಮ ನಾಮರೂಪುಗಳನ್ನು ಕಳೆದುಕೊಳ್ಳುವುದರಿಂದ ಪರಶಿವನ ಇತರ ಗುಣಗಳಾದ ಸರ್ವಶಕ್ತಿತ್ವ, ಸೃಷ್ಟಿಕರ್ತೃತ್ವ, ಮುಂತಾದ ಗುಣಗಳು ಅವಕ್ಕೆ ಬರುವುದಿಲ್ಲ. (ನೋಡಿ : ಆತ್ಮತ್ರಯ, ಅಂಗ)

(೨), ಆತ್ಮನೆಂಬ ಅಂಬುಧಿಯಲ್ಲಿ ಸಕಲ ಬ್ರಹ್ಮಾಂಡ ಕೋಟಿಗಳಾದುವಲ್ಲದೆ ಬೇರಾಗಬಲ್ಲವೆ" ಎಂದು ಚಂದಿಮರಸ (೭:೬೦೨) ಕೇಳುವಲ್ಲಿ "ಆತ್ಮ" ಎಂಬ ಪದಕ್ಕೆ ಪರಮಾತ್ಮ ಎಂಬ ಅರ್ಥವಿದೆ. ಪರಮಾತ್ಮನಿಗೆ ಆತ್ಮ ಎಂಬ ಅನ್ವಯವಾಗುವುದು ವೇದಾಂತ ಪರಿಭಾಷೆಯಲ್ಲಿ ಸಾಮಾನ್ಯವಾದರೂ ವಚನಪರಿಭಾಷೆಯಲ್ಲಿ ಅಪರೂಪ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಆಚಾರ ಪ್ರಭೇದ ಆದಿ ಅನಾದಿ ಇಲ್ಲದಂದು Next