Previous ಅರವತ್ತುನಾಲ್ಕು ವಿದ್ಯೆ ಅಷ್ಟಸಿದ್ಧಿಗಳು (ಅಷ್ಟಮಹದೈಶ್ವರ್ಯ) Next

ಅವಸ್ಥೆ

ಅವಸ್ಥೆ

ಪುರಾತನ ಭಾರತೀಯರ ಪ್ರಕಾರ, ಜೀವಕ್ಕೆ ೧) ಜಾಗ್ರತ, (೨) ಸ್ವಪ್ನ, (೩) ಸುಷುಪ್ತಿ (ಮತ್ತು (೪) ತುರೀಯ ಎಂಬ ನಾಲ್ಕು ಅವಸ್ಥೆಗಳಿವೆ.

ಜಾಗ್ರತಾವಸ್ಥೆಯಲ್ಲಿ ಮನುಷ್ಯನು ತನ್ನ ಮನಸ್ಸು, ಬುದ್ಧಿ, ಅಹಂ ಮತ್ತು ಜ್ಞಾನೇಂದ್ರಿಯಗಳನ್ನು ಉಪಯೋಗಿಸಿಕೊಂಡು ಜ್ಞಾನವನ್ನು ಪಡೆಯುತ್ತಾನೆ ಹಾಗೂ ಜಗತ್ತಿನೊಡನೆ ವ್ಯವಹರಿಸುತ್ತಾನೆ. ಇಲ್ಲಿ ಅವನು ತನ್ನ ವಿವೇಚನೆಯನ್ನು ಬಳಸಿಕೊಳ್ಳಬಹುದು ಅಥವಾ ಅದನ್ನು ಕಳೆದುಕೊಂಡು ಅಮಾನುಷವಾಗಿ, ಮೂರ್ಖನಂತೆ ವರ್ತಿಸಬಹುದು. ಅಂತೂ ಅವನಿಗೆ ತನ್ನ ಸುಖದುಃಖಗಳನ್ನು ನಿಯತ್ರಿಸುವ ಸ್ವಾತಂತ್ರ್ಯವಿದೆ.

ಸ್ವಪ್ನಾವಸ್ಥೆಯಲ್ಲಿ ಬುದ್ಧಿಯು ತನ್ನದೆ ಆದ ಪ್ರಪಂಚವನ್ನು ಸೃಷ್ಟಿಸಿಕೊಂಡು, ಅದರಲ್ಲಿ ವ್ಯವಹರಿಸುವುದರಿಂದ ಮನುಷ್ಯನಿಗೆ ಇಂದ್ರಿಯಗಳ ಸಹಾಯವಿಲ್ಲದೆಯೇ ಸುಖದುಃಖಗಳನ್ನು ನಿಯಂತ್ರಿಸುವ ಸ್ವಾತಂತ್ರ್ಯವಿಲ್ಲ.

ಸುಷುಪ್ತಿ (ಗಾಢನಿದ್ರೆ)ಯಲ್ಲಿ ಜ್ಞಾನೇಂದ್ರಿಯಗಳಾಗಲಿ ಅಂತಃಕರಣಗಳಾಗಲಿ (ಮನಸ್ಸು, ಬುದ್ದಿ ಮತ್ತು ಅಹಂಕಾರಗಳ ಸಂಪುಟವಾಗಲಿ) ಕೆಲಸಮಾಡುತ್ತಿಲ್ಲ. ತಾತ್ಕಾಲಿಕವಾಗಿ ಆತ್ಮವು ಅವುಗಳೊಂದಿಗೆ ತನ್ನ ಸಂಬಂಧವನ್ನು ಕಡಿದುಕೊಂಡಿದೆ. ಆದುದರಿಂದ ಆ ಸ್ಥಿತಿಯಲ್ಲಿ ದುಃಖವೂ ಇಲ್ಲ, ಸುಖವೂ ಇಲ್ಲ. ಆ ಅವಸ್ಥೆಯಲ್ಲಿ ಅಹಂಕಾರವಿಲ್ಲದಿದುರಿಂದ ನಾನು ನಿದ್ರಿಸುತ್ತಿದ್ದೇನೆ" ಎಂದು ಸುಷುಪ್ತಿಗೊಳಗಾದವನು ಹೇಳುವಂತಿಲ್ಲ. ಆದರೆ ಎಚ್ಚರವಾದನಂತರ ಜೀವನು ಮತ್ತೆ ಸುಖ ದುಃಖಗಳಿಗೊಳಗಾಗುತ್ತಾನೆ.

ತುರೀಯಾವಸ್ಥೆಯೂ ಒಂದು ರೀತಿಯಲ್ಲಿ ಸುಷುಪ್ತಿಯನ್ನೇ ಹೋಲುತ್ತದೆ. ಹೇಗೆಂದರೆ, ಅಲ್ಲಿಯೂ ಸಹ ಜೀವವೊಂದೇ ಇದ್ದು, ಅದು ಅಂತಃಕರಣ ಹಾಗೂ ಜ್ಞಾನೇಂದ್ರಿಯಗಳೊಡನೆ ತನ್ನ ಸಂಬಂಧವನ್ನು ಕಳೆದುಕೊಂಡಿದೆ. ಆದರೆ ಅದು ಒಂದು ಮುಖ್ಯ ಅಂಶದಲ್ಲಿ ಉಳಿದ ಅವಸ್ಥೆಗಳಿಂದ, ಅದರಲ್ಲೂ ಸುಷುಪ್ತಿಯಿಂದ ಭಿನ್ನವಾಗಿದೆ. ತುರೀಯವನ್ನು ಮುಟ್ಟಿದವನು ಸುಖದುಃ ಖಗಳನ್ನು ಮೀರಿದವನು.

ತುರೀಯವನ್ನು ಕೆಲವರು ಅಷ್ಟಾಂಗಯೋಗದ ಸಮಾಧಿ ಎನ್ನುತ್ತಾರೆ. ತುರೀಯದಲ್ಲಿರುವ ಕೆಲವು ಹಂತಗಳನ್ನು ನಾವು ಗಮನಿಸಬೇಕು. ಮೊದಲು ಯೋಗಿಯು ಒಂದೇ ವಸ್ತುವನ್ನು ಕುರಿತು ಧ್ಯಾನಿಸುತ್ತಾನೆ ಅಥವಾ ಏಕಾಗ್ರಚಿತ್ತದಿಂದ ನೋಡುತ್ತಾನೆ. ಆಗ ಅವನಿಗೆ ಆ ವಸ್ತುವಲ್ಲದೆ ಮತ್ತೇನೂ ಕಾಣದು. ಅನಂತರ ಆ ವಸ್ತುವೂ ಕಣ್ಣಿನಿಂದ ಅಥವಾ ಮನಸ್ಸಿನಿಂದ ಮರೆಯಾಗಿ, ಅವನಿಗೆ ತಾನೊಬ್ಬನೆ (ತನ್ನ ಆತ್ಮ ಒಂದೇ) ಇರುವುದರ ಅನುಭವವಾಗುತ್ತದೆ. ಹೀಗೆ ಆತ್ಮಕ್ಕೆ ತನ್ನ ಅರಿವಾಗುವುದೇ ತುರೀಯಾವಸ್ಥೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅರವತ್ತುನಾಲ್ಕು ವಿದ್ಯೆ ಅಷ್ಟಸಿದ್ಧಿಗಳು (ಅಷ್ಟಮಹದೈಶ್ವರ್ಯ) Next