Previous ಪ್ರಸಾದ ಪ್ರಭೇದ ಭಕ್ತಂಗೆ ಪೃಥ್ವಿಯಂಗ Next

ಬಯಲು

ಬಯಲು (ಪರವಸ್ತು)

ಪರಶಿವನಿಗೆ ಅನ್ವಯಿಸುವ ಪದ. ಇದು ಅಂಕಿತನಾಮವಾಗಿರದೆ ಒಂದು ಉಪಮೆಯಾಗಿದೆ. ಆಕಾಶ, ಚಿದಾಕಾಶ, ಚಿದಂಬರ ಇವು ಇದರ ಪರ್ಯಾಯ ಪದಗಳು, ಶೂನ್ಯ, ಶೂನ್ಯಸ್ಥಲ, ನಿಃಶೂನ್ಯ ಎಂಬ ಪದಗಳೂ ಇದರ ಪರ್ಯಾಯ ಪದಗಳು, ಪರಶಿವನನ್ನು ಬಯಲಿಗೇ (ಆಕಾಶಕ್ಕೆ) ಏಕೆ ಹೋಲಿಸಬೇಕು ಎಂಬುದಕ್ಕೆ ಕೆಲವು ಕಾರಣಗಳಿವೆ.

೧. ಯಾವುದೇ ವಸ್ತುವಾಗಲಿ, ಅದು ಎಷ್ಟೇ ದೊಡ್ಡದಿರಲಿ, ಆಕಾಶವು ಅದನ್ನು ಆವರಿಸಿಕೊಳ್ಳುತ್ತದೆಯಾದುದರಿಂದ, ಎಲ್ಲ ವಸ್ತುಗಳಿಗಿಂತಲೂ ಇಥವಾ ಇಡೀ ವಿಶ್ವಕ್ಕಿಂತಲೂ ಆಕಾಶವೇ ದೊಡ್ಡದು ಎನ್ನಬಹುದು. ಹಾಗೆಯೇ ಎಲ್ಲ ವಸ್ತುಗಳನ್ನೂ ಪರಶಿವನು ಒಳಗೊಳ್ಳುವುದರಿಂದ, ಅವನೂ ಆಕಾಶದಂತಿದ್ದಾನೆ ಎನ್ನಬಹುದು. ವಿಶ್ವವನ್ನೊಳಗೊಳ್ಳುವ ಆಕಾಶವು ಭೌತಾಕಾಶವಾದರೆ ವಿಶ್ವವನ್ನೂ, ಭೌತಾಕಾಶವನ್ನೂ ಒಳಗೊಳ್ಳುವ ಪರಶಿವನು ಚಿದಾಕಾಶ,

೨. ಎರಡನೆಯದಾಗಿ, ಮೋಡ, ಧೂಳು, ಮುಂತಾದ ತಾತ್ಕಾಲಿಕ ಘಟನೆಗಳು ಆಕಾಶದ ಮೂಲಸ್ವರೂಪವನ್ನು ಬದಲಾಯಿಸುವುದಿಲ್ಲ. ಅದೇ ರೀತಿ ಚಿದಾಕಾಶದಲ್ಲಿರುವ ವಸ್ತುಗಳು ಅವು ಎಷ್ಟೇ ಕೆಟ್ಟದಿದ್ದರೂ ಚಿದಾಕಾಶವನ್ನು ಕೆಡಿಸಲಾರವು.

೩. ಮೂರನೆ ಕಾರಣ ಮೊದಲನೆ ಎರಡು ಕಾರಣಗಳಿಗಿಂತ ಮುಖ್ಯವಾದುದು. ಎರಡು ಅಥವಾ ಹೆಚ್ಚು ವಸ್ತುಗಳ ಮಧ್ಯೆ ಇರುವ ಆಕಾಶವನ್ನು ತಿಳಿದುಕೊಳ್ಳಬಹುದೇ ಹೊರತು, ವಸ್ತುರಹಿತ ಆಕಾಶವನ್ನಲ್ಲ. ಎರಡು ವಸ್ತುಗಳ ಮಧ್ಯದಲ್ಲಿರುವ ಆಕಾಶ ದೊಡ್ಡದು ಅಥವಾ ಸಣ್ಣದು ಎಂದೂ, ಅನೇಕ ವಸ್ತುಗಳ ಮಧ್ಯದಲ್ಲಿರುವ ಆಕಾಶ ಚೌಕಾಕಾರದ್ದು, ಘನಾಕೃತಿಯುಳ್ಳದ್ದು ಎಂದೂ ವರ್ಣಿಸಬಹುದು. ಆಕಾಶದಲ್ಲಿ ಯಾವ ವಸ್ತುಗಳೂ ಇಲ್ಲದಿದ್ದರೆ, ಅದು ಸಣ್ಣದೂ ಅಲ್ಲ, ದೊಡ್ಡದೂ ಅಲ್ಲ, ತ್ರಿಕೋಣಾಕೃತಿಯೂ ಅಲ್ಲ, ಚೌಕಾಕೃತಿಯೂ ಅಲ್ಲ, ಮತ್ತಾವ ಆಕೃತಿಯೂ ಅಲ್ಲ. ಅದು ವರ್ಣನೆಗೆ ಸಿಕ್ಕುವುದಿಲ್ಲ. ಅದೇ ರೀತಿ ಪರಶಿವನಲ್ಲಿ ವಿಶ್ವವೇ ಇಲ್ಲದಂಥ ಅವಸ್ಥೆಯಲ್ಲಿ (ಶಕ್ತಿಯು ಅವ್ಯಕ್ತವಾಗಿರುವಂಥ ಪ್ರಲಯ ಸ್ಥಿತಿಯಲ್ಲಿ) ಪರಶಿವನು ಕಾರಣನೂ ಅಲ್ಲ, ಕಾರ್ಯನೂ ಅಲ್ಲ, ದೊಡ್ಡವನೂ ಅಲ್ಲ, ಸಣ್ಣವನೂ ಅಲ್ಲ. ಅವನು ಆ ಸ್ಥಿತಿಯಲ್ಲಿ ವರ್ಣನಾತೀತನಾಗುತ್ತಾನೆ. (೨:೬೩೯)

ಎಲ್ಲ ವಸ್ತುಗಳೂ ಆಕಾಶ ಅಥವಾ ಬಯಲಿನಲ್ಲಿವೆ. ಈ ಎಲ್ಲ ವಸ್ತುಗಳೂ, ಬಯಲೂ ಪರವಸ್ತು ಎಂಬ ಮತ್ತೊಂದು ಬಯಲಿನಲ್ಲಿವೆ. ಈ ಪರವಸ್ತು ಎಂಬ ಬಯಲು ಭೌತಿಕ ಆಕಾಶವಲ್ಲ, ಅದು ಚಿದ್ಭಯಲು ಅಥವಾ ಚಿದಾಕಾಶ. ಸೃಷ್ಟಿಗಿಂತ ಮೊದಲು ಚಿದ್ಬಯಲು ಅಥವಾ ಪರವಸ್ತು ತಾನೊಂದೇ ಇತ್ತು. ಇದಕ್ಕೆ ಶೂನ್ಯ, ಮಹಾಶೂನ್ಯ, ಸರ್ವಶೂನ್ಯ, ಸರ್ವಶೂನ್ಯ ನಿರಾಲಂಬ ಎಂಬ ಹೆಸರುಗಳೂ ಇವೆ. ಇಂದ್ರಿಯಗೋಚರ ವಸ್ತುಗಳು ಇಲ್ಲದ ಮತ್ತು ಇಂದ್ರಿಯಗಳಿಗಾಗಲಿ ಬುದ್ಧಿಗಾಗಲಿ ನಿಲುಕದ ಈ ಶೂನ್ಯವನ್ನು ಪರವಸ್ತು ಎಂದು ಕರೆಯುವುದು ಸೂಕ್ತವಾಗಿದೆ.

ಅಯ್ಯಾ ಜಲ, ಕೂರ್ಮ, ಗಜ, ಫಣಿಯ ಮೇಲೆ
ಧರೆ ವಿಸ್ತರಿಸಿ ನಿಲ್ಲದಂದು, ಗಗನವಿಲ್ಲದಂದು,
ಪವನನ ಸುಳುಹಿಲ್ಲದಂದು, ಅಗ್ನಿಗೆ ಕಳೆದೋರದಂದು,
ತರು ಗಿರಿ ತೃಣ ಕಾಷ್ಠಾದಿಗಳಿಲ್ಲದಂದು,
ಯುಗ ಜುಗ, ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು,
ನಿಜವನರಿದೆನೆಂಬ ತ್ರಿಜಗಾಧಿಪತಿಗಳಿಲ್ಲದಂದು
ತೋರುವ ಬೀರುವ ಭಾವದ ಪರಿ,
ಭಾವದಲ್ಲಿ ಭರಿತ, ಅಗಮ್ಯ ಗುಹೇಶ್ವರ ನಿರಾಳವು! (೨: ೭)

ಲೋಕಾದಿ ಲೋಕಂಗಳೇನೂ ಆಗ ಇರಲಿಲ್ಲವಾದುದರಿಂದ, ಆ ಪರವಸ್ತು ಏನನ್ನೂ ಕುರಿತು ನೆನೆಯುವಂತಿರಲಿಲ್ಲ. ಅದು ತನ್ನನ್ನೂ ನೆನೆಯದಂಥ ಸ್ಥಿತಿ.

ಅಂದಾದಿಬಿಂದು ಉದಯಿಸದಂದು,
ಮಾಯಾಶಕ್ತಿ ಹುಟ್ಟದಂದು,
ಪರಶಿವತತ್ವದಲ್ಲಿ ಚಿತ್ತು ತಲೆದೋರದಂದು,
ಚಿತ್ತಿನಿಂದ ನಾದ ಬಿಂದು ಕಳೆಗಳುದಯವಾಗದಂದು,
ನಾದ ಬಿಂದು ಕಳೆವೊಂದಾಗಿ ಚಿತ್ಪಿಂಡ ರೂಹಿಸದಂದು,
ಶೂನ್ಯ ಮಹಾಶೂನ್ಯವಿಲ್ಲದಂದು,
ನಿಃಕಲ ನಿರಾಳತತ್ವನೆಂಬ ಹೆಸರಿಲ್ಲದಂದು,
ನಿತ್ಯನಿರಂಜನ ನೀನೊರ್ಬನೆಯಿರ್ದೆಯಲ್ಲಿ ನಿನ್ನ ನೀನರಿಯದೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. (೧೧: ೧೫)

ನಾವು ಯಾವುದಾದರೂ ವಸ್ತುವನ್ನು ತಿಳಿದುಕೊಳ್ಳಬೇಕೆಂದರೆ, ಆ ವಸ್ತುವಿನ ಗುಣಗಳನ್ನು ತಿಳಿದುಕೊಳ್ಳಬೇಕು. ಅದರೆ ಶೂನ್ಯಕ್ಕೆ ಯಾವ ಗುಣವೂ ಇಲ್ಲ ಎಂದ ಮೇಲೆ, ಅದನ್ನು ತಿಳಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ.

ಧರೆಯಾಕಾಶವಿಲ್ಲದಂದು, ಮಂಡಲ ನೆಲೆಗೊಳ್ಳದಂದು,
ಹೋಮ ನೇಮ ಜಪ ತಪವಿಲ್ಲದಂದು ನಿಮ್ಮನಾರು ಬಲ್ಲರು?
ಹರಿ ಬ್ರಹ್ಮಾದಿಗಳಿಗೆ ಅಗೋಚರ, ನಿರ್ಲೇಪ ನಿರಂಜನನಾಗಿ
ವೇದಂಗಳರಿಯವು, ಶಾಸ್ತ್ರ ಸ್ಮೃತಿಗಳು ನಿಮ್ಮನರಿಯವು.
ಗಗನಕಮಲಕುಸುಮ ಪರಿಮಳದಿಂದತ್ತತ್ತಲು
ಗುಹೇಶ್ವರಾ ನಿಮ್ಮ ನಿಲವನಾರು ಬಲ್ಲರು? (೨: ೧೨೭೩)

ಶೂನ್ಯಸ್ಥಿತಿಯ ಪರವಸ್ತುವಿಗೆ ಯಾವ ಗುಣವೂ ಇಲ್ಲ, ಎಂದು ಮೂರು ಅರ್ಥಗಳಲ್ಲಿ ಹೇಳಲಾಗಿದೆ. ಆಗಮಗಳಲ್ಲಿಯೂ ಪುರಾಣಗಳಲ್ಲಿಯೂ ಪರಶಿವನಿಗೆ ಅರೋಪಿಸಲಾಗಿರುವ ಗುಣಗಳು ಪರವಸ್ತುವಿಗೆ ಇಲ್ಲ. ಇದು ಮೊದಲನೆಯ ಅರ್ಥ.

ಅಸುರರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ,
ಬ್ರಹ್ಮ ಕಪಾಲವಿಲ್ಲ, ಭಸ್ಮ ಭೂಷಣನಲ್ಲ,
ವೃಷಭವಾಹನನಲ್ಲ, ಋಷಿಯರುಗಳೊಡನಿದ್ದಾತನಲ್ಲ.
ಎಸಗುವ ಸಂಸಾರದ ಕುರುಹಿಲ್ಲದಾಂತಗೆ
ಹೆಸರಾವುದಿಲ್ಲೆಂದನಂಬಿಗರ ಚೌಡಯ್ಯ (೬: ೪೭)

ಆಗ ಪರವಸ್ತುವು ಏನನ್ನೂ ಸೃಷ್ಟಿ ಮಾಡಿರಲಿಲ್ಲ. ಆದುದರಿಂದ, ಅದು ಯಾವುದರ ಕಾರಣವೂ ಅಲ್ಲ, ಕಾರ್ಯವೂ ಅಲ್ಲ: ಅದು ಆದಿಯೂ ಅಲ್ಲ, ಅನಾದಿಯೂ ಅಲ್ಲ; ಅದು ಸೃಷ್ಟಿಕರ್ತ, ಲಯಕರ್ತ, ಏನೂ ಅಲ್ಲ. ಇದು ಎರಡನೆಯ ಅರ್ಥ.

ಕಾರ್ಯನಲ್ಲ, ಕಾರಣನಲ್ಲ,
ಕಲ್ಪಿತನಲ್ಲ, ನಿರ್ವಿಕಲ್ಪಿತನಲ್ಲ,
ನೆನಹುಮಾತ್ರದಿಂದ ಜಗವ ಸೃಷ್ಟಿಸಿದೆನೆಂಬ
ಭಾವ ಭಣಿತೆಯವನಲ್ಲ.
ಇದಿರಿಂಗೆ ತಾನಿಲ್ಲ, ತನಗೆ ಇದಿರಾಗಿ ಒಂದು ವಸ್ತುವಿಲ್ಲ,
ಪ್ರತಿಯಿಲ್ಲದಪ್ರತಿಮ, ಅನುಪಮಮಹಿಮ,
ನಿನ್ನ ನಿಃಕಲನೆಂದೆಂಬರಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. (೧೧: ೨೫)

ಮೂರನೆಯದಾಗಿ, ಪರವಸ್ತುವಿಗೆ ಆಕಾರ-ಗಾತ್ರಗಳಿವೆ ಎಂದಾಗಲಿ, ಅದು ಅಲ್ಲಿದೆ, ಇಲ್ಲಿದೆ, ಎಂದಾಗಲಿ ಹೇಳಲಾಗದು. ಏಕೆಂದರೆ ಅದು ಎಲ್ಲಾದರೂ ಒಂದು ಕಡೆ ಇದೆ, ಎಂದು ಹೇಳಿದರೆ ಉಳಿದ ಕಡೆ ಇಲ್ಲ, ಎಂಬರ್ಥ ಬರುತ್ತದೆ. ಒಂದು ವೇಳೆ ಅದು ಎಲ್ಲಾ ಕಡೆ ಇದೆ ಎಂದರೆ ಅಲ್ಲಿ ಇಲ್ಲಿ ಎಂದು ವ್ಯತ್ಯಾಸ ಮಾಡಲು ಸಹಾಯಕವಾಗುವ ವಸ್ತುಗಳಿವೆ ಎಂದರ್ಥವಾಗುತ್ತದೆ; ಅಲ್ಲದೆ, ಪರವಸ್ತು ಇತರ ವಸ್ತುಗಳಂತೆ ಇದ್ದರೆ ಅದನ್ನು ಆವರಿಸಿರುವ ಆಕಾಶ ಅದಕ್ಕಿಂತ ದೊಡ್ಡದು ಎಂಬರ್ಥ ಬರುತ್ತದೆ. ಆದುದರಿಂದ, ಅದಕ್ಕೆ ಯಾವ ಸ್ಪಷ್ಟ ಅಥವಾ ಖಂಡಿತ ಗುಣವೂ ಇಲ್ಲ.

ಎಡನಿಲ್ಲ ಬಲನಿಲ್ಲ, ಹಿಂದಿಲ್ಲ ಮುಂದಿಲ್ಲದ ಕಾರಣ
ಅಡಿಯಿಲ್ಲದ ಮುಡಿಯಿಲ್ಲದ ಒಡಲಿಲ್ಲದ,
ಹಿಡಿಯಲಿಲ್ಲದ, ಬಿಡಲಿಲ್ಲದ, ನೋಡಲಿಲ್ಲದ, ನುಡಿಸಲಿಲ್ಲದ,
ಕೂಡಲಿಲ್ಲದ, ಅಪ್ರತಿಮ ನೀನಾಗಿ,
ಅರುಹಿಲ್ಲದ, ಮರಹಿಲ್ಲದ, ಮಹಾಮಹಿಮ, ನೀನಾದಕಾರಣ,
ನಿನ್ನ, ನಿರವಯಲಿಂಗವೆಂದೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. (೧೧: ೨೭)

ಆದರೆ ಹೆಸರಿಗೆ ಬಯಲು ಅಥವಾ ಶೂನ್ಯವಾದರೂ ಅದು ಏನೂ ಇಲ್ಲದ ಶೂನ್ಯವಲ್ಲ. ವಾಸ್ತವವಾಗಿ ಅದರಲ್ಲಿ ಮುಂದೆ ಸೃಷ್ಟಿಯಾಗುವ ಎಲ್ಲದೂ ಇದೆ. ಆದರೆ ಯಾವುದೂ ಸ್ಪಷ್ಟವಾಗಿಲ್ಲ. ವಿವಿಧ ರೂಪದ ವಿವಿಧ ಹೆಸರಿನ ಅಭರಣಗಳು ಮೊದಲು ಚಿನ್ನದಲ್ಲೇ ಹೇಗೆ ಅವ್ಯಕ್ತವಾಗಿರುತ್ತವೆಯೋ, ಹಾಗೆ ಪ್ರಪಂಚದ ಎಲ್ಲ ವಸ್ತುಗಳು, ಅವುಗಳನ್ನುಂಟು ಮಾಡುವ ಶಕ್ತಿಗಳು, ಅಧಿದೇವತೆಗಳು, ಶೂನ್ಯದಲ್ಲಿ ಅವ್ಯಕ್ತವಾಗಿದ್ದವು.

ಪಂಚಶಕ್ತಿಯನು ಪಂಚಸಾದಾಖ್ಯವನು
ಪಂಚಕಲೆಗಳನು ಪಂಚಾಕ್ಷರಂಗಳನು ಪಂಚಭೂತಾತ್ಮವನು
ತನ್ನಲ್ಲಿ ಗರ್ಭಿಕರಿಸಿಕೊಂಡು
ತಾನು ಚಿದ್‌ಬ್ರಹ್ಮಾಂಡಾತ್ಮಕನಾಗಿ, ಚಿನ್ಮಯನಾಗಿ,
ಚಿದ್ರೂಪನಾಗಿ, ಚಿತ್ಪ್ರಕಾಶನಾಗಿ, ಚಿದಾನಂದನಾಗಿ
ಸುಖ ದುಃಖ ಮೋಹ ಭಯಂಗಳ ಹೊದ್ದದೆ,
ಸರ್ವವ್ಯಾಪಕನಾಗಿ, ಸರ್ವಚೈತನ್ಯಮಯನಾಗಿಪ್ಪ
ಪರಂಜ್ಯೋತಿರ್ಲಿಂಗವು ಎನ್ನ ಪ್ರಾಣಲಿಂಗವಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. (೧೧: ೩೬)

ಅಂಗವಾರು, ಲಿಂಗವಾರು, ಶಕ್ತಿಯಾರು, ಭಕ್ತಿಯಾರು,
ಇಂತಿವೆಲ್ಲವ ನಿನ್ನಲ್ಲಿ ಗರ್ಭೀಕರಿಸಿಕೊಂಡು
ಸಚ್ಚಿದಾನಂದ ನಿತ್ಯಪರಿಪೂರ್ಣ ನಿರಂಜನ ನೀನಾದ ಕಾರಣ
ನಿನ್ನ, ನಿಃಕಲಶಿವತತ್ವವೆಂದೆನು ಕಾಣ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. (೧೧ : ೩೨)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])

ಪರಿವಿಡಿ (index)
*
Previous ಪ್ರಸಾದ ಪ್ರಭೇದ ಭಕ್ತಂಗೆ ಪೃಥ್ವಿಯಂಗ Next