Previous ಭಕ್ತಂಗೆ ಪೃಥ್ವಿಯಂಗ ಭರಿತಾರ್ಪಣ Next

ಭಕ್ತಿ

ಭಕ್ತಿ

: ೧. ಭಕ್ತಿಯೆಂದರೆ ಭಕ್ತನು ಗುರುವಿಗೆ, ಲಿಂಗಕ್ಕೆ ಮತ್ತು ಜಂಗಮಕ್ಕೆ ತೋರಿಸುವ ಪ್ರೀತಿ, ವಿಶ್ವಾಸ, ಮತ್ತು ಗೌರವ. ಗುರುವು ಶಿಷ್ಯನಿಗೆ ಇಷ್ಟಲಿಂಗ ದೀಕ್ಷೆಯನ್ನು ಮಾಡಿ, ಲಿಂಗಾಯತ ಧರ್ಮದ ಆಚಾರಗಳನ್ನು ಬೋಧಿಸಿ, ಶಿಷ್ಯನು ಆಧ್ಯಾತ್ಮಿಕ ಪಥದಲ್ಲಿ ಸಾಗುವಾಗ ಅವನಿಗೆ ಮಾರ್ಗದರ್ಶನ ನೀಡುವುದರಿಂದ ಅವನು ಗುರುವಿಗೆ ಕತಜ್ಞತೆಯನ್ನು ತೋರಿಸಲೋಸ್ಕರ ಭಕ್ತಿಯನ್ನು ತೋರಿಸಬೇಕು.

ಲಿಂಗವು ಪರಶಿವನ ಪ್ರತೀಕವಾಗಿರುವುದರಿಂದ ಲಿಂಗಕ್ಕೆ ಭಕ್ತಿ ತೋರುವುದೆಂದರೆ ಪರಶಿವನಿಗೆ ಭಕ್ತಿ ತೋರಿಸಿದಂತೆಯೇ, ಪರಶಿವನು ನಮ್ಮನ್ನು ಸೃಷ್ಟಿಸಿ, ನಮ್ಮ ಅನುಕೂಲಕ್ಕಾಗಿ ವಿಶ್ವವನ್ನು ಸೃಷ್ಟಿಸಿರುವುದರಿಂದ, ನಮ್ಮನ್ನು ಪ್ರಾಣಿಗಳಿಗಿಂತ ಹೆಚ್ಚು ಬುದ್ದಿವಂತರನ್ನಾಗಿ ಮಾಡಿರುವುದರಿಂದ, ನಾವು ಪರಶಿವನಿಗೆ ಕೃತಜ್ಞತೆ ತೋರಿಸಲೇಬೇಕು. ಪರಶಿವನಿಗೆ ಭಕ್ತಿಯ ಮೂಲಕವಲ್ಲದೆ ಇನ್ನು ಹೇಗೂ ನಾವು ಕೃತಜ್ಞತೆ ತೋರಿಸಲಾರೆವು.

ಜಂಗಮವು ನಮಗೆ ಆಗಾಗ್ಗೆ ಲಿಂಗಾಯತ ಧರ್ಮದ ಬಗೆಗೆ ಜ್ಞಾನ ನೀಡುವುದರಿಂದ ಹಾಗೂ ಸಮಾಜೋದ್ಧಾರದಲ್ಲಿ ನಿರತವಾಗಿರುವುದರಿಂದ, ನಾವು ಧರ್ಮಾಚರಣೆಯಲ್ಲಿ ನಡೆದುಕೊಳ್ಳುವಂತೆ ನಮ್ಮನ್ನು ಜಾಗರೂಕತೆಯಿಂದ ಕಾಯುತ್ತಿರುವುದರಿಂದ ನಾವು ಜಂಗಮಕ್ಕೆ ಭಕ್ತಿ ತೋರಿಸಬೇಕು. ಜಂಗಮ ಬಾಗಿಲಿಗೆ ಬಂದಾಗ ಧನ ದವಸಗಳನ್ನು ಕೊಟ್ಟರೆ ನಮ್ಮ ಕೃತಜ್ಞತೆ ಮುಟ್ಟಿದಂತಾಗಲಿಲ್ಲ. ಅವರು ತಿಳಿಸಿದ ಹಾದಿಯಲ್ಲಿ ನಾವು ಸಾಗಬೇಕು. ಹಾಗೆ ಸಾಗಿದರೆ ನಮಗೆ ಲಿಂಗಾಂಗ ಸಾಮರಸ್ಯವುಂಟು. ಇಂಥ ಧ್ಯೇಯವನ್ನು ಕಲ್ಪಿಸಿಕೊಟ್ಟು, ಅದನ್ನು ಮುಟ್ಟಲು ಮಾರ್ಗದರ್ಶನ ನೀಡುವ ಜಂಗಮಕ್ಕೆ ನಾವು ನಿಷ್ಠಾಪೂರ್ವಕ ಭಕ್ತಿ ತೋರಿಸಲೇಬೇಕು.

೨. ಬೇರೆ ಧರ್ಮಗಳಲ್ಲಿ ಕಾಣದ, ಲಿಂಗಾಯತ ಧರ್ಮದಲ್ಲಿ ಮಾತ್ರ ಕಾಣುವ ಮತ್ತೊಂದು ಅಂಶವೇನೆಂದರೆ ವಚನಕಾರರು 'ಭಕ್ತಿ' ಎಂಬ ಪದಕ್ಕೆ ಕೊಟ್ಟಿರುವ ಎರಡನೆ ಅರ್ಥ. ಈ ಅರ್ಥದ ಪ್ರಕಾರ, ಭಕ್ತಿಯು ಭಕ್ತನ ಧೋರಣೆಯಷ್ಟೇ ಅಲ್ಲ, ಅದೂ ಒಂದು ರೀತಿಯ ಶಕ್ತಿ, ಪರಶಿವನು ಸೃಷ್ಟಿಸಬೇಕೆಂದು ನಿರ್ಧರಿಸಿದ ಕೂಡಲೆ, ಅವನಲ್ಲಿ ಅವ್ಯಕ್ತವಾಗಿದ್ದ ಚಿತ್ತು ಎನಿಸಿಕೊಳ್ಳುವ ಶಕ್ತಿ (ನೆನಹು)ಯಲ್ಲಿ ಕ್ಷೋಭೆಯುಂಟಾಗುತ್ತದೆ. ಆಗ ಪರಶಿವನು ಅಂಗಸ್ಥಲ ಮತ್ತು ಲಿಂಗಸ್ಥಲ ಎಂಬ ಎರಡು ಭಾಗವಾಗುತ್ತಾನೆ. ಲಿಂಗಸ್ಥಲವೆಂದರೆ ಸೃಷ್ಟಿಯಲ್ಲಿ ನಿರತನಾಗುವ ಪರಶಿವ ಮತ್ತು ಅವನ ಕಲಾಶಕ್ತಿ, ಅಂಗಸ್ಥಲವೆಂದರೆ ಸೃಷ್ಟಿಯಾಗಲಿರುವ ಮನುಷ್ಯ ಮತ್ತು ಅವನ ಭಕ್ತಿ ಶಕ್ತಿ, ವಾಸ್ತವವಾಗಿ, ಇಡೀ ವಿಶ್ವವೂ ಮನುಷ್ಯನು ಕಲಾಶಕ್ತಿಯಿಂದಲೇ ಸೃಷ್ಟಿಯಾಗಿದೆ. ಆದರೆ ಮನುಷ್ಯನಲ್ಲಿರುವ ಕಲಾಶಕ್ತಿಗಳು ಪರಿವರ್ತನಶೀಲ. ಅಂದರೆ, ಮನುಷ್ಯನನ್ನು ಬಂಧಿಸುವುದು ಕಲಾಶಕ್ತಿಗಳ ಸ್ವಾಭಾವಿಕ ಗುಣವಾದರೆ, ಅವನನ್ನು ಮುಕ್ತಿ ಪಡೆಯುವಂತೆ ಪ್ರಚೋದಿಸುವುದು ಭಕ್ತಿಶಕ್ತಿಗಳ ಸ್ವಾಭಾವಿಕ ಗುಣ. ಆದರೆ ಕಲಾಶಕ್ತಿಗಳು ಮತ್ತು ಭಕ್ತಿ ಶಕ್ತಿಗಳು ಎಂದು ಎರಡು ರೀತಿಯ ಶಕ್ತಿಗಳಿಲ್ಲ. ಕಲಾಶಕ್ತಿಗಳನ್ನು ಆಧ್ಯಾತ್ಮಿಕವಾಗಿ ಪರಿವರ್ತಿಸಿದರೆ, ಅವೇ ಭಕ್ತಿ ಶಕ್ತಿಗಳಾಗಿ ಪರಿಣಮಿಸುತ್ತವೆ. ಇವುಗಳ ಸಹಾಯದಿಂದ ಸಾಧಕನು ಆಧ್ಯಾತ್ಮಿಕ ಜೀವನದಲ್ಲಿ ಪ್ರಗತಿಸಾಧಿಸಿ, ಕೊನೆಯಲ್ಲಿ ಲಿಂಗಾಂಗ ಸಾಮರಸ್ಯವನ್ನೂ ಸಾಧಿಸಿಬಹುದು.

ಕಲಾಶಕ್ತಿಗಳು ಚಿತ್‌ಶಕ್ತಿ, ಪರಾಶಕ್ತಿ, ಆದಿಶಕ್ತಿ, ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳೆಂದು ಆರು ಪ್ರಕಾರವಾಗಿದ್ದು, ಅವುಗಳನ್ನು ಪರಿವರ್ತಿಸಿದಾಗ ಅವು ಕ್ರಮವಾಗಿ, ಸಮರಸಭಕ್ತಿ, ಆನಂದ ಭಕ್ತಿ, ಅನುಭಾವ ಭಕ್ತಿ, ಅವಧಾನಭಕ್ತಿ, ನಿಷ್ಠಾ ಭಕ್ತಿ ಮತ್ತು ಶ್ರದ್ಧಾಭಕ್ತಿಗಳೆಂದು ಎನಿಸಿಕೊಳ್ಳುತ್ತವೆ. ಪರಿವರ್ತನೆ ಮೊದಲು ಸ್ಥೂಲಶಕ್ತಿಯಾದ ಕ್ರಿಯಾಶಕ್ತಿಯಿಂದ ಪ್ರಾರಂಭವಾಗಿ ಚಿತ್‌ಶಕ್ತಿಯ ಪರಿವರ್ತನೆಯಲ್ಲಿ ಕೊನೆಗೊಳ್ಳುವುದು. ಯಾವ ಶಕ್ತಿಯನ್ನು ಯಾವ ಹಂತದಲ್ಲಿ ಹೇಗೆ ಭಕ್ತಿಯನ್ನಾಗಿ ಪರಿವರ್ತಿಸಬೇಕೆಂಬುದಕ್ಕೆ ವಿವರ ಹೀಗಿದೆ :

೧. ಶ್ರದ್ಧಾ ಭಕ್ತಿ = ಆಧ್ಯಾತ್ಮಿಕ ಸಾಧನೆಯ ಪ್ರಥಮ ಹಂತದಲ್ಲಿರುವ ಸಾಧಕನು ಭಕ್ತನೆನಿಸಿಕೊಂಡರೆ, ಅವನು ಪರಶಿವನಿಗೆ ತೋರುವ ಧೋರಣೆಯು ಅಥವಾ ಭಕ್ತಿಯು ಶ್ರದ್ಧಾಭಕ್ತಿ ಎನಿಸಿಕೊಳ್ಳುತ್ತದೆ.

ಶ್ರದ್ಧಾಭಕ್ತಿಯು ಆಚಾರವನ್ನು ಒಳಗೊಳ್ಳುತ್ತದೆ. ಆಚಾರವುಳ್ಳವನೇ ಭಕ್ತನು. ಆದರೆ ಪ್ರಥಮ ಹಂತದ ಈ ಸಾಧಕನಿಗೆ ತಾನೇಕೆ ಈ ಆಚಾರಗಳನ್ನು ಮಾಡಬೇಕೆಂಬುದು ಗೊತ್ತಿಲ್ಲ. ಆದುದರಿಂದ ಅವನು ಗುರು ಹೇಳಿದುದನ್ನು ಪ್ರಶ್ನಿಸದೆ, ಶಂಕಿಸದೆ, ಶ್ರದ್ಧೆಯಿಂದ ಮಾಡುತ್ತಾನೆ. ಆದುದರಿಂದ ಶ್ರದ್ಧೆಯಿಂದ ಮಾಡುವ ಆಚಾರಗಳೇ ಅವನು ಭಕ್ತನೆಂಬುದಕ್ಕೆ ಸಂಕೇತ.

ತನ್ನ ಭಕ್ತಿಯು ಬಹಳ ಶಿಥಿಲವಾದದ್ದೆಂದೂ, ತನ್ನ ಮನಸ್ಸು ಅಸ್ಥಿರವೆಂದೂ ಇದರಿಂದಾಗಿ ತನ್ನ ಮನಸ್ಸು ಲಿಂಗಧ್ಯಾನದಲ್ಲಿ ನಿರತವಾಗಲು ಸಾಧ್ಯವಿಲ್ಲವೆಂದೂ, ತನ್ನ ದೇಹಧರ್ಮಗಳ ಪ್ರೇರಣೆಯಿಂದಾಗಿ ತಾನು ಅನೇಕ ರೀತಿಯ ಮಾನಸಿಕ ತುಮುಲಗಳಿಗೆ ಒಳಗಾಗುವುದೂ ಅಲ್ಲದೆ ಅನೇಕ ದುಷ್ಕರ್ಮಗಳನ್ನು ಮಾಡಬೇಕಾಗಿದೆ ಎಂದೂ ಅವನು ಮರುಗಿದರೆ ಅವನು ಆಧ್ಯಾತ್ಮಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ. (ಬಸವಣ್ಣನವರ ಭಕ್ತಸ್ಥಲಗಳ ವಚನಗಳನ್ನು ನೋಡಿದರೆ ಅವರಿಗೆ ತಮ್ಮ ದೋಷಗಳ ಅರಿವು ಎಷ್ಟು ಪಶ್ಚಾತ್ತಾಪ ಮತ್ತು ಸಂಕಟಗಳನ್ನುಂಟು ಮಾಡಿದೆ ಎಂಬುದು ವ್ಯಕ್ತವಾಗುತ್ತದೆ).

ಪೃಥ್ವಿ ತತ್ವವು ಕ್ರಿಯಾಶಕ್ತಿಯ ಒಂದು ರೂಪ. ಇದರಿಂದ ರಚಿತವಾದ ಕರ್ಮೇಂದ್ರಿಯಗಳಾಗಿ ನಾವು ಅನೇಕ ರೀತಿಯ ಕರ್ಮಗಳನ್ನು ಮಾಡಬೇಕಾಗುತ್ತದೆ. ಏಕೆಂದರೆ, ಆ ಶಕ್ತಿಯು ಪ್ರಥಮದಲ್ಲಿ ಷಡೂರ್ಮಿಗಳಿಗೆ ಕಾರಣವಾಗಿದೆ. ಹಸಿವು, ನೀರಡಿಕೆ, ಶೋಕ, ಮೋಹ, ಮುಪ್ಪು ಮತ್ತು ಮರಣ ಎಂಬ ಷಡೂರ್ಮಿಗಳು ನಮಗೆ ಆಧ್ಯಾತ್ಮಿಕವಾಗಿ ಅಡ್ಡಿಯಾಗುತ್ತವೆ. ಅವುಗಳನ್ನು ಗೆಲ್ಲಲು ವಚನಕಾರರು ಉಪಾಯಗಳನ್ನು ಸೂಚಿಸಿದ್ದಾರೆ. ಅಂಗದಾಪ್ಯಾಯದ ಬದಲು ಲಿಂಗದಾಪ್ಯಾಯ ಬೆಳೆಸಿಕೊಂಡರೆ ಹಸಿವನ್ನೂ, ಪಾದೋದಕ ಕುಡಿಯುವ ಮೂಲಕ ನೀರಡಿಕೆಯನ್ನೂ ಲಿಂಗವನ್ನು ಆನಂದಾಶ್ರುಗಳು ಬೀಳುವವರೆಗೂ ಪೂಜಿಸಿ, ಏಕಾಗ್ರತೆಯಿಂದ ನೋಡಿದರೆ ಶೋಕವನ್ನೂ, ಬಂಧು ಮೋಹಿಯಾಗುವ ಬದಲು ಲಿಂಗಮೋಹಿಯಾದರೆ, ಮೋಹವನ್ನೂ, ತನ್ನ ಕರಣಗಳೆಲ್ಲವೂ ಲಿಂಗದ ಕರಣಗಳೆಂದು ತಿಳಿದರೆ ಮುಪ್ಪನ್ನೂ ಲಿಂಗದಲ್ಲಿ ಐಕ್ಯವಾಗುವ ಮೂಲಕ ಮರಣವನ್ನೂ, ಗೆಲ್ಲಬಹುದು. ಅಲ್ಲದೇ, ತನ್ನ ಕರ್ಮೇಂದ್ರಿಯಗಳನ್ನು ಲಿಂಗಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಮಾತ್ರ ಬಳಸುವ ಮೂಲಕ ಕ್ರಿಯಾಶಕ್ತಿಯನ್ನು ಶ್ರದ್ಧಾಭಕ್ತಿಯನ್ನಾಗಿ ಪರಿವರ್ತಿಸಬಹುದು.

೨. ನಿಷ್ಠಾ (ನೈಷ್ಠಿಕೀ) ಭಕ್ತಿ = ಆಧ್ಯಾತ್ಮಿಕ ಸಾಧನೆಯ ಎರಡನೆ ಹಂತದ ಸಾಧಕನಿಗೆ ಮಹೇಶ ಅಥವಾ ಮಾಹೇಶ್ವರನೆಂಬ ಹೆಸರಿದ್ದರೆ, ಅವನ ಭಕ್ತಿಗೆ ನಿಷ್ಠಾಭಕ್ತಿಯೆಂದು ಹೆಸರು.

ಶ್ರದ್ದಾ ಭಕ್ತಿಗೆ ಜ್ಞಾನದ ಆಧಾರವಿಲ್ಲ. ಭಕ್ತನು ಹೆಚ್ಚಾಗಿ ಗುರು ಬೋಧಿಸಿದುದನ್ನೇ ಶ್ರದ್ಧೆಯಿಂದ ಪಾಲಿಸುತ್ತಾನೆ. ಆದುದರಿಂದ ಅದು ಬಹಳ ಶಿಥಿಲವಾದುದು. ಅದನ್ನು ಯಾವ ಸಣ್ಣ ಪ್ರಚೋದನೆಯೂ ಕೆಡಿಸಬಹುದು. ಆದುದರಿಂದ ಅಂಥ ಪ್ರಚೋದನೆಗೆ ಒಳಗಾಗದಂತೆ ಭಕ್ತನು ಎಚ್ಚರದಿಂದಿರಬೇಕಲ್ಲದೆ, ತನ್ನ ಶ್ರದ್ಧೆಯನ್ನು ನಿಷ್ಠೆಯನ್ನಾಗಿ ಬೆಳೆಸಿಕೊಳ್ಳಬೇಕು. ಆಗ ಅವನು ಮಹೇಶನೆನಿಸಿಕೊಳ್ಳುತ್ತಾನೆ. ಮಹೇಶ ಎಂಬ ಪದಕ್ಕೆ ನಿಯಂತ್ರಕ ಎಂಬ ಅರ್ಥವಿದ್ದು, ಮಹೇಶ ಸ್ಥಲದಲ್ಲಿರುವ ಸಾಧಕನು ತನ್ನ ಇಂದ್ರಿಯಗಳನ್ನು ನಿಗ್ರಹಿಸುತ್ತಾನೆ. ಲಿಂಗದಲ್ಲಿ ನಿಷ್ಠೆಯಿದ್ದವರಿಗೆ ಮಾತ್ರ ಮಹೇಶತ್ವ (ನಿಷ್ಠಾಭಕ್ತಿ) ಸಾಧ್ಯ. ಆದುದರಿಂದ ಇಲ್ಲಿ ನಿಷ್ಠೆ ಎಂದರೇನು ಎಂಬುದು ಮುಖ್ಯಪ್ರಶ್ನೆ.

ಪತಿವ್ರತೆಯಾದವಳಿಗೆ ತನ್ನ ಗಂಡನಲ್ಲದೆ ಪರಪುರುಷರಲ್ಲಿ ಹೇಗೆ ಆಸಕ್ತಿಯಿಲ್ಲವೋ, ಹಾಗೆ ನಿಷ್ಠಾಭಕ್ತಿ ಉಳ್ಳವನಿಗೆ ಶಿವನಿಗಿಂತ ಹೆಚ್ಚಿನದೇನೂ ಇಲ್ಲವೆಂಬ ಕಾರಣದಿಂದ ಬೇರೆಯದರಲ್ಲಿ ಆಸಕ್ತಿಯಿಲ್ಲ. ಇಲ್ಲಿ ಲಿಂಗನಿಷ್ಠೆ” ಅಥವಾ “ಶಿವನಿಗಿಂತ ಹೆಚ್ಚಿನದಿಲ್ಲ” ಎಂಬುದಕ್ಕೆ ವಚನಕಾರರು ಎರಡು ಅರ್ಥಗಳನ್ನು ಕೊಟ್ಟಿರುವಂತೆ ಕಾಣುತ್ತದೆ. ಲಿಂಗನಿಷ್ಠೆಯೆಂದರೆ ಶಿವನಿಗಿಂತ ಹೆಚ್ಚಿನ ದೇವರಿಲ್ಲವೆಂದೂ, ಉಳಿದ ದೇವರುಗಳನ್ನು ಪೂಜಿಸುವುದು ವ್ಯರ್ಥವೆಂದೂ, ಆದುದರಿಂದ ಲಿಂಗಕ್ಕೆ ಮಾತ್ರ ನಾವು ನಿಷ್ಠೆ ತೋರಿಸಬೇಕೆಂದೂ ಮೊದಲನೆ ಅರ್ಥ. ಇದನ್ನೇ ಬೇರೆ ವಚನಕಾರರು 'ಸ್ಥಾವರಲಿಂಗ ಪೂಜಿಸಬಾರದು, ವಿಷ್ಣು ಇತ್ಯಾದಿ ದೇವರನ್ನು ಪೂಜಿಸಬಾರದು' ಎಂದಿದ್ದಾರೆ. ಪಾರಮಾರ್ಥಿಕ ಧ್ಯೇಯವಾದ ಪರಶಿವನನ್ನುಳಿದು ಮತ್ತೇನನ್ನೂ ಆಶಿಸಬಾರದು ಎಂಬುದು ಎರಡನೆ ಅರ್ಥ. ಹೆಣ್ಣು, ಹೊನ್ನು, ಮಣ್ಣು ಮುಂತಾದವುಗಳಿಗೆ ಆಶಿಸದೇ ಲಿಂಗಾಂಗ ಸಾಮರಸ್ಯವನ್ನೇ ಧ್ಯೇಯವಾಗಿಟ್ಟುಕೊಳ್ಳಬೇಕೆಂಬುದು ವಚನಕಾರರ ಆದೇಶ. ವಚನಕಾರರು ಲಿಂಗನಿಷ್ಠೆ ಎಂಬ ಪದವನ್ನು ಎರಡೂ ಅರ್ಥಗಳಲ್ಲಿ ಉಪಯೋಗಿಸುತ್ತಾರೆ.

ಲಿಂಗನಿಷ್ಠೆ (ನಿಷ್ಠಾಭಕ್ತಿ)ಯು ಮುಖ್ಯವಾಗಿ ಎರಡು ಪ್ರಕಾರಗಳಲ್ಲಿ ವ್ಯಕ್ತವಾಗುತ್ತದೆ - ಧಾರ್ಮಿಕ ರೀತಿಯಲ್ಲಿ ಮತ್ತು ನೈತಿಕ ರೀತಿಯಲ್ಲಿ, “ಎಲುದೋರಿದರೆ ನರ ಹರಿದರೆ, ಕರುಳು ಕುಪ್ಪಳಿಸಿದರೆ ನಾ ಧೃತಿಗೆಡೆನಯ್ಯಾ! ಸಿರ ಹರಿದು ಅಟ್ಟಿ ನೆಲಕ್ಕೆ ಬಿದ್ದರೆ ನಾಲಗೆ ಕೂಡಲಸಂಗಾ ಶರಣೆನ್ನುತ್ತಿದ್ದೀತಯ್ಯಾ” ಎಂಬ ಬಸವಣ್ಣನವರ ವಚನವು ಧಾರ್ಮಿಕ ನಿಷ್ಠೆಗೆ ಉದಾಹರಣೆಯಾಗಿದೆ. ಅದೇ ರೀತಿ ಸಾಮರಸ್ಯಾಭಿಮುಖವಾಗಿ ಮಾತ್ರ ನಡೆಯುತ್ತೇನೆಂಬ ಛಲವೂ ಸಹ ಧಾರ್ಮಿಕ ನಿಷ್ಠೆಯೇ. ಪರಸತಿ, ಪರಧನ, ಒಲ್ಲೆನೆಂಬ ಛಲಬೇಕು ಶರಣಂಗೆ, ಮುಂತಾದ ನುಡಿಗಳು ನಿಷ್ಠೆಯನ್ನು ಸಾರುತ್ತವೆ. ತೋಂಟದ ಸಿದ್ದಲಿಂಗ ಶಿವಯೋಗಿಗಳ ಪ್ರಕಾರ, ಇಂದ್ರಿಯಂಗಳ ಮುಸುಕನುಗಿಯದೆ, ವಿಷಯಂಗಳ ಶಿರವನರಿಯದೆ, ಕರಣಂಗಳ ಕಳವಳವ ಕೆಡಿಸದೆ, ಕರ್ಮೇಂದ್ರಿಯಗಳ ಮೂಲದ ಬೇರಕಿತ್ತು ಭಸ್ಮವ ಮಾಡದೆ, ಕಷ್ಟಕಾಮನ ನಷ್ಟವ ಮಾಡಲರಿಯದೆ ತಾವು ಲಿಂಗನಿಷ್ಠರೆಂದು ಹೇಳಿಕೊಳ್ಳುವವರು ನಿಜವಾಗಿಯೂ ಲಿಂಗ ನಿಷ್ಠರಲ್ಲ.

ಲಿಂಗದಲ್ಲಿ ನಿಷ್ಠೆಯಿರಬೇಕೆಂದರೂ ಒಂದೇ, ಕಲಾಶಕ್ತಿಗಳನ್ನು ಭಕ್ತಿಗಳನ್ನಾಗಿ ಪರಿವರ್ತಿಸಬೇಕೆಂದರೂ ಒಂದೇ. ಅಪ್ ತತ್ವವು ಜ್ಞಾನಶಕ್ತಿಯ ಒಂದು ರೂಪ. ಇಂದ್ರಿಯ ವಿಷಯಗಳಾದ ರೂಪರಸಾದಿಗಳು ಜ್ಞಾನಶಕ್ತಿಯ ಪರಿಣಾಮಗಳು, ಭಕ್ತಸ್ಥಳದಲ್ಲಿ ಕೇವಲ ಶ್ರದ್ಧೆಯೊಂದೇ ಪ್ರಧಾನವಾಗಿದ್ದರೆ, ಮಹೇಶ ಸ್ಥಲದಲ್ಲಿ ಸಾಧಕನಿಗೆ ಜ್ಞಾನೋದಯವಾಗಿ, ತಾನು ಏಕೆ ಆಚಾರಗಳನ್ನು ಮಾಡಬೇಕು ಎಂಬುದರ ಜ್ಞಾನ ಉಂಟಾಗುತ್ತದೆ. ಸಾಧಕನು ಮಹೇಶನಾಗಿ ರೂಪರಸಾದಿಗಳ ಬಗೆಗಿನ ತನ್ನ ಆಸೆಗಳನ್ನು ನಿಯಂತ್ರಿಸುತ್ತಾನೆ, ಹಾಗೂ ಸುಬುದ್ದಿ ಎಂಬ ಹಸ್ತದಿಂದ ಪಂಚ ವಿಷಯಗಳನ್ನು ಗುರುಲಿಂಗಕ್ಕೆ ಅರ್ಪಿಸುತ್ತಾನೆ.

೩. ಅವಧಾನ ಭಕ್ತಿ = ಆಧ್ಯಾತ್ಮಿಕ ಸಾಧನೆಯ ಮೂರನೆಯ ಹಂತದ ಸಾಧಕನಿಗೆ ಪ್ರಸಾದಿ ಎಂಬ ಹೆಸರಿದ್ದರೆ, ಅವನ ಭಕ್ತಿಗೆ ಅವಧಾನ ಭಕ್ತಿ ಎಂಬ ಹೆಸರಿದೆ. ಇಲ್ಲಿ ಅವಧಾನವೆಂದರೆ ಜಾಗರೂಕತೆ ಎಂದರ್ಥ. ಅಂದರೆ ಪ್ರಸಾದಿಯಾದವನು ಅವಧಾನಿಯಾಗಿರಬೇಕು. ಅವಧಾನ ಭಕ್ತಿಯ ಪರಿಕಲ್ಪನೆ ನಮಗೆ ಸರಿಯಾಗಿ ಅರ್ಥವಾಗಬೇಕಾದರೆ, ಅದು ಒಳಗೊಳ್ಳುವ ಪ್ರಸಾದದ ಪರಿಕಲ್ಪನೆ ನಮಗೆ ಸರಿಯಾಗಿ ಅರ್ಥವಾಗಬೇಕು.

ಸಾಮಾನ್ಯವಾಗಿ, ಲಿಂಗಕ್ಕೆ ಅರ್ಪಿಸಿದ ಹಾಲು, ಹಣ್ಣು, ಮುಂತಾದ ಆಹಾರ ಪದಾರ್ಥಗಳು ಪ್ರಸಾದವಾಗುತ್ತವೆ, ಆ ಪ್ರಸಾದವನ್ನು ಸೇವಿಸಿದವನು ಪ್ರಸಾದದಂತೆ ಶುದ್ಧವಾಗುತ್ತಾನೆ ಎಂಬ ನಂಬಿಕೆಯನ್ನು ವಚನಗಳು ಪ್ರತಿಪಾದಿಸುತ್ತವೆ. ಪ್ರಸಾದವಲ್ಲದ (ಲಿಂಗಾರ್ಪಿತವಲ್ಲದ) ಯಾವ ವಸ್ತುವನ್ನೂ ಲಿಂಗಾಯತನು ಸೇವಿಸಬಾರದೆಂಬುದು ವಚನಕಾರರ ಅದೇಶ.

ಪ್ರಸಾದವೆಂದರೆ ಲಿಂಗಾರ್ಪಿತವಾದ ಆಹಾರ ವಸ್ತುಗಳು ಎಂಬ ಅರ್ಥವು “ಪ್ರಸಾದದ ಬಹಳ ಸಂಕುಚಿತ ಅರ್ಥ ಸ್ವಲ್ಪ ವಿಶಾಲವಾದ ಅರ್ಥದಲ್ಲಿ, ಕೇವಲ ಆಹಾರ ವಸ್ತುಗಳನ್ನಷ್ಟೇ ಅಲ್ಲ, ನಾವು ಮೋಡುವ ರೂಪ, ರುಚಿಸುವ ರಸ, ಶಬ್ದ, ಸ್ಪರ್ಶ, ಗಂಧ ಇವೆಲ್ಲವೂ ಪ್ರಸಾದಗಳೇ. ಯಾರು ಇವುಗಳನ್ನು ಶಿವಾರ್ಪಿತ ಮಾಡಿ ಅನಂತರ ಅನುಭವಿಸುತ್ತಾರೋ ಅವರು ನಿಜವಾದ ಪ್ರಸಾದಿಗಳು.

“ಪ್ರಸಾದ"ದ ಅರ್ಥವನ್ನು ಇನ್ನೂ ಸ್ವಲ್ಪ ಹಿಗ್ಗಿಸಿದರೆ, ಆಹಾರ ಪಾನೀಯಗಳು ಇಂದ್ರಿಯ ವಿಷಯಗಳು (ರೂಪ, ರಸ, ಗಂಧ, ಸ್ಪರ್ಶ, ಶಬ್ದಗಳು) ಅಷ್ಟೇ ಅಲ್ಲ, ಸಾಧಕನು ತನ್ನ ಬುದ್ದೀಂದ್ರಿಯಗಳನ್ನೂ, ಕರ್ಮೇಂದ್ರಿಯಗಳನ್ನೂ, ಅಂತಃಕರಣ ಚತುಷ್ಟಯಗಳನ್ನೂ ಶಿವನಿಗೆ ಅರ್ಪಿಸಿ ಅನಂತರ ತಾನು ಅವುಗಳನ್ನು ಉಪಯೋಗಿಸುತ್ತಾನೆ. ಶರಣ ತನ್ನ ಆತ್ಮವನ್ನೇ ಶಿವನಿಗೆ ಅರ್ಪಿಸಿ ಪ್ರಸಾದಿಯೇ ಪ್ರಸಾದವಾಗುತ್ತಾನೆ ಎಂಬುದು ಪ್ರಸಾದ ಪರಿಕಲ್ಪನೆಯ ಅತ್ಯಂತ ವಿಶಾಲಾರ್ಥ. ಹೀಗೆ ಮಾಡುವುದರಿಂದ ಸಾಧಕನು ಆದಷ್ಟೂ ಸ್ವಾರ್ಥಕ್ಕೆ ಎಡೆಯಿಲ್ಲದಂತೆ ಎಚ್ಚರವಹಿಸುತ್ತಾನೆ. ಹೀಗೆ ತನ್ನ ಇಚ್ಛೆಗಳಿಗೆ ಪ್ರಾಧಾನ್ಯತೆ ಕೊಡದಿರುವುದೇ ಇಚ್ಛಾಶಕ್ತಿಯ ರೂಪಾಂತರವಾದ ಅಹಂಕಾರದ ನಿಯಂತ್ರಣವೆನಿಸಿಕೊಳ್ಳುವುದು. ಸ್ವಾರ್ಥ ನಿರ್ಮೂಲನೆಯಾಗದ ಹೊರತು, ಆತ್ಮಶುದ್ದವಾಗುವುದಿಲ್ಲ, ಆತ್ಮಶುದ್ದವಾಗದ ಹೊರತು ಅನುಭಾವ ಸಿದ್ಧಿಸುವುದಿಲ್ಲ.

೪. ಅನುಭಾವ ಭಕ್ತಿ = ಮೋಕ್ಷ ಸಾಧನೆಯ ನಾಲ್ಕನೆ ಹಂತದ ಸಾಧಕನಿಗೆ ಪ್ರಾಣಲಿಂಗಿ ಎಂಬ ಹೆಸರಿದ್ದು, ಅವನ ಭಕ್ತಿಗೆ ಅನುಭಾವ ಭಕ್ತಿ ಎಂದು ಹೆಸರು. ಪ್ರಸಾದಿಯು ಎಲ್ಲವನ್ನೂ ಪ್ರಸಾದವನ್ನಾಗಿ ಮಾಡಿಕೊಂಡು ಅನುಭವಿಸಿದರೆ ಪ್ರಾಣಲಿಂಗಿಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತನ್ನ ದೇಹೇಂದ್ರಿಯಗಳಲ್ಲೆಲ್ಲಾ ಲಿಂಗವನ್ನು ಪ್ರತಿಷ್ಠಾಪಿಸುತ್ತಾನೆ. ಅಂದರೆ ತನ್ನ ಬುದ್ದೀಂದ್ರಿಯಗಳ ಪ್ರತಿಯೊಂದರ ಬಾಗಿಲಿನಲ್ಲೂ ಪರಶಿವನಿದ್ದಾನೆಂದು ದೃಢವಾಗಿ ಅವನು ನಂಬುತ್ತಾನೆ. ಹೀಗೆ ನಂಬುವುದೂ ಒಂದೇ, ಪರಶಿವನು ಅನುಭವಿಸಿದ ನಂತರವೇ ಭಕ್ತನು ಅನುಭವಿಸುತ್ತಾನೆಂದು ಹೇಳುವುದೂ ಒಂದೇ. ಪರಶಿವನು (ಉದಾಹರಣೆಗೆ) ಶ್ರೋತೇಂದ್ರಿಯದ ಬಾಗಿಲಿಗೆ ಬರುವ ಶಬ್ದಗಳನ್ನು ಮೊದಲು ಅನುಭವಿಸುತ್ತಾನೆ, ಅವು ಕಿವಿಯಿಂದ ಭಕ್ತನ ಮನಸ್ಸಿನ ಒಳಗೆ ಹೋಗುವಾಗ ಅವಾಗಲೇ ಪ್ರಸಾದವಾಗಿರುತ್ತವೆ. ಅಂತಹ ಪ್ರಸಾದವು ವಾಸ್ತವವಾಗಿ ಸುಶಬ್ದವಾಗಿರಲೇಬೇಕು. ಹೀಗೆ ರೂಪವೆಲ್ಲವೂ ಸುರೂಪ ರುಚಿಯೆಲ್ಲವೂ ಸುರುಚಿ ಸ್ಪರ್ಶನವೆಲ್ಲವೂ ಸುಸ್ಪರ್ಶನ, ವಾಸನೆಯೆಲ್ಲವೂ ಸುವಾಸನೆ ಎಂಬ ಪ್ರಸಾದವಾಗಿರುತ್ತವೆ. ಅದೇ ರೀತಿ ತನ್ನ ಕರ್ಮೇಂದ್ರಿಯಗಳ ಬಾಗಿಲುಗಳಲ್ಲೂ, ಅಂತಃಕರಣಗಳ ಬಾಗಿಲುಗಳಲ್ಲೂ ಪರಶಿವನಿದ್ದಾನೆಂಬ ಸಾಧಕನು ಸಂಪೂರ್ಣವಾಗಿ ಸ್ವಾರ್ಥದಿಂದ ಮುಕ್ತನಾಗಿರುತ್ತಾನೆ. ವಾಸ್ತವವಾಗಿ ಅವನ ದೇಹದಲ್ಲಿ ಪ್ರಾಣ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ಪರಶಿವನೇ ಇರುವುದರಿಂದ ಸಾಧಕನು ಪ್ರಾಣಲಿಂಗಿ ಎನಿಸಿಕೊಳ್ಳುತ್ತಾನೆ.

ಪ್ರಾಣಲಿಂಗಿಯು ಆದಿಶಕ್ತಿಯ ರೂಪವಾದ ದಶವಾಯುಗಳನ್ನು ನಿಯಂತ್ರಿಸಿ ಅನುಭಾವವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಅನುಭಾವವು ಲಿಂಗಾಂಗ ಸಾಮರಸ್ಯಕ್ಕೆ ಹೋಗುವ ದಾರಿಯಲ್ಲಿ ಮೊದಲನೆ ಮೈಲಿಗಲ್ಲು.

೫. ಆನಂದ ಭಕ್ತಿ= ತೋಂಟದ ಸಿದ್ದಲಿಂಗ ಶಿವಯೋಗಿ ಮತ್ತು ಷಣ್ಮುಖ ಸ್ವಾಮಿಗಳ ಪ್ರಕಾರ, ಐದನೆ ಸ್ಥಲದಲ್ಲಿರುವ ಶರಣನ (ಶರಣ ಸ್ಥಲದಲ್ಲಿರುವವನ) ಆನಂದ ಭಕ್ತಿಯು ಬಹಳ ಉನ್ನತವಾದ ಆಧ್ಯಾತ್ಮಿಕ ಸಾಧನೆಯ ಫಲ. ದೇಹದ ಬಾಧೆಗಳಿಂದಲೂ, ಮನಸ್ಸಿನ ಮಾಯೆಯಿಂದಲೂ, ಅಂತಃಕರಣದ ತಪಸ್ಸಿನಿಂದಲೂ, ಐಂದ್ರಿಕ ಸುಖಗಳಿಂದಲೂ ದೂರ ಇರುವವನ ವರ್ತನೆಯನ್ನೊಳಗೊಂಡಿರುತ್ತದೆ. ಜೊತೆಗೆ ಅದು ಸತ್ಯ, ಶಮೆ, ದಮೆ, ದಯೆ, ಸೈರಣೆ, ಸಮಾಧಾನ, ಸಂತೋಷ, ಸ್ಥೈರ್ಯ, ಮುಂತಾದ ಸದ್ಗುಣಗಳನ್ನೂ ಪ್ರತಿಬಿಂಬಿಸುತ್ತದೆ.

ಆನಂದ ಭಕ್ತಿಯು ಸಾಧ್ಯವಾಗುವುದು ಕರ್ಮಗಳೆಲ್ಲವೂ ಸುಟ್ಟಾಗ; ತಾನು ಪ್ರತ್ಯೇಕ ವ್ಯಕ್ತಿ, ತಾನು ತನ್ನ ದೇಹ ಮತ್ತು ಇಂದ್ರಿಯಗಳ ಸಲುವಾಗಿ ಜೀವಿಸಬೇಕು ಎಂಬ ಅಜ್ಞಾನ ಹೋಗಿ, ಅದರ ಜಾಗದಲ್ಲಿ ತಾನು ಪರಶಿವನ ದೇಹ ಅಥವಾ ಭಾಗ (ಅಂಗ), ಲಿಂಗಾಂಗ ಸಾಮರಸ್ಯವೇ ತನ್ನ ಗುರಿ ಎಂಬ ಜ್ಞಾನೋದಯವಾದಾಗ, ಅರಿಷಡ್ವರ್ಗ, ಷಡೂರ್ಮಿ, ಮುಂತಾದ ಮಾನಸಿಕ ಹಾಗೂ ದೈಹಿಕ ದೋಷಗಳು ನಾಶವಾದಾಗ ಶರಣನು ಇವೆಲ್ಲವನ್ನೂ ಇಲ್ಲವಾಗಿಸಿರುವುದರಿಂದ, ಅವನಲ್ಲಿ ಆನಂದ ನೆಲೆಯೂರುತ್ತದೆ.

ಆನಂದವು ಶರಣನು ಹೊಸದಾಗಿ ಪಡೆಯುವ ಸ್ಥಿತಿಯಲ್ಲ, ಅದು ಅವನ ಸಹಜ ಸ್ಥಿತಿ. ಬಂಧನದಲ್ಲಿದ್ದಾಗ, ಅಜ್ಞಾನ, ಮಲತ್ರಯ, ಕರ್ಮತ್ರಯ, ಷಡೂರ್ಮಿ, ಅರಿಷಡ್ವರ್ಗ ಮುಂತಾದ ಉಪಾಧಿಗಳಿಂದಾಗಿ ಅಂಗನು ಅದನ್ನು ಅನುಭವಿಸುತ್ತಿರಲಿಲ್ಲ. ಆದರೆ ಉಪಾಧಿಗಳನ್ನು ಬದಿಗೆ ಸರಿಸುವ ಮೂಲಕ, ಆತ್ಮವನ್ನು ಅದರ ಮೊದಲಿನ (ಸಹಜ) ಸ್ಥಿತಿಗೆ ತಂದಿದ್ದಾನೆ.

ಆನಂದ ಭಕ್ತಿಯ ಪರಿಕಲ್ಪನೆಯನ್ನು ಸ್ಪಷ್ಟಪಡಿಸಲು ವಚನಕಾರರು ಶರಣನನ್ನು ಸತಿ ಎಂದೂ ಶಿವನೇ ಪತಿಯೆಂದು ಕರೆದಿದ್ದಾರೆ. ಅನುಭಾವದ ಮೂಲಕ ಆನಂದವನ್ನು ಪಡೆದ ಶರಣ ಅದಕ್ಕಾಗಿ ಹಾತೊರೆಯುತ್ತಾನೆ. ಗಂಡನ ಸಂಗದಿಂದ ಸುಖವನ್ನು ಪಡೆದ ಪತ್ನಿಯು ಹೇಗೆ ಅವನಿಂದ ಸ್ವಲ್ಪಕಾಲ ಅವನಿಂದ ದೂರವಿದ್ದಾಗ, ಅವನ ಸಂಗಕ್ಕಾಗಿ ಹಾತೊರೆಯುತ್ತಾಳೋ, ಹಾಗೆಯೇ ಶರಣ ಸತಿಯು ಲಿಂಗಪತಿಯ ಸಂಗಕ್ಕಾಗಿ ಹಾತೊರೆಯುತ್ತಾ ಇರುತ್ತಾಳೆ.

೬. ಸಮರಸ ಭಕ್ತಿ = ಅನುಭಾವದ ಮೂರು ಮುಖ್ಯ ಹಂತಗಳೆಂದರೆ, ಕೇವಲಾನಂದ, ಸಮರಸ ಮತ್ತು ಅದ್ವೈತ ಸ್ಥಿತಿ, ಧ್ಯಾನಸ್ಥನಾದವನು ಮೊದಲು ಬಾಹ್ಯಪ್ರಪಂಚದ ಪ್ರಜ್ಞೆಯನ್ನು ಕಳೆದುಕೊಂಡು, ತಾನೊಬ್ಬನೇ ಇದ್ದೇನೆ ಎಂಬ ಅನುಭವವನ್ನು ಪಡೆಯುವುದಲ್ಲದೇ, ಆ ಸ್ಥಿತಿಯಲ್ಲಿ ಅವನಿಗೆ ಆನಂದವೂ ಆಗುತ್ತದೆ. ಸ್ವಪ್ರಜ್ಞೆ ಇದ್ದು, ಆನಂದವನ್ನು ಅನುಭವಿಸುವುದೇ ಕೇವಲಾನಂದ (ಕೈವಲ್ಯಾನಂದ), ಸ್ವಲ್ಪ ಹೊತ್ತಿನ ನಂತರ ತಾನು ಪರಶಿವನಲ್ಲಿ ಐಕ್ಯವಾಗುತ್ತಿರುವ ಅನುಭವವಾಗುವುದು ಅನುಭಾವದ ಎರಡನೆ ಹಂತ. ಈ ಒಂದು ಸ್ಥಿತಿಯನ್ನು ವಚನಕಾರರು ಅನೇಕ ಉಪಮೆಗಳ ಮೂಲಕ ತಿಳಿಸಲು ಯತ್ನಿಸಿದ್ದಾರೆ. ನದಿಯು ಸಮುದ್ರದಲ್ಲಿ ಬೆರೆತು, ಆಲಿಕಲ್ಲು ನೀರಿನಲ್ಲಿ ಮುಳುಗಿ, ಕರ್ಪೂರವು ಬೆಂಕಿಯನ್ನು ಮುಟ್ಟಿ, ಹೇಗೆ ತಮ್ಮ ವೈಶಿಷ್ಟ್ಯವನ್ನು ಕಳೆದುಕೊಳ್ಳುತ್ತವೆಯೋ ಹಾಗೆಯೇ, ಅಂಗನು ಲಿಂಗದೊಡನೆ ಬೆರೆತಾಗ ತಾನಾರೆಂಬುದನ್ನು ಮರೆತುಬಿಡುತ್ತಾನೆ.

ಅನುಭಾವದ ಮೂರನೆಯ ಹಂತದಲ್ಲಿ ಅನುಭವಿಯು ತನ್ನನ್ನೂ, ತಾನು ಬೆರೆತ ಲಿಂಗವನ್ನೂ ಮರೆಯುವುದಲ್ಲದೇ, ಏನಾಗುತ್ತದೆ ಎಂಬುದರ ಪ್ರಜ್ಞೆಯೂ ಅವನಿಗಿರುವುದಿಲ್ಲ.

ಅಲ್ಲದೆ, ಅನುಭಾವದಿಂದ ಜಾಗೃತ ಸ್ಥಿತಿಗೆ ಬಂದಾಗಲೂ ಯಾವುದೋ ಅಜ್ಞಾತ, ಅವ್ಯಕ್ತ ಶಕ್ತಿಯು ತನ್ನನ್ನು ನಿಯಂತ್ರಿಸುತ್ತಿದೆ, ತಾನು ಆ ಶಕ್ತಿಯ ದೆಸೆಯಿಂದಲ್ಲದೇ ಯೋಚಿಸಲಾರೆ, ಮಾತನಾಡಲಾರೆ, ತಿನ್ನುಣ್ಣಲಾರೆ, ಎಂಬ ಭಾವ ಅವನಲ್ಲಿ ಮೂಡುತ್ತದೆ. ಅಷ್ಟೇ ಅಲ್ಲ, ತಾನು ಎಂಬ ಭಾವ ಸಂಪೂರ್ಣವಾಗಿ ಹೋಗಿ ಅಲ್ಲಿ ಪರಶಿವ ಎಂಬ ಭಾವ ಸ್ಥಾಯಿಯಾಗಿ ನಿಲ್ಲುತ್ತದೆ. ಸಮುದ್ರದಲ್ಲಿ ಲೀನವಾದ ನದಿಗೆ ಕುರುಹಿಲ್ಲ, ಆದರೆ, ಅದನ್ನೊಳಗೊಂಡ ಸಮುದ್ರ ಉಳಿಯುತ್ತದೆ, ಬೆಂಕಿಯನ್ನು ಮುಟ್ಟಿದ ಕರ್ಪೂರ ಅಳಿಯುತ್ತದೆ, ಆದರೆ ಅದನ್ನು ಸುಟ್ಟ ಬೆಂಕಿ ಇನ್ನೂ ಇರುತ್ತದೆ. ಹಾಗೆಯೇ ಲಿಂಗಾಂಗ ಸಾಮರಸ್ಯದ ನಂತರ ಪರಶಿವನಲ್ಲಿ ಲೀನವಾದ ಅಂಗವು ತನ್ನತನವನ್ನು ಕಳೆದುಕೊಳ್ಳುತ್ತದೆ, ಆದರೆ ಅದನ್ನು ಆಕ್ರಮಿಸಿಕೊಂಡ ಲಿಂಗ (ಪರಶಿವ) ಸ್ಥಿರವಾಗಿ ಉಳಿಯುತ್ತದೆ.

ಕೆಲವು ವಚನಕಾರರು ಭಕ್ತಿಗಳನ್ನು (ಭಕ್ತಿಶಕ್ತಿಗಳನ್ನು) ಕಲೆಗಳೆಂದು ಕರೆಯುತ್ತಾರೆ. ಕೆಲವು ವಚನಕಾರರು ಭಕ್ತಿ ಮತ್ತು ಕಲೆ ಎಂಬ ಎರಡನ್ನೂ ಪರಾಯವಾಗಿ ಬಳಸುತ್ತಾರೆ. ಈ ಅರ್ಥದಲ್ಲಿ ನಿವೃತ್ತಿಕಲೆಯೇ ಶ್ರದ್ಧಾಭಕ್ತಿ, ಪ್ರತಿಷ್ಠಾ ಕಲೆಯೇ ಅನುಭಾವ ಭಕ್ತಿ ಶಾಂತಿ ಕಲೆಯೇ ಅನುಭಾವ ಭಕ್ತಿ; ಶಾಂತ್ಯತೀತ ಕಲೆಯೇ ಆನಂದ ಭಕ್ತಿ ಶಾಂತ್ಯತೀತೋತ್ತರ ಕಲೆಯೇ ಸಮರಸಭಕ್ತಿ. ಇನ್ನು ಕೆಲವು ವಚನಕಾರರು ಭಕ್ತಿಶಕ್ತಿಗಳೂ ಕಲಾಶಕ್ತಿಗಳೂ ಕಲೆಗಳೂ ಬೇರೆ ಬೇರೆ ಅಲ್ಲವೇ ಅಲ್ಲ ಎಂದೂ ಶಾಂತ್ಯತೀತ್ರೋತ್ತರ, ಶಾಂತ್ಯತೀತ, ಶಾಂತಿ, ವಿದ್ಯಾ, ಪ್ರತಿಷ್ಠಾ ಮತ್ತು ನಿವೃತ್ತಿ ಕಲಗಳೇ ಪರಶಿವನ ಆರು ಶಕ್ತಿಗಳಾದ ಚಿತ್‌ಶಕ್ತಿ, ಪರಾಶಕ್ತಿ, ಆದಿಶಕ್ತಿ, ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳೆಂದೂ ಅವೇ ಭಕ್ತಿಗಳೆಂದೂ ಹೇಳುತ್ತಾರೆ. ಈ ಕೊನೆಯ ಅಭಿಪ್ರಾಯ ಸರಿಯೆಂದು ತೋರುತ್ತದೆ. ಏಕೆಂದರೆ ಒಬ್ಬನೇ ಪರಶಿವ ಅಂಗ ಮತ್ತು ಲಿಂಗ ಎಂದು ಹೇಗೆ ಕಾಣಿಸಿಕೊಳ್ಳುತ್ತಾನೋ, ಹಾಗೆ ಒಂದೇ ಶಕ್ತಿ ಭಕ್ತಿ ಮತ್ತು ಕಲೆ ಎಂದು ಕಾಣಿಸಿಕೊಳ್ಳುತ್ತದೆ. ಹೀಗೆ ಭಕ್ತಿ, ಶಕ್ತಿ, ಕಲೆ, ಮುಂತಾದವುಗಳು ನಾಮಭೇದಕ್ಕೆ ಹೊರತು, ವಸ್ತುಭೇದಕ್ಕೆ ಅನ್ವಯಿಸುವುದಿಲ್ಲ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಭಕ್ತಂಗೆ ಪೃಥ್ವಿಯಂಗ ಭರಿತಾರ್ಪಣ Next