Previous ಭವರಾಟಳ, ಭವಚಕ್ರ ಮಂತ್ರ Next

ಭಾವಪಿಂಡಜ್ಞಾನ ಐಕ್ಯಲೇಪಸ್ಥಲ

ಭಾವಪಿಂಡಜ್ಞಾನ ಐಕ್ಯಲೇಪಸ್ಥಲ

ಈ ಆರೂ ಪದಗಳು ಒಟ್ಟುಗೂಡಿ ಆಧ್ಯಾತ್ಮಿಕ ಜೀವನದ ಕೊನೆಯ ಹಂತಕ್ಕೆ ಅನ್ವಯಿಸುತ್ತದೆ. ಆದರೆ ಇವುಗಳಲ್ಲಿನ ಮೊದಲನೆ ಐದು ಪದಗಳ ಸ್ಪಷ್ಟನೆ ಆವಶ್ಯಕ.

ಭಾವ ಎಂದರೆ, ನಾನು ಎಂಬ ಪ್ರತ್ಯೇಕ ಭಾವ. ಆದರೆ ಆಧ್ಯಾತ್ಮಿಕ ಜೀವನದ ಕೊನೆಯ ಘಟ್ಟದಲ್ಲಿ ನಾನು ಎಂಬ ಭಾವಕ್ಕೆ ಸ್ವಾರ್ಥಪರವಾದ ಆಸೆಗಳಾಗಲಿ, ಆಧ್ಯಾತ್ಮಿಕ ಜೀವನಕ್ಕೆ ಅಡ್ಡಿ ಮಾಡುವ ಕಾಮ, ಕ್ರೋಧಾದಿಗಳಾಗಲಿ ಇರುವುದಿಲ್ಲವಾದುದರಿಂದ, ಅದು ಶುದ್ಧವಾದ ಆತ್ಮ (ಜೀವ), ಪಿಂಡವೆಂದರೆ ದೇಹ, ಪಿಂಡದಲ್ಲಿ ಜ್ಞಾನೇಂದ್ರಿಯ ಕರ್ಮೇಂದ್ರಿಯಗಳೂ ಅಲ್ಲದೆ, ಅಂತಃಕರಣಚತುಷ್ಟಯವೂ ಇರುತ್ತವೆ. ಆದರೆ ಆಧ್ಯಾತ್ಮಿಕ ಜೀವನದ ಕೊನೆಯ ಘಟ್ಟದಲ್ಲಿ ದೇಹೇಂದ್ರಿಯಕರಣಾದಿಗಳೆಲ್ಲವೂ ಶುದ್ಧವಾಗಿ, ಕಾಯವು ಅಕಾಯವಾಗಿರುತ್ತದೆ. ಅಲ್ಲದೆ ಆ ಘಟ್ಟದಲ್ಲಿ ಸಾಧಕನು (ಸಿದ್ದನು) ತನ್ನ ದೇಹವು ಶಿವನ ದೇಹವೆಂದೂ, ತನ್ನದೆಂಬ ದೇಹ ತನಗಿಲ್ಲವೆಂದೂ ತಿಳಿದಿರುತ್ತಾನೆ.

ಜ್ಞಾನ ಅಥವಾ ಅರಿವು ಎಂದರೆ ಜಗತ್ತಿನ ಬಗೆಗೆ ಅಥವಾ ಅದರ ಕೆಲವು ವಿಭಾಗಗಳ ಬಗೆಗೆ ಪಡೆಯುವ ತಿಳುವಳಿಕೆ ಎಂದಲ್ಲ. ಜೀವಾತ್ಮನು ಬಂಧನದಲ್ಲಿರುವಾಗ ಇಂದ್ರಿಯ, ಅಂತಃಕರಣ ಇತ್ಯಾದಿಗಳ ಪ್ರಭಾವಕ್ಕೊಳಪಟ್ಟಿರುತ್ತಾನೆ. ಆದರೆ ಆಧ್ಯಾತ್ಮಿಕ ಜೀವನದ ಕೊನೆಯ ಹಂತದಲ್ಲಿ ಜೀವಾತ್ಮನಿಗೆ ಅವುಗಳ ಸಂಗವಿದ್ದರೂ, ಅವುಗಳ ಪ್ರಭಾವಕ್ಕೆ ಹೊರತಾಗಿದ್ದಾನೆ. ಅಂತಹ ಚಿತ್‌ಸ್ವರೂಪನಾದ ಆತ್ಮನೇ ಜ್ಞಾನ. ಅದೇ ಜ್ಞಾನ ಪಿಂಡದಲ್ಲಿಯೂ ಅಲ್ಲದೆ, ಪ್ರಪಂಚದಲ್ಲೆಲ್ಲಾ ವ್ಯಾಪಕವಾಗಿ ಹರಡಿಕೊಂಡಿದೆ. ಅಂದರೆ ವ್ಯಕ್ತಿಯಲ್ಲಿರುವ ಆತ್ಮನೂ (ಜ್ಞಾನವೂ) ಪ್ರಪಂಚದಲ್ಲಿರುವ ಬ್ರಹ್ಮನೂ (ಜ್ಞಾನವೂ) ಒಂದೇ ಅಲ್ಲದೆ ಎರಡಲ್ಲ. ಐಕ್ಯ ಎಂದರೆ ಎರಡಲ್ಲದೆ, ಒಂದು ಎಂದರ್ಥ. ಶುದ್ಧವಾದ ಜೀವಾತ್ಮನು (ಜ್ಞಾನವು ವಿಶ್ವಾತ್ಮ ಪರಶಿವನೊಂದಿಗೆ ಒಂದಾದಾಗ, ಅವನು ತನ್ನನ್ನು ಪ್ರತ್ಯೇಕಿಸಿಕೊಳ್ಳುವುದಿಲ್ಲ. ಅಲ್ಲದೆ ಅವನ ದೇಹ, ಇಂದ್ರಿಯಾದಿಗಳೆಲ್ಲಾ ಲಿಂಗಮಯವಾದುದರಿಂದ, ಅವನು ಇದು ದೇಹ, ಇದು ಆತ್ಮ ಎಂದು ಭೇದ ಮಾಡದೆ, ಎಲ್ಲವನ್ನೂ ಒಂದೇ ಎಂದು ತಿಳಿಯುತ್ತಾನೆ.

ಲೇಪ ಎಂದರೆ ಧರಿಸುವುದು. ಲಿಂಗದಲ್ಲಿ ಐಕ್ಯನಾದವನು ತನ್ನ ಪ್ರತ್ಯೇಕತೆಯನ್ನು ಕಳೆದುಕೊಂಡು, ತನ್ನ ವ್ಯಕ್ತಿತ್ವಕ್ಕೆ ಶಿವತ್ವವನ್ನು ಲೇಪಿಸಿಕೊಳ್ಳುತ್ತಾನೆ. ಅಲ್ಲಿಂದ ಮುಂದಕ್ಕೆ ತಾನೊಬ್ಬ ವಿಶಿಷ್ಟ ವ್ಯಕ್ತಿಯಂತೆ ನಡೆದುಕೊಳ್ಳದೆ, ಶಿವನು ನಡೆಸುವ ವಾಹನದಂತೆ ಅಥವಾ ಗೊಂಬೆಯಂತೆ ನಡೆದುಕೊಳ್ಳುತ್ತಾನೆ.

ಆಧ್ಯಾತ್ಮ ಜೀವನದ ಕೊನೆಯನ್ನು ಮುಟ್ಟಿರುವವನ ಸ್ಥಿತಿ ಈ ಮೇಲಿನಂತಿದ್ದರೆ, ಅವನ ಸ್ಥಿತಿಯನ್ನು ಭಾವಪಿಂಡ ಜ್ಞಾನ ಸ್ಥಲವೆಂದು ಕರೆಯಬಹುದು. (೯೬೫೩)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಭವರಾಟಳ, ಭವಚಕ್ರ ಮಂತ್ರ Next