Previous ಗುರು ಚಿದಂಗ Next

ಚಿತ್ತು

ಲಿಂಗಾಯತ ಧರ್ಮದಲ್ಲಿ ಚಿತ್ತು (ಚಿತ್)

ಕೆಲವು ವೇಳೆ "ಚಿತ್ತು" ಎಂಬ ಪದಕ್ಕೆ ಸ್ವ-ಪ್ರಜ್ಞೆಯಿಲ್ಲದ ಚಿತ್ತು ಎಂಬ ಅರ್ಥವಿದ್ದರೆ, ಮತ್ತೆ ಕೆಲವು ವೇಳೆ ಅದಕ್ಕೆ ಸ್ವ-ಪ್ರಜ್ಞೆಯುಳ್ಳ ಚಿತ್ತು ಎಂಬರ್ಥವಿರುವುದು ಕಂಡುಬರುತ್ತದೆ. ಉದಾಹರಣೆಗೆ “ಆದಿ ಅನಾದಿಯಿಂದತ್ತತ್ತಲಾದ ನಿರಾಕಾರ ಪರವಸ್ತು ತನ್ನ ಸ್ವರೂಪವ ತಾನರಿಯದ ಅನಂತ ಕಲ್ಪಕಲ್ಪಾಂತರ ಇರ್ದು, ತನ್ನ ಸ್ವಲೀಲೆಯಿಂದ ತಾನೇ ಜಗತ್‌ಸೃಷ್ಟಿ ನಿಮಿತ್ತವಾಗಿ ನೆನವುದೋರಲು, ಆ ನೆನವು ನಿರ್ಧಾರವಾಗಿ ಚಿತ್ತೆನಿಸಿತ್ತು" (೧೦:೧೩) ಎಂಬಲ್ಲಿ, ಶೂನ್ಯಕ್ಕೂ ಚಿತ್ತಿಗೂ ವ್ಯತ್ಯಾಸವಿರುವುದು ಸ್ಪಷ್ಟವಾಗುತ್ತದೆ. ಆದಿ ಅನಾದಿಯಿಂದತ್ತತ್ತಲಾದ ಪರವಸ್ತು ಅನಂತಕಾಲ ತಾನೊಂದೆ ಇತ್ತು, ಆದರೆ ಅದಕ್ಕೆ ತನ್ನ ಸ್ವರೂಪದ ಬಗ್ಗೆ ಅರಿವಿರಲಿಲ್ಲ. ಇಂಥ ಸ್ವ. ಪ್ರಜ್ಞೆ ಇಲ್ಲದ ಪರವಸ್ತುವನ್ನು ವಚನಕಾರರು ಶೂನ್ಯ, ಮಹಾಶೂನ್ಯ, ಮುಂತಾಗಿ ಕರೆದಿದ್ದಾರೆ. ಇಂಥ ಶೂನ್ಯದಲ್ಲಿ ಯಾವಾಗಲೋ ಸ್ವ ಪ್ರಜ್ಞೆ ಉಂಟಾಗಿ, ತಾನೊಂದೇ ಇರುವುದು ಅರಿವಾಗಿ, ಜಗತ್ತನ್ನು ಸೃಷ್ಟಿಸಬೇಕು ಎಂಬ ನೆನಹು ತಲೆದೋರಿ, ನೆನಹೇ ಗಟ್ಟಿಗೊಂಡರೆ, ಅದು ಚಿತ್ತೆನಿಸಿಕೊಳ್ಳುತ್ತದೆ. ಹಾಗಾದರೆ ಶೂನ್ಯದಲ್ಲಿ ಚಿತ್ತು ಇರಲಿಲ್ಲವೋ? ಆಗಲೂ ಇತ್ತು. ಅಂದರೆ, ಶೂನ್ಯವು ಚಿತ್ತಿನ ಒಂದು ಸ್ಥಲವಾದರೆ, ಸೃಷ್ಟಿಮಾಡಬೇಕೆಂಬ ನೆನಹು (ನಿರ್ಧಾರ) ಮತ್ತೊಂದು ಸ್ಥಲ. ನಿರ್ಧಾರಕ್ಕೆ ಚಿತ್ ಬೇಕೇ ಬೇಕು. ಏಕೆಂದರೆ, ಜಡ (ಅಚಿತ್) ವಸ್ತುಗಳು ಸೃಷ್ಟಿಸಬೇಕೆಂದು ನಿರ್ಧರಿಸುವುದಿಲ್ಲ. ಅಲ್ಲದೆ, ಶೂನ್ಯಸ್ಥಲದಲ್ಲೇ ಚಿತ್ ಇಲ್ಲದಿದ್ದರೆ, ಪರಶಿವನಿಗೆ ನಿರ್ಧಾರ ಸ್ಥಲದಲ್ಲಿ ಚಿತ್ತು ಎಲ್ಲಿಂದ ಬರಲು ಸಾಧ್ಯ? ಚಿತ್ತು ಪರಶಿವನ ಮುಖ್ಯ ಲಕ್ಷಣಗಳಲ್ಲೊಂದಾಗಿರುವದರಿಂದಲೇ, ಅವನನ್ನು ಚಿದಾನಂದ, ಚಿದಾಕಾಶ, ಚಿತ್‌ಸೂರ್ಯ, ಚಿತ್‌ಪ್ರಕಾಶ, ಚಿದ್ಘನ ಮುಂತಾಗಿ ಕರೆಯುವುದು.

ಈ ಚಿತ್ತನ್ನು ತೋಂಟದ ಸಿದ್ಧಲಿಂಗರು ನಿಃಕಲ ಲಿಂಗವೆಂದು ಕರೆದಿದ್ದಾರೆ. ಅವರೂ ಸಹ ಚಿತ್ತು ಎಂಬ ಪದವನ್ನು ಸೃಷ್ಟಿಗೆ ಸಂಬಂಧಿಸಿದಂತೆ ಉಪಯೋಗಿಸಿದ್ದರೂ, ಅಲ್ಲಿ ಚಿತ್ತು ಎಂಬ ಪದಕ್ಕೆ ಬೇರೆ ಅರ್ಥವಿದೆ. ಅವರ ಪ್ರಕಾರ ನಿಕಲ ಶಿವತತ್ವದಲ್ಲಿ ಜ್ಞಾನಚಿತ್ತು ಉದಯವಾಯಿತ್ತು. ಆ ಚಿತ್ತಿನಿಂದ ಅಕಾರ, ಉಕಾರ, ಮಕಾರಗಳೆಂಬ ಅಕ್ಷರ ತ್ರಯಗಳಾದವು; ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ, ಇಂತೀ ತ್ರಿವಿಧಕ್ಕೆ ತಾಯಿ ಚಿತ್ತು”.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಗುರು ಚಿದಂಗ Next