Previous ತ್ರಿವಿಧ ಸ್ಥಲ ದಶವಿಧ ಉದಕ Next

ದಶವಾಯುಗಳು

ದಶವಾಯುಗಳು

ನಮ್ಮ ಶರೀರದ ವಿವಿಧ ಭಾಗಗಳಲ್ಲಿ ಸಂಚರಿಸಿ, ವಿವಿಧ ರೀತಿಯ ಕೆಲಸಗಳನ್ನು ಮಾಡುವ ಹತ್ತು ವಾಯುಗಳೆಂದರೆ: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ.

ಪ್ರಾಣವಾಯುವು ಹೃದಯಸ್ಥಾನದಲ್ಲಿದ್ದು, ನಾವು ಅದರ ದೆಸೆಯಿಂದಲೇ ಉಸಿರನ್ನು ಎಳೆದುಕೊಳ್ಳುತ್ತೇವೆ ಅಥವಾ ಬಿಡುತ್ತೇವೆ ಅಥವಾ ತಡೆಹಿಡಿಯುತ್ತೇವೆ. ಅದು ಇಡೀ ದೇಹದಲ್ಲಿ ಸಂಚರಿಸುವುದರಿಂದ ದೇಹವು ಪ್ರಾಣಯುಕ್ತವಾಗಿರುತ್ತದೆ. ನಾವು ಸೇವಿಸಿದ ಅನ್ನ ಪಾನಾದಿಗಳು ಜೀರ್ಣವಾಗುವುದೂ ಪ್ರಾಣವಾಯುವಿನಿಂದಲೇ.

ಜೀರ್ಣವಾದ ಆಹಾರವು ಜಠರದಿಂದ ಕೆಳಮುಖವಾಗಿ ಚಲಿಸುವಂತೆ ಮಾಡಿ, ಕೊನೆಗೆ ಅದನ್ನು ಮಲಮೂತ್ರಗಳ ಮೂಲಕ ಹೊರಹಾಕುವುದು ಅಪಾನ ವಾಯುವಿನ ಕೆಲಸ. ಇದರ ಸ್ಥಾನ ಗುದ.

ನಾವು ನೀಡಿದ ಕಾಲು ಅಥವಾ ಕೈಗಳನ್ನು ಮಡಿಸುವುದು, ಮಡಿಸಿದ ಕೈಕಾಲುಗಳನ್ನು ನೀಡುವುದು ವ್ಯಾನ ವಾಯುವಿನ ದೆಸೆಯಿಂದಾಗಿಯೇ. ಇದು ಎಲ್ಲ ಸಂದುಗಳಲ್ಲಿಯೂ ಇರುತ್ತದೆ.
ಉದಾನ ವಾಯುವು ಕಂಠಸ್ಥಾನದಲ್ಲಿದ್ದು, ನಾವು ಮಾತಾಡುವುದು, ಅಳುವುದು, ನಗುವುದು, ಶೀನುವುದು, ಕೆಮ್ಮುವುದು, ತೇಗುವುದು ಅದರಿಂದಾಗಿಯೇ. ನಾವು ಅನ್ನ ಪಾನಾದಿಗಳನ್ನು ತಿನ್ನುವಾಗ, ಕುಡಿಯುವಾಗಲೂ, ಅದನ್ನು ನುಂಗುವಾಗಲೂ ಅದು ಸಹಾಯಕವಾಗುತ್ತದೆ. ನಾವು ಸ್ವೀಕರಿಸಿದ ಆಹಾರ ಪಾನೀಯಗಳನ್ನು ನಾವು ಜೀರ್ಣಿಸಿಕೊಂಡ ಮೇಲೆ, ಆ ಶಕ್ತಿಯನ್ನು ಎಲ್ಲ ಭಾಗಗಳಿಗೆ ಒಯ್ಯುವ ಕೆಲಸ ಸಮಾನವಾಯುವಿನದು.

ನಮ್ಮ ನಾಳಗಳನ್ನೂ ರೋಮಗಳನ್ನೂ ನಾವು ಇಚ್ಛಾಪೂರ್ವಕವಾಗಿ ಚಲಿಸಲು ಬರುವುದಿಲ್ಲ. ಅವುಗಳಲ್ಲಿ ನಾಗವಾಯು, ಇದ್ದು ಅದು ಎಲ್ಲ ಕಡೆಯಲ್ಲೂ ಹರಿಯುತ್ತಿರುತ್ತಿರುವುದು.
ಕೂರ್ಮವಾಯುವಿನ ದೆಸೆಯಿಂದಾಗಿ ನಾವು ಬಾಯಿ ಮತ್ತು ಕಣ್ಣುಗಳನ್ನು ತೆರೆಯುವುದು ಮುಚ್ಚುವುದು ಮಾಡುತ್ತೇವೆ.

ಕೃಕರ ವಾಯುವಿನಿಂದಾಗಿ ನಮಗೆ ಹಸಿವು ನೀರಡಿಕೆ ಇತ್ಯಾದಿ ಬಯಕೆಗಳಾಗುತ್ತವೆ. ದೇವದತ್ತ ವಾಯುವಿನಿಂದಾಗಿ, ನಾವು ಮಲಗುವುದು, ಕೂರುವುದು, ಏಳುವುದು, ನಿಲ್ಲುವುದು ತಿರುಗುವುದು ಮುಂತಾದ ಕ್ರಿಯೆಗಳನ್ನು ಮಾಡುತ್ತೇವೆ.

ಧನಂಜನವಾಯುವು ಬ್ರಹ್ಮರಂಧ್ರದಲ್ಲಿದ್ದು, ಅನೇಕ ರೀತಿಯ ಶಬ್ದಗಳನ್ನು ಉತ್ಪತ್ತಿ ಮಾಡುತ್ತಿರುತ್ತದೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ತ್ರಿವಿಧ ಸ್ಥಲ ದಶವಿಧ ಉದಕ Next