Previous ಜ್ಞಾನ ಜೀವತ್ರಯ Next

ಜ್ಞಾನವಾರು

ಜ್ಞಾನವಾರು

ಕೆಲವು ವೇಳೆ ಶರಣರು ಈ ಪದಕ್ಕೆ ಮತಿಜ್ಞಾನ, ಶ್ರುತಜ್ಞಾನ, ಅವಧಿಜ್ಞಾನ, ಮನ:ಪರ್ಯಾಯ ಜ್ಞಾನ, ಕೇವಲ ಜ್ಞಾನ ಮತ್ತು ಜ್ಯೋತಿರ್ಜ್ಞಾನ ಎಂಬರ್ಥಕೊಟ್ಟಿದ್ದರೆ, ಮತ್ತೆ ಕೆಲವು ವೇಳೆ ಮತಿಜ್ಞಾನ, ಶ್ರುತಿಜ್ಞಾನ, ಖಂಡಜ್ಞಾನ, ಕೇವಲ ಜ್ಞಾನ, ಜ್ಯೋತಿರ್ಜ್ಞಾನ ಮತ್ತು ಮಹಾಜ್ಯೋತಿರ್ಜ್ಞಾನ ಎಂಬರ್ಥ ಕೊಟ್ಟಿದ್ದಾರೆ.

ಜೈನರು ಐದು ರೀತಿಯ ಜ್ಞಾನಗಳಿವೆ ಎಂದು ಹೇಳಿದರೆ, ವಚನಕಾರರು ಆರು ಪ್ರಕಾರದ ಜ್ಞಾನವನ್ನು ಪ್ರತಿಪಾದಿಸಿದ್ದಾರೆ. ಜೈನರ ಐದು ಪ್ರಕಾರದ ಜ್ಞಾನವೆಂದರೆ, ಮತಿಜ್ಞಾನ, ಶ್ರುತಜ್ಞಾನ, ಅವಧಿಜ್ಞಾನ, ಮನ:ಪಯಾಯ ಜ್ಞಾನ ಮತ್ತು ಕೇವಲ ಜ್ಞಾನ. ಬುದ್ದಿ (ಮತಿ) ಮತ್ತು ಇಂದ್ರಿಯಗಳ ಮೂಲಕ ತಿಳಿದುಕೊಳ್ಳುವುದೇ ಮತಿಜ್ಞಾನ. (ಹಿಂದೂಗಳು ಇದನ್ನು ಪ್ರತ್ಯಕ್ಷವೆಂಬ ಹೆಸರಿನಿಂದ ಕರೆದಿದ್ದಾರೆ); ಹಿಂದೂಗಳು ಶಬ್ದ ಪ್ರಮಾಣವೆನ್ನುವುದನ್ನೇ ಜೈನರು ಶ್ರುತಜ್ಞಾನವೆನ್ನುತ್ತಾರೆ; ದೂರದಲ್ಲಿ ನಡೆಯುತ್ತಿರುವ ಘಟನೆಗಳನ್ನು ಯಾವ ಮಾಧ್ಯಮದ ಸಹಾಯವೂ ಇಲ್ಲದೆ ತಿಳಿದುಕೊಳ್ಳುವ ಈ ಅತೀಂದ್ರಿಯ ಜ್ಞಾನವೇ ಅವಧಿಜ್ಞಾನ; ಬೇರೆಯವರ ಮನಸ್ಸಿನಲ್ಲಿ ನಡೆಯುತ್ತಿರುವ ಕ್ರಿಯೆಗಳನ್ನು ಅರಿಯುವುದೇ ಮನ:ಪರ್ಯಾಯ ಜ್ಞಾನ; ತ್ರಿಕಾಲ ಜ್ಞಾನಕ್ಕೆ ಕೇವಲ ಜ್ಞಾನವೆಂಬುದು ಮತ್ತೊಂದು ಹೆಸರು. ಇದು ಸಿದ್ಧರಿಗಷ್ಟೇ ಸಾಧ್ಯ. ಜೈನರು ಇಲ್ಲಿಗೇ ನಿಲ್ಲಿಸಿದರೆ ವಚನಕಾರರು, ಪರಶಿವನ ಅನುಭವವನ್ನು ಪಡೆಯುವುದೇ ಜ್ಯೋತಿರ್ಜ್ಞಾನ ಎಂಬ ಆರನೆಯ ಪ್ರಕಾರ ಜ್ಞಾನ ಎನ್ನುತ್ತಾರೆ.

ಎರಡನೆ ಗುಂಪಿನ ಆರು ಪ್ರಕಾರಗಳಿಗೆ ಈ ಅರ್ಥವಿದೆ : ಮತಿಜ್ಞಾನ ಮತ್ತು ಶ್ರುತಜ್ಞಾನಕ್ಕೆ ಮೇಲೆ ಹೇಳಿರುವ ಅರ್ಥಗಳಿವೆ, ಖಂಡಜ್ಞಾನವೆಂದರೆ ನಾನು ಬೇರೆ ಪ್ರಪಂಚ ಬೇರೆ, ಪರಶಿವ ಬೇರೆ ಎಂಬ ಖಂಡಿತ ಜ್ಞಾನ; ಧ್ಯಾನಸ್ಥನಾದ ಶಿವಯೋಗಿಗೆ ಪ್ರಪಂಚವೂ ತನ್ನ ದೇಹವೂ ಕಾಣೆಯಾಗಿ ಕೇವಲ ತಾನೊಬ್ಬನೇ ಇರುವುದರ ಅರಿವಾಗುತ್ತದೆ. ಈ ಅರಿವೇ ಕೇವಲ ಜ್ಞಾನ, ಧ್ಯಾನದ ಮುಂದಿನ ಹಂತದಲ್ಲಿ ಶಿವಯೋಗಿಗೆ ಅನಾದಿ ಅನಂತ, ಸೂರ್ಯಕೋಟಿ ಪ್ರಕಾಶವುಳ್ಳ ಬೆಳಕು (ಜ್ಯೋತಿ) ಕಾಣಿಸಿಕೊಳ್ಳುತ್ತದೆ. ಇದರ ಅರಿವೇ ಜ್ಯೋತಿರ್ಜ್ಞಾನ, ಕೊನೆಯಲ್ಲಿ ಈ ಬೆಳಕೂ ತನ್ನ ಚಿತ್ತೂ ಒಂದೇ, ಅದೇ ಪರಶಿವನ ಅಂಗ ಎಂಬ ಅರಿವುಂಟಾಗುತ್ತದೆ. ಇದೇ ಮಹಾಜ್ಯೋತಿರ್ಜ್ಞಾನ.

ಇಲ್ಲಿ ಗಮನಿಸಬೇಕಾದ ಅಂಶವಿದು : ತನ್ನಿಂದ ಹೊರಗಿರುವ ವಸ್ತುಗಳನ್ನಾಗಲಿ, ತನ್ನೊಳಗೆ ಇರುವ ಮಾನಸಿಕ ಸ್ಥಿತಿಗಳನ್ನಾಗಲಿ ತಿಳಿದುಕೊಳ್ಳುವ ವಿಧಾನಕ್ಕೂ ಮಹಾಜ್ಯೋತಿರ್ಜ್ಞಾನವನ್ನು ತಿಳಿದುಕೊಳ್ಳುವ ವಿಧಾನಕ್ಕೂ ಒಂದು ಮುಖ್ಯ ಅಂತರವಿದೆ. ಮೊದಲನೆ ವಿಧಾನದಲ್ಲಿ ಇಂದ್ರಿಯ, ಮನಸ್ಸು, ಬುದ್ಧಿ, ಅಹಂ ಇವುಗಳ ಕ್ರಿಯೆ ಆವಶ್ಯಕವಾದರೆ, ಎರಡನೆಯದರಲ್ಲಿ ಅವು ಬೇಕೇ ಇಲ್ಲ. ಮೊದಲನೆಯದರಲ್ಲಿ "ನಾನು ಇಂತಹ ವಸ್ತುವನ್ನು ತಿಳಿದುಕೊಳ್ಳುತ್ತಿದ್ದೇನೆ, ನನಗೂ ಆ ವಸ್ತುವಿಗೂ ವ್ಯತ್ಯಾಸವಿದೆ" ಎಂಬ ದ್ವೈತಭಾವವಿದ್ದರೆ, ಎರಡನೆಯದರಲ್ಲಿ ಅಂತಹ ದ್ವೈತಭಾವ ಹೋಗಿ, ನಾನೇ ಮಹಾಲಿಂಗವಾಗಿದ್ದೇನೆ ಎಂಬ ಅದ್ವೈತ ಭಾವ ಉಂಟಾಗುತ್ತದೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಜ್ಞಾನ ಜೀವತ್ರಯ Next