Previous ಕುಂಡಲಿನಿ ಗುರು Next

ಕೈಲಾಸ

ಕೈಲಾಸ

ಪುರಾಣಗಳ ಪ್ರಕಾರ, ಕೈಲಾಸವು ಪರಶಿವನ ಸ್ಥಾನ. ಅಲ್ಲಿ ಅವನು ಪಾರ್ವತಿ, ಗಣಪತಿ, ಕುಮಾರ, ಶೃಂಗಿ, ತುಂಬುರ, ಪ್ರಮಥರು, ಮುಂತಾದವರು ಅವನ ಸಂಗಡ ಇರುತ್ತಾರೆ. ಕಠಿಣ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದ ಶಿವಭಕ್ತರು ಸದೇಹಿಗಳಾಗಿ ಅಲ್ಲಿಗೆ ಹೋಗಿ, ಶಿವನ ಸನ್ನಿಧಿಯಲ್ಲೇ ಅನಂತಕಾಲ ಇರುತ್ತಾರೆ. ಅವರಿಗೆ ಶಿವಸಾನಿಧ್ಯದಲ್ಲಿ ಯಾವ ತಾಪತ್ರಯವೂ ಇರುವುದಿಲ್ಲ.

ಆದರೆ ವಚನಕಾರರ ಪ್ರಕಾರ, ಕೈಲಾಸ ಇರುವುದೂ ಸುಳ್ಳು, ಅದು ಆಧ್ಯಾತ್ಮಿಕ ಸಾಧನೆಯ ಪರಮ ಗುರಿ ಎಂಬುದೂ ಸುಳ್ಳು, ಕೈಲಾಸವಿದೆ ಎಂದು ನಂಬುವವರನ್ನು ಶರಣರು ಅಪಹಾಸ್ಯ ಮಾಡಿದ್ದಾರೆ. ಕೈಲಾಸವೆಂಬುದೊಂದು ಭೂಮಿಯೊಳಿರುವ ಹಾಳು ಬೆಟ್ಟ ಎಂದು ಹೇಳುವ ಸಿದ್ಧರಾಮನು ಅದೊಂದು ವಿಶ್ವಾತೀತ ಪ್ರದೇಶವಲ್ಲವೆಂದು ಖಚಿತಪಡಿಸುತ್ತಾನೆ. ಭಕ್ತಿಯೆಂಬ ಪಿತ್ತ ತಲೆಗೇರಿ, ಕೈಲಾಸದ ಬಟ್ಟೆಯ ಹತ್ತುವ ಪಾಪಾತ್ಮರ ಕಂಡು ಎನ್ನ ಮನ ನಾಚಿತ್ತು ಎಂದು ಚೆನ್ನಬಸವಣ್ಣ ವ್ಯಂಗ್ಯವನ್ನಾಡುತ್ತಾನೆ.

ಇಲ್ಲಿ ಕೈಲಾಸವೆಂಬ ಲೋಕವಿದೆ ಎಂಬುದನ್ನು ಖಂಡಿಸುವುದೊಂದೆ ವಚನಕಾರರ ಗುರಿಯಲ್ಲ. ಅವರು ವಾಸ್ತವವಾಗಿ ಖಂಡಿಸುತ್ತಿರುವುದು ಧಾರ್ಮಿಕ ಜೀವನದ ಗುರಿಯ ಬಗೆಗಿರುವ ನಮ್ಮ ತಪ್ಪು ಕಲ್ಪನೆಯನ್ನು, ಕೈಲಾಸ ಪರಿಕಲ್ಪನೆಯು ಭಕ್ತ (ಅಂಗ) ಬೇರೆ, ಕೈಲಾಸದಲ್ಲಿರುವ ಪರಶಿವ ಬೇರೆ ಎಂಬ ದೈತ ಸಿದ್ಧಾಂತವನ್ನೂ ಪರಶಿವನು ನಮ್ಮಿಂದ ಬಹಳ ದೂರ ಇರುವ, ಯಾವಾಗಲೋ ಒಮ್ಮೆ ಭೂಮಿಗೆ ಇಳಿದು ಬರುವ ದೇವ, ಎಂಬ ಸಿದ್ಧಾಂತವನ್ನೂ ಪ್ರತಿಪಾದಿಸುತ್ತದೆ. ವಚನಕಾರರು ಇವೆರಡು ಸಿದ್ಧಾಂತಗಳನ್ನೂ ಖಂಡಿಸಿದರಲ್ಲದೆ, ಪರಶಿವನು ನಮ್ಮಲ್ಲೇ ಇದ್ದಾನೆ ಅಥವಾ ನಾವೆಲ್ಲ ಶಿವಾಂಶಿಕರೇ ಎಂಬ ಸಿದ್ಧಾಂತವನ್ನೂ, ಶಿವಸಾಕ್ಷಾತ್ಕಾರವಾದಾಗ ನಾವು ಶಿವನೊಂದಿಗೆ ಐಕ್ಯ ಸಾಧಿಸಬಹುದು ಎಂಬ ಸಿದ್ದಾಂತವನ್ನೂ ಪ್ರತಿಪಾದಿಸಿದರು. ಕೈಲಾಸಕ್ಕೆ ಹೋಗಬೇಕಾದವರು ಮೊದಲು ವಿದೇಹಿಗಳಾಗಬೇಕು, ಆದರೆ ವಚನಕಾರರು ಜೀವನ್ಮುಕ್ತಿ ಸಿದ್ಧಾಂತವನ್ನು ಪ್ರತಿಪಾದಿಸಿದರು. ಶಿವಜೀವೈಕ್ಯತೆಯನ್ನು ಸಾಧಿಸಿದವನ ದೇಹದಲ್ಲಿ ಶಿವನಿರುವುರಿಂದ, ಗುರು ಬಸವಣ್ಣನವರು ಕಾಯವೇ ಕೈಲಾಸವೆಂದರು. ಅಲ್ಲದೆ ವಚನಕಾರರ ಪ್ರಕಾರ, ಕೈಲಾಸವೆಂಬ ಧೈಯಕ್ಕಿಂತ ಲಿಂಗೈಕ್ಯತೆಯೆಂಬ ಧೈಯವೇ ಶ್ರೇಷ್ಠವೆಂದೂ ಸಾರಿದರು.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಕುಂಡಲಿನಿ ಗುರು Next