Previous ಕಾಯಕ ಕುಂಡಲಿನಿ Next

ಕಾರ್ಯನಲ್ಲ ಕಾರಣನಲ್ಲ

ಕಾರ್ಯನಲ್ಲ ಕಾರಣನಲ್ಲ

ನಾವು ಯಾವೊಂದು ವಸ್ತು ಅಥವಾ ಘಟನೆಯನ್ನು ನೋಡಿದರೂ ಅದಕ್ಕೊಂದು ಕಾರಣವಿರಲೇಬೇಕು ಎನ್ನುತ್ತೇವೆ. ಕಾರಣ ಯಾವುದೆಂದು ನಮಗೆ ಸಧ್ಯಕ್ಕೆ ಗೊತ್ತಿಲ್ಲದಿರಬಹುದು, ಆದರೆ ಕಾರಣವಿಲ್ಲದ ಘಟನೆಗಳಿಲ್ಲ. ಅದೇ ರೀತಿ ಯಾವುದೇ ಒಂದು ಘಟನೆಯನ್ನು ನೋಡಿದರೂ, ಇದಕ್ಕೆ ಕಾರ್ಯ (ಪರಿಣಾಮ) ಇರಲೇಬೇಕು ಎಂದುಕೊಳ್ಳುತ್ತೇವೆ. ಅದರ ಪರಿಣಾಮಗಳು ನಮಗೆ ಸಧ್ಯಕ್ಕೆ ಗೊತ್ತಿಲ್ಲದಿರಬಹುದು ಆದರೆ ಪರಿಣಾಮವಿಲ್ಲದ ಘಟನೆಗಳಿಲ್ಲ. (೧೧:೨೫)

ಆದರೆ ಸೃಷ್ಟಿ ಮಾಡಬೇಕೆಂಬ ಇಚ್ಛೆ ಪರಶಿವನಲ್ಲಿ ಇನ್ನೂ ಮೂಡದೆ ಇದ್ದಾಗ ಅಂದರೆ, ಪರಶಿವನು ಶೂನ್ಯ ಸ್ಥಿತಿಯಲ್ಲಿರುವಾಗ, ಅವನು ಕಾರ್ಯನೂ ಅಲ್ಲ, ಕಾರಣನೂ ಅಲ್ಲ ಎನ್ನುವುದು ಸಮಂಜಸವೇ ಎಂಬುದು ಇಲ್ಲಿ ಮುಖ್ಯ ಪ್ರಶ್ನೆ. ಸೃಷ್ಟಿಸಿಲ್ಲವಾದುದರಿಂದ ಅವನು ಕಾರ್ಯನಲ್ಲ ಎನ್ನುವುದೇನೋ ಸರಿಯೇ. ಆದರೆ ಅವನೆ ಎಲ್ಲವನ್ನೂ ಸೃಷ್ಟಿಸುವುದರಿಂದ ಅವನನ್ನು ಕಾರಣವೆಂದೇಕೇ ಕರೆಯಬಾರದು? ಹಾಗೆ ಕರೆಯುವುದನ್ನು ಬಿಟ್ಟು ಅವನು ಕಾರ್ಯನೂ ಅಲ್ಲ, ಕಾರಣನೂ ಅಲ್ಲ ಎನ್ನುವುದು ಸರಿಯೆ ಎಂಬ ಪ್ರಶ್ನೆಗಳು ಇಲ್ಲಿ ತಲೆದೋರುತ್ತದೆ. ಕಾರ್ಯನೂ ಅಲ್ಲದ ಕಾರಣನೂ ಅಲ್ಲದ ವ್ಯಕ್ತಿ ಇರಲು ಸಾಧ್ಯವೇ?

ಒಬ್ಬ ವ್ಯಕ್ತಿ ಇದ್ದರೆ, ಅವನು ಕೆಲವು ವಸ್ತುಗಳನ್ನು ನೋಡಿ ಇವು ಕಾರಣ, ಇವು ಪರಿಣಾಮ ಎಂದು ವಿಂಗಡಿಸಬಲ್ಲ. ಹಾಗೆ ವಿಂಗಡಿಸದಿರಲು ಅವನ ಬುದ್ಧಿಗೆ ಅಸಾಧ್ಯ. ಆದರೆ ವ್ಯಕ್ತಿಯೇ ಇಲ್ಲದಂಥ ಸಂದರ್ಭದಲ್ಲಿ, ಅಂದರೆ ಸೃಷ್ಟಿಯೇ ಇನ್ನೂ ಆಗಿಲ್ಲದೆ ಇದ್ದಾಗ ಅಥವಾ ಪರಶಿವ ಇನ್ನೂ ಶೂನ್ಯಸ್ಥಿತಿಯಲ್ಲಿರುವಾಗ ಅವನು ಸೃಷ್ಟಿಕರ್ತ (ಕಾರಣ), ಜಗತ್ತು ಪರಿಣಾಮ ಎಂದು ಹೇಳಲು ಬರುವುದಿಲ್ಲ. ಅಂದರೆ, ಸೃಷ್ಟಿಯಾದ ಮೇಲೆ ಈ ಭೇದ ಸಾಧ್ಯವೇ ಹೊರತು, ಸೃಷ್ಟಿಪೂರ್ವದಲ್ಲಿ ಯಾವ ಭೇದವೂ ಸಾಧ್ಯವಿಲ್ಲ. ಈ ಕಾರಣಕ್ಕಾಗಿ ವಚನಕಾರರು ಪರಶಿವನು ಕಾರ್ಯನೂ ಅಲ್ಲ, ಕಾರಣನೂ ಅಲ್ಲ, ಆದಿಯೂ ಅಲ್ಲ, ಅನಾದಿಯೂ ಅಲ್ಲ ಎಂದು ಹೇಳುತ್ತಾರೆ. (ನೋಡಿ : ಆದಿ ಅನಾದಿ ಇಲ್ಲದಂದು)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಕಾಯಕ ಕುಂಡಲಿನಿ Next