Previous ಕಲೆಗಳು ಮತ್ತು ಶಕ್ತಿಗಳು ಕಾರ್ಯನಲ್ಲ ಕಾರಣನಲ್ಲ Next

ಕಾಯಕ

ಕಾಯಕ

ಕಾಯಕ ಎಂದರೆ ಯಾವುದೇ ವೃತ್ತಿ ಅಥವಾ ಉದ್ಯೋಗ. ಆದರೆ ವಚನಕಾರರ ದೃಷ್ಟಿಯಲ್ಲಿ ಕಾಯಕಕ್ಕೆ ವಿಶಿಷ್ಟ ಅರ್ಥವಿದೆ. ಅದನ್ನು ಸ್ಕೂಲವಾಗಿ ಹೀಗೆ ಅದನ್ನು ವಿವರಿಸಬಹುದು.

ಸತ್ಯ ಶುದ್ಧ ಕಾಯಕವಷ್ಟೇ ಕಾಯಕ. ಹಿಂಸೆ, ವಂಚನೆ, ಸುಳ್ಳು, ಮುಂತಾದ ಅನೈತಿಕತೆಯನ್ನೊಳಗೊಂಡ ಕಾಯಕ ಕಾಯಕವೆನಿಸಿಕೊಳ್ಳುವುದಿಲ್ಲ.

ಕಾಯವ ಬಳಲಿಸದ ಸುಮ್ಮನೆ ಕುಳಿತು ಉಣ್ಣುವುದು ಕಾಯಕ ತತ್ವಕ್ಕೆ ವಿರುದ್ಧ. ಅಂದರೆ ಎಲ್ಲರೂ ಕಾಯಕ ಮಾಡಲೇಬೇಕು. ಕಾಯವ ಸವೆಸಲೇಬೇಕು. "ಕಾಯವ ಬಳಲಿಸದೆ, ತನು ಕರಗದೆ, ಮನ ನೋಯದೆ, ಕಾಡಿ ಬೇಡಿ" ತರುವುದು ಕಾಯಕವಲ್ಲ. ಭಿಕ್ಷೆ ಮಾಡುವುದು, ಕಳ್ಳತನ ಅಥವಾ ಮೋಸದಿಂದ ಗಳಿಸುವುದು, ಅದರಿಂದ ಬಂದುದನ್ನು ದಾಸೋಹ ಮಾಡುವುದು ವಚನಕಾರರ ಸಿದ್ಧಾಂತಕ್ಕೆ ವಿರುದ್ಧ.

ಸತ್ಯಶುದ್ಧ ಕಾಯಕವು ದುರಾಸೆಯಿಂದ ಕೂಡಿರಬಾರದು. ನಾಳೆಗೋಸ್ಕರ ದುಡಿಯುವುದು, ಮಕ್ಕಳು ಮೊಮ್ಮಕ್ಕಳಿಗೋಸ್ಕರ ಉಳಿಸುವುದು, ಅಷ್ಟೇಕೆ, ಇಂದಿನ ಅಗತ್ಯಕ್ಕಿಂತ ಹೆಚ್ಚು ದುಡಿಯುವುದು, ಕಾಯಕ ಸಿದ್ಧಾಂತಕ್ಕೆ ಹೊರಗು. ವ್ಯಕ್ತಿ ತನ್ನ ಕುಟುಂಬಕ್ಕೆ ಅಂದಂದಿಗೆ ಅಗತ್ಯವಾದಷ್ಟನ್ನು ಮಾತ್ರ ದುಡಿದರೆ ಸಾಕು. ಇನ್ನೂ ಉಳಿದುದನ್ನು ಜಂಗಮಕ್ಕೆ ನೀಡಬೇಕು. ಹೀಗೆ ಎಲ್ಲರೂ ದುಡಿದರೆ ಯಾರೂ ಪರಾವಲಂಬಿಗಳಾಗಬೇಕಾಗಿಲ್ಲ. ಯಾರೂ ಭಿಕ್ಷುಕರಾಗಬೇಕಿಲ್ಲ (“ಬೇಡಲಾಗದು ಭಕ್ತ). ಹೀಗೆ ಇಡೀ ಸಮಾಜವು ಸಮೃದ್ಧಿಯಿಂದ ತುಂಬಿ ತುಳುಕುತ್ತಿರುತ್ತದೆ (ಚಿತ್ತಶುದ್ಧ ಕಾಯಕ ಮಾಡುವ ಸದ್ಭಕ್ತನ ಮನೆಯಲ್ಲಿ ಎತ್ತ ನೋಡಿದಡತ್ತ ಲಕ್ಷ್ಮಿ ತಾನೇ ತಾನಾಗಿಪ್ಪಳು”). ಅಗತ್ಯಕ್ಕಿಂತ ಹೆಚ್ಚು ದುಡಿದರೆ, ಕಾಯವ ಬಳಲಿಸದೆ ವಂಚನೆ, ಸುಳ್ಳು, ಕಳ್ಳತನ, ಮುಂತಾದ ಅನೈತಿಕ ರೀತಿಯಲ್ಲಿ ದುಡಿದರೆ, ಮನುಷ್ಯನು ಆಲಸಿ, ದುರ್ವ್ಯಸನಿ, ದುರಾಚಾರಿ, ಅಧರ್ಮಿಯಾಗುತ್ತಾನೆ. ದುಷ್ಟ ಕಾಯಕ ಮಾಡಿ ಲಿಂಗಾಂಗ ಸಾಮರಸ್ಯ ಸಾಧಿಸಲು ಸಾಧ್ಯವಿಲ್ಲ. ಸತ್ಕಾಯಕದಿಂದ ಸಮಾಜದ ಆರ್ಥಿಕ ಪ್ರಗತಿಯಾಗುವುದಷ್ಟೇ ಅಲ್ಲ, ಸಮಾಜದಲ್ಲಿ ಶಾಂತಿ ಸಮಾಧಾನಗಳೂ ಉಂಟಾಗುತ್ತವೆ. ನಾಳೆಗೆಂತೋ ಎಂಬ ಆಹಾರದ ಚಿಂತೆಯನ್ನು ದೂರಮಾಡಿ ನಮ್ಮ ಆಹಾರವನ್ನು ನಾಳೆ ಯಾರೂ ದೋಚಿಕೊಂಡು ಹೋಗುವುದಿಲ್ಲ ಎಂಬ ಸಮಾಧಾನವನ್ನು, ಮೂಡಿಸುವುದೇ ಕಾಯಕದ ಉದ್ದೇಶ.
ಕಾಯಕವು ಶರಣರ ದೃಷ್ಟಿಯಲ್ಲಿ ಕೇವಲ ವೈಯಕ್ತಿಕ ಅಥವಾ ಕೌಟುಂಬಿಕ ವೃತ್ತಿಯಾಗಿರದೆ, ಒಂದು ಸಮಾಜ ಸೇವೆಯೂ ಆಗಿತ್ತು. ಅಂತಹ ಸಮಾಜ ಸೇವೆಯೆಂಬ ಕಾಯಕಗಳನ್ನು ಸಾಮಾನ್ಯವಾಗಿ ಜಂಗಮರು ಮಾಡುತ್ತಿದ್ದರು. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ಹೆಸರಿಸಬಹುದು.

ಘಂಟೆಯ ಕಾಯಕ : ಮಠದಲ್ಲಿರುವ ಜಂಗಮರು ಪ್ರತಿದಿನ ಬೆಳಿಗ್ಗೆ ನಸುಕಿನಲ್ಲಿ ಘಂಟೆ ಬಾರಿಸಿ, ಜನರನ್ನು ಎಚ್ಚರಗೊಳಿಸುತ್ತಾರೆ. ನಿದ್ದೆಯಿಂದ ಜನರು ದೈನಂದಿನ ಕಾರ್ಯಕ್ರಮಗಳನ್ನು ಮುಗಿಸಿ ತಮ್ಮ ಕಾಯಕದಲ್ಲಿ ತೊಡಗಲಿ ಎಂಬುದೇ ಅವರು ಘಂಟೆ ಬಾರಿಸುವ ಉದ್ದೇಶ.

ಜಂಗಿನ ಕಾಯಕ : ಮಠದಿಂದ ಸೂರ್ಯೋದಯಕ್ಕೆ ಹೊರಬಿದ್ದ ಜಂಗಮರು ಪ್ರತಿಭಕ್ತರ ಮನೆಯನ್ನು ಪ್ರವೇಶಿಸಿ, ಮಲಗಿರುವವರನ್ನು ತಮ್ಮ ಬೆತ್ತದಿಂದ ತಿವಿದು ಎಚ್ಚರಿಸುತ್ತಾರೆ. ಇವರು ತಮ್ಮ ಎಡಗೈಗೆ ಜಂಗು (ಜಂಗ್ ಜಂಗ್ ಎಂದು ಶಬ್ದ ಮಾಡುವ ಘಂಟೆ) ಕಟ್ಟಿಕೊಂಡು ಅಡ್ಡಾಡುವುದರಿಂದ ಇನ್ನೂ ಮಲಗಿದ್ದ ಜನರು ಅದರ ಶಬ್ದದಿಂದ ಎದ್ದು, ಮುಖ ಮಾರ್ಜನೆ ಇತ್ಯಾದಿಗಳಲ್ಲಿ ನಿರತರಾಗುತ್ತಾರೆ. ಇವರು ಮನೆಯೊಳಗೆ ಬಂದು ಎಬ್ಬಿಸಿದುದಕ್ಕಾಗಿ ಜನರು ಅವರಿಗೆ ಜೋಳವನ್ನು ನೀಡುತ್ತಾರೆ. ಆದುದರಿಂದ ಅವರಿಗೆ ಜಂಗಿನ ಅಯ್ಯ ಅಥವಾ ಜೋಳದ ಅಯ್ಯ ಎಂಬ ಹೆಸರೂ ಇದೆ.

ಸುಮಾರು ೯ ಅಥವಾ ೧೦ ಗಂಟೆಗೆ ಹಿಟ್ಟಿನ ಅಯ್ಯನವರು ಭಕ್ತರ ಮನೆಗೆ ಬಂದು ಜನರು ಸ್ನಾನ ಪೂಜಾದಿಗಳಲ್ಲಿ ನಿರತರಾಗಿದ್ದಾರೋ ಇಲ್ಲವೋ, ತಮ್ಮ ಕಾಯಕಗಳಲ್ಲಿ ನಿರತರಾಗಿದ್ದಾರೋ ಅಥವಾ ಇನ್ನೂ ಮಲಗಿದ್ದಾರೋ ಎಂದು ಪರೀಕ್ಷಿಸುತ್ತಾರೆ. ಅವರು ಮಾಡಿದ ಸೇವೆಗೆ ಪ್ರತಿಫಲವೆಂಬಂತೆ ಭಕ್ತರು ಅವರಿಗೆ ಒಂದು ಹಿಡಿ ಹಿಟ್ಟನ್ನು ನೀಡುತ್ತಾರೆ. ಅವರಿಗೆ ಹಿಟ್ಟಿನ ಅಯ್ಯನವರೆಂದು ಹೆಸರು. ಹೀಗೆ ಭಕ್ತರ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ನಡೆನುಡಿಯನ್ನು ರೂಪಿಸುವ ಸಲುವಾಗಿ ಜಂಗಮರು ಮೇಲಿನ ನಯವಾದ ರೀತಿಗಳನ್ನು ಅನುಸರಿಸುತ್ತಾರೆ. ಆದರೆ ಇದಾವುದಕ್ಕೂ ಬಗ್ಗದ ಕೆಲ ಜನರಿರುತ್ತಾರೆ; ಅವರನ್ನು ತಿದ್ದಲಾಗದವರೆಂದು ಜಂಗಮರು ಹಾಗೇ ಬಿಡುವುದಿಲ್ಲ. ಅಂಥವರನ್ನು ತಿದ್ದಿ ಧಾರ್ಮಿಕ ಹಾದಿಗೆ ತರಬೇಕೆಂಬ ಉದ್ದೇಶದಿಂದ ಅವರು ತೆಕ್ಕೆಯ ಕಾಯಕ, ಮುಳ್ಳಾವಿಗೆಯ ಕಾಯಕ ಮತ್ತು ಶಸ್ತ್ರದ ಕಾಯಕ ಎಂಬ ಮೂರು ಕಾಯಕಗಳನ್ನು ಮಾಡುತ್ತಾರೆ.

ತೆಕ್ಕೆಯ ಕಾಯಕ : ಘಂಟೆಯ ಕಾಯಕ, ಜಂಗಿನ ಕಾಯಕ ಮತ್ತು ಹಿಟ್ಟಿನ (ಜೋಳದ) ಕಾಯಕದಯ್ಯಗಳು ಒಂದೇ ಊರಲ್ಲಿ ನೆಲೆಸಿದ ಜಂಗಮರಾದರೆ, ತೆಕ್ಕೆಯ ಕಾಯಕದಯ್ಯಗಳು ಊರೂರು ತಿರುಗುವ ಜಂಗಮರು. ಅವರು ಮಠದಲ್ಲಿ ವಾಸ್ತವ್ಯ ಹೂಡಿ, ಅಲ್ಲಿನ ಜಂಗಮರಿಂದ ಅಧರ್ಮಿಗಳ ಪಟ್ಟಿ ಪಡೆಯುತ್ತಾರೆ. ಅನಂತರ ಆ ಅಧರ್ಮಿಯ ಮನೆಯ ಮುಂದೆ ಸೂರ್ಯೋದಯಕ್ಕಿಂತ ಮೊದಲೇ ಹೋಗಿ ನಿಂತಿರುತ್ತಾರೆ. ಬಾಗಿಲು ತೆಗೆದುಕೊಂಡಕೂಡಲೇ ಒಳನುಗ್ಗಿ ಮನೆಯಲ್ಲಿರುವ ಕಂಬವನ್ನು ಅಪ್ಪಿಕೊಳ್ಳುತ್ತಾರೆ. ಆ ಅಧರ್ಮಿಯು ತನ್ನ ಗುರುಹಿರಿಯರ ಕ್ಷಮೆ ಕೇಳಬೇಕು, ತಾನು ಅಧರ್ಮವನ್ನು ತ್ಯಜಿಸಿ ಧರ್ಮದ ಹಾದಿ ಹಿಡಿಯುತ್ತೇನೆಂದು ಸ್ವಾಮಿಗಳಿಗೆ ವಚನ ನೀಡುವವರೆಗೂ ಅವರು ತಮ್ಮ ಅಪ್ಪುಗೆಯನ್ನು ಸಡಿಲಿಸುವದಿಲ್ಲ. ಅಂದರೆ, ಅಲ್ಲಿಯವರೆಗೂ ಅವರಿಗೆ ಸ್ನಾನವಿಲ್ಲ, ಪೂಜೆಯಿಲ್ಲ, ಪ್ರಸಾದವಿಲ್ಲ. ಇದು ಒಂದು ದಿನವಾಗಬಹುದು, ಎರಡು ಅಥವಾ ಮೂರು ದಿನಗಳಾಗಬಹುದು, ಒಂದು ವೇಳೆ ಅಧರ್ಮಿ ಇದಕ್ಕೆ ಬಗ್ಗದಿದ್ದರೆ ಸ್ವಾಮಿಗಳು ಅಲ್ಲೇ ಪ್ರಾಣತ್ಯಾಗ ಮಾಡಬಹುದು. ಅನಂತರ ಅಧರ್ಮಿಗೆ ಪಶ್ಚಾತ್ತಾಪವಾದರೂ ಆಗಬಹುದು.

ಮುಳ್ಳಾವಿಗೆ ಕಾಯಕ : ತೆಕ್ಕೆಯ ಕಾಯಕದಯ್ಯಗಳು ಅಧರ್ಮಿಯ ಮನೆಯ ಒಳಗೆ ತಮ್ಮ ಕಾಯಕ ಮಾಡಿದರೆ, ಮುಳ್ಳಾವಿಗೆ ಕಾಯಕದಯ್ಯಗಳು ತಮ್ಮ ಕಾಯಕವನ್ನು ಆ ಅಧರ್ಮಿಯ ಮನೆಯ ಮುಂದೆ, ರಸ್ತೆಯಲ್ಲಿ ನಿಂತು ಮಾಡುವರು. ಇವರೂ ಮಠದಲ್ಲಿ ವಾಸ್ತವ್ಯ ಹೂಡಿ ವಿಷಯಲಂಪಟರ ಪಟ್ಟಿಯನ್ನು ಪಡೆದು ಮಾರನೆಯ ದಿನವೇ ತಮ್ಮ ಕಾಯಕವನ್ನು ಪ್ರಾರಂಭಿಸುತ್ತಾರೆ. ತೆಕ್ಕೆಯ ಕಾಯಕದಯ್ಯಗಳು ಹೋದರೆಂಬ ಸಮಾಧಾನದ ಮೇಲೆ ಅಧರ್ಮಿಯು ತನ್ನ ಅಧರ್ಮವನ್ನು ಮತ್ತೆ ಮುಂದುವರೆಸಬಹುದು. ಅಂತಹವನ ಮನೆಯ ಮುಂದೆ ಸೂರ್ಯೋದಯದ ಹೊತ್ತಿಗೆ ಮುಳ್ಳಾವಿಗೆ ಕಾಯಕದಯ್ಯಗಳು ಚೂಪಾದ ಮೊಳೆಗಳನ್ನು ಜೋಡಿಸಿದ ಹಲಗೆಯ ಮೇಲೆ ಅಂಗಾಲನ್ನು ಊರಿ ನಿಲ್ಲುತ್ತಾರೆ. ಅಧರ್ಮಿಯ ಹೆಸರನ್ನು ಘಟ್ಟಿಯಾಗಿ ಹೇಳುತ್ತಾ, ಬಸವಾದಿ ಶರಣರ ಹೆಸರುಗಳನ್ನು ಸ್ಮರಿಸುತ್ತಾ, ಅಧರ್ಮಿಗೆ ಸದ್ಭುದ್ಧಿಯನ್ನು ಕೊಡಲೆಂದು ಶಿವನನ್ನು ಸ್ಮರಿಸುತ್ತಾ ನಿಂತರೆ, ಊರಿನ ಜನರೆಲ್ಲ ಅಧರ್ಮಿಯನ್ನು ಶಪಿಸತೊಡಗುತ್ತಾರೆ. ಆ ಅವಮಾನ ಸಾಲದೆಂಬಂತೆ, ತನ್ನ ತಪ್ಪಿಗಾಗಿ ಸ್ವಾಮಿಗಳಿಗೆ ನೋವಾಗುತ್ತಿದೆ ಎಂಬ ಪಶ್ಚಾತ್ತಾಪವೂ ಅವನಲ್ಲಿ ಉಂಟಾಗಿ, ಅವನು ತನ್ನ ತಪ್ಪನ್ನು ಒಪ್ಪಿಕೊಂಡು, ಇನ್ನು ಮುಂದೆ ಧಾರ್ಮಿಕ ಜೀವನ ನಡೆಸುವುದಾಗಿ ವಚನ ನೀಡಿದ ನಂತರವೇ, ಸ್ವಾಮಿಗಳು ತಮ್ಮ ರಕ್ತ ಸಿಕ್ಕ ಪಾದಗಳನ್ನು ತೊಳೆದುಕೊಂಡು, ಸ್ನಾನ ಪೂಜಾದಿಗಳನ್ನು ಮುಗಿಸಿ ಪ್ರಸಾದ ಸ್ವೀಕರಿಸುತ್ತಾರೆ.

ಶಸ್ತ್ರದ ಕಾಯಕ : ಇದಕ್ಕೂ ಜಗ್ಗದ ಅಧರ್ಮಿಗಳಿಗೇನೂ ಕೊರತೆಯಿಲ್ಲ. ಆಗ ಶಸ್ತ್ರದ ಕಾಯಕದಯ್ಯಗಳ ಪ್ರವೇಶವಾಗುತ್ತದೆ. ಸೂರ್ಯೋದಯಕ್ಕೆ ಮುಂಚೆ ಅಧರ್ಮಿಯ ಮನೆಗೆ ಹೋಗಿ ಅವರ ಮನೆಯ ಮುಂದೆ ಹುರಿಯ ಒಂದು ಕೊನೆಯಲ್ಲಿರುವ ಕುಡುಗೋಲನ್ನು ಗೋಡೆಗೆ ನೇತು ಹಾಕಿ, ಮತ್ತೊಂದು ಕೊನೆಯಲ್ಲಿರುವ ಕುಡುಗೋಲನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ರಸ್ತೆಯ ಮಧ್ಯಕ್ಕೆ ಬಂದು ನಿಲ್ಲುತ್ತಾರೆ; ಹಾಗೂ ಘಟ್ಟಿಯಾಗಿ ಅಧರ್ಮಿಯ ಹೆಸರು ಹೇಳುತ್ತಾ ಬಸವಾದಿ ಪ್ರಮಥರ ಹೆಸರನ್ನು ಸ್ಮರಿಸುತ್ತಾ ಶಿವನು ಅವನಿಗೆ ಸದ್ಭುದ್ದಿ ಕೊಡಲೆಂದು ಪ್ರಾರ್ಥಿಸುತ್ತಾರೆ. ಅವನಿಗೆ ಸದ್ಭುದ್ಧಿ ಕೊಡದಿದ್ದರೆ ತನ್ನ ಶಿರವನ್ನ ತೆಗೆದುಕೊಳ್ಳಲೆಂದು ನುಡಿಯುತ್ತಾರೆ. ಅಧರ್ಮಿಯಾರೆಂದು ಇಡೀ ಊರಿಗೆ ಗೊತ್ತಾದಾಗ ಅವನಿಗೆ ಅವಮಾನವಾಗುತ್ತದೆ, ಅಲ್ಲದೆ ತನ್ನ ತಪ್ಪಿಗಾಗಿ ಜಂಗಮರೇಕೆ ಪ್ರಾಣತ್ಯಾಗ ಮಾಡಬೇಕು ಎಂದು ತೀರ್ಮಾನಿಸಿದ ಅವನು ತನ್ನ ದುರ್ಮಾರ್ಗವನ್ನು ತ್ಯಜಿಸಿಯಾನು.

ಶರಣರ ಕೆಲವು ಕಾಯಕಗಳು: ಮರಕಡಿಯುವವನು, ಬಟ್ಟೆ ತೊಳೆಯುವವನು, ಚರ್ಮ-ಕೆಲಸಗಾರ., ಚಮ್ಮಾರ, ಮಹಾರ್, ಕ್ಷೌರಿಕ, ಸಂಗೀತಗಾರ, ಹಗ್ಗ-ತಯಾರಕ, ಧಾನ್ಯಗಳ ಕೀಳುವವ., ಟೈಲರ್, ರೈತ, ಗೋಪಾಲಕ, ಮನರಂಜಕ, ಬುಟ್ಟಿ ತಯಾರಕ, ದೋಣಿಯವನು, ಯುದ್ಧ-ಕಹಳೆ ಊದುವವನು, ಎಣ್ಣೆ ಮಸಾಜಾ ಮತ್ತು ಮಾರಾಟಗಾರ, ವೈದ್ಯರು (ಮೂಲಿಕೆ ಔಷಧಿ ಮನುಷ್ಯ), ಚರ್ಮದ ಕೆಲಸಗಾರ, ತೋಟಗಾರ, ಚಿನ್ನದ ಕೆಲಸಗಾರ, ಮಂತ್ರಿ, ವ್ಯಾಪಾರಿ, ನೇಕಾರ, ಆಭರಣ ವ್ಯಾಪಾರಿ...

ಹೀಗೆ ಯಾವುದೇ ಕಾಯಕ ವ್ಯಕ್ತಿಗೂ ಹಿತವಾಗುವುದಲ್ಲದೆ ಸಮಾಜಕ್ಕೂ ಹಿತವಾಗುತ್ತದೆ. ಅಲ್ಲದೆ, ಹೀಗೆ ಐಹಿಕಕ್ಕೂ ಪಾರಮಾರ್ಥಿಕಕ್ಕೂ ಸೇತುವೆ ಕಲ್ಪಿಸಿದ ಶರಣರ ಕಾಯಕ ಸಿದ್ಧಾಂತ ಅದ್ಭುತ, ಅಪೂರ್ವ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಕಲೆಗಳು ಮತ್ತು ಶಕ್ತಿಗಳು ಕಾರ್ಯನಲ್ಲ ಕಾರಣನಲ್ಲ Next