Previous ಕಾರ್ಯನಲ್ಲ ಕಾರಣನಲ್ಲ ಕೈಲಾಸ Next

ಕುಂಡಲಿನಿ

ಕುಂಡಲಿನಿ

ಶಾಕ್ತರು ಹಾಗೂ ವಚನಕಾರರ ಪ್ರಕಾರ, ಪರಶಿವನೇ ಚೈತನ್ಯ, ಪ್ರಕೃತಿಯೇ ಅವನ ಶಕ್ತಿ. ಪರಶಿವನಿಲ್ಲದೆ ಶಕ್ತಿಯಿಲ್ಲ, ಶಕ್ತಿಯಲ್ಲದೆ ಪರಶಿವನಿಲ್ಲ. ಚೈತನ್ಯ ಮತ್ತು ಶಕ್ತಿ ಎರಡು ಪ್ರತ್ಯೇಕ ವಸ್ತುಗಳಾಗಿರದೆ, ಒಂದೇ ವಸ್ತುವಿನ ಎರಡು ಗುಣಗಳಾಗಿವೆ. ಅಂದರೆ, ಪರಶಿವನ ಚಿತ್ತಿಗೆ ಚೈತನ್ಯವೆಂದೂ ಅವನ ಶಕ್ತಿಗೆ ಮಾಯೆ ಅಥವಾ ಪ್ರಕೃತಿಯೆಂದೂ ಹೆಸರು. ಈ ದೃಷ್ಟಿಯಿಂದ ನೋಡಿದಾಗ, ಇರುವುದೆಲ್ಲಾ ಚೈತನ್ಯಮಯವಾದ ಶಕ್ತಿಯ ವಿವಿಧ ರೂಪುಗಳು.

ಅಧ್ಯಯನದ ದೃಷ್ಟಿಯಿಂದ ನಾವು ಇಡೀ ಸತ್ಯವನ್ನು (ಇರುವುದೆಲ್ಲವನ್ನೂ) ಎರಡು ಭಾಗ ಮಾಡಿ, ಒಂದನ್ನು ಬ್ರಹ್ಮಾಂಡವೆಂದೂ, ಮತ್ತೊಂದನ್ನು ಪಿಂಡಾಂಡವೆಂದೂ ಕರೆಯಬಹುದು. ಬ್ರಹ್ಮಾಂಡ ಅಥವಾ ಮನುಷ್ಯನ ಹೊರಗಿರುವ ಜಗತ್ತು ಶಕ್ತಿಯ ದೊಡ್ಡ ಅಂಶವಾದರೆ ಪಿಂಡಾಡವು ಮನುಷ್ಯನಾಗಿ ಶಕ್ತಿಯ ಸಣ್ಣ ಅಂಶವಾಗಿದೆ. ಬ್ರಹ್ಮಾಂಡದಲ್ಲಿ ಚೈತನ್ಯ (ಪರಶಿವ) ಅವ್ಯಕ್ತವಾಗಿ ಅಡಗಿರುವಂತೆ ಪಿಂಡಾಡದಲ್ಲಿ ಅಡಗಿದ್ದಾನೆ. ಇವೆರಡರಲ್ಲಿರುವ ಪರಶಿವ ಯೋಗಿಗಳ ಅಂತಶ್ಚಕ್ಷು ಅಥವಾ ಜ್ಞಾನ ಚಕ್ಷುವಿಗೆ ಮಾತ್ರ ಗೋಚರವಾಗುತ್ತಾನೆ. ಆದರೆ ಯೋಗಿಗಳು ಅಂತಶ್ಚಕ್ಷುವಿನಿಂದ ಪರಶಿವನನ್ನು ಕಾಣಬೇಕಾದರೆ, ಅವರು ತಮ್ಮ ಪಿಂಡಾಂಡವನ್ನು ಆಧ್ಯಾತ್ಮಿಕ ಶಿಕ್ಷಣಕ್ಕೊಳಪಡಿಸಬೇಕು, ಹಾಗೂ ಅಂತಶ್ಯಕಗಳನ್ನು ಪಡೆಯಬೇಕು. ಈ ಶಿಕ್ಷಣಕ್ಕೆ ಕುಂಡಲಿನಿಯೋಗವೆನ್ನುತ್ತಾರೆ. ವಚನಕಾರರು ಕುಂಡಲಿನಿ ಯೋಗದ ಬಹಳಷ್ಟು ಅಂಶಗಳನ್ನು ಒಪ್ಪಿಕೊಂಡಿದ್ದಾರೆ.

ಕುಂಡಲಿನಿ ಯೋಗದ ಪ್ರಕಾರ, ಮನುಷ್ಯನ ಮೇರು ದಂಡದಲ್ಲಿ (ಬೆನ್ನು ಹುರಿಯಲ್ಲಿ) ಐದು ವಿಶಿಷ್ಟ ಸ್ಥಾನಗಳಿದ್ದು, ಪರಿಭಾಷೆಯಲ್ಲಿ ಅವಕ್ಕೆ ಚಕ್ರ ಅಥವಾ ಪದ್ಮಗಳೆಂದು ಹೆಸರು. ಆಧಾರ ಅಥವಾ ಮೂಲಾಧಾರ, ಸ್ವಾಧಿಷ್ಟಾನ, ಮಣಿಪೂರಕ, ಅನಾಹತ ಮತ್ತು ವಿಶುದ್ಧಿ ಎಂಬುದು ಇವುಗಳ ಹೆಸರುಗಳು. ಆದರೆ ಈ ಯಾವ ಚಕ್ರಗಳೂ ಇಂದ್ರಿಯ ಗೋಚರವಲ್ಲ. ಪ್ರಪಂಚದಲ್ಲಿ ಎಲ್ಲೆಲ್ಲಿಯೂ ಚೈತನ್ಯವಿದ್ದರೂ ಅದು ಗಿಡ ಮರಗಳಲ್ಲಿ, ಅದಕ್ಕಿಂತ ಹೆಚ್ಚಾಗಿ ಪ್ರಾಣಿಗಳಲ್ಲಿ, ಅವಕ್ಕಿಂತ ಹೆಚ್ಚಾಗಿ ಮನುಷ್ಯನಲ್ಲಿ ವ್ಯಕ್ತವಾಗುತ್ತದೆ. ಅದೇ ರೀತಿ ಅದು ಮನುಷ್ಯನಲ್ಲಿ ಎಲ್ಲೆಡೆಯಲ್ಲಿಯೂ ಒಂದೇ ತೆರನಾಗಿದ್ದರೂ, ಚಕ್ರಗಳಲ್ಲಿ ಅದು ಹೆಚ್ಚಾಗಿ ವ್ಯಕ್ತವಾಗುತ್ತದೆ. ಮನುಷ್ಯನು ಮೆದುಳಿನ ಮೂಲಕ ಮಾತ್ರ ಹೇಗೆ ಚಿಂತಿಸಬಲ್ಲನೋ, ಹಾಗೆಯೇ ಅವನು ಚಕ್ರಗಳ ಮೂಲಕ ಮಾತ್ರ ಚೈತನ್ಯವನ್ನು ಸಾಕ್ಷಾತ್ಕರಿಸಿಕೊಳ್ಳಬಲ್ಲ. ಇಂದ್ರಿಯಗಳಿಲ್ಲದಿದ್ದರೆ, ಹೇಗೆ ರೂಪರಸಾದಿಗಳ ವರದಿ ಬುದ್ಧಿಗೆ ಹೋಗುತ್ತಿರಲಿಲ್ಲವೋ, ಮತ್ತು ಬುದ್ಧಿಯಿಲ್ಲದಿದ್ದರೆ, ಆ ವರದಿಗಳ ಅರಿವು ನಮಗಾಗುತ್ತಿರಲಿಲ್ಲವೋ, ಹಾಗೆಯೇ ಚಕ್ರಗಳಿಲ್ಲದಿದ್ದರೆ ನಮಗೆ ಚೈತನ್ಯದ ಸಾಕ್ಷಾತ್ಕಾರವಾಗುತ್ತಿರಲಿಲ್ಲ. ಆದುದರಿಂದ, ಕುಂಡಲಿನಿ ಯೋಗದ ಮೂಲಕ ಚಕ್ರಗಳನ್ನು ಬಳಸಿಕೊಂಡು ಚೈತನ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಸಾಧಕನಿಗೆ ಆವಶ್ಯಕ.

ಮೇಲೆ ಹೇಳಿದ ಐದು ಚಕ್ರಗಳಲ್ಲಿ ಎಲ್ಲಕ್ಕಿಂತ ಕೆಳಗಿರುವುದು ಮೂಲಾಧಾರ ಚಕ್ರ. ಅಂದರೆ, ಬೆನ್ನು ಹುರಿಯ ಅತ್ಯಂತ ಕೆಳಭಾಗ ಅಥವಾ ಗುದದ ಹತ್ತಿರದ ಸ್ಥಳವೇ ಅದರ ಸ್ಥಾನ. ಆ ಚಕ್ರವನ್ನು, ಮಲಗಿರುವ ಹಾವಿನಂತೆ ಸುರುಳಿಯಾಕಾರದಲ್ಲಿ ಕುಂಡಲಿಯು ಸುತ್ತಿಕೊಂಡಿರುತ್ತದೆ. ಕುಂಡಲಿಯೇ ಶಕ್ತಿ, ಚಕ್ರದ ಕೇಂದ್ರವೇ ಚೈತನ್ಯ. ಇಲ್ಲಿರುವ ಚೈತನ್ಯಕ್ಕೆ ಆಚಾರಲಿಂಗವೆಂದು ಹೆಸರು. ಶಕ್ತಿಯು ಹಾವಿನಂತೆ ಕಾಣುವುದರಿಂದ, ಅದಕ್ಕೆ ಭುಜಂಗಿ ಶಕ್ತಿಯೆಂದೂ ಹೆಸರುಂಟು. ಸಾಧಕನು ಕುಂಡಲಿಯನ್ನು ಜಾಗೃತಗೊಳಿಸಿದಾಗ ಅದರ ಶಿರೋಭಾಗವು ಮೇಲ್ಮುಖವಾಗಿ, ಅದು ಮೊದಲು ಆಧಾರಚಕ್ರವನ್ನು ಭೇದಿಸುತ್ತದೆ. ಅದನ್ನೇ ನಾವು ವಚನಪರಿಭಾಷೆಯಲ್ಲಿ ಆಚಾರಲಿಂಗದ ಸಾಕ್ಷಾತ್ಕಾರವೆನ್ನುತ್ತೇವೆ. ಅನಂತರ ಕುಂಡಲಿನಿಯು ಆಧಾರದ ಮೇಲಿರುವ ಸ್ವಾಧಿಷ್ಠಾನ ಚಕ್ರವನ್ನು ಭೇದಿಸಿ ಅಲ್ಲಿರುವ ಗುರುಲಿಂಗವನ್ನೂ, ಅನಂತರ ಸ್ವಾಧಿಷ್ಟಾನದ ಮೇಲಿರುವ ಮಣಿಪೂರಕ ಚಕ್ರವನ್ನು ಭೇದಿಸಿ, ಅಲ್ಲಿರುವ ಶಿವಲಿಂಗವನ್ನೂ ಕೂಡುತ್ತದೆ. ಅನಂತರ ಅದು ಹೃದಯಸ್ಥಾನದಲ್ಲಿರುವ ಅನಾಹತ ಚಕ್ರವನ್ನು ಭೇದಿಸಿ ಅಲ್ಲಿರುವ ಜಂಗಮ ಲಿಂಗವನ್ನೂ ಕೂಡುತ್ತದೆ, ಅನಂತರ ಕಂಠಸ್ಥಾನದಲ್ಲಿರುವ ವಿಶುದ್ಧ ಚಕ್ರವನ್ನು ಭೇದಿಸಿ ಅಲ್ಲಿರುವ ಪ್ರಸಾದಲಿಂಗವನ್ನು ಕೂಡುತ್ತದೆ.

ತಲೆಯಲ್ಲಿ ಮತ್ತೆರಡು ಚಕ್ರಗಳಿವೆ. ಹುಬ್ಬಿನ ಮಧ್ಯದಲ್ಲಿರುವ ಚಕ್ರಕ್ಕೆ ಆಜ್ಞಾಚಕ್ರವೆಂದು ಹೆಸರು. ಸಾಧಕನು ಅನಂತರ ಕುಂಡಲಿಯನ್ನು ಇನ್ನೂ ಮೇಲಕ್ಕೆ ತಂದು ಆಜ್ಞಾಚಕ್ರವನ್ನು ಭೇದಿಸಿ, ಅಲ್ಲಿರುವ ಮಹಾಲಿಂಗವನ್ನು ಸಾಕ್ಷಾತ್ಕಾರಿಸಿಕೊಳ್ಳುತ್ತಾನೆ. ಕೊನೆಯಲ್ಲಿ, ನೆತ್ತಿಯಲ್ಲಿರುವ ಸಹಸ್ರಾರ ಚಕ್ರಕ್ಕೆ ಬಂದು ನೆಲೆಸಿದ ಕುಂಡಲಿನಿ ಶಕ್ತಿಯು ಅಲ್ಲಿರುವ ಶೂನ್ಯಲಿಂಗದಲ್ಲಿ ಐಕ್ಯವಾಗುತ್ತದೆ. ವಚನಪರಿಭಾಷೆಯಲ್ಲಿ ಇದಕ್ಕೆ ಲಿಂಗಾಂಗ ಸಾಮರಸ್ಯವೆಂದು ಹೆಸರು. ಶಾಕ್ತರ ಪ್ರಕಾರ ಕುಂಡಲಿನಿಯು ಶಿವನಲ್ಲಿ ಐಕ್ಯವಾಗುವುದೇ ಪರಮಧೇಯ, ವಚನಕಾರರ ಪ್ರಕಾರ, ಅಂಗನು (ಕುಂಡಲಿನಿ) ಶೂನ್ಯಲಿಂಗದಲ್ಲಿ ಐಕ್ಯವಾಗುವುದೇ ಅಂತಿಮ ಗುರಿ. ಹೀಗೆ ಧೈಯ ಒಂದೇ ಇದ್ದು, ಅದನ್ನು ವ್ಯಕ್ತಪಡಿಸುವ ಪರಿಭಾಷೆಯಷ್ಟೇ ಭಿನ್ನವಾಗಿದೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಕಾರ್ಯನಲ್ಲ ಕಾರಣನಲ್ಲ ಕೈಲಾಸ Next