Previous ಭಾವಪಿಂಡಜ್ಞಾನ ಐಕ್ಯಲೇಪಸ್ಥಲ ಮಲ, ಮಲತ್ರಯ Next

ಮಂತ್ರ

ಮಂತ್ರ

ಅಷ್ಟಾವರಣಗಳಲ್ಲಿ ಒಂದಾದ ಮಂತ್ರಕ್ಕೆ ಲಿಂಗಾಯತಧರ್ಮದಲ್ಲಿ ಒಂದು ವಿಶಿಷ್ಟಸ್ಥಾನವಿದೆ. ಇಲ್ಲಿ ಮಂತ್ರವೆಂದರೆ ಓಂ ಲಿಂಗಾಯ ನಮಃ ಎಂಬ ಆರಕ್ಷರದ ಮಂತ್ರವಾಗಬಹುದು. ಅಥವಾ ಲಿಂಗಾಯ ನಮಃ (ಅಥವಾ ಶಿವಾಯ ನಮಃ) ಎಂಬ ಐದಕ್ಷರದ ಮಂತ್ರವಾದರೂ ಆಗಬಹುದು. ಲಿಂಗದೀಕ್ಷಾ ಸಮಯದಲ್ಲಿ ಗುರುವು ಶಿಷ್ಯನ ಕಿವಿಯಲ್ಲಿ ಪಂಚಾಕ್ಷರಿ ಮಂತ್ರವನ್ನು ಉಸುರಿ, ಅದನ್ನು ತಪ್ಪದೆ ಉಚ್ಚರಿಸುವಂತೆ ಬೋಧಿಸುತ್ತಾನೆ.

ಮಂತ್ರವೆಂದರೆ ದೈವವನ್ನು ಮನಸ್ಸಿನಲ್ಲೆ (ಮನ್) ಇಟ್ಟುಕೊಳ್ಳುವ, ಅಥವಾ ಮನನ ಮಾಡಿಕೊಳ್ಳುವ ಒಂದು ತಂತ್ರ, ಲಿಂಗಪೂಜಾ ಸಮಯದಲ್ಲಷ್ಟೇ ಅಲ್ಲ, ಯಾವಾಗಲೂ ಪರಶಿವನನ್ನು ನೆನೆಯಬೇಕು ಎಂಬ ಉಪದೇಶ ಮಂತ್ರ ಸಿದ್ಧಾಂತದಲ್ಲಿ ಅಡಗಿದೆ. ಲಿಂಗವನ್ನು ಯಾವಾಗಲೂ ಪೂಜಿಸಲು ಸಾಧ್ಯವಿಲ್ಲವೆಂದ ಮೇಲೆ, ಕೊನೆಗೆ ನೆನೆಯಲಿಕ್ಕಾದರೂ ಸಾಧ್ಯಮಾಡಿಕೊಳ್ಳಬೇಕು. ಹಾಗೆ ನೆನೆಯಲು ಸಾಧ್ಯವಾಗುವುದು ಮಂತ್ರದ ಮೂಲಕ. ಆದರೆ ಮಂತ್ರವನ್ನು ಯಾಂತ್ರಿಕವಾಗಿ ಉಚ್ಚರಿಸದೆ, ಮನಃ ಪೂರ್ವಕವಾಗಿ ಉಚ್ಚರಿಸಬೇಕು. ಹೀಗೆ ಪರಶಿವನನ್ನು ಯಾವಾಗಲೂ ನೆನೆಯುವುದರಿಂದ ಎರಡು ಫಲಗಳುಂಟಾಗುತ್ತವೆ.

೧. ಯಾವಾಗಲೂ ಪರಶಿವನನ್ನು ಮಂತ್ರದ ಮೂಲಕ ನೆನೆಯುವವನು ಅಧಾರ್ಮಿಕ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ನಿರತನಾಗಿರುವುದಿಲ್ಲ, ಅಥವಾ ಆದಷ್ಟೂ ಅವುಗಳನ್ನು ದೂರ ಮಾಡಲಿಚ್ಛಿಸುತ್ತಾನೆ. ಅಂತೂ ಇದರಿಂದ ಆದಷ್ಟೂ ಶುದ್ಧನಾಗಲು ಪ್ರಯತ್ನಿಸುತ್ತಾನೆ.

೨. ಯಾವಾಗಲೂ ಶಿವನನ್ನು ನೆನೆದು, ತಾನು ಮಾಡುವುದೆಲ್ಲವೂ ಶಿವಾರ್ಪಿತವೆಂದು ಬಗೆದು, ಭಕ್ತನು ಪ್ರಾಣಲಿಂಗಿಯಾಗುತ್ತಾನೆ. ಹಾಗೂ ಅಂಥ ಮನಶುದ್ಧಿಯನ್ನು ಸಾಧಿಸಿದವನಿಗೆ ಅನುಭಾವದ ಮೂಲಕ ಲಿಂಗೈಕ್ಯ ಸಾಧ್ಯವಾಗುತ್ತದೆ.

ಕೆಲವು ವಚನಕಾರರ ಪ್ರಕಾರ, ಲಿಂಗಾಯ ನಮಃ ಎಂಬ ಅಕ್ಷರಗಳು ಪರಶಿವನಿಂದಲೇ ಉದ್ಭವಿಸುತ್ತವೆ ಹಾಗೂ ಪಂಚಭೂತಗಳು ಈ ಅಕ್ಷರಗಳಿಂದ ಉದ್ಭವಿಸುತ್ತವೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಭಾವಪಿಂಡಜ್ಞಾನ ಐಕ್ಯಲೇಪಸ್ಥಲ ಮಲ, ಮಲತ್ರಯ Next