Previous ಮಾಯೆ ಮೂವತ್ತಾರು ತತ್ವಗಳು Next

ಮಿಶ್ರಷಡುಸ್ಥಲ, ಮಿಶ್ರಲಿಂಗಾರ್ಪಣ

ಮಿಶ್ರಷಡುಸ್ಥಲ, ಮಿಶ್ರಲಿಂಗಾರ್ಪಣ

ಪ್ರತಿಯೊಂದು ಸ್ಥಲದಲ್ಲಿಯೂ ಉಳಿದ ಐದೂ ಸ್ಥಲಗಳನ್ನು ಆಚರಿಸುವುದೇ ಮಿಶ್ರ ಪಡುಸ್ಥಲ, ಪ್ರತಿ ಸ್ಥಲದ ಸಾಧಕನು ತನ್ನ ಸ್ಥಲದ ಲಿಂಗವನ್ನಷ್ಟೇ ಅಲ್ಲ, ಉಳಿದ ಐದು ಸ್ಥಲಗಳ ಲಿಂಗಗಳನ್ನೂ ಆರಾಧಿಸಿ, ಅವುಗಳಿಗೆ ಯೋಗ್ಯ ಅರ್ಪಣೆ ಮಾಡುವುದೇ ಮಿಶ್ರ ಲಿಂಗಾರ್ಪಣೆ, ಮಿಶ್ರಷಡುಸ್ಥಲಾಚರಣೆ ಮತ್ತು ಮಿಶ್ರಲಿಂಗಾರ್ಪಣೆ ಪರಸ್ಪರ ಸಂಬಂಧವುಳ್ಳ ಆಚರಣೆಗಳು, ಅವುಗಳನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು;

ಭಕ್ತನ ಆಚಾರಲಿಂಗ ಭೋಜ್ಯವನ್ನೂ, ಭಕ್ತನ ಮಹೇಶನ ಗುರುಲಿಂಗಕ್ಕೆ ಪಾನೀಯವನ್ನೂ, ಭಕ್ತನ ಪ್ರಸಾದಿಯ ಶಿವಲಿಂಗಕ್ಕೆ ಭಕ್ಷವನ್ನೂ, ಭಕ್ತನ ಪ್ರಾಣಲಿಂಗಿಯ ಜಂಗಮಲಿಂಗಕ್ಕೆ ಚೋಹ್ಯವನ್ನೂ, ಭಕ್ತನ ಶರಣನ ಪ್ರಸಾದ ಲಿಂಗಕ್ಕೆ ಲೇಹ್ಯವನ್ನೂ ಸಮರ್ಪಿಸಬೇಕು. ಆದರೆ ಭಕ್ತನು ಐಕ್ಯನ ಮಹಾಲಿಂಗಕ್ಕೆ ಮೇಲೆ ಹೇಳಿದ ಐದು ಪದಾರ್ಥಗಳನ್ನೂ ಸಮರ್ಪಿಸಿ, ತಾನು ತೃಪ್ತಿ ಎಂಬ ಪ್ರಸಾದವನ್ನು ಭೋಗಿಸುತ್ತಾನೆ. ಇದು ಸ್ಥೂಲ ದೇಹದ ಭಾಗಗಳಾದ ಕೈಗಳಿಂದ ಮಾಡುವ ಅರ್ಪಣೆಯಾದುದರಿಂದ ಇದು ಕಾಯಾರ್ಪಣವೆನಿಸಿಕೊಳ್ಳುತ್ತದೆ. (೧೩:೧೮೩೪)

ಭಕ್ತಸ್ಥಲದ ಸಾಧಕನ ಆತ್ಮನಿಗೆ ಪೃಥ್ವಿ ಎಂಬ ದೇಹವಿದೆ. ಆ ಭಕ್ತನು ಸುಚಿತ್ತವೆಂಬ ಹಸ್ತದಲ್ಲಿ ತನ್ನಲ್ಲಿರುವ ಆಚಾರಲಿಂಗದ ಘ್ರಾಣೇಂದ್ರಿಯವೆಂಬ ಮುಖಕ್ಕೆ ಬೇರು ಗೆಣಸು ಮೊದಲಾದ ಗಂಧ ದ್ರವ್ಯಗಳನ್ನು ಸಮರ್ಪಿಸಿ, ತೃಪ್ತಿಯೆಂಬ ಪ್ರಸಾದವನ್ನು ಭೋಗಿಸುತ್ತಾನೆ. ಇಲ್ಲಿ ಭಕ್ತನು ಕಣ್ಣಿಗೆ ಕಾಣದ ಸುಚಿತ್ತವೆಂಬ ಕರಣದ ಮೂಲಕ ಅರ್ಪಣೆ ಮಾಡುವುದರಿಂದ, ಅವನ ಅರ್ಪಣೆಯು ಕರಣಾರ್ಪಣವೆನಿಸಿಕೊಳ್ಳುತ್ತದೆ (೧೩:೧೮೩೫).

ಅದೇ ರೀತಿ ಭಕ್ತನಲ್ಲಿರುವ ಪ್ರಸಾದಿಗೆ ಪೃಥ್ವಿ ತತ್ವದಲ್ಲಿರುವ ಅಗ್ನಿಯೇ ದೇಹ. ಭಕ್ತನು ಸುಚಿತ್ತದಲ್ಲಿರುವ ನಿರಹಂಕಾರ ಎಂಬ ಹಸ್ತದಿಂದ, ಆಚಾರ ಲಿಂಗದಲ್ಲಿರುವ ಶಿವಲಿಂಗಕ್ಕೆ ಚಿಗುರು, ಪತ್ರೆ, ಮುಂತಾದವುಗಳಲ್ಲಿರುವ ಸುಗಂಧವನ್ನು ಅರ್ಪಿಸಿ, ತೃಪ್ತಿ ಎಂಬ ಪ್ರಸಾದವನ್ನು ಪಡೆಯುತ್ತಾನೆ; ಭಕ್ತನಲ್ಲಿಯ ಪ್ರಾಣಲಿಂಗಿಗೆ ಪೃಥ್ವಿ ತತ್ವದಲ್ಲಿರುವ ವಾಯುವೇ ದೇಹ; ಅದರ ಸುಚಿತ್ತದಲ್ಲಿರುವ ಸುಮನವೆಂಬ ಹಸ್ತದಿಂದ, ಆಚಾರಲಿಂಗದಲ್ಲಿರುವ ಜಂಗಮಲಿಂಗಕ್ಕೆ, ಮೊಗ್ಗು ಮುಂತಾದ ವಸ್ತುಗಳಲ್ಲಿರುವ ಸುಗಂಧವನ್ನು ಅರ್ಪಿಸಿ, ತೃಪ್ತಿ ಎಂಬ ಪ್ರಸಾದವನ್ನು ಪಡೆಯುತ್ತಾನೆ; ಹಾಗೆಯೇ ಭಕ್ತನಲ್ಲಿಯ ಶರಣನಿಗೆ ಆಕಾಶವೇ ಅಂಗ, ಆ ಅಂಗದಲ್ಲಿ ಸುಚಿತ್ತದಲ್ಲಿರುವ ಸುಜ್ಞಾನವೆಂಬ ಹಸ್ತವಿದೆ. ಭಕ್ತನು ಆ ಹಸ್ತದಿಂದ ಆಚಾರಲಿಂಗದಲ್ಲಿರುವ ಪ್ರಸಾದ ಲಿಂಗಕ್ಕೆ ಕಾಯಿ ಮೊದಲಾದ ವಸ್ತುಗಳಿರುವ ಗಂಧವನ್ನು ಅರ್ಪಿಸಿ, ತೃಪ್ತಿಯೆಂಬ ಪ್ರಸಾದ ಪಡೆಯುತ್ತಾನೆ. ಕೊನೆಯದಾಗಿ ಭಕ್ತನಲ್ಲಿಯ ಐಕ್ಯನಿಗೆ ಪೃಥ್ವಿಯಲ್ಲಿರುವ ಆತ್ಮನೇ ಅಂಗ ಅದಕ್ಕೆ ಸುಚಿತ್ತದಲ್ಲಿರುವ ಭಾವವೇ ಹಸ್ತ, ಭಕ್ತನು ಆಚಾರ ಲಿಂಗದಲ್ಲಿರುವ ಮಹಾಲಿಂಗಕ್ಕೆ ಭಾವವೆಂಬ ಹಸ್ತದಿಂದ ಎಲ್ಲ ಸುಗಂಧ ದ್ರವ್ಯವನ್ನು ಅರ್ಪಿಸಿ, ತೃಪ್ತಿಯೆಂಬ ಪ್ರಸಾದವನ್ನು ಭೋಗಿಸುತ್ತಾನೆ.

ಅದೇ ರೀತಿ ಮಹೇಶನಲ್ಲಿ ಉಳಿದ ಐದು ಸ್ಥಲಗಳೂ, ಗುರು ಲಿಂಗವಲ್ಲದೇ ಅದರಲ್ಲಿ ಉಳಿದ ಐದು ಲಿಂಗಗಳೂ ಇದ್ದು, ತನ್ನ ಹಸ್ತವಾದ ಸುಬುದ್ಧಿಯಿಂದ ಹಾಗೂ ಅದರೊಳಗಿರುವ ಸುಚಿತ್ತ, ಸುಮನ, ಇತ್ಯಾದಿ ಹಸ್ತಗಳಿಂದ, ಗುರುಲಿಂಗಕ್ಕೂ, ಅದರೊಳಗಿರುವ ಐದು ಲಿಂಗಗಳಿಗೂ ಒಗರು ಮಧುರ ಮುಂತಾದ ರುಚಿಗಳನ್ನು ಸಾಧಕನು ಅರ್ಪಿಸಿ, ತೃಪ್ತಿಯೆಂಬ ಪ್ರಸಾದವನ್ನು ಪಡೆಯುತ್ತಾನೆ. ಈ ಮಾತು ಉಳಿದ ಸ್ಥಲಗಳಿಗೂ ಅನ್ವಯಿಸುತ್ತದೆ. (೧೩:೧೮೩೫-೧೮೭೦)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಮಾಯೆ ಮೂವತ್ತಾರು ತತ್ವಗಳು Next