Previous ಪಂಚಕೋಶ ಪಂಚಪಾತಕ (ಪಂಚಮಹಾಪಾತಕ) Next

ಪಂಚಜ್ಞಾನ

ಪಂಚಜ್ಞಾನ

ಜೈನ ದರ್ಶನದ ಪ್ರಕಾರ, ನಮ್ಮ ಜ್ಞಾನವು ಐದು ರೀತಿಯದಾಗಿರುತ್ತದೆ. ಈ ಐದು ರೀತಿಗಳೆಂದರೆ ; ಮತಿಜ್ಞಾನ, ಶ್ರುತ ಜ್ಞಾನ, ಅವಧಿ ಜ್ಞಾನ, ಮನಕಃ ಪರ್ಯಾಯ ಜ್ಞಾನ ಮತ್ತು ಕೇವಲ ಜ್ಞಾನ, ಮತಿ ಜ್ಞಾನವೆಂದರೆ ಮನಸ್ಸು (ಮತಿ) ಮತ್ತು ಇಂದ್ರಿಯಗಳ ಮೂಲಕ ಪಡೆದ ಜ್ಞಾನ. ಜ್ಞಾನ ಪಡೆಯುವುದು ಮತಿ, ಆದರೆ ಅದು ಇಂದ್ರಿಯಗಳನ್ನು ಉಪಯೋಗಿಸಿಕೊಂಡು ಜ್ಞಾನವನ್ನು ಪಡೆಯುತ್ತದೆ.

ಶ್ರುತ ಜ್ಞಾನವೆಂದರೆ ಶ್ರುತಿಗಳ (ಧರ್ಮಗ್ರಂಥಗಳ) ಮೂಲಕ ಪಡೆದ ಜ್ಞಾನ. ಶ್ರುತಿಜ್ಞಾನವನ್ನು ಧರ್ಮಗ್ರಂಥಗಳನ್ನು ಓದುವ ಮೂಲಕ ಅಥವಾ ಗುರುಗಳ ಪ್ರವಚನದ ಮೂಲಕ ಪಡೆಯಬಹುದು.

ಅವಧಿ ಜ್ಞಾನವೆಂದರೆ ಆತ್ಮವು ಇಂದ್ರಿಯಗಳ ಸಹಾಯವಿಲ್ಲದೆಯೇ ಪಡೆಯುವ ಜ್ಞಾನ (ಅತೀಂದ್ರಿಯ ಜ್ಞಾನ).

ಮನಃ ಪರ್ಯಾಯ ಜ್ಞಾನವೆಂದರೆ ಬೇರೆಯವರ ಮನಸ್ಸಿನಲ್ಲಿರುವುದನ್ನು ತಿಳಿದುಕೊಳ್ಳುವುದು. ಕೇವಲ ಜ್ಞಾನವೆಂದರೆ ಸರ್ವಜ್ಞತ್ವ, ತ್ರಿಕಾಲ ಜ್ಞಾನ, ದೂರಶ್ರವಣ, ದೂರದರ್ಶನ, ಮುಂತಾದವೆಲ್ಲ ಇದರಲ್ಲಿ ಸೇರುತ್ತವೆ. ಕೊನೆಯ ಮೂರು ರೀತಿಯ ಜ್ಞಾನವನ್ನು ಪಡೆಯಲು ನಮ್ಮ ಚಾರಿತ್ರ್ಯ ಉತ್ತಮ ಮಟ್ಟದ್ದಿರಬೇಕು ಹಾಗೂ ನಾವು ಸಾಕಷ್ಟು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಿರಬೇಕು.

ಶರಣರು ಈ ಐದು ರೀತಿಯ ಜ್ಞಾನದ ಬಗ್ಗೆ ಬೇರೆ ರೀತಿಯಲ್ಲಿ ಚಿಂತಿಸಿದ್ದಾರೆ. ಅವರ ಪ್ರಕಾರ, ಮತಿ ಜ್ಞಾನವುಳ್ಳಾತ ಭಕ್ತ, ಶ್ರುತಜ್ಞಾನವುಳ್ಳಾತ ಮಹೇಶ, ಮನಪರಿಪೂರ್ಣ (ಮನಃಪರ್ಯಾಯ) ಜ್ಞಾನ ಉಳ್ಳಾತನೆ ಪ್ರಸಾದಿ, ಅವಧಿ ಜ್ಞಾನ ಉಳ್ಳಾತನೇ ಪ್ರಾಣಲಿಂಗಿ, ಕೇವಲ ಜ್ಞಾನ ಉಳ್ಳಾತನೆ, ಶರಣ. ಈ ಐದು ಜ್ಞಾನಗಳಿಗೆ ಮೂಲವಾದುದು ಜ್ಯೋತಿರ್ಜ್ಞಾನ (ಶಿವಜ್ಞಾನ).

ಶರಣರು ಹೀಗೆ ಹೇಳುವ ಉದ್ದೇಶ ವಿವಿಧ ಹಂತದ ಸಾಧಕನಿಗೆ ಬೇರೆ ಬೇರೆ ರೀತಿಯ ಜ್ಞಾನವುಂಟಾಗುತ್ತದೆ ಎಂದು ಹೇಳುವುದಲ್ಲ. ಪ್ರಾಯಶಃ ಅವರ ಉದ್ದೇಶ ಜೈನರ ಜ್ಞಾನವರ್ಗಿಕರಣವನ್ನೂ ಪಂಚಸ್ಥಲಕ್ಕೂ ಅನ್ವಯಿಸಬಹುದು ಎಂದು ಹೇಳುವುದಿದ್ದಿರಬಹುದು. (೩:೧೬೩೮)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಪಂಚಕೋಶ ಪಂಚಪಾತಕ (ಪಂಚಮಹಾಪಾತಕ) Next