Previous ಪಂಚಭೂತಗಳ ಪರಿಣಾಮಗಳು ಪಂಚೀಕರಣ(ಪಂಚೀಕೃತಿ) Next

ಪಂಚಾಚಾರ

ಪಂಚಾಚಾರ

ವಚನಕಾರರ ಪ್ರಕಾರ, ನಮ್ಮ ದೇಹೇಂದ್ರಿಯಾದಿಗಳೂ, ಪ್ರಪಂಚದ ಸಕಲ ವಸ್ತುಗಳೂ ಪರಶಿವನು ಕೊಟ್ಟ ಸಾಲ ಅಥವಾ ಅವನ ಪ್ರಸಾದ. ಇದಕ್ಕಾಗಿ ನಾವು ಪರಶಿವನಿಗೆ ಋಣಿಯಾಗಿರಬೇಕೆಂದರೆ, ಅವನಿಗೆ ಭಕ್ತಿ ತೋರಿಸಬೇಕು. ಈ ಭಕ್ತಿಯು ಐದು ರೀತಿಯ ಕ್ರಿಯೆ (ಪಂಚಾಚಾರ) ಗಳನ್ನೊಳಗೊಳ್ಳುತ್ತದೆ. ಈ ಕ್ರಿಯೆಗಳೆಂದರೆ, ಇಷ್ಟ ಲಿಂಗಪೂಜೆ, ವಿಭೂತಿ ಮತ್ತು ರುದ್ರಾಕ್ಷಿಧಾರಣೆ, ಮಂತ್ರಪಠನೆ, ಇಷ್ಟೇ ಅಲ್ಲ ಎಂಬುದು ಗಮನಾರ್ಹ, ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರ ಎಂಬ ಈ ಐದು ರೀತಿಯ ಕ್ರಿಯೆಗಳೇ ಪಂಚಾಚಾರಗಳು.

ಲಿಂಗಾಚಾರವೆಂದರೆ, ಇಷ್ಟಲಿಂಗ ಪೂಜೆಯಲ್ಲಿ ತೋರುವ ನಿಷ್ಠೆಯೊಂದೇ ಅಲ್ಲ, ಪರದೈವಪೂಜೆ ಮಾಡೆ ಎಂಬ ಪ್ರತಿಜ್ಞೆಯೂ ಸೇರುತ್ತದೆ. ಮುಖ್ಯವಾಗಿ, ಭಕ್ತನು ತಾನು ಮಾಡುವುದೆಲ್ಲವೂ ಲಿಂಗಕ್ಕಾಗಿಯೇ ಎಂಬ ಧ್ಯೇಯ ಉಳ್ಳವನಾಗಿರಬೇಕು.

ಸದಾಚಾರವು ವಚನಕಾರರ ನೀತಿಶಾಸ್ತ್ರವನ್ನೊಳಗೊಳ್ಳುತ್ತದೆ. ಭಕ್ತನು ಸದಾಚಾರವನ್ನೂ ಆಚರಿಸಿದರಷ್ಟೇ ಲಿಂಗಾಚಾರಕ್ಕೆ ಅರ್ಥ ಬರುತ್ತದೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಪರಸತಿಯ ಬಯಸಬೇಡ, ಮುಂತಾದ ನಿಷಿದ್ದಗಳೂ, ದಯತೋರಿಸು, ಸತ್ಯ ಹೇಳು, ನಡೆದಂತೆ ನುಡಿ ಮುಂತಾದ ವಿಧಿಗಳೂ ಲಿಂಗಾಚಾರಕ್ಕೆ ನೈತಿಕ ಜೀವನವೂ ಪೂರಕ ಎಂಬುದನ್ನು ಸಾರುತ್ತವೆ. ಪ್ರತಿಯೊಂದು ಜೀವಿಯೂ ಶಿವನ ಸೃಷ್ಟಿ ಎಂದ ಮೇಲೆ, ಇಷ್ಟಲಿಂಗ ಪೂಜೆಮಾಡಿ, ಹಿಂಸೆಯಲ್ಲಿ ನಿರತನಾದರೆ, ಸದಾಚಾರವೂ ಇಲ್ಲ, ಲಿಂಗಾಚಾರವೂ ಇಲ್ಲ. ನಮ್ಮ ದುಡಿಮೆ ಸಹ ಅನೈತಿಕವಾಗಿರಬಾರದು, ದುರಾಸೆಯಿಂದ ಕೂಡಿರಬಾರದು. ಹೀಗೆ ಸದಾಚಾರದ ಮೂಲಕ ಮಾತ್ರ ಆತ್ಮ ಶುದ್ದವಾಗಬಲ್ಲುದು. ಶುದ್ಧ ಆತ್ಮ ಮಾತ್ರ ಸಾಮರಸ್ಯಗಳಿಸಿಕೊಳ್ಳಬಲ್ಲುದು.

ಶಿವಾಚರವೆಂದರೆ, ಶಿವಭಕ್ತರನ್ನು ಸಮಾನವಾಗಿ ಕಾಣುವುದು. ಶಿವಭಕ್ತರನ್ನು ಅವರವರ ಕಸಬುಗಳ ಆಧಾರದ ಮೇಲೆ ಮೇಲು ಕೀಳೆಂದು ಪರಿಗಣಿಸಬಾರದು. ಅಂಗದ ಮೇಲೆ ಲಿಂಗವಿದ್ದರೆಲ್ಲ ಶಿವಭಕ್ತರೇ. ಬ್ರಾಹ್ಮಣ ಮೇಲಲ್ಲ, ಮಾದಿಗ ಕೀಳಲ್ಲ. ಆದರೆ ಲಿಂಗೀ ಬ್ರಾಹ್ಮಣನಾದರೂ ಹೊಲಸು ತಿಂದರೆ ಹೊಲೆಯನಾಗುತ್ತಾನೆ. ಮಾದಾರ ಚೆನ್ನಯ್ಯ ತನ್ನ ಶಿವಭಕ್ತಿಯ ಹಿರಿಮೆಯ ಮೂಲಕ ಬ್ರಾಹ್ಮಣನಿಗಿಂತ ಶ್ರೇಷ್ಠನಾಗಿ, ಬಸವಣ್ಣನವರಿಂದ ಪೂಜಿಸಲ್ಪಡುತ್ತಾನೆ.

ಗಣಾಚಾರವು ಒಬ್ಬ ಶಿವಭಕ್ತನು ಉಳಿದ ಶಿವಭಕ್ತರ ನೆರವಿಗೆ ನಿಲ್ಲಬೇಕೆಂದು ಸಾರುವ ಒಂದು ಸಾಮಾಜಿಕ ಕ್ರಿಯೆ. ಶಿವನಿಂದ, ಜಂಗಮನಿಂದೆ, ಶಿವಭಕ್ತರ ನಿಂದೆ, ಇವುಗಳನ್ನು ಭಕ್ತರು ತಡೆಯಬೇಕು. ಇದರ ಅರ್ಥವಿಷ್ಟೇ, ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗುವ
ಯಾವುದೇ ಘಟನೆಯನ್ನು ನಾವು ಹೇಗಾದರೂ ದೂರ ಮಾಡಬೇಕು.

ಭೃತ್ಯಾಚಾರ ನಾವು ವಿನಯಶೀಲರಾಗಿರಬೇಕು ಹಾಗೂ ಸಮಾಜ ಮತ್ತು ಶಿವಭಕ್ತರ ದಾಸರಾಗಿರಬೇಕು ಎಂದು ಹೇಳುತ್ತದೆ. ಬಸವಣ್ಣನವರು ಪ್ರಧಾನಿಯಾಗಿದ್ದರೂ, ಶಿವಭಕ್ತರನ್ನು ಗೌರವಿಸುತ್ತಿದ್ದರು. ಉಳಿದ ಶಿವಭಕ್ತರಿಂದ ನಾವು ಆಧ್ಯಾತ್ಮಿಕ ಪಾಠಗಳನ್ನು ಕಲಿಯಬೇಕಾದರೆ, ನಾವು ಅಹಂಕಾರಪಟ್ಟುಕೊಳ್ಳದೆ ಭೃತ್ಯಾಚಾರ ಮಾಡಿದರೆ ಪ್ರಯೋಜನಕಾರಿ. ಎನಗಿಂತ ಕಿರಿಯರಿಲ್ಲ ಎಂಬ ಬಸವಣ್ಣನವರ ವಚನ ಭೃತ್ಯಾಚಾರಕ್ಕೆ ಒಳ್ಳೆಯ ನಿದರ್ಶನ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಪಂಚಭೂತಗಳ ಪರಿಣಾಮಗಳು ಪಂಚೀಕರಣ(ಪಂಚೀಕೃತಿ) Next