Previous ಪಂಚೀಕರಣ(ಪಂಚೀಕೃತಿ) ಪೂಜಾರಿಗಳು Next

ಪಿಂಡತ್ರಯ

ಪಿಂಡತ್ರಯ

ಪಿಂಡವೆಂದರೆ ಮಾನವ ದೇಹವೆಂಬ ಸ್ಥೂಲ ಅರ್ಥವಿದ್ದರೂ, ಆ ಪದ ದೇಹಕ್ಕೂ ಅಲ್ಲದೆ ದೇಹದಲ್ಲಿರುವ ಕರಣಾದಿಗಳೆಲ್ಲಕ್ಕೂ ಅನ್ವಯಿಸುತ್ತದೆ. ಬ್ರಹ್ಮಾಂಡವೆಂದರೆ ಜಗತ್ತು ಮತ್ತು ಅದನ್ನೊಳಗೊಂಡಿರುವ ಮತ್ತು ಅದರೊಳಗಿರುವ ಪರಶಿವನಿಗೆ ಹೇಗೆ ಅನ್ವಯಿಸುತ್ತದೆಯೋ ಹಾಗೆ ಪಿಂಡಾಂಡ (ಅಥವಾ ಪಿಂಡ) ಎಂಬ ಶಬ್ದವು ದೇಹೇಂದ್ರಿಯಾದಿಗಳಿಗೂ ಅಲ್ಲದೆ, ಅವುಗಳಲ್ಲಿರುವ ಆತ್ಮಕ್ಕೂ ಅನ್ವಯಿಸುತ್ತದೆ.

ಪಿಂಡವು ಆದಿಪಿಂಡ, ಮಧ್ಯಪಿಂಡ ಮತ್ತು ಅನಾದಿ ಪಿಂಡವೆಂದು ಮೂರು ವಿಧವಾಗಿದೆ.

ಆದಿಪಿಂಡಕ್ಕೆ ಜೀವ ಪಿಂಡವೆಂಬ ಮತ್ತೊಂದು ಹೆಸರಿದೆ. ಅದು ಹುಟ್ಟು (ಆದಿ) ಇತ್ಯಾದಿಗಳಿಗೆ ಬದ್ದವಾಗಿರುವುದರಿಂದ ಅದಕ್ಕೆ ಆ ಹೆಸರು ಅನ್ವಯವಾಗುತ್ತದೆ. ಆದಿಪಿಂಡವೆಂದರೂ ಒಂದೇ, ಅಷ್ಟತನುವೆಂದೂ ಒಂದೇ. ಅಷ್ಟಕಗಳಾದ ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ, ಸೂರ್ಯ, ಚಂದ್ರ ಮತ್ತು ಆತ್ಮ ಪರಶಿವನಿಂದ ಹುಟ್ಟಿ ಅವುಗಳಿಂದ ಜೀವ ಪಿಂಡವಾಗುವುದರಿಂದಲೂ ಅದಕ್ಕೆ ಆದಿಪಿಂಡವೆಂಬ ಹೆಸರು ಬಂದಿರಬಹುದು. ಅಂತೂ ಆದಿಪಿಂಡವು ನಾನಾರೀತಿಯ ಕರ್ಮಗಳನ್ನು ಮಾಡಿ ಭವಾಂತರಗಳಲ್ಲಿ ಸುಖದು:ಖಗಳನ್ನು ಅನುಭವಿಸುತ್ತಾ, ಕೊನೆಗೆ ಶಿವಕೃಪೆಯಿಂದ ಮೋಕ್ಷ ಪಡೆಯುತ್ತದೆ.

ಶಿವನ ಚಿದಂಶವೇ ಅವನ ಆಜ್ಞೆಯ ಮೇರೆಗೆ ಜಗದೋದ್ಧಾರ ಮಾಡಲು ಮರ್ತ್ಯಲೋಕದಲ್ಲಿ ಹುಟ್ಟಿ, ಶರೀರಸಂಬಂಧಿಯಾಗಿದ್ದರೂ, ಶರೀರದ ಅವಗುಣಗಳನ್ನು ಹೊದ್ದದೆ, ಕೇವಲ ನಿಷ್ಕಾಮಕರ್ಮ ಮಾಡುತ್ತಾ ತಮ್ಮ ಪಂಚಭೂತದ ಕಾಯವನ್ನು ಪ್ರಸಾದಕಾಯವನ್ನು ಮಾಡಿಕೊಂಡವರೇ, ಸುಜ್ಞಾನ ಪಿಂಡ. ಬಸವಾದಿ ಪ್ರಮಥರು ಧರಿಸಿದ ಶರೀರವೆಲ್ಲಾ ಸುಜ್ಞಾನ ಪಿಂಡ.

ತಾವೂ ಮತ್ತು ಶಿವ ಬೇರೆ ಬೇರೆ ಅಲ್ಲವೆಂದೂ, ತಾವು ಶಿವನ ಅಂಗವೆಂದೂ, ಶಿವ ತಮ್ಮ ಮೂಲಕ ಅನುಭವಿಸುತ್ತಾನೆಂದೂ, ತಿಳಿದುಕೊಂಡಿರುವವರ ಶರೀರ ಚಿಪ್ಪಿಂಡ ಅಥವಾ ಅನಾದಿ ಪಿಂಡ. ತಾವು ಅನಾದಿಕಾಲದಿಂದಲೂ ಶಿವನಲ್ಲಿಯೇ, ಶಿವನ ಅಂಗವಾಗಿಯೇ ಇದ್ದೇವೆಂದು ತಿಳಿದುಕೊಂಡಿರುವುದರಿಂದ, ಮತ್ತು ಅವರು ತಮ್ಮ ಅವಗುಣಗಳನ್ನೆಲ್ಲಾ ಕಾಯದ ಕಳೆದುಕೊಂಡು ಶಿವನ ಕಾಯವನ್ನಾಗಿಮಾಡಿಕೊಂಡಿರುವುದರಿಂದ ಅದು ಚಿತ್ಪಿಂಡ ಎನಿಸಿಕೊಳ್ಳುತ್ತದೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಪಂಚೀಕರಣ(ಪಂಚೀಕೃತಿ) ಪೂಜಾರಿಗಳು Next