Previous ಪೂಜಾರಿಗಳು ಪ್ರಸಾದ ಪ್ರಭೇದ Next

ಪ್ರಸಾದ

ಪ್ರಸಾದ

ಈ ಪದಕ್ಕೆ ಹಲವು ಪದರುಗಳಿರುವ ಅರ್ಥವಿದೆ. ಸಾಧಕನ ಸಾಧನೆ ವಿಕಾಸವಾದಂತೆಲ್ಲಾ ಈ ಪದದ ಅರ್ಥವೂ ವಿಕಾಸವಾಗುತ್ತಾ ಹೋಗುತ್ತದೆ.

ಸಾಧಕನ ಆಧ್ಯಾತ್ಮಿಕ ಜೀವನದ ಪ್ರಾರಂಭದಲ್ಲಿ (ಉದಾಹರಣೆಗೆ ಭಕ್ತಸ್ಥಲದಲ್ಲಿ) ಪ್ರಸಾದವೆಂದರೆ ಶುದ್ಧ ಆಹಾರ ಎಂದಾಗುತ್ತದೆ. ಇದನ್ನು ಸೇವಿಸಿದವನು ಶುದ್ಧನಾಗುತ್ತಾನೆ ಎಂಬ ನಂಬಿಕೆಯೇ ಪ್ರಸಾದ ಪರಿಕಲ್ಪನೆಯ ತಳಹದಿ.

ಭಕ್ತನು ಅರ್ಪಿಸುವ ಪದಾರ್ಥವು ಶುದ್ದವಲ್ಲ, ಅರ್ಪಿಸುವ ಭಕ್ತನೂ ಶುದ್ಧನಲ್ಲ. ಆದರೆ ಅರ್ಪಿತವಾದ ಪದಾರ್ಥ ಗುರುಲಿಂಗಜಂಗಮರ ಸಂಪರ್ಕಕ್ಕೆ ಬಂದನಂತರ, ಅಂದರೆ ನೈವೇದ್ಯವಾದನಂತರ, ಅದು ಶುದ್ಧವಾಗುತ್ತದೆ; ಅದನ್ನು ಸೇವಿಸಿದ ಭಕ್ತ ಶುದ್ಧನಾಗುತ್ತಾನೆ. ಗುರುಲಿಂಗ ಜಂಗಮರು ಉಳಿದ ಎಲ್ಲಕ್ಕಿಂತ, ಎಲ್ಲರಿಗಿಂತ ಹೆಚ್ಚು ಪವಿತ್ರರಾದುದರಿಂದ, ಅವರನ್ನು ಪ್ರಸನ್ನಗೊಳಿಸಲು, ಆದಷ್ಟೂ ಉತ್ತಮ ಪದಾರ್ಥಗಳನ್ನೇ ಭಕ್ತನು ಅರ್ಪಿಸುತ್ತಾನೆ. ಹಬ್ಬ ಹುಣ್ಣಿಮೆಗಳಂಥ ವಿಶೇಷ ಸಂದರ್ಭದಲ್ಲಿ ವಿಶೇಷ ಭಕ್ಷ್ಯಗಳನ್ನು ಭಕ್ತನು ಅರ್ಪಿಸುವುದು ವಾಡಿಕೆ. ಆರ್ಪಿಸಿದ ವಸ್ತು ಯಾವುದೇ ಇರಲಿ ಭಕ್ತನು ಅದನ್ನು ಅರ್ಪಿಸಿ ಪ್ರಸಾದವನ್ನಲ್ಲದೆ ಅವನು ಮತ್ತೇನನ್ನು ಭುಂಜಿಸಬಾರದು, ಎಂಬುದು ಶರಣರ ವಿಧಿ.

ಪ್ರಸಾದ ಸ್ವೀಕರಣೆಯ ಹಿಂದೆ ಒಂದು ಗಮನಾರ್ಹ ದಾರ್ಶನಿಕ ಸಿದ್ಧಾಂತವಿದೆ. ನಮ್ಮನ್ನೂ, ನಮ್ಮಲ್ಲಿರುವ ದೇಹ, ಇಂದ್ರಿಯ, ಅಂತಃಕರಣ ಇತ್ಯಾದಿಗಳನ್ನೂ, ನಮಗಾಗಿ ಇಡೀ ವಿಶ್ವವನ್ನೂ ಸೃಷ್ಟಿಸಿದುದಕ್ಕಾಗಿ ನಾವು ಪರಶಿವನಿಗೆ ಕೃತಜ್ಞತೆ ತೋರಿಸಬೇಕು. ನಮ್ಮ ದೇಹ ನಮ್ಮದಲ್ಲ, ನಾವು ಭುಂಜಿಸುವ ಆಹಾರ, ಕುಡಿಯುವ ನೀರು ನಮ್ಮದಲ್ಲ, ಅವೆಲ್ಲ ಪರಶಿವನಿಂದ ನಾವು ಪಡೆದ ಸಾಲ ಎಂದು ತಿಳಿದು, ಅವುಗಳನ್ನು ಹಿಂತಿರುಗಿಸಿದರೆ, ನಾವು ಅವನಿಗೆ ಕೃತಜ್ಞತೆ ತೋರಿಸಿದಂತೆ. ಅವನು ಕೊಟ್ಟ ಆಹಾರವನ್ನು ಅವನಿಗೆ ಕೃತೆಜ್ಞತೆಯಿಂದ (ಭಕ್ತಿಯಿಂದ) ಅರ್ಪಿಸಿದರೆ ಅದು ಪ್ರಸಾದವಾಗುತ್ತದೆ.

ಶರಣರ ಪ್ರಸಾದ ಪರಿಕಲ್ಪನೆಯು ಸಾಂಪ್ರದಾಯಿಕ ಹಿಂದೂ ಪರಿಕಲ್ಪನೆಗಿಂತ ಒಂದೆರೆಡು ಅಂಶಗಳಲ್ಲಿ ಉತ್ತಮ. ಸಾಂಪ್ರದಾಯಿಕ ಹಿಂದೂ ಧರ್ಮದ ಪ್ರಕಾರ, ಭಕ್ತ ನೇರವಾಗಿ ಏನನ್ನೂ ಲಿಂಗಕ್ಕೆ ಅಥವಾ ಮತ್ಯಾವ ದೈವಕ್ಕೆ ಅರ್ಪಿಸುವಂತಿಲ್ಲ. ಆ ಕೆಲಸವನ್ನು ಪೂಜಾರಿಯಷ್ಟೇ ಮಾಡಬೇಕು. ಆದರೆ, ಶರಣಧರ್ಮದ ಪ್ರಕಾರ ಪ್ರತಿಯೊಬ್ಬ ಭಕ್ತನೂ ಭಕ್ತಳೂ ತಾನೇ ಪದಾರ್ಥವನ್ನು ಲಿಂಗಕ್ಕೆ ಅರ್ಪಿಸಿ, ಪ್ರಸಾದ ಮಾಡಿಕೊಳ್ಳಬಹುದು. ಎರಡನೆಯದಾಗಿ ಒಬ್ಬ ಭಕ್ತ ಪದಾರ್ಥವನ್ನು ಪ್ರಸಾದನ್ನಾಗಿ ಮಾಡಿಕೊಳ್ಳಲು ದೇವರ ಮೂರ್ತಿಯಿರುವ ಸ್ಥಾನ (ದೇವಸ್ಥಾನಕ್ಕೆ ಹೋಗಬೇಕು. ಆದರೆ ಶರಣರು ಮನೆಯಲ್ಲೇ ತನ್ನ ಇಷ್ಟಲಿಂಗ ಪೂಜಿಸಿ, ಅದಕ್ಕೆ ಪದಾರ್ಥಗಳನ್ನು ಅರ್ಪಿಸಿ, ವಸ್ತುಗಳನ್ನು ಪ್ರಸಾದ ಮಾಡಿಕೊಳ್ಳಬಹುದು. ಇದಕ್ಕೆ ಕಾಲದೇಶಗಳ ಮಿತಿಹೇಗಿಲ್ಲವೋ ಹಾಗೆ ಕುಲಜಾತಿಗಳ ಭೇದವಾಗಲಿ ಗಂಡಸು ಹೆಂಗಸು ಎಂಬ ಭೇದವಾಗಲಿ ಇಲ್ಲ. ಮೇಲಾಗಿ ಲಿಂಗಕ್ಕೆ ಅರ್ಪಿಸಲು ವಿಶೇಷ ಭಕ್ಷ್ಯಗಳೇ ಬೇಕೆಂಬ ನಿಯಮವೂ ಇಲ್ಲ. ಭಕ್ತನು ತಾನು ನಿತ್ಯ ಸೇವಿಸುವ ಆಹಾರವೂ ಅರ್ಪಿತಯೋಗ್ಯ. ಪ್ರಸಾದದಲ್ಲಿ ರುಚಿಯನ್ನು ಪರೀಕ್ಷಿಸಬಾರದು [ಪ್ರಸಾದದಲ್ಲಿ ಸೂತಕನರಸುವ ಪಾತಕರು” (೩:೧೪೭೨)]. ಅದೇ ರೀತಿ ಹಸಿವನ್ನು ತೀರಿಸಕೊಳ್ಳಲೋ, ನಾಲಗೆಯು ಚಪಲವನ್ನು ತೀರಿಸಿಕೊಳ್ಳಲೋ ಪ್ರಸಾದವನ್ನು ಸ್ವೀಕರಿಸಬಾರದು.

ಪದಾರ್ಥಗಳ ಅರ್ಪಣೆಯ ಹಿಂದೆ ಕೃತಜ್ಞತೆ ಇರುವಂತೆ, ಪ್ರಸಾದವನ್ನು ಸ್ವೀಕರಿಸುವಲ್ಲಿಯೂ ಕೃತಜ್ಞತೆ ಇರಬೇಕು, ಹಾಗೂ ತಾನು ಶುದ್ಧನಾಗುತ್ತೇನೆಂಬ ನಂಬಿಕೆ ಇರಬೇಕು. ಅಲ್ಲದೆ, ಅರ್ಪಿಸುವ ವಸ್ತುಗಳು ಸತ್ಯ ಶುದ್ಧ ಕಾಯಕದಿಂದ ದುಡಿದುದಾಗಿರಬೇಕೇ ಹೊರತು, ಕಾಡಿ ಬೇಡಿ ತಂದುದಾಗಲಿ, ಕಳ್ಳತನ ವಂಚನೆಯಿಂದ ತಂದುದಾಗಲಿ ಆಗಿರಬಾರದು.

ಪ್ರಸಾದ ಕಲ್ಪನೆಗೆ ಇನ್ನೂ ವಿಶಾಲವಾದ ಅರ್ಥವನ್ನು ಕೊಟ್ಟರೆ, ಆಗ ಅದು ನಾವು ಸ್ವೀಕರಿಸುವ ಆಹಾರ ಪಾನೀಯಗಳಿಗಷ್ಟೇ ಅಲ್ಲ, ನಾವು ಉಸಿರಾಡುವ ಗಾಳಿ ನಿಂತ ನೆಲ, ನೋಡುವ ನೋಟ, ಇತ್ಯಾದಿಗಳಿಗೆಲ್ಲ ಅನ್ವಯಿಸುತ್ತದೆ. ನಾವು ಲಿಂಗಕ್ಕೆ ಅರ್ಪಿಸಿ ಪಡೆದ ಆಹಾರ ಪ್ರಸಾದವಾದರೆ, ಇಲ್ಲಿ ಅರ್ಪಿಸದೇ ಪಡೆದುದು ಪ್ರಸಾದವಾಗುತ್ತದೆ. ಆದರೆ ಶರಣರು ಅರ್ಪಿಸದೆ ಪ್ರಸಾದವಿಲ್ಲ ಎಂದು ಹೇಳಿ ನೋಡುವ ರೂಪ, ಮೂಸುವ ವಾಸನೆ, ರುಚಿಸುವ ರುಚಿ, ಇತ್ಯಾದಿಗಳನ್ನು ನಾವು ಭೋಗಿಸುವ ಮುನ್ನ ಪರಶಿವನಿಗೆ ಅರ್ಪಿಸಬೇಕು, ಎನ್ನುತ್ತಾರೆ. ಈ ವಿಶಾಲಾರ್ಥದಲ್ಲಿ ನಾವು ಇಷ್ಟ ಲಿಂಗ ಪೂಜೆ ಮಾಡದೆಯೇ, ಕೈಯಿಂದ ಮುಟ್ಟಿ ನೈವೇದ್ಯ ಮಾಡದೆಯೇ, ವಸ್ತುಗಳನ್ನು ಲಿಂಗದ ಬಳಿ ಒಯ್ಯದೆಯೇ, ಅರ್ಪಿಸಬಹುದು. ಹೀಗೆ ಅರ್ಪಿಸಲು ಮನಸೊಂದೇ ಸಾಕು. ಈ ರೀತಿಯ ಅರ್ಪಣೆ ಸಾಧ್ಯವೆಂಬುದನ್ನು ಪ್ರಾಣಲಿಂಗಿಸ್ಥಲ ಸಿದ್ಧಾಂತವು ತೋರಿಸುತ್ತದೆ. ಪ್ರಾಣಲಿಂಗಿಯು ತನ್ನ ಪ್ರತಿ ಇಂದ್ರಿಯದ ಬಾಗಿಲಿನಲ್ಲಿಯೂ, ಅಂತಃಕರಣದ ಬಾಗಿಲಿನಲ್ಲಿಯೂ ಲಿಂಗವನ್ನು ಪ್ರತಿಷ್ಠಾಪಿಸಿಕೊಳ್ಳುತ್ತಾನೆ. ಅಂದರೆ ಯಾವುದೇ ರೂಪವನ್ನು ಕಣ್ಣು ನೋಡುವ ಮೊದಲೇ ಕಣ್ಣಿನ ಬಾಗಿಲಿನಲ್ಲೇ ಇರುವ ಲಿಂಗ ನೋಡುತ್ತದೆ; ಅದೇ ರೀತಿ ರಸಗಂಧ, ಇತ್ಯಾದಿಗಳನ್ನು ಭಕ್ತನು ಅನುಭವಿಸುವ ಮೊದಲೇ ಪರಶಿವ ಅನುಭವಿಸುತ್ತಾನೆ. ಅಂದರೆ ಪರಶಿವ ಮೊದಲು ಅನುಭವಿಸಿ, ಅನಂತರ ನಾವು ಅನುಭವಿಸುವುದರಿಂದ ನಾವು ಅನುಭವಿಸುವುದು ಪ್ರಸಾದವೆನಿಸಿಕೊಳ್ಳುತ್ತದೆ. ಅಂತಹ ಇಂದ್ರಿಯ ವಿಷಯಗಳಲ್ಲಿ ಒಳಿತು-ಕೆಡಕುಗಳ ವ್ಯತ್ಯಾವನ್ನು ಸಾಧಕನು ಹುಡುಕುವುದಿಲ್ಲ. ಅವನಿಗೆ ಬಿಸಿಲೂ ಒಂದೇ, ಬೆಳದಿಂಗಳೂ ಒಂದೇ, ಭಕ್ಷ್ಯ ಭೋಜ್ಯಗಳೂ ಒಂದೇ, ಸಾಧಾರಣ ಆಹಾರವೂ ಒಂದೇ.

ಇನ್ನೂ ಒಂದು ವಿಶಾಲವಾದ ಅರ್ಥದಲ್ಲಿ ಆಹಾರ ಪಾನೀಯಗಳು, ರೂಪರಸಾದಿಗಳು ಅಷ್ಟೇ ಪ್ರಸಾದವಲ್ಲ, ನಮ್ಮ ಇಂದ್ರಿಯ, ಅಂತಃಕರಣ, ದೇಹಗಳೇ ಪ್ರಸಾದಗಳು. ಹೇಗೆಂದರೆ, ಅವೆಲ್ಲವನ್ನೂ ಪರಶಿವನೇ ಕೊಟ್ಟಿರುವುದರಿಂದ, ಹಾಗೂ ಪರಶಿವನಿಂದ ಬಂದುದೆಲ್ಲವೂ ಪ್ರಸಾದವಾದುದರಿಂದ, ದೇಹೇಂದ್ರಿಯಾದಿಗಳೇ ಪ್ರಸಾದಗಳು. ಈ ರೀತಿ ಯೋಚಿಸುವ ಶರಣನು ಮೊದಲು ತನ್ನೆಲ್ಲವನ್ನು ಶಿವನಿಗರ್ಪಿಸುತ್ತಾನೆ. ಆ ಮೇಲೆ ತನ್ನ ಆತ್ಮ (ಅಂಗ)ವನ್ನು ಶಿವನಿಗರ್ಪಿಸುತ್ತಾನೆ. ದೇಹೇಂದ್ರಿಯಾದಿಗಳನ್ನು ಶಿವನಿಗರ್ಪಿಸಿ, ಅನಂತರ ಅವುಗಳನ್ನು ಬಳಸುತ್ತಾನೆ-ಎಂಬುದು ಶರಣಸ್ಥಲ ಸಿದ್ಧಾಂತದ ಅರ್ಥ. ಹೀಗೆ ಸಂಪೂರ್ಣವಾಗಿ ತನ್ನೆಲ್ಲವನ್ನೂ ಅರ್ಪಿಸಿದ ಶರಣನು ತಾನೇನೇ ಮಾಡಿದರೂ, ಯೋಚಿಸಿದರೂ, ಅನುಭವಿಸಿದರೂ ಅದು ಶಿವನಿಗಾಗಿಯೇ ಹೊರತು, ತನಗಲ್ಲ ಎಂದು ತಿಳಿಯುತ್ತಾನೆ. ಈ ವಿಶಾಲಾರ್ಥದಲ್ಲಿ, ಪ್ರಸಾದಿಯೇ ಪ್ರಸಾದವಾಗಬೇಕೆಂಬುದು ಶರಣರ ಆಧ್ಯಾತ್ಮಿಕ ಜೀವನದ ಶ್ರೇಷ್ಠ ಗುರಿಯಾಗಿದೆ. ಅಂಥವನ ದೇಹವು ಪ್ರಸಾದಕಾಯ; ಅವನ ಕಾಯವೇ ಕೈಲಾಸ

ಹೀಗೆ ತನ್ನೆಲ್ಲವನ್ನೂ ಅರ್ಪಿಸಿದ ಶರಣನಲ್ಲಿ ಎಳ್ಳಷ್ಟೂ ಸ್ವಾರ್ಥವಿಲ್ಲ. ಹೀಗೆ ಸ್ವಾರ್ಥವಿಲ್ಲದ ಆತ್ಮಕ್ಕೆ ಅನುಭಾವ ಸಾಧ್ಯವಾಗುತ್ತದೆ; ಅನುಭಾವದ ಮೂಲಕ ಲಿಂಗಾಂಗ ಸಾಮರಸ್ಯ ಸಾಧ್ಯವಾಗುತ್ತದೆ.

ಪ್ರಸಾದದ ಅರ್ಥ ಗೊತ್ತಿಲ್ಲದವರು ಕೇವಲ ಆಹಾರ ವಸ್ತುಗಳನ್ನು ಅರ್ಪಿಸಿ, ತಮ್ಮನ್ನು ತಾವು ಅರ್ಪಿಸಿಕೊಳ್ಳದಿದ್ದರೆ, ಅವರು ಆಧ್ಯಾತ್ಮಿಕ ಗುರಿಯನ್ನು ಸಾಧಿಸಲಾರರು. ಮೊದಲು ಆಹಾರ ಪದಾರ್ಥಗಳ ಅರ್ಪಣೆಯ ಮೂಲಕ ತ್ಯಾಗವನ್ನು ಆರಂಭಿಸಬೇಕು. ಆದರೆ ಅಲ್ಲೇ ನಿಲ್ಲಬಾರದು. ಅದು ಹಂತಹಂತವಾಗಿ ಮೇಲಕ್ಕೇರಿ ಸರ್ವಾರ್ಪಣೆಯಲ್ಲಿ ಮುಕ್ತಾಯವಾಗಬೇಕು.

ಪ್ರಸಾದವನ್ನು ಶುದ್ಧ ಪ್ರಸಾದ, ಸಿದ್ಧ ಪ್ರಸಾದ ಮತ್ತು ಪ್ರಸಿದ್ಧ ಪ್ರಸಾದ ಎಂದು ವಿಂಗಡಿಸುವುದು ಎಲ್ಲ ವಚನಕಾರರಲ್ಲಿ ಇರುವ ರೂಢಿ, ತನುವನ್ನು ಶುದ್ದ ಮಾಡಲು ತೆಗೆದುಕೊಂಡ ಪ್ರಸಾದ ಶುದ್ಧ ಪ್ರಸಾದ; ಮನಸ್ಸನ್ನೂ ಇತರ ಅಂತಃಕರಣಗಳನ್ನೂ ಶುದ್ಧ ಮಾಡುವ ಪ್ರಸಾದ ಸಿದ್ಧ ಪ್ರಸಾದ, ಎಲ್ಲವೂ ಪರಶಿವನೆಂದು ತಿಳಿಯುವುದು (ಅಥವಾ ಭಾವವನ್ನು ಶುದ್ದ ಮಾಡುವುದು) ಪ್ರಸಿದ್ಧ ಪ್ರಸಾದ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಪೂಜಾರಿಗಳು ಪ್ರಸಾದ ಪ್ರಭೇದ Next