Previous ಷಡ್ವಿಧ ವಿಭೂತಿಧಾರಣೆ ಸಪ್ತಾಚಾರ Next

ಸಗುಣ ನಿರ್ಗುಣ

ಸಗುಣ ನಿರ್ಗುಣ

ಶಂಕರಾಚಾರ್ಯರ ಚಿದದ್ವೈತದ ಪ್ರಕಾರ ಸತ್, ಚಿತ್, ಆನಂದನೇ ಪರಮ ಸತ್ಯ ಅಥವಾ ಪರಬ್ರಹ್ಮ. ಇಂಥ ಪರಬ್ರಹ್ಮನಿಗೆ ಯಾವುದೇ ರೀತಿಯ ಆಕಾರ (ದೊಡ್ಡದು, ಸಣ್ಣದು) ಯಾವುದೇ ರೀತಿಯ ಗುಣಗಳಾಗಲಿ (ಕೆಂಪು, ಕಪ್ಪು ಇತ್ಯಾದಿ) ಇಲ್ಲ. ಈ ಕಾರಣದಿಂದ ಅವನನ್ನು ನಿರ್ಗುಣ, ನಿರಾಕಾರ ಬ್ರಹ್ಮನೆಂದು ಕರೆಯುತ್ತಾರೆ. ಶಂಕರಾಚಾರ್ಯರ ಪ್ರಕಾರ ಈ ರೀತಿಯ ಚಿತ್‌ಸ್ವರೂಪನಾದ ನಿರ್ಗುಣ ಬ್ರಹ್ಮ ಮಾತ್ರ ಸತ್ಯ, ಜಗತ್ತೂ, ಜಗತ್ತನ್ನು ಸೃಷ್ಟಿಸಿದ ಈಶ್ವರನೂ, ಜೀವಗಳೂ ಅಸತ್ಯ. ಅವಿದ್ಯೆಯ ದೆಸೆಯಿಂದಾಗಿ ನಾವು ಈಶ್ವರನು (ಸಗುಣ ಬ್ರಹ್ಮನು) ಜಗತ್ತನ್ನು ಸೃಷ್ಟಿಸುತ್ತಾನೆಂದು ಭ್ರಮಿಸುತ್ತೇವೆ. ವಾಸ್ತವವಾಗಿ ಜಗತ್ತೂ ಇಲ್ಲ, ಜಗತ್ತನ್ನು ಸೃಷ್ಟಿಸಬೇಕಾದ ಈಶ್ವರನೂ ಇಲ್ಲ. ಕತ್ತಲಲ್ಲಿ ಹಗ್ಗವು ಹಾವಿನಂತೆ ಹೇಗೆ ಕಾಣುತ್ತದೆಯೋ ಹಾಗೆಯೇ ಅಜ್ಞಾನಿಗಳಿಗೆ ನಿರ್ಗುಣ ಬ್ರಹ್ಮನೇ ಜಗತ್ತಾಗಿ ಕಾಣುತ್ತದೆ. ಆದರೆ ವಚನಕಾರರ ಪ್ರಕಾರ, ಪರಶಿವನು ಮೊದಲು ಅಂದರೆ ಶೂನ್ಯಸ್ಥಿತಿಯಲ್ಲಿರುವಾಗ, ನಿರ್ಗುಣನಾಗಿರುತ್ತಾನೆ ಹಾಗೂ ಅವನೇ ಸೃಷ್ಟಿ ಮಾಡಿದಾಗ ಸಗುಣನಾಗುತ್ತಾನೆ. ಶಂಕರಾಚಾರ್ಯರ ಪ್ರಕಾರ ಪರಬ್ರಹ್ಮನನ್ನು ನೋಡಿದವರಿಗೆ ಜಗತ್ತು ಕಾಣುವುದಿಲ್ಲ. ಅವರಿಗೆ ಕಾಣುವುದೆಲ್ಲ ನಿರ್ಗುಣ ಬ್ರಹ್ಮನೇ, ಅದೇ ರೀತಿ ಜಗತ್ತನ್ನು ಕಾಣುವವರಿಗೆ ನಿರ್ಗುಣ ಬ್ರಹ್ಮ ಕಾಣುವುದಿಲ್ಲ. ಹೀಗೆ ಒಂದೇ ವಸ್ತುವನ್ನು ಎರಡು ಕೋನಗಳಿಂದ - ಅವಿದ್ಯೆಯಿಂದಾಗಿ ವ್ಯಾವಹಾರಿಕ ಕೋನದಿಂದ ಮತ್ತು ಜ್ಞಾನ ಪ್ರಾಪ್ತಿಯಿಂದಾಗಿ ಪಾರಮಾರ್ಥಿಕ ದೃಷ್ಟಿಯಿಂದ - ನೋಡಲು ಸಾಧ್ಯವಿದೆಯೇ ಹೊರತು, ವಾಸ್ತವಿಕವಾಗಿ ಏಕಕಾಲದಲ್ಲಿ ಎರಡು ಸತ್ಯಗಳಿಲ್ಲ. ಆದರೆ ವಚನಕಾರರ ಪ್ರಕಾರ, ಒಬ್ಬನೇ ಪರಶಿವನು ವಾಸ್ತವಿಕವಾಗಿ ಒಂದು ಕಾಲದಲ್ಲಿ ಶೂನ್ಯದಂತೆ, ಮತ್ತೊಂದು ಕಾಲದಲ್ಲಿ ಸಗುಣಬ್ರಹ್ಮನಂತೆ, ಹಾಗೂ ಕೆಲವು ವೇಳೆ ಜಗತ್ತಿನಂತೆ ಕಾಣುತ್ತಾನೆ. ಶಿವ ಜಗವಾಗಲೂ ಬಲ್ಲ, ಜಗವಾಗದಿರಲೂ ಬಲ್ಲ. ಆದರೆ ಇವೆಲ್ಲ ಅವನ ವಿವಿಧ ಅವಸ್ಥೆಗಳೇ ವಿನಾ, ನಮ್ಮ ವ್ಯಕ್ತಿ ನಿಷ್ಠ ಭ್ರಮೆಗಳಲ್ಲ. (೧೧:೨೩)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಷಡ್ವಿಧ ವಿಭೂತಿಧಾರಣೆ ಸಪ್ತಾಚಾರ Next