Previous ಸಪ್ತವರ್ಣಗಳ ಪರಿಣಾಮಗಳು ಸಾಗರ ತರಂಗ ನ್ಯಾಯ Next

ಸಾಂಖ್ಯಯೋಗ

ಸಾಂಖ್ಯಯೋಗ

ಸಾಂಖ್ಯದರ್ಶನ ಪ್ರವರ್ತಕನಾದ ಈಶ್ವರ ಕೃಷ್ಣನ ಪ್ರಕಾರ ಇರುವುದೆಲ್ಲವನ್ನೂ ಪ್ರಕೃತಿ ಮತ್ತು ಪುರುಷ ಎಂದು ಎರಡು ಭಾಗ ಮಾಡಬಹುದು. ಪ್ರಕೃತಿಯು ಮೂಲತಃ ಜಡ, ಅಚೇತನ, ಪುರುಷ ಆತ್ಮ ಚೇತನ, ಆದರೆ ನಿಷ್ಕ್ರಿಯ. ಪ್ರಕೃತಿಯು ಜಡವಾದುದರಿಂದ ಚಲಿಸಲಾರದು ಅಥವಾ ಯಾವುದೇ ರೀತಿಯಲ್ಲಿ ಪರಿಣಾಮ ಉಂಟುಮಾಡಲಾರದು; ಪುರುಷನಿಗೆ ಕೈಕಾಲು ಮುಂತಾದ ಅಂಗಗಳಿಲ್ಲವಾದುದರಿಂದ ಅದು ಚಲಿಸಲಾರದು ಅಥವಾ ಯಾವುದೇ ರೀತಿಯಲ್ಲಿ ಕಾರ್ಯಪ್ರವೃತ್ತನಾಗಲಾರದು. ಆದರೆ, ಕುಂಟ ಮತ್ತು ಕುರುಡ ಇಬ್ಬರೂ ಕೂಡಿ ಹೇಗೆ ಪಯಣಿಸಬಲ್ಲರೋ ಹಾಗೆಯೇ ಪ್ರಕೃತಿ ಮತ್ತು ಪುರುಷ ಕೂಡಿದರೆ ಕಾರ್ಯ ನಿರತರಾಗಬಲ್ಲರು. ಮನುಷ್ಯನೆಂದರೆ ಇಂಥ ಪ್ರಕೃತಿ ಪುರುಷರ ಸಂಯೋಜನೆ.

ಸಾಂಖ್ಯರು ನಿರೀಶ್ವರವಾದಿಗಳು, ಸೃಷ್ಟಿ, ಸ್ಥಿತಿ ಮತ್ತು ಲಯಗಳು ಪ್ರಕೃತಿ ಪುರುಷನಿಗೋಸ್ಕರ ಮಾಡುವ ಕ್ರಿಯೆಗಳು. ಪ್ರಕೃತಿಯ ಸಂಬಂಧವನ್ನು ಕಡಿದುಕೊಂಡು ಕೇವಲ ತಾನೊಬ್ಬನೇ ಇರುವುದೇ (ಕೈವಲ್ಯವೇ) ಜೀವನದ ಗುರಿ, ಜ್ಞಾನವೇ ಈ ಗುರಿಯನ್ನು ತಲುಪುವ ಮಾರ್ಗ.

ಯೋಗವು ಈ ಎಲ್ಲ ಸಿದ್ಧಾಂತಗಳನ್ನು ಒಂದೆರಡನ್ನು ಬಿಟ್ಟು ಒಪ್ಪಿಕೊಳ್ಳುತ್ತದೆ. ಯೋಗದರ್ಶನದಲ್ಲಿ ಈಶ್ವರನಿದ್ದಾನೆ. ಆದರೆ ಅವನು ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಮಾಡುವುದಿಲ್ಲ, ಭಕ್ತರ ಕರೆಗೆ ಓಗೊಡುವುದಿಲ್ಲ, ದುಷ್ಟರನ್ನು ಶಿಕ್ಷಿಸುವುದಿಲ್ಲ. ಸೃಷ್ಟಿಯಾದ ಕೂಡಲೆ ಮನುಕುಲಕ್ಕೆ ವೇದವನ್ನು ಬೋಧಿಸುವುದಷ್ಟೇ ಅವನ ಕೆಲಸ. ಚಿತ್ತವೃತ್ತಿನಿರೋಧವೆಂಬ ಪರಮಗುರಿಯನ್ನು ತಲುಪಲು ಅಷ್ಟಾಂಗಯೋಗವೇ ಸರಿಯಾದ ಮಾರ್ಗ, ಕೇವಲ ದೈಹಿಕ ಲಾಭಕ್ಕೆ ಅಷ್ಟಾಂಗ ಯೋಗ ಮಾಡುವವರನ್ನು ವಚನಕಾರರು ಸಹಿಸುವುದಿಲ್ಲ. (ನೋಡಿ : ಅಷ್ಟಾಂಗಯೋಗ)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಸಪ್ತವರ್ಣಗಳ ಪರಿಣಾಮಗಳು ಸಾಗರ ತರಂಗ ನ್ಯಾಯ Next