ಸಗುಣ ನಿರ್ಗುಣ | ಸಪ್ತವ್ಯಸನಗಳು |
ಸಪ್ತಾಚಾರ |
ಕೆಲವು ವಚನಕಾರರು ಆಚಾರಗಳನ್ನು ಪಂಚಾಚಾರಗಳೆಂದೂ, ಸಪ್ತಾಚಾರಗಳೆಂದೂ, ಏಕಾದಶ ಆಚಾರಗಳೆಂದೂ ಐವತ್ತು ಆಚಾರಗಳೆಂದೂ ಸರ್ವಾಚಾರವೆಂದೂ ವರ್ಗಿಕರಿಸಿದ್ದಾರೆ. ಇಲ್ಲಿ ಸಪ್ತಾಚಾರವೆಂದರೆ, ಕ್ರಿಯಾಚಾರ, ಜ್ಞಾನಾಚಾರ, ಭಾವಾಚಾರ, ಸತ್ಯಾಚಾರ, ನಿತ್ಯಾಚಾರ, ಧರ್ಮಾಚಾರ ಮತ್ತು ಸರ್ವಾಚಾರ ಎಂಬ ಏಳು ಆಚಾರಗಳು.
ಕ್ರಿಯಾಚಾರ : ಪಂಚಾಚಾರ, ಅಷ್ಟಾವರಣ ಮತ್ತು ಷಟ್‌ಸ್ಥಲಗಳ ಆಚರಣೆಗಳಲ್ಲಿ ಸಾಧಕನು ಪರಿಣಿತನಾಗಬೇಕು. ಅಂದರೆ, ಅವುಗಳನ್ನು ಪ್ರಯತ್ನಪೂರ್ವಕವಾಗಿ ಮಾಡದೆ, ಸಹಜವಾಗಿ ಮಾಡುವಷ್ಟು ಪರಿಣಿತನಾಗಬೇಕು. ಹೀಗೆ ಮಾಡುವುದರಿಂದ ಕರ್ಮೇಂದ್ರಿಯಗಳು ತಮ್ಮ ಪೂರ್ವಾಶ್ರಯವನ್ನು ಕಳೆದುಕೊಂಡು ಶುದ್ಧವಾಗುವುವು. ಆದರೆ ಕ್ರಿಯೆಗಳು ಯಾಂತ್ರಿಕವಾಗಿರದೆ, ನಿಷ್ಠೆಯಿಂದ ಕೂಡಿರಬೇಕು.
ಜ್ಞಾನಾಚಾರ : ಶರಣರು ತಮ್ಮ ವಚನಗಳಲ್ಲಿ ಹೇಳಿರುವುದನ್ನು ವಿನಯಪೂರ್ವಕವಾಗಿ ಪಾಲಿಸಬೇಕು. ಗುರುಹಿರಿಯರಲ್ಲಿ ಭಕ್ತಿ, ಗುರುಹಿರಿಯರ ದರ್ಶನ-ಸ್ಪರ್ಶನ ಸಂತರ್ಪಣೆ ಮಾಡಿ, ಅವರ ಸಂಗದಿಂದುಂಟಾಗುವ ಆಧ್ಯಾತ್ಮಿಕ ಲಾಭಗಳನ್ನು ಪಡೆದುಕೊಳ್ಳಬೇಕು.
ಭಾವಾಚಾರ : ಭಾವಾಚಾರವೆಂದರೆ ಸ್ವ-ಪರೀಕ್ಷೆ, ನಮ್ಮ ನಮ್ಮ ಗುಣಾವಗುಣಗಳನ್ನು ನಾವೇ ನಮ್ಮ ಅನುಭವದಿಂದ ತಿಳಿದು, ಅವಗುಣಗಳನ್ನು ತ್ಯಜಿಸಬೇಕು. ಅದರಲ್ಲೂ ಆಧ್ಯಾತ್ಮಿಕ ಜೀವನಕ್ಕೆ ಅಡ್ಡಿ ಮಾಡುವ ಕಾಮ ಕ್ರೋಧ ಮುಂತಾದ ಚಿತ್ತವಿಕಾರಗಳನ್ನು ತ್ಯಜಿಸಬೇಕು, ಹಾಗೂ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು.
ಸತ್ಯಾಚಾರ : ಕೊಟ್ಟ ಮಾತಿನಂತೆ ನಡೆಯುವುದು, ಬೋಧಿಸಿದಂತೆ ನಡೆಯುವುದು, ಸುಳ್ಳು ಹೇಳದೆ ಸತ್ಯವನ್ನಷ್ಟೇ ಹೇಳುವುದು ಸತ್ಯಾಚಾರವೆನಿಸಿಕೊಳ್ಳುತ್ತದೆ.
ನಿತ್ಯಾಚಾರ : ಇಲ್ಲದಿದುದಕ್ಕೆ ಆಶಿಸದೆ, ಬಂದುದನ್ನು ತಿರಸ್ಕರಿಸದೆ, ಏನೇ ಬಂದರೂ ಪ್ರಸಾದ ಭಾವದಿಂದ ಅಂದರೆ (ನಿತ್ಯ ಪ್ರಸಾದಿಯಂತೆ ನಡೆದುಕೊಳ್ಳುವುದೇ ನಿತ್ಯಾಚಾರ.
ಧರ್ಮಾಚಾರ : ಪ್ರಸಾದ ಪಾದೋಕವನ್ನಲ್ಲದೆ ಮತ್ತೇನನ್ನೂ ಸ್ವೀಕರಿಸದಿರುವುದು, ಯಾವಾಗಲೂ ಶಿವಮಂತ್ರವನ್ನು ಜಪಿಸುವುದು ಧರ್ಮಾಚಾರವೆನಿಸಿಕೊಳ್ಳುತ್ತದೆ.
ಸರ್ವಾಚಾರ : ಮೇಲೆ ಹೇಳಿದ ಎಲ್ಲ ಆಚಾರಗಳನ್ನೂ (ಸರ್ವಾಚಾರವನ್ನು) ಲಿಂಗಾಂಗ ಸಾಮರಸ್ಯದ ಸಲುವಾಗಿ ಹಾಗೂ ಅದು ಸಿದ್ದಿಸುವಂತೆ ಮಾಡುವುದೇ ಸರ್ವಾಚಾರ (೩:೯೪೫).
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಸಗುಣ ನಿರ್ಗುಣ | ಸಪ್ತವ್ಯಸನಗಳು |