Previous ಷಡ್ಭಾವ ವಿಕಾರಗಳು ಷಡ್ವಿಧ ಆಚಾರಲಿಂಗ Next

ಷಡ್ರಸಾಮೃತ

ಷಡ್ರಸಾಮೃತ

ಲಿಂಗಾಂಗ ಸಾಮರಸ್ಯವನ್ನು ಪಡೆಯಬೇಕೆಂಬ ಸಾಧಕರು ಈ ಆರು ವಿಧದ ರಸಾಮೃತವನ್ನು ಸೇವಿಸಬೇಕಾಗುತ್ತದೆ. ಇವೆಂದರೆ, ದರ್ಶನಾಮೃತ, ಸ್ಪರ್ಶನಾಮೃತ, ಸಂಭಾಷಣಾಮೃತ, ಪಾದೋದಕಾಮೃತ, ಪ್ರಸಾದಾಮೃತ ಮತ್ತು ಅನುಭಾವಾಮೃತ. ಇಲ್ಲಿ ಅಮೃತ ಎಂಬ ಪದವು ಅಲಂಕಾರಿವಾಗಿ ಬಳಕೆಯಾಗಿದ್ದು, ಅತಿ ಹೆಚ್ಚಿನ ಮೌಲ್ಯವುಳ್ಳದ್ದು, ಅತ್ಯಂತ ಆವಶ್ಯಕವಾದುದು ಎಂಬರ್ಥ ಕೊಡುತ್ತದೆ.

ತಂತಮ್ಮ ಆದರ್ಶ ವ್ಯಕ್ತಿಗಳನ್ನು ನೋಡಬೇಕೆಂಬ ಇಚ್ಛೆ ಎಲ್ಲರಿಗೂ ಇರುತ್ತದೆ. ಅದರಂತೆ ಪ್ರಾಥಮಿಕ ಅವಸ್ಥೆಯಲ್ಲಿರುವ ಸಾಧಕರು ಅನುಭಾವಿಗಳನ್ನು ದರ್ಶನ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದು, ಅವರನ್ನು ದರ್ಶನ ಮಾಡಿದಾಗ ಅವರಿಗೆ ದರ್ಶನಾಮೃತ ಎಂಬ ರಸವನ್ನು ಕುಡಿದು ತೃಪ್ತಿಯಾಗುತ್ತದೆ. ಅದೇ ರೀತಿ, ಅವರ ಕೈಕುಲುಕುವುದರಿಂದ ಅಥವಾ ಪಾದ ಸ್ಪರ್ಶನ ಮಾಡಿದರೆ ತಾವು ಪಾವನರಾಗುತ್ತೇರೆಂದು ತಿಳಿದವರು ಅವರನ್ನು ಮುಟ್ಟುವ ಮೂಲಕ ಸ್ಪರ್ಶನಾಮೃತ ರಸಸೇವನೆ ಮಾಡಿ ತೃಪ್ತರಾಗುತ್ತಾರೆ. ಇನ್ನೂ ಕೆಲವರು ಅವರನ್ನು ಮಾತನಾಡಿಸಿ, ಅವರಿಂದ ಕೆಲವು ಅಮೂಲ್ಯ ಸಲಹೆಗಳನ್ನು ಪಡೆದು ಸಂಭಾಷಣ ರಸಾಮೃತ ಸೇವನೆ ಮಾಡುತ್ತಾರೆ. ಇನ್ನು ಕೆಲವು ಆಸ್ತಿಕರು ಅವರಿಂದ ಪಾದೋದಕ ಪಡೆದು ಅದನ್ನು ಸೇವಿಸಿ ತೃಪ್ತಿ ಪಡೆಯುತ್ತಾರೆ. ಮತ್ತೆ ಕೆಲವರು ಅವರು ಕೊಟ್ಟ ಪ್ರಸಾದಾಮೃತ ಸೇವನೆ ಮಾಡಿ ತಾವು ಧನ್ಯರಾದವೆಂದುಕೊಳ್ಳುತ್ತಾರೆ. ಆದರೆ ಇವೆಲ್ಲ ಕಡಿಮೆ ಮೌಲ್ಯದ ಆವಶ್ಯಕತೆಗಳಾಗಿದ್ದು ತಾತ್ಕಾಲಿಕ ತೃಪ್ತಿಯನ್ನು ಕೊಟ್ಟರೆ, ಆ ಆದರ್ಶ ಪುರುಷರಿಂದ ಅನುಭಾವ ಪಡೆಯುವ ಮಾರ್ಗವನ್ನು ಕಲಿತುಕೊಂಡರೆ, ಅವರು ಇವೆಲ್ಲಕ್ಕಿಂತ ಹೆಚ್ಚಿನ ಮೌಲ್ಯದ (ಅನುಭಾವವೆಂಬ) ರಸಾಮೃತವನ್ನುಂಡು ತೃಪ್ತಿಪಡುತ್ತಾರೆ. ಮೊದಲಿನ ಐದು ಕಡಿಮೆ ಮೌಲ್ಯದವರಾದರೂ ಅವು ಆವಶ್ಯಕವೇಕೆಂದರೆ, ಅವು ಸಾಧಕನ ಭಕ್ತಿಗೆ, ಶ್ರದ್ಧೆಯನ್ನೂ ನಿಷ್ಠೆಯನ್ನೂ ತಂದುಕೊಡುತ್ತವೆ. ಈ ಕಾರಣದಿಂದಲೇ ಭಕ್ತರು ಶಿವಶರಣರೊಡನಾಟ ಗಳಿಸಿಕೊಳ್ಳಬೇಕೇ ಹೊರತು, ಭವಿಗಳ ಸಂಗವನ್ನಲ್ಲ ಎಂದು ಶರಣರು ಹೇಳುವುದು. (೧೪:೨೪೨೪)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಷಡ್ಭಾವ ವಿಕಾರಗಳು ಷಡ್ವಿಧ ಆಚಾರಲಿಂಗ Next