Previous ಶಕ್ತಿ ಶಕ್ತಿಯಾರು, ಲಿಂಗವಾರು Next

ಶಕ್ತಿ ಮತ್ತು ತತ್ವ

ಶಕ್ತಿ ಮತ್ತು ತತ್ವ

ಸೃಷ್ಟಿಯ ವಚನಗಳಲ್ಲಿ ಪರಾಶಕ್ತಿಯಾದಿಯಾಗಿ ಐದು ಶಕ್ತಿಗಳ ವಿಚಾರವಲ್ಲದೇ, ಪೃಥ್ವಿ ಮುಂತಾದ ಐದು ತತ್ವಗಳ ವಿಚಾರವೂ ಬರುತ್ತದೆ. ಕೆಲವು ವೇಳೆ ಪಂಚಶಕ್ತಿಗಳ ಮತ್ತೊಂದು ಹೆಸರೆ ಪಂಚಭೂತಗಳೆಂಬ ನಂಬಿಕೆಯೂ ಮೂಡುತ್ತದೆ. ಅಂತೂ ಪಂಚಭೂತಗಳು ಪಂಚಶಕ್ತಿಗಳ ಬೇರೆ ಹೆಸರುಗಳು ಅಥವಾ ಬೇರೆ ರೂಪಗಳು.

ಪಂಚಭೂತಗಳು ಶಕ್ತಿಯ ವಿವಿಧ ರೂಪಗಳೆಂಬುದಕ್ಕೆ ಪಂಚೀಕರಣದ ವಚನಗಳು ಪುಷ್ಟಿ ನೀಡುತ್ತವೆ. ಅವುಗಳ ಗುಣಧರ್ಮಗಳ ವಿಶ್ಲೇಷಣೆಯು ಈ ಮಾತನ್ನು ಸಮರ್ಥಿಸುತ್ತದೆ. ಕಾಠಿಣ್ಯ ಧರ್ಮವನ್ನು ಹೊಂದಿರುವ ಪೃಥ್ವಿ ತತ್ವಕ್ಕೆ ರೂಪ, ರಸ, ಗಂಧ, ಶಬ್ದ ಮತ್ತು ಕಾಠಿಣ್ಯ ಎಂಬ ಐದು ಗುಣಗಳಿವೆ. ಎರಡು ಕಠಿಣ ವಸ್ತುಗಳ ಘರ್ಷಣೆಯು ಶಬ್ದವನ್ನು ಉತ್ಪಾದಿಸಬಲ್ಲದು, ಅವುಗಳಲ್ಲಿ ಈ ಗುಣಗಳಿರುವುದರಿಂದಲೇ, ಕಠಿಣ ವಸ್ತುಗಳು ಇಂದ್ರಿಯ ಸಂಪರ್ಕಕ್ಕೆ ಬಂದಾಗ ರೂಪರಸಾದಿ ವಿಷಯಗಳನ್ನು ಉತ್ಪಾದಿಸಬಲ್ಲವು. ಅದೇ ರೀತಿ, ಜಲತತ್ವಕ್ಕೆ ಕಾಠಿಣ್ಯವನ್ನು ಬಿಟ್ಟು ಉಳಿದ ನಾಲ್ಕು ಗುಣಗಳೂ, ಅಗ್ನಿಗೆ ಶಬ್ದ, ಸ್ಪರ್ಶ ಮತ್ತು ರೂಪ (ತೇಜ) ಎಂಬ ಮೂರು ಗುಣಗಳೂ, ವಾಯುವಿಗೆ ಶಬ್ದ ಮತ್ತು ಸ್ಪರ್ಶವೆಂಬ ಎರಡು ಗುಣಗಳೂ, ಆಕಾಶಕ್ಕೆ ಶಬ್ದವೆಂಬ ಒಂದೇ ಗುಣವೂ ಇದೆ.

ಪೃಥ್ವಿತತ್ವಕ್ಕೆ ಕಾಠಿಣ್ಯವಿದೆ ಎಂದರೂ ಒಂದೇ, ಭಾರವನ್ನು ತಡೆದುಕೊಳ್ಳುವ ಶಕ್ತಿ ಇದೆ ಎಂದರೂ ಒಂದೇ. ಕಠಿಣ ವಸ್ತುಗಳೊಳಗೆ ಮತ್ತೊಂದು ವಸ್ತು ಪ್ರವೇಶಿಸಲು ಸಾಧ್ಯವಿಲ್ಲ. ಜಲ ತತ್ವಕ್ಕೆ ಬಂಧಕ ಗುಣವಿದೆ. ನೀರನ್ನು ಸೇರಿಸಿ ಮುದ್ದೆ ಮಾಡಬಹುದು; ನೀರು ಹೋದ ವಸ್ತುವಿನ ಭಾಗಗಳು ಬಿಡಿಬಿಡಿಯಾಗುತ್ತವೆ. ಅಗ್ನಿಗೆ ಸುಡುವ ಅಥವಾ ಪಾಕ ಮಾಡುವ ಶಕ್ತಿಯಿದೆ. ಇದರಿಂದ ವಸ್ತುವಿನ ಮೊದಲಿನ ಗುಣಗಳು ನಾಶವಾಗುತ್ತವೆ ಹಾಗೂ ಹೊಸಗುಣಗಳು ಬರುತ್ತವೆ. ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಯ್ಯುವುದು ವಾಯುವಿನ ಗುಣ ಹಾಗೂ ವಸ್ತುಗಳಿಗೆ ಅವಕಾಶ ಮಾಡಿಕೊಡುವುದೇ ಆಕಾಶದ ಗುಣ.

ಪ್ರಪಂಚದ ಪ್ರತಿಯೊಂದು ವಸ್ತುವಿನಲ್ಲಿ ಐದೂ ಭೂತಗಳು ಬಳಸಲ್ಪಟ್ಟಿದ್ದರೂ, ಅವುಗಳ ಪ್ರಮಾಣದ ವೈಶಿಷ್ಟ್ಯದಿಂದಾಗಿ ವಸ್ತುಗಳು ವಿಶಿಷ್ಟ ಗುಣಗಳನ್ನು ಪಡೆಯುತ್ತವೆ. ಕಠಿಣ ವಸ್ತುಗಳಲ್ಲಿ ಪೃಥ್ವಿ ತತ್ವದ ಅಂಶ ಬಹಳ, ಉಳಿದ ತತ್ವಗಳ ಅಂಶ ಕಡಿಮೆ ದ್ರವ ವಸ್ತುಗಳಲ್ಲಿ ಜಲತತ್ವ ಪ್ರಧಾನ ಗಾಳಿ, ಹೊಗೆ, ಮುಂತಾದ ವಸ್ತುಗಳಲ್ಲಿ ವಾಯು ತತ್ವಪ್ರಧಾನ; ಬೆಂಕಿ, ಉಷ್ಣ ಮುಂತಾದವುಗಳಲ್ಲಿ ಅಗ್ನಿ ತತ್ವ ಪ್ರಧಾನ ಖಾಲಿ ಸ್ಥಳ (ಗಾಳಿಯೂ ಇಲ್ಲದ ಸ್ಥಳಗಳಲ್ಲಿ) ಆಕಾಶ ತತ್ವ ಪ್ರಧಾನ. (ನೋಡಿ : ಶಕ್ತಿ, ಪಂಚೀಕರಣ).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಶಕ್ತಿ ಶಕ್ತಿಯಾರು, ಲಿಂಗವಾರು Next