ಶಕ್ತಿಯಾರು, ಲಿಂಗವಾರು | ಶರಣಂಗೆ ಆಕಾಶವಂಗ |
ಶರಣ |
ವಚನಗಳಲ್ಲಿ ಈ ಪದಕ್ಕೆ ಕನಿಷ್ಟ ಮೂರು ಅರ್ಥಗಳಿರುವುದು ಕಾಣುತ್ತದೆ.
೧. ಇಷ್ಟಲಿಂಗವನ್ನು ಧರಿಸಿ ಗುರುಲಿಂಗ ಜಂಗಮಕ್ಕೆ ಎಲ್ಲವನ್ನೂ ಅರ್ಪಿಸಿದವನು ಶರಣ. ಈ ಅರ್ಥದಲ್ಲಿ ಸಂಪೂರ್ಣವಾಗಿ (ಶಿವನಿಗೆ) ಶರಣನಾದವನೇ ಶರಣ. ಇದು ಸ್ಥಲಸೂಚಕವಲ್ಲ.
೨. ವಚನಗಳ ಪ್ರಕಾರ ಆಧ್ಯಾತ್ಮಿಕ ಪ್ರಗತಿಯು ಆರು ಹಂತ ಅಥವಾ ಸ್ಥಲಗಳನ್ನು ಒಳಗೊಂಡಿದೆ. ಐದನೆಯ ಸ್ಥಲದಲ್ಲಿರುವ ಸಾಧಕನೇ ಈ ಅರ್ಥದಲ್ಲಿ ಶರಣ.
೩. ತೋಂಟದ ಸಿದ್ದಲಿಂಗ ಶಿವಯೋಗಿಗಳು ಈ ಪದವನ್ನು ಮೂರನೆಯ ಅರ್ಥದಲ್ಲಿಯೂ ಪ್ರಯೋಗಿಸಿದ್ದಾರೆ. ಅವರ ಪ್ರಕಾರ, ಮನುಷ್ಯ ಮೊಟ್ಟ ಮೊದಲು ಅತ್ಯಂತ ಶುದ್ಧ ರೂಪಾಗಿದ್ದು, ಅವನಿಗೂ ಶಿವನಿಗೂ ವ್ಯತ್ಯಾಸವಿರಲಿಲ್ಲ. ಕಾಲಕ್ರಮೇಣ ಅವನು ಮಲಿನವಾಗುತ್ತಾ ಬಂದಿದ್ದಾನೆ. ಪ್ರಪಥಮದಲ್ಲಿ ನಿರಾಕಾರ ವಸ್ತು ತಾನೊಂದೆ, ಆ ನಿರಾಕಾರಪರ ವಸ್ತುವಿನಲ್ಲಿ ಮಹಾಜ್ಞಾನ ಉದಯವಾಗಿ, ಆ ಮಹಾಜ್ಞಾನವೇ ಅನಾದಿ ಶರಣರ ರೂಪಾಗಿ ...” (೧೧:೩೮) ಮತ್ತು ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣವಪ್ಪ ಪರಶಿವನ ಚಿತ್ರಾಣ ಶಕ್ತಿಯಿಂದ ಪರಮ ಜ್ಞಾನ ಶಕ್ತಿ ಉದಯಿಸಿದಳು ನೋಡಾ ... ಆ ಪರಿಪೂರ್ಣ ಸಮ್ಯಜ್ಞಾನದಿಂದ ಶರಣನ ಉತ್ಪತ್ತಿ." (೧೧:೪೪) ಎಂಬ ವಚನಗಳನ್ನು ನೋಡಿದಾಗ, ಶರಣನೆ ಒಂದು ಮೂಲ ಅಚ್ಚೆಂದೂ, ಮಲಿನವಾದ ಮನುಷ್ಯರೆಲ್ಲ ಅವನ ಪ್ರತಿಕೃತಿಗಳೆಂದೂ ಅರ್ಥವಾಗುತ್ತದೆ. ಅದೇ ರೀತಿ, ಆದಿ ಅನಾದಿಗಳೇನೂ ಇಲ್ಲದ ನಿರುಪಮಲಿಂಗದಲ್ಲಿ ಅನುಪಮ ಭಕ್ತಿ ಜನಿಸಿತ್ತು ನೋಡಾ. ಆ ಭಕ್ತಿಯಗರ್ಭದಲ್ಲಿ ಸತ್ಯ ಶರಣನುದಯಿಸಿದನು” (೧೧:೪೮) ಎನ್ನುವಾಗ ಇನ್ನೂ ಏನೂ ಸೃಷ್ಟಿಯಾಗದಿದ್ದಾಗ ಶರಣ ಹುಟ್ಟುದನು, ಅವನಿಗೆ ಕಲಾಶಕ್ತಿಗಳಿಂದಾದ ಮೈಮನ ಬುದ್ದಿಗಳಿರಲಿಲ್ಲ. ಕೇವಲ ಭಕ್ತಿಶಕ್ತಿಗಳಷ್ಟೇ ಇದ್ದವು, ಎಂಬರ್ಥ ಬರುತ್ತದೆ. ಅಂತೂ ಶರಣನೆಂದರೆ ಅತ್ಯಂತ ಪರಿಶುದ್ಧವಾದ ಅಂಗ ಎಂಬ ಅರ್ಥ ಖಂಡಿತ ಬರುತ್ತದೆ.
"ಆದಿ ಪರಮೇಶ್ವರನು ತನ್ನ ವಿನೋದಾರ್ಥ (೧೧:೪೬) ಶರಣನಾಗಿ ತೋರುತ್ತಾನೆಂದೂ, ಶಿವನ ಸದ್ರೂಪನೇ ಬಸವಣ್ಣ, ಚಿದ್ರೂಪವೇ ಚೆನ್ನಬಸವಣ್ಣ ಆನಂದ ಸ್ವರೂಪವೇ ಅಲ್ಲಮ ಪ್ರಭು ತೋಂಟದ ಸಿದ್ದಲಿಂಗ ಶಿವಯೋಗಿ (೧೧:೪೧) ಎಂದು ಹೇಳುವಾಗ, ಶರಣ ಒಬ್ಬ ಆದರ್ಶ ಪುರುಷನೆಂದೂ, ಬಸವಾದಿ ಪ್ರಮಥರು ಜೀವಂತ ಉದಾಹರಣೆಗಳೆಂದೂ ಅರ್ಥವಾಗುತ್ತದೆ. ಅಲ್ಲದೆ, ನಂದೀಶ್ವರ, ಶೃಂಗೀಶ್ವರ, ವೀರಭದ್ರ, ಮುಂತಾದ ಸದಾಶಿವನ ಸಾಹಚರ್ಯದಲ್ಲಿ ಇರುವವರೆಲ್ಲರೂ ಶರಣರು ಎನ್ನುವಾಗಲೂ ಸಹ, ಅವರಿಗೆ ಮಾಲಿನ್ಯ ಇಲ್ಲವೇ ಇಲ್ಲವೆಂಬುದು ವ್ಯಕ್ತವಾಗುತ್ತದೆ. (00:29)
ಶಿವಜ್ಞಾನ, ಪರಮವೈರಾಗ್ಯ, ಸರ್ವಾಚಾರ ಸಂಪತ್ತು ಇವುಗಳ ಮೂರ್ತಿಗಳಾದ ಶರಣರು ಲಿಂಗಾತ್ಮಕರು, ಲಿಂಗೇಂದ್ರಿಯ, ಲಿಂಗಾಂಗ ಸಂಗಿಗಳು, ಪ್ರಾಣ ಮುಕ್ತರು, ಮನೋಮುಕ್ತರು (೧೧: ೪೫), ಆದರೆ ಅವರು ಅನಾದಿ ಕರ್ಮಿಗಳಾಗಿ ಅನಂತರ ಮುಕ್ತಿ ಪಡೆದವರಲ್ಲ. ಅವರು ನಿತ್ಯ ಮುಕ್ತರು. (೧೧:೪೯). ಹಾಗಾದರೆ, ಬಸವಾದಿ ಶರಣರೆಲ್ಲ ಮೊದಲು ಬದ್ಧರಾಗಿದ್ದು ಅನಂತರ ಮುಕ್ತರಾದವರಲ್ಲವೆ? ಎಂದು ಕೆಲವರು ಆಕ್ಷೇಪಿಸಬಹುದು. ಆದರೆ ಅವರಾದರೂ ಸಹ ಮರೆವಿನಿಂದಾಗಿ ತಾವು ಬದ್ಧರೆಂದು ತಿಳಿದುಕೊಂಡಿದ್ದರು. ಅರಿವು ಬಂದ ನಂತರ ಮೊದಲಿನಂತೆ ಶರಣರಾದವರು. ಅಂದರೆ ವಾಸ್ತವವಾಗಿ ಅವರು ಯಾವಾಗಲೂ ನಿರ್ಮಲರೆ. ಅವರು ಅನಾದಿ ನಿರ್ಮಲರಾದ ಕಾರಣ ಅವರಿಗೆ ಮಾಯಾಕರ್ಮ ಆಣವ ಮಲಗಳನ್ನು ಆರೋಪಿಸಬಾರದು. (೧೧:೫೧).
“ಚಿನ್ನದಿಂದಾದ ಬಂಗಾರ ಚಿನ್ನದ ರೂಪಲ್ಲದೆ, ಮತ್ತೊಂದು ರೂಪಾಗಬಲ್ಲುದೆ?” ಅದೇ ರೀತಿ ಲಿಂಗಮುಖದಿಂದ ಉದಯವಾದ ಶರಣರು ಲಿಂಗದ ರೂಪಲ್ಲದೆ, ಮತ್ತೊಂದು ರೂಪೆನಬಹುದೇ? (೧೧:೫೨) “ಹೀಗೆ ಲಿಂಗದಿಂದ ಶರಣರುದಯವಾಗದಿರ್ದಡೆ, ಬಸವ, ಚೆನ್ನಬಸವ, ಪ್ರಭುದೇವರು ಮುಖ್ಯವಾದ ಏಳುನೂರು ಎಪ್ಪತ್ತು ಅಮರಗಣಂಗಳು ಎಲ್ಲರೂ ಕ್ಷೀರಕ್ಷೀರವ ಬೆರೆಸಿದಂತೆ..... ಲಿಂಗವ ಬೆರೆಸಿ ಮಹಾಲಿಂಗವೆಯಾದರು ನೋಡಾ" (೧೧:೬೦) ಅಂದರೆ, ಶುದ್ಧರೂಪಾದ, ಯಾವಾಗಲೂ ಶಿವ ಸಾನಿಧ್ಯದಲ್ಲಿದ್ದವರು ಹೇಗೆ ಶರಣರೆನಿಸಿಕೊಳ್ಳುತ್ತಾರೋ, ಹಾಗೆಯೇ, ಆಧ್ಯಾತ್ಮಿಕ ಸಾಧನೆಯ ಮೂಲಕ ಲಿಂಗೈಕ್ಯ ಸಾಧಿಸಿದವರೆಲ್ಲರೂ ಶುದ್ಧರೂಪಾಗಿ ಶರಣರಾಗುತ್ತಾರೆ. ಆದರೆ ಶರಣರಾಗಬೇಕಾದರೆ ಅವರಿಗೆ ದೇಹವಿರಬಾರದು ಎಂದರ್ಥವಲ್ಲ. ಜೀವನ್ಮುಕ್ತರೆಲ್ಲರೂ ಶರಣರೇ. ಅದೇ ರೀತಿ ಶಿವಸಾನಿಧ್ಯವನ್ನು ಪಡೆಯಲು ಕೈಲಾಸಕ್ಕೆ ಹೋಗಬೇಕೆಂಬುದೂ ಇದರ ಅರ್ಥವಲ್ಲ. ವಾಸ್ತವವಾಗಿ ಶರಣರು ಕೈಲಾಸವನ್ನು ನಂಬುವುದಿಲ್ಲ, ಅದರ ಬದಲು ಕಾಯವನ್ನೇ ಕೈಲಾಸವನ್ನಾಗಿ ಮಾಡಿಕೊಳ್ಳಬೇಕೆಂದರು.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಶಕ್ತಿಯಾರು, ಲಿಂಗವಾರು | ಶರಣಂಗೆ ಆಕಾಶವಂಗ |