Previous ಶಿವಶಕ್ತಿ ಸಂಪುಟ ಶೈವ ಪ್ರಭೇದ Next

ಶಿವಾದ್ವೈತ

ಶಿವಾದ್ವೈತ

ವಚನಗಳಲ್ಲಿ ಪದೇ ಪದೇ ಬರುವ ಶಿವಾದ್ವೈತ ಎಂಬ ಪದಕ್ಕೆ ದ್ವೈತಾದ್ವೈತ ಅಥವಾ “ಶಕ್ತಿವಿಶಿಷ್ಟಾದ್ವೈತ" ಎಂಬ ಅರ್ಥವನ್ನು ಕೊಡಬಹುದು. ಶಿವಾದ್ವೈತ ಎಂದರೆ ಶಿವ ಒಬ್ಬನೇ ಇದ್ದಾನೆ ಎಂಬ ಸಿದ್ಧಾಂತ. ಹಾಗಾದರೆ, ಅನೇಕ ಭೌತವಸ್ತುಗಳಿಂದ ಕೂಡಿದ ಜಗತ್ತೂ ಅನೇಕ ಜೀವಿಗಳೂ ಇದ್ದಾವಲ್ಲ ಎಂಬ ಸಂದೇಹ ಬರುತ್ತದೆ. ಶಂಕರಾಚಾರ್ಯರ ಚಿದದ್ವೈತದ ಪ್ರಕಾರ ಬ್ರಹ್ಮನೊಬ್ಬನೇ ಸತ್ಯ, ಆತ್ಮಗಳ ಅನೇಕತೆಯೂ ಭೌತಪ್ರಪಂಚವೂ ಅಸತ್ಯ. ಆದರೆ ವಚನಕಾರರ ಶಿವಾದ್ವೈತದ ಪ್ರಕಾರ, ಆತ್ಮಗಳೂ ಜಗತ್ತೂ ಅಸತ್ಯ ಅಲ್ಲ, ಅವು ಶಿವನೊಳಗೆ ಅಡಗಿರುತ್ತವೆ. ಜೀವಜಗತ್ತು ಮತ್ತು ಈಶ್ವರರ ನಡುವಿನ ಸಂಬಂಧವನ್ನು ವಚನಕಾರರು ಸಮುದ್ರ ಮತ್ತು ನೊರೆತೆರೆಗಳ ಸಂಬಂಧಕ್ಕೆ ಹೋಲಿಸುತ್ತಾರೆ. ಸಮುದ್ರವಿಲ್ಲದಿದ್ದರೆ, ತೆರೆಗಳೂ ನೊರೆಯೂ ಇರಲು ಸಾಧ್ಯವಿಲ್ಲ. ಸಮುದ್ರವೇ ಅವುಗಳ ಅಸ್ತಿತ್ವಕ್ಕೆ ಕಾರಣ. ಹಾಗೆಯೇ ಪರಶಿವನೇ ಇಲ್ಲದಿದ್ದರೆ, ಜಗತ್ತು ಜೀವಗಳು ಇರುತ್ತಿರಲಿಲ್ಲ. ಏಕೆಂದರೆ, ಅವುಗಳು ಅವನಿಂದ ವ್ಯಕ್ತವಾಗುತ್ತವೆ. ಎರಡನೆಯದಾಗಿ, ತೆರೆಗಳೂ ನೊರೆಯೂ ಸಮುದ್ರದ ಒಂದು ಅವಸ್ಥೆ. ಅವುಗಳ ರೂಪ ಆಕಾರ ಬದಲಾಗಬಹುದು. ಆದರೆ ಅವುಗಳ ಆಧಾರ ಬದಲಾಗುವುದಿಲ್ಲ. ಹಾಗೆಯೇ ಜೀವ ಜಗತ್ತು ಪರಶಿವನ ವಿವಿಧ ಅವಸ್ಥೆಗಳು, ಅವುಗಳ ನಾಮರೂಪಗಳು ಬದಲಾಗಬಹುದಾದರೂ, ಅವುಗಳ ಆಧಾರ ಮಾತ್ರ ಪರಶಿವನೇ, ಅಥವಾ ಭಿತ್ತಿ ಒಂದರಲ್ಲಿ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಚಿತ್ರಗಳನ್ನು ಹೇಗೆ ರಚಿಸಬಹುದೋ, ಹಾಗೆಯೇ ಪರಶಿವನೆಂಬ ಆಧಾರದ ಮೇಲೆ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಜಗತ್ತುಗಳು ಬೇರೆ ಬೇರೆ ಜೀವರಾಶಿಗಳೂ ಕಾಣಿಸಿಕೊಳ್ಳಬಹುದು.

ಇದರಿಂದ ವ್ಯಕ್ತವಾಗುವ ಅಂಶವಿದು ಫೇನತರಂಗಗಳು ಸಮುದ್ರದಿಂದ ಭಿನ್ನವಾಗಿರದೆ, ಅದರ ಅಂಗಗಳಾಗಿವೆ ಹೇಗೋ ಹಾಗೆಯೇ, ಜೀವಜಗತ್ತು ಪರಶಿವನಿಂದ ಭಿನ್ನವಾಗಿರದೆ ಅವನ ಅಂಗ (ಭಾಗ)ವಾಗಿವೆ. ಆದುದರಿಂದ ಶಿವನೊಬ್ಬನೇ ಇರುವವನು. ಈ ಸಿದ್ದಾಂತವೇ ಶಿವಾದ್ವೈತ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಶಿವಶಕ್ತಿ ಸಂಪುಟ ಶೈವ ಪ್ರಭೇದ Next