Previous ಸ್ವಸ್ತಿಕಾರೋಹಣ ದೀಕ್ಷೆ ಇನ್ನೂರ ಹದಿನಾರುಸ್ಥಲ Next

ಸೃಷ್ಟಿಯ ಕ್ರಮ

ಸೃಷ್ಟಿಯ ಕ್ರಮ

ನಿಷ್ಕಲ ಲಿಂಗಕ್ಕೆ ಜಗತ್ತನ್ನು ಸೃಷ್ಟಿಸಬೇಕೆಂಬ ಇಚ್ಛೆ ಮೂಡಿದ ಕೂಡಲೆ ಅವನ ಶಕ್ತಿಯಲ್ಲಿ ಕ್ಷೋಭೆ ಅಥವಾ ಚಲನೆ ಉಂಟಾಗುತ್ತದೆ. ಈ ಚಲನೆಯಿಂದಾಗಿ ನಿಷ್ಕಲಲಿಂಗವು ಅಂಗಸ್ಥಲ ಮತ್ತು ಲಿಂಗಸ್ಥಲ ಎಂದು ಎರಡು ಭಾಗವಾಗುತ್ತದೆ. ಅಂಗಸ್ಥಲವೆಂದರೆ ಅಂಗಗಳ (ಆತ್ಮಗಳ) ಸಮೂಹ. ಆದರೆ ಆತ್ಮಗಳಿಗೆ ಈ ಸ್ಥಿತಿಯಲ್ಲಿ ದೇಹ, ಇಂದ್ರಿಯ, ಅಂತಃಕರಣಗಳು ಇರುವುದಿಲ್ಲ. ಆದುದರಿಂದ, ಯಾವುದೇ ಆತ್ಮವನ್ನು ಇಂಥ ವ್ಯಕ್ತಿಯ ಆತ್ಮ ಎಂದು ಗುರುತಿಸಲು ಸಾಧ್ಯವಾಗುವುದಿಲ್ಲ. ಲಿಂಗಸ್ಥಲವೆಂದರೆ ಪೂಜಾಯೋಗ್ಯವಾದ ಲಿಂಗ, ಈ ಲಿಂಗಸ್ಥಲವೇ ಮುಂದೆ ಮನುಷ್ಯನಲ್ಲಿ ಆಚಾರಲಿಂಗಾದಿಗಳಾಗಿ ಅಂತಸ್ಥವಾಗುತ್ತದೆ.

ಅಂಗಸ್ಥಲ ಮತ್ತು ಲಿಂಗಸ್ಥಲ ಎಂದು ಲಿಂಗವು ವಿಭಜನೆಯಾದಾಗ ಅದರ ಜೊತೆಯಲ್ಲೇ ಇದ್ದ ಶಕ್ತಿಯೂ ಕಲಾಶಕ್ತಿ ಮತ್ತು ಭಕ್ತಿಶಕ್ತಿ ಎಂದು ಎರಡು ಭಾಗವಾಗುತ್ತದೆ. ಅಂಗಸ್ಥಲದ ಅಥವಾ ಪೂಜಕನ ಜೊತೆಗಿರುವುದು ಭಕ್ತಿಶಕ್ತಿ ಅಥವಾ ನಿವೃತ್ತಿಶಕ್ತಿ ಅಥವಾ ಊರ್ಧ್ವ ಮಾಯೆ ಎನಿಸಿದರೆ, ಪೂಜ್ಯ ಲಿಂಗದ ಜೊತೆಗಿರುವ ಶಕ್ತಿ ಕಲಾಶಕ್ತಿ ಅಥವಾ ಪ್ರವೃತ್ತಿಶಕ್ತಿ ಅಥವಾ ಅಧೋಮಾಯೆ ಎನಿಸಿಕೊಳ್ಳುತ್ತದೆ.

ಆಮೇಲೆ, ಪರಶಿವನ ಇಚ್ಛೆಯ ಮೇರೆಗೆ ಕಲಾಶಕ್ತಿಯು ಚಿತ್‌ಶಕ್ತಿ ಅಥವಾ ಶಾಂತ್ಯತೀತೋತ್ತರಕಲಾ, ಪರಾಶಕ್ತಿ ಅಥವಾ ಶಾಂತ್ಯತೀತಕಲಾ, ಆದಿಶಕ್ತಿ ಅಥವಾ ಶಾಂತಿಕಲಾ, ಇಚ್ಛಾಶಕ್ತಿ ಅಥವಾ ವಿದ್ಯಾಕಲಾ, ಜ್ಞಾನಶಕ್ತಿ ಅಥವಾ ಪ್ರತಿಷ್ಠಾಕಲಾ ಮತ್ತು ಕ್ರಿಯಾಶಕ್ತಿ ಅಥವಾ ನಿವೃತ್ತಿಕಲಾ, ಎಂದು ಆರು ವಿಭಜನೆಗೊಳಗಾಗುತ್ತದೆ. ಅದೇ ರೀತಿ ಲಿಂಗಸ್ಥಲವೂ ಕ್ರಮವಾಗಿ ಮಹಾಲಿಂಗ, ಪ್ರಸಾದಲಿಂಗ, ಜಂಗಮಲಿಂಗ, ಶಿವಲಿಂಗ, ಗುರುಲಿಂಗ, ಆಚಾರಲಿಂಗ ಎಂದು ಆರು ವಿಭಜನೆಗೊಳಗಾಗುತ್ತದೆ. ಅಂದರೆ, ಮಹಾಲಿಂಗದ ಜೊತೆ ಚಿತ್‌ಶಕ್ತಿ, ಪ್ರಸಾದಲಿಂಗದ ಜೊತೆ ಪರಾಶಕ್ತಿ, ಜಂಗಮಲಿಂಗದ ಜೊತೆ ಆದಿಶಕ್ತಿ, ಶಿವಲಿಂಗದ ಜೊತೆ ಇಚ್ಛಾಶಕ್ತಿ, ಗುರುಲಿಂಗದ ಜೊತೆ ಜ್ಞಾನಶಕ್ತಿ ಮತ್ತು ಆಚಾರಲಿಂಗದ ಜೊತೆ ಕ್ರಿಯಾಶಕ್ತಿ ಇರುತ್ತದೆ.

ಭಕ್ತಿಯೂ (ಭಕ್ತಿಶಕ್ತಿಯೂ) ಆರು ತೆರನಾಗಿ ವಿಭಜನೆಗೊಂಡು, ಅಂಗಸ್ಥಲದ ಆರು ಭಾಗಗಳೊಂದಿಗೆ ಇರುತ್ತದೆ. ಅಂದರೆ, ಭಕ್ತನೊಂದಿಗೆ ಸದ್ಭಕ್ತಿಯೂ, ಮಹೇಶನೊಂದಿಗೆ ನೈಷ್ಠಿಕಾ ಭಕ್ತಿಯೂ, ಪ್ರಸಾದಿಯೊಂದಿಗೆ ಅವಧಾನ ಭಕ್ತಿಯೂ, ಪ್ರಾಣಲಿಂಗಿಯೊಂದಿಗೆ ಅನುಭಾವ ಭಕ್ತಿಯೂ, ಶರಣನೊಂದಿಗೆ ಅನಂದ ಭಕ್ತಿಯೂ, ಐಕ್ಯನೊಂದಿಗೆ ಸಮರಸ ಭಕ್ತಿಯೂ ಇರುತ್ತದೆ.

ವಾಸ್ತವವಾಗಿ, ಭಕ್ತ, ಮಹೇಶ, ಮುಂತಾಗಿ ಕರೆಸಿಕೊಳ್ಳುವ ಮನುಷ್ಯನಲ್ಲೇ ಚಿತ್‌ಶಕ್ತಿ, ಮುಂತಾದ ಆರು ಶಕ್ತಿಗಳೂ, ಮಹಾಲಿಂಗ, ಮುಂತಾದ ಆರು ಲಿಂಗಗಳೂ, ಸದ್ಭಕ್ತಿ, ಮುಂತಾದ ಆರು ಭಕ್ತಿಗಳೂ ಇವೆ.

ವಚನಕಾರರು ಸೃಷ್ಟಿಯ ಕ್ರಮವನ್ನು ಮತ್ತೆ ಬೇರೆ ರೀತಿಯಲ್ಲೂ ನಿರೂಪಿಸಿದ್ದಾರೆ. ಕೆಲವರು ಶ್ವೇತಾಶ್ವತರ ಉಪನಿಷತ್ತನ್ನು ಅನುಸರಿಸಿ, ಪರವಸ್ತುವು ಮೊದಲು ಸಾದಾಖ್ಯಗಳನ್ನು ಸೃಷ್ಟಿಸಿ, ಅನಂತರ ಆ ಸಾದಾಖ್ಯಗಳಿಂದ ಆತ್ಮ ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ, ಸೂರ್ಯ ಮತ್ತು ಚಂದ್ರ ಹುಟ್ಟಿದವು ಎನ್ನುತ್ತಾರೆ. ಈ ಎಂಟು ವಸ್ತುಗಳೇ ಶಿವನ ಅಷ್ಟತನು (ಎಂಟು ಅಂಶಗಳನ್ನೊಳಗೊಂಡ ತನು) ಎನಿಸಿಕೊಳ್ಳುತ್ತವೆ.

ಏನೆಂದನಲಿಲ್ಲದ ಮಹಾಘನವು
ತನ್ನ ಲೀಲೆಯಿಂದ ತಾನೇ ಸ್ವಯಂಭುಲಿಂಗವಾಯಿತ್ತು;
ಆ ಲಿಂಗದಿಂದಾಯಿತ್ತು ಶಿವಶಕ್ತ್ಯಾತ್ಮಕ,
ಆ ಶಿವಶಕ್ತ್ಯಾತ್ಮಕದಿಂದಾದುದು ಆತ್ಮ,
ಆತ್ಮನಿಂದಾದುದು ಆಕಾಶ,
ಆಕಾಶದಿಂದಾದುದು ವಾಯು,
ವಾಯುವಿನಿಂದಾದುದು ಅಗ್ನಿ,
ಅಗ್ನಿಯಿಂದಾದುದು ಅಪ್ಪು,
ಅಪ್ಪುವಿನಿಂದಾದುದು ಪೃಥ್ವಿ,
ಪೃಥ್ವಿಯಿಂದಾದುದು ಸಕಲ ಜೀವವೆಲ್ಲಾ.
ಇವೆಲ್ಲಾ ನಿಮ್ಮ ನೆನಹುಮಾತ್ರದಿಂದಾದವು
ಸಿಮ್ಮಲಿಗೆಯ ಚೆನ್ನರಾಮಾ. (೭: ೫೭೩)

ಮತ್ತೆ ಕೆಲವರು ಸೃಷ್ಟಿಯ ಕ್ರಮವನ್ನು ಬೇರೆ ರೀತಿಯಲ್ಲಿ ನಿರೂಪಿಸಿದ್ದಾರೆ. ಈ ನಿರೂಪಣೆಯಲ್ಲಿ ಶಿವ-ಶಕ್ತಿ ಸಂಪುಟ ಬೇರೆ ಬೇರೆ ರೂಪಗಳಾಗುವುದು ಕಂಡು ಬರುತ್ತದೆ.

ಆತ್ಮತತ್ವ ಇಪ್ಪತ್ತೈದು, ವಿದ್ಯಾತತ್ವ ಹತ್ತು, ಶಿವತತ್ವವೊಂದು.
ಅದೆಂತೆಂದಡೆ:
ಭೂತಾದಿ ಪಂಚಕಂಗಳೈದು, ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು,
ಶಬ್ದಾದಿ ವಿಷಯಂಗಳೈದು, ವಾಗಾದಿ ಕರ್ಮೇಂದ್ರಿಯಂಗಳೈದು,
ಮನಸಾದಿ ಪಂಚಕಂಗಳೈದು, ಆತ್ಮತತ್ವ ಇಪ್ಪತ್ತೈದು,
ಕರ್ಮಸಾದಾಖ್ಯ, ಮೂರ್ತಿಸಾದಾಖ್ಯ
ಅಮೂರ್ತಿಸಾದಾಖ್ಯ, ಶಿವಸಾದಾಖ್ಯ
ನಿವೃತ್ತಿಕಲೆ, ಪ್ರತಿಷ್ಠಾಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ,
ಇಂತು ವಿದ್ಯಾತತ್ವ ಹತ್ತು, ಶಿವತತ್ವವೊಂದು.
ಇಂತು ಮೂವತ್ತಾರು ತತ್ವಂಗಳೊಳಗೆ
ಶಿವತತ್ವವೆ ತತ್ಪದ, ಆತ್ಮತತ್ವವೆ ತ್ವಂಪದ, ವಿದ್ಯಾತತ್ತ್ವವೆ ಅಸಿಪದ.
ಅಕಾರದಲ್ಲಿ ತತ್ವದ ಐಕ್ಯವಾಯಿತ್ತು.
ಉಕಾರದಲ್ಲಿ ತ್ವಂಪದ ಐಕ್ಯವಾಯಿತ್ತು.
ಮಕಾರದಲ್ಲಿ ಅಸಿಪದ ಐಕ್ಯವಾಯಿತ್ತು.
ಷಟ್‌ಸ್ಥಲಬ್ರಹ್ಮವೆಂಬ ಮಹಾಜ್ಯೋತಿರ್ಮಯಲಿಂಗವಾಯಿತ್ತು.
ಆ ಷಟ್‌ಸ್ಥಲಬ್ರಹ್ಮವೆಂಬ ಮಹಾಜ್ಯೋತಿರ್ಮಯಲಿಂಗದಲ್ಲಿ
ತತ್ವದ ತಂಪದ ಅಸಿಪದ ನಿಕ್ಷೇಪವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ, (೧೩: ೮೧೯)

ಅಂತೂ ಲಿಂಗದಲ್ಲಿದ್ದ ಆತ್ಮ ಮತ್ತು ಶಕ್ತಿಯೇ ಮನುಷ್ಯರ ಜೀವಾತ್ಮರುಗಳಾಗಿಯೂ, ದೇಹೇಂದ್ರಿಯಾದಿ ಗಳಾಗಿಯೂ ಹೊರಬಂದು ವ್ಯಕ್ತವಾಗಿವೆ. ಈ ಕಾರಣದಿಂದಲೇ ಮನುಷ್ಯನನ್ನು ಪಿಂಡಾಂಡ ಎಂದೂ ಪರಶಿವನನ್ನು ಬ್ರಹ್ಮಾಂಡ ಎಂದೂ ಕರೆಯಲಾಗಿದೆ. ಅಥವಾ ಪರಶಿವನೇ ಜಗತ್ತಾಗಿಯೂ ಅದರೊಳಗಿರುವ ಸಕಲ ಚರಾಚರ ವಸ್ತುಗಳಾಗಿಯೂ ರೂಪಾಂತರಗೊಂಡಿದ್ದಾನೆ. ಅವನಲ್ಲಿಲ್ಲದ ಏನೂ ಸೃಷ್ಟಿಯಲ್ಲಿಲ್ಲ. ಅವನಲ್ಲಿ ಅವ್ಯಕ್ತವಾಗಿದ್ದುದೇ ಸೃಷ್ಟಿಯಾಗಿ ವ್ಯಕ್ತವಾಗಿದೆ.

ಮರನೊಳಗಣ ಪತ್ರೆ ಫಲಂಗಳು, ಮರ ಕಾಲವಶದಲ್ಲಿ ತೋರುವಂತೆ,
ಹರದೊಳಗಣ ಪ್ರಕೃತಿಸ್ವಭಾವಂಗಳು, ಹರಭಾವದಿಚ್ಛೆಗೆ ತೋರುವವು.
ಲೀಲೆಯಾದಡೆ ಉಮಾಪತಿ, ಲೀಲೆ ತಪ್ಪಿದಡೆ ಸ್ವಯಂಭು ಗುಹೇಶ್ವರಾ. (೨: ೧೪೫)

ಶಿವ ಜಗವಾಗಲ್ಲ, ಶಿವ ಜಗವಾಗದಿರಲೂ ಬಲ್ಲ.
ಶಿವ ರೂಪಾಗಬಲ್ಲ, ಶಿವ ರೂಪಾಗದಿರಲೂ ಬಲ್ಲ.
ಶಿವ ಅಜಾಂಡಕೋಟಿಗಳ ಮಾಡಬಲ್ಲ, ಮಾಡದಿರಲೂ ಬಲ್ಲ.
ಶಿವ ಕೆಡಿಸಬಲ್ಲ, ಕೆಡಿಸದಿರಲೂ ಬಲ್ಲ.
ಶಿವ ಜಂಗಮವಾಗಿ ಪೂಜಿಸಬಲ್ಲ.
ಶಿವ ಲಿಂಗವಾಗಿ ತಾನೇ ಪೂಜೆಯ ಕೊಳಲೂ ಬಲ್ಲ.
ಶಿವ ಹೊರಗಾಗಿ ಮತ್ತನ್ಯವಿಲ್ಲವೆಂಬ ವೇದ ಉಂಟೇ?
ಎಂದೆಡೆ ಉಂಟು.
ಅಥರ್ವವೇದ:
'ಶಿವೋ ಉಮಾ ಪಿತರೌ' ಎಂದುದಾಗಿ
ದೇವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು,
ನಮಗೆಲ್ಲ ಮಾತಾಪಿತನು. (೬: ೧೫೫೩)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])

ಪರಿವಿಡಿ (index)
*
Previous ಸ್ವಸ್ತಿಕಾರೋಹಣ ದೀಕ್ಷೆ ಇನ್ನೂರ ಹದಿನಾರುಸ್ಥಲ Next