Previous ಅನುಭಾವ ಅರವತ್ತು ಮೂರು ಪುರಾತನರು Next

ಅರುವತ್ತು ನಾಲ್ಕು ಶೀಲಗಳು

ಅರುವತ್ತು ನಾಲ್ಕು ಶೀಲಗಳು

ಆಚಾರ, "ಕ್ರಿಯೆ" ಮತ್ತು “ಶೀಲ" ಪರ್ಯಾಯ ಪದಗಳಾದರೂ “ಶೀಲ” ಎಂಬುದನ್ನು ಹೆಚ್ಚಾಗಿ ಗುಣಕ್ಕೂ, ’ಆಚಾರ" ಅಥವಾ “ಕ್ರಿಯೆ” ಎಂಬುದನ್ನು ಹೆಚ್ಚಾಗಿ ಗುಣದ ವ್ಯಕ್ತರೂಪವಾದ ಕಾರ್ಯಗಳಿಗೂ ಅನ್ವಯಿಸುವಂತೆ ನಾವು ಬಳಸುತ್ತೇವೆ. ಒಬ್ಬ ವ್ಯಕ್ತಿಯಲ್ಲಿ ಶೀಲವಿದ್ದರೆ, ಅವನು ಸತ್ಕ್ರಿಯೆಗಳನ್ನು ಆಚರಿಸುತ್ತಾನೆ. ಆದರೆ ಕೆಲವು ವೇಳೆ ಆ ಗುಣವಿಲ್ಲದಿದ್ದರೂ ಅವನು ಆ ರೀತಿ ಆಚರಿಸಬಲ್ಲ. ಉದಾಹರಣೆಗೆ ಒಬ್ಬ ವ್ಯಕ್ತಿ ಸ್ವಭಾವತಃ ದಾನಶೀಲನಲ್ಲದಿದ್ದರೂ, ಯಾರದೋ ಬಲವಂತಕ್ಕೆ ಅಥವಾ ಯಾವುದೋ ಲಾಭದಾಸೆಗೆ ದಾನ ಮಾಡಬಹುದು. ಇಂಥ ಆಚಾರಗಳು ಢಂಬಾಚಾರಗಳೆನಿಸಿಕೊಳ್ಳುತ್ತವೆಯೇ ಹೊರತು, ಶೀಲಗಳೆನಿಸಿಕೊಳ್ಳುವುಲ್ಲ.

ಧರ್ಮದಲ್ಲಿ ಶೀಲ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತವೆ. ಏಕೆಂದರೆ ಶೀಲವೇ ವ್ಯಕ್ತಿಯನ್ನು ಶುದ್ದೀಕರಿಸಿ, ಅವನಿಗೆ ಜ್ಞಾನವನ್ನು ಕೊಡುತ್ತದೆ. ಅದಕ್ಕೇ ಕೆಲವು ವಚನಕಾರರು ಆಚಾರವೇ ಜ್ಞಾನ, ಜ್ಞಾನವೇ ಆಚಾರವೆಂದು ಹೇಳಿದರೆ, ಮತ್ತೆ ಕೆಲವರು ಅಚಾರವಿಲ್ಲದವಂಗೆ ಜ್ಞಾನವಿಲ್ಲವೆಂದು ಹೇಳಿದ್ದಾರೆ.

ಇಂಥ ಆಚಾರ ಅಥವಾ ಶೀಲಗಳು ಅರವತ್ತು ನಾಲ್ಕು ಎಂದು ಕೊಂಡುಗುಳಿ ಕೇಶಿರಾಜನೂ ಪಾಲ್ಕುರಿಕೆ ಸೋಮನಾಥನೂ ನಿಗದಿ ಪಡಿಸಿದ್ದಾರೆ. ವಚನಕಾರರು ಈ ಅರವತ್ತುನಾಲ್ಕು ಶೀಲಗಳ ಬಗ್ಗೆ ಅಲ್ಲಲ್ಲಿ ಪ್ರಸ್ತಾಪಿಸಿದ್ದರೂ, ಅವು ಯಾವುವೆಂಬುದನ್ನು ಯಾರೂ ಪಟ್ಟಿಮಾಡಿ ತಿಳಿಸಿಲ್ಲ. ಆದುದರಿಂದ ನಾವು ಸಧ್ಯಕ್ಕೆ ತೋಂಟದ ಸಿದ್ಧಲಿಂಗ ಶಿವಯೋಗಿಗಳು ರಚಿಸಿರುವ ಪಾಲ್ಕುರಿಕೆ ಸೋಮನಾಥ ಪುರಾಣವನ್ನು ಆಧರಿಸಿ, ಆ ಅರವತ್ತು ನಾಲ್ಕು ಶೀಲಗಳಾವವು ಎಂಬುದನ್ನು ಪಟ್ಟಿ ಮಾಡೋಣ. [ಸಿದ್ಧಲಿಂಗ ಶಿವಯೋಗಿಗಳ ಪ್ರಕಾರ, ಪಾಲ್ಕುರಿಕೆ ಸೋಮನಾಥನು ಈ ಎಲ್ಲ ಶೀಲಗಳನ್ನು ಆಚರಿಸುತ್ತಿದ್ದನು].

೧. ಶಿವಲಿಂಗಾಂಗ ಸಂಬಂಧಿಯಾದ ಮೇಲೆ ಅನ್ಯ ದೈವಗಳನ್ನು ನಂಬಬಾರದು
೨. ಅಸತ್ಯ, ದ್ವಂದ್ವಾರ್ಥ, ವಂಚನೆ, ಔದಾಸೀನ್ಯ, ಪಂಕ್ತಿಭೇದ, ನಿರ್ದಯತೆ, ಭವಿಮಿಶ್ರ, ಮುಂತಾದ ಲೌಕಿಕ ಮಾರ್ಗದ ವರ್ಜನೆ,
೩. ನಾಯಿ, ಹಂದಿ, ಕೋಳಿಗಳನ್ನು ಮನೆಯಲ್ಲಾಗಲಿ ಮನೆಯ ಸುತ್ತಮುತ್ತಲಾಗಲಿ ಬಿಟ್ಟುಕೊಳ್ಳಬಾರದು;
೪. ಜಾತಿಸೂಕ, ಜನನಸೂತಕ, ರಜಸ್‌ತಕ, ಪ್ರೇತಸೂತಕ, ಉಚ್ಚಿಷ್ಟಸೂತಕ ಎಂಬ ಐದು ಸೂತಕಗಳನ್ನು ಪಾಲಿಸಬಾರದು
೫. ಶುಭವಾರ, ಶುಭ ತಿಥಿ, ಶುಭಲಗ್ನ, ಮುಂತಾದ ಜ್ಯೋತಿಷಿಗಳು ಪ್ರತಿಪಾದಿಸುವ ಕರ್ಮಕಾಂಡವನ್ನು ತ್ಯಜಿಸುವುದು,
೬. ಸೋಮವಾರ, ವ್ಯತೀಪಾತ (ಸೋಮವಾರದಂದು ಬರುವ ಹುಣ್ಣಿಮೆ), ಸಂಕ್ರಾಂತಿ, ಶಿವರಾತ್ರಿ, ಗ್ರಹಣಕಾಲದಲ್ಲಿ ಉಪವಾಸ, ಮುಂತಾದ ವ್ರತಗಳನ್ನು ಆಚರಿಸಬಾರದು
೭. ತೀರ್ಥಕ್ಷೇತ್ರಗಳಿಗೆ ಸ್ಥಾವರಲಿಂಗ ಪೂಜೆ ಮಾಡುವ ಉದ್ದೇಶದಿಂದ ಹೋಗಬಾರದು
೮. ಲಿಂಗಾರ್ಪಿತವ ಭವಿಗಳು ನೋಡದಂತೆ ಪಾತ್ರೆಗಳಿಗೆ ಪಾವುಡ ಕಟ್ಟುವುದು
೯. ನೈಸರ್ಗಿಕ ಜಲವನ್ನು ಲಿಂಗಪೂಜೆಯಲ್ಲಿ ಬಳಸಲು ಯೋಗ್ಯವಾಗುವಂತೆ ಅದನ್ನು ದೇವಮಂತ್ರದಿಂದ ಶುದ್ದಿ ಮಾಡುವುದು;
೧೦.ಗುರುವಿನಿಂದ ತನ್ನ ಧರ್ಮಪತ್ನಿಗೂ ಶೀಲೋಪದೇಶ ಕೊಡಿಸುವುದು
೧೧. ಭವಿಗಳೊಡನೆ ಬಂಧುತ್ವ ಮಿತ್ರತ್ವವನ್ನೂ ಬೆಳೆಸಬಾರದು. ಅವರೊಡನೆ ಕೊಡುಕೊಳ್ಳುವ ಯಾವ ವ್ಯವಹಾರವನ್ನೂ ಮಾಡಬಾರದು
೧೨. ಗುರು ಮತ್ತು ಜಂಗಮರಲ್ಲಿ ಗುಣದೋಷಗಳನ್ನರಸದೆ, ಅವರನ್ನು ಸಾಕ್ಷಾತ್ ದೇವನೆಂದು ಭಕ್ತಿ ತೋರಿಸುವುದು.
೧೩. ಜಂಗಮಪಾದೋದಕದಿಂದ ಇಷ್ಟಲಿಂಗವನ್ನು ತೊಳೆದು, ಹಸ್ತದಲ್ಲಿ ಉಳಿದ ಪಾದೋದಕವನ್ನು (ಶೇಷಪಾದೋದಕವನ್ನು) ಸೇವಿಸಬೇಕು
೧೪. ಗರ್ಭಿಣಿಗೆ ಎಂಟು ತಿಂಗಳು ತುಂಬಿದಾಗ ಜಂಗಮರಿಂದ ವಿಭೂತಿ ಧಾರಣೆ ಮಾಡಿಸಬೇಕು.
೧೫. ಶಿವಭಕ್ತರಲ್ಲಿ ಜಾತಿಭೇದ ಮಾಡಬಾರದು.
೧೬. ಶಿವಭಕ್ತರಲ್ಲಿ ಗುಣದೋಷ, ಜ್ಞಾನಾಜ್ಞಾನಗಳನ್ನೆಣಿಸಬಾರದು
೧೭. ವಿಭೂತಿಧಾರಣೆ ಮಾಡಬೇಕೇ ಹೊರತು, ಕರ್ಪೂರ, ಕಸ್ತೂರಿ, ಕುಂಕುಮ ಮುಂತಾದವುಗಳನ್ನು ಲೇಪಿಸಿಕೊಳ್ಳಬಾರದು;
೧೮. ಎಮ್ಮೆಯ ಹಾಲು ಉಪಯೋಗಿಸಬಾರದು.
೧೯. ಭವಿಗಳಿಗಾಗಿ ಕೆಲಸಮಾಡಬಾರದು.
೨೦. ಉಪ್ಪನ್ನು ಸೇವಿಸಬಾರದು
೨೧. ಹತ್ತಿಯನ್ನು ಹಿಂಜುವ ಬಿಲ್ಲಿಗೆ ಯಾವುದಾದರೊಂದು ಪ್ರಾಣಿಯ ತೊಗಲಿನ ಕಿವಿಯನ್ನು ಕರುಳಿನ ಹುರಿಯನ್ನು ಅಳವಡಿಸಲಾಗಿರುತ್ತದೆ. ಶರಣನಾದವನು ಅಂಥ ಬಿಲ್ಲಿನಿಂದ ಹತ್ತಿಯನ್ನು ಹಿಂಜಿಸದೆ ಬೇರೆ ಬಿಲ್ಲಿನಿಂದ, ಹಾಗೂ ಲಿಂಗವಂತರಿಂದಲೇ ಹತ್ತಿಯನ್ನು ಹಿಂಜಿಸಿ, ನೇಯಿಸಿ ಧರಿಸುವುದು,
೨೨. ಭವಿಗಳು ನೇಯ್ದ ಕಂಬಳಿಯನ್ನು ಉಪಯೋಗಿಸಬಾರದು
೨೩. ಬಟ್ಟೆಗಳನ್ನು ಕೆರೆ ಅಥವಾ ಭಾವಿಯ ನೀರಿನಿಂದ ಒಗೆಯದ, ಚಿಲುಮೆಯ ನೀರಿನಿಂದಲೇ ಒಗೆಯುವುದು, ಏಕೆಂದರೆ ಚಿಲುಮೆ ನೀರು ನಿರ್ಮಲ.
೨೪. ಮಾತಿಗೆ ತಪ್ಪದಿರುವುದು,
೨೫. ಗುರುಲಿಂಗ ಜಂಗಮಕ್ಕೆ ಶ್ರದ್ಧೆನಿಷ್ಠೆಗಳಿಂದ ತನು ಮನ ಧನ ಅರ್ಪಿಸುವುದು
೨೬. ಶಿವಭಕ್ತನೇ ಶ್ರೇಷ್ಠ ಕುಲದವನು: ಪಂಚಾಕ್ಷರಿಯೇ ಮಹಾಮಂತ್ರ ಎಂದು ತಿಳಿದು ಆಚರಿಸವುದು;
೨೭. ಮನೆಗೆ ಲಿಂಗಮುದ್ರೆಯನ್ನು ಬರೆಸುವುದು ಹಾಗೂ ಭವಿಗೆ ಕೈ ಮುಗಿಯದಿರುವುದು
೨೮. ಲಿಂಗಾಯತ ಕುಂಬಾರರು ರಚಿಸಿದ ಮಡಕೆಗಳನ್ನಷ್ಟೇ ಬಳಸುವುದು
೨೯. ಹಸು ಮತ್ತು ಎತ್ತುಗಳಿಗೆ ಲಿಂಗ ಮುದ್ರೆಯನ್ನೊತ್ತುವುದು,
೩೦. ಪಾತ್ರೆಗಳಿಗೂ ನೇಗಿಲು ಮುಂತಾದ ಉಪಕರಣಗಳಿಗೂ ಲಿಂಗ ಮುದ್ರೆಯನ್ನೊತ್ತುವುದು
೩೧. ದನಕರುಗಳಿಗೆ ಲಿಂಗಧಾರಕರಿಂದಲೇ ಮೇವು ಮತ್ತು ನೀರನ್ನು ಒದಗಿಸುವುದು,
೩೨. ಹಸುಗಳ ಮೇಲೆ ಲಿಂಗಮುದ್ರೆಯಿರುವ ಹೋರಿಯನ್ನು ಮಾತ್ರ ಹಾಕಿಸುವುದು
೩೩. ಶಿವ ಭಕ್ತರಾಜರಿಂದ ಭೂಮಿಯನ್ನು ಕೊಂಡು, ಅದಕ್ಕೆ ಲಿಂಗ ಮುದ್ರಾಂಕಿತ ಕಲ್ಲುಗಳನ್ನು ನಾಲ್ಕು ದಿಕ್ಕುಗಳಲಿಯೂ ನಿಲ್ಲಿಸಿ, ಅದರಲ್ಲೆ ಪೂಜೆಗೆ ಬೇಕಾದ ಹೂವನ್ನು ಬೆಳೆಯುವುದು.
೩೪. ಆ ಹೂದೋಟದ ಮೇಲೆ ಭವಿಗಳ ಕಣ್ಣು ಬೀಳದಂತೆ ಎತ್ತರವಾದ ಬೇಲಿ ಬೆಳೆಸುವುದು
೩೫. ಲಿಂಗಮುದ್ರೆಯಿದ್ದ ಬಸವನ ತೊಗಲಿನಿಂದ ಮಾಡಿದ ಮಿಣಿಯನ್ನು ನೇಗಲಿಗೆ ಕಟ್ಟಬಾರದು;
೩೬. ಭವಿಗಳ ನುಡಿಯನ್ನು ಕೇಳಬಾರದು ಭವಿಗಳನ್ನು ನೋಡಬಾರದು;
೩೭. ಭವಿಯನ್ನು ಹತ್ತಿರ ಸೇರಿಸಬಾರದು. ಅವರು ಬೆಳೆದ ಧಾನ್ಯಗಳನ್ನು ಬಳಸಬಾರದು
೩೮. ರೋಗ ರುಜಿನಗಳನ್ನು ಗುಣಪಡಿಸಲು ಮಾಟ ಮಂತ್ರಗಳ ಮೊರೆ ಹೋಗದಿರುವುದು
೩೯. ಲಿಂಗವನ್ನು ಬೇಡಿಕೊಳ್ಳಬಾರದು:
೪೦. ಸ್ವಾರ್ಥ ಬುದ್ಧಿಯಿಂದಲಾಗಲಿ ಡಂಭಾಚಾರಕ್ಕಾಗಲಿ ಲಿಂಗಪೂಜೆ ಮಾಡಬಾರದು
೪೧. ಮಾಟತ್ರಯಗಳ ಮರ್ಮವನ್ನರಿದು ಅದರಂತೆ ಮಾಡುವುದು,
೪೨. ಶಿವಕತೆ, ಶಿವಮಂತ್ರ, ಇತ್ಯಾದಿಗಳಿಲ್ಲದ ಮಾತುಗಳನ್ನು ಕೇಳಿಸಿಕೊಳ್ಳಬಾರದು
೪೩. ನವರತ್ನಗಳನ್ನೊಳಗೊಂಡ ವಸ್ತ್ರ ಒಡವೆಗಳನ್ನು ಧರಿಸಬಾರದು
೪೪. ಜಂಗಮನಿಗೆ ಮೊದಲು ಮದುವೆ ಮಾಡಿ, ಸಾಕಷ್ಟು ಧನವಸ್ತ್ರ ಒಡವೆಗಳನ್ನು ಅರ್ಪಿಸಿ, ಆಮೇಲೆ ಭಕ್ತರು ಮದುವೆಯಾಗಿ ಭೋಗಿಸಬೇಕು.
೪೫. ತನುವು ಆಚಾರಗಳನ್ನು ಮಾಡಬೇಕು ಮನಸ್ಸು ಜ್ಞಾನವನ್ನು ಪಡೆಯಬೇಕು. ಆಧ್ಯಾತ್ಮದಲ್ಲಿ ಆಚಾರ, ಮತ್ತು ಜ್ಞಾನ ಎರಡೂ ಬೇಕು ಹಾಗೆಯೇ ಆಚಾರವನ್ನು ಬೋಧಿಸಿದ ಗುರುವೂ, ಜ್ಞಾನವನ್ನು ಬೋಧಿಸಿದ ಜಂಗಮ ಇಬ್ಬರೂ ಆವಶ್ಯಕ.
೪೬. ಬೆಳಿಗ್ಗೆ ಸೂರ್ಯನನ್ನೂ ರಾತ್ರಿ ಚಂದ್ರನನ್ನೂ ನೋಡುವ ಮೊದಲು ಶಿವಶರಣರ ದರ್ಶನ ಮಾಡಬೇಕು
೪೭. ದೇಶ ಸಂಚಾರ ಮಾಡುವುದು.
೪೮. ಮನೆಯನ್ನು ದೊಡ್ಡ ಕಲ್ಲುಗಳ ತಳಪಾಯದ ಮೇಲೆ ಕಟ್ಟಬೇಕು, ಹಾಗೂ ಹೊರಗೆ ಹೋಗುವಾಗ ಎತ್ತುಗಳನ್ನು ಒಳಗೆ ಕಟ್ಟಬೇಕು;
೪೯. ಎಲ್ಲವೂ ಶಿವಾಧೀನವಾದುದರಿಂದ, ಎಲ್ಲವೂ ಶಿವನಾಜ್ಞೆಯಂತೆ ನಡೆಯುತ್ತದೆ ಎಂದು ತಿಳಿದು ಆಚರಿಸಬೇಕೇ ಹೊರತು, ಆಚಾರಗಳ ಅರ್ಥವನ್ನು ತಿಳಿಯದೆಯೇ ಅಂಧಶ್ರದ್ಧೆಯಿಂದ ಆಚಾರ ಮಾಡಬಾರದು.
೫೦. ದಶವಾಯುಗಳ ಚಲನೆಯು ನಮ್ಮ ಮನಸ್ಸನ್ನು ಅಸ್ಥಿರಗೊಳಿಸಿ, ನಮ್ಮನ್ನು ದುರ್ಮಾರ್ಗಕ್ಕೆಳೆಯುವಂತೆ ಮಾಡಬಹುದು ಶರಣನು ಅವುಗಳಿಗೆ ಬಲಿಯಾಗಬಾರದು:
೫೧. ಕಾಮಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳನ್ನು ಸಂಹರಿಸುವುದು
೫೨. ಕಾಯಕಲ್ಪಿತಗಳಿಗೆ ಬಲಿಯಾಗದಿರುವುದು
೫೩, ಜಾಗ್ರತ, ಸ್ವಪ್ನ, ಸುಷುಪ್ತಿಯಲ್ಲಿ ಲಿಂಗವನ್ನಲ್ಲದೇ ಮತ್ತೇನನ್ನೂ ನೆನೆಯದಿರುವುದು;
೫೪. ಶರಣರಲ್ಲಿ ಶಿವನಿದ್ದಾನೆಂಬ ಮಾತನ್ನು ಭಕ್ತರಿಗೆ ಮನದಟ್ಟಾಗುವಂತೆ ತಿಳಿಸಿ ಹೇಳುವುದು
೫೫. ದಶವಿಧ ಪಾದೋದಕ ಮತ್ತು ಪ್ರಸಾದಗಳನ್ನು ತಪ್ಪದೇ ಆಚರಿಸುವುದು
೫೬. ಎಲ್ಲ ಇಂದ್ರಿಯಗಳನ್ನೂ ಲಿಂಗದ ಬಾಯಿಗಳನ್ನಾಗಿ ಮಾಡಿ, ಎಲ್ಲ ಸುಖವನ್ನು ಲಿಂಗ ಭೋಗದ ನಂತರವೇ ಭೋಗಿಸುವುದು;
೫೭. ಷಟ್‌ಸ್ಥಲ ಮಾರ್ಗವನ್ನು ತಪ್ಪದೇ ಆಚರಿಸುವುದು;
೫೮. ಭಕ್ತನೇ ಬಯಸಿ ಪಡುವುದು ಅಂಗಭೋಗ (ಆದುದರಿಂದ ಅದು ಕೀಳು) ಮತ್ತು ಬಯಸದೇ ಬಂದುದು ಲಿಂಗಭೋಗ (ಆದುದರಿಂದ ಅದು ಮೇಲು) ಎಂದು ಪ್ರಸಾದ ಬುದ್ದಿಯಿಂದ ಭೋಗಿಸುವುದು;
೫೯. ಮೂವತ್ತಾರು ವಿಧದ ಅರ್ಪಣೆ ಮಾಡುವುದು
೬೦. ಶೈವರಂತೆ ಆಹ್ವಾನ ವಿಸರ್ಜನೆ ಮಾಡದೆ, ಆತ್ಮನೇ ಶಿವನೆಂದು ತಿಳಿದು ಸದಾ ಶಿವಾನುಭವಿಯಾಗಿರುವುದು;
೬೧. ಅಣಿಮಾ, ಮಹಿಮಾ ಇತ್ಯಾದಿ ಮಹಾಸಿದ್ಧಿಗಳನ್ನರಸದೆ (ಶಾಂಕರ) ಅದ್ವೈತ ವೇದಾಂತವನ್ನು ತ್ಯಜಿಸಿ, ದ್ವೈತ ಭಾವವನ್ನು ದೂರವಿಟ್ಟು, ಹೊರಗೂ ಶಿವನೆ ಒಳಗೂ ಶಿವನೆ ಎಂದು ಎಲ್ಲವೂ ಶಿವಮಯವೆಂದು ತಿಳಿಯುವುದು;
೬೨. ಮಾಡುವುದೆಲ್ಲವೂ ಶಿವನಿಗಾಗಿಯೇ ಹೊರತು ತನಗಲ್ಲ ಎಂದು ತಿಳಿದು ಅದರಂತೆ ಆಚರಿಸುವುದು;
೬೩. ದೇಹವಿದ್ದರೂ ದೇಹದ ದುರ್ಗುಣಗಳಿಲ್ಲದಿರುವುದು, ಪ್ರಾಣವಿದ್ದರೂ ಪ್ರಾಣದ ದುರ್ಗುಣಗಳಿಲ್ಲದಿರುವುದು; ದೇಹ, ಪ್ರಾಣ ಮತ್ತು ಮನಸ್ಸೆಲ್ಲವನ್ನೂ ಲಿಂಗಮಯವನ್ನಾಗಿ ಮಾಡುವುದು ತಾನೆಂಬುದಲ್ಲದೆ ಇರುವದೆಲ್ಲವೂ ಶಿವನೆಂದು ತಿಳಿಯುವುದು.
೬೪. ಇರುವುದೆಲ್ಲವೂ ಶಿವನೆಂದು ತಿಳಿದರೂ ಜಗತ್ತು ಮಿಥ್ಯೆಯೆಂಬ ವೇದಾಂತದ ನಿಲವನ್ನು ಒಪ್ಪಿಕೊಳ್ಳದಿರವುದು ಜ್ಞಾನವಿಲ್ಲದ ಶೀಲ, ಶೀಲವಿಲ್ಲದೆ ಜ್ಞಾನ ಎರಡನ್ನು ಆಚರಿಸದೆ, ಜ್ಞಾನ ಶೀಲಗಳಿಗಿರುವ ಅಂತರವನ್ನು ಅಳಿಸಿ, ತಾನು ಶಿವನಲ್ಲಿ ಅಭಿನ್ನಭಾವದಿಂದ ಬೆರೆತಿದ್ದೇನೆಂಬುದನ್ನು ಅನುಭವಿಸುತ್ತಾ ಪರಮಾನಂದದಿಂದ ಇರುವುದು.

ಶೀಲವೆಂದರೆ ಆಧ್ಯಾತ್ಮಿಕ ಪ್ರಗತಿಗೆ ಸಹಾಯಕವಾಗುವ ಧೋರಣೆ ಮತ್ತು ಕ್ರಿಯೆ ಎಂದಾದರೆ, ೩೪ನೆಯ ಶೀಲವಾಗಲಿ, ೪೭ ಅಥವಾ ೪೮ನೆಯ ಶೀಲವಾಗಲಿ ಹೇಗೆ ಶೀಲವೆನ್ನಿಸಿಕೊಳ್ಳುತ್ತವೆ ಎಂಬುದು ಪ್ರಶ್ನೆಯಾಗೇ ಉಳಿಯುತ್ತದೆ.

ವಚನಕಾರರು ಈ ೬೪ ಶೀಲಗಳನ್ನು ಪಾಲ್ಕುರಿಕೆ ಸೋಮನಂತೆ (ಅಥವಾ ತೋಂಟದ ಸಿದ್ದಲಿಂಗ ಶಿವಯೋಗಿಗಳಂತೆ) ಪಟ್ಟಿ ಮಾಡದಿದ್ದರೂ, ಬಹಳಷ್ಟನ್ನು ಎಲ್ಲರೂ ಬೇರೆ ಬೇರೆ ಶಬ್ದಗಳಲ್ಲಿ ಆಗಲೇ ತಿಳಿಸಿದ್ದಾರೆ. ಇದರಲ್ಲಿ ಬಹಳಷ್ಟು ಚೆನ್ನಬಸವಣ್ಣನವರ ಐವತ್ತು ಆಚಾರಗಳ ಪಟ್ಟಿಯಲ್ಲೂ ಇದೆ. ಆದರೆ ಪಂಚಾಚಾರಗಳಲ್ಲಿ ಒಂದಾದ ಗಣಾಚಾರವು ಈ ಅರವತ್ತು ನಾಲ್ಕು ಶೀಲಗಳ ಪಟ್ಟಿಯಲ್ಲಿ ಕಾಣದಿರುವುದು ಸೋಜಿಗದ ಸಂಗತಿ. ಅಷ್ಟೇ ಅಲ್ಲ, ಚಿಲುಮೆಯ ನೀರನ್ನೇ ಬಳಸುವ ಶೀಲವನ್ನಾಗಲಿ ಉಪ್ಪು ಬಳಸದಿರುವ ಶೀಲವನ್ನಾಗಲಿ ಕೆಲವು ವಚನಕಾರರು ಆಧ್ಯಾತ್ಮಿಕ ಗುಣವೆಂದು ಒಪ್ಪಿಕೊಳ್ಳದೆ ಅದನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಿದ್ದಾರೆ. (ನೋಡಿ : ಆಚಾರ", (ಆಚಾರ ಪ್ರಭೇದಗಳು", "ಶೀಲ, ವ್ರತ, ನೇಮ)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅನುಭಾವ ಅರವತ್ತು ಮೂರು ಪುರಾತನರು Next