Previous ಸೃಷ್ಟಿ ಸ್ಥಾವರಲಿಂಗ Next

ಸ್ಥಲ

ಸ್ಥಲ

ವಚನಗಳಲ್ಲಿ ಇದು ಕನಿಷ್ಠ ಮೂರು ಅರ್ಥಗಳಲ್ಲಿ ಬಳಸಲ್ಪಟ್ಟಿದೆ.

೧. ನಿಃಕಲಲಿಂಗ, ಸ್ಥಲ, ಸದಾಶಿವ ಈ ಮೂರೂ ಪದಗಳು ಅನೇಕ ವೇಳೆ ಸಮಾನಾರ್ಥಕವಾಗಿ ಪ್ರಯೋಗವಾಗಿದ್ದು, ಪ್ರಪಂಚದ ಮೂಲ ಸ್ಥಳ ಎಂಬರ್ಥವನ್ನು ಅವು ಕೊಡುತ್ತವೆ. ಮಗ್ಗೆಯ ಮಾಯಿದೇವನ ಪ್ರಕಾರ "ಸ" ಎಂದರೆ ಯಾವುದರಿಂದ ಪ್ರಪಂಚವು ಹೊರಬರುತ್ತದೆಯೋ ಅದು ಲ” ಎಂದರೆ, ಪ್ರಪಂಚವು ಲಯವಾಗಿ ಕೊನೆಗೆ ಎಲ್ಲಿಗೆ ಹಿಂತಿರುಗುತ್ತದೆಯೋ ಅದು, ಅಂದರೆ ಪರಶಿವ, ಅವನ ಪದವುತ್ಪತ್ತಿಯು ನಮಗೆ ಅಸ್ವೀಕಾರಾರ್ಹವಾಗಿ ಕಂಡರೂ, ಅವನ ಪ್ರಕಾರ ಸ್ಥಲವೆಂದರೆ, ಪ್ರಪಂಚದ ಮೂಲಸ್ಥಳ ಎಂಬ ಮಾತಂತೂ ಖಚಿತವಾಗುತ್ತದೆ. ಅದೇ ರೀತಿ, ಇತರ ವಚನಕಾರರು ಸ್ಥಲವು ಅಂಗಸ್ಥಲ, ಲಿಂಗಸ್ಥಲವೆಂದು ಇಬ್ಬಾಗವಾಯಿತು ಎಂದು ಹೇಳುವಾಗ ಸ್ಥಲವೆಂದರೆ ಪರಶಿವ ಎಂಬುದು ಖಚಿತವಾಗುತ್ತದೆ.

೨. ಮತ್ತೊಂದರ್ಥದಲ್ಲಿ ಸ್ಥಲವೆಂದರೆ ಚಕ್ರ ಅಥವಾ ಪದ್ಮ, ಉದಾಹರಣೆಗೆ, ಆಚಾರಲಿಂಗಸ್ಥಲವೆಂದರೆ ಆಧಾರ ಚಕ್ರ. ಏಕೆಂದರೆ, ಮಾನವದೇಹದಲ್ಲಿರುವ ಪ್ರತಿಯೊಂದು ಚಕ್ರದಲ್ಲಿಯೂ ಒಂದೊಂದು ಲಿಂಗವಿದೆ, ಅದನ್ನು ಒಂದಾದ ಮೇಲೊಂದರಂತೆ ಸಾಕ್ಷಾತ್ಕರಿಸಿಕೊಳ್ಳುವುದು ಲಿಂಗಾಯತನ ಕರ್ತವ್ಯ. ಆದರೆ ಲಿಂಗವು ಹೇಗೆ ಅಗೋಚರವೋ, ಅದರ ಸ್ಥಲವಾದ ಚಕ್ರವೂ ಅಗೋಚರ.

೩. ಮೂರನೆಯ ಅರ್ಥದಲ್ಲಿ ಸ್ಥಲವು ಸಾಧಕನ ಆಧ್ಯಾತ್ಮಿಕ ಹಂತಕ್ಕೆ ಅನ್ವಯಿಸುತ್ತದೆ. ಭಕ್ತಸ್ಥಲವು ಪ್ರಾಥಮಿಕ ಹಂತದ ಸಾಧಕನ ಸ್ಥಲವಾದರೆ, ಐಕ್ಯಸ್ಥಲವು ಸಾಧಕನ ಅಂತಿಮ ಸ್ಥಲವಾಗಿದೆ.

ವಾಸ್ತವಿಕವಾಗಿ, ಸ್ಥಲವು ಈ ಅರ್ಥದಲ್ಲಿ ಸಾಧಕನ ನಂಬಿಕೆ, ಆಚರಣೆಗಳ ಮೊತ್ತಕ್ಕೆ ಅನ್ವಯಿಸುತ್ತದೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಸೃಷ್ಟಿ ಸ್ಥಾವರಲಿಂಗ Next