Previous ತತ್ವ, ತತ್ವಜ್ಞಾನ, ತತ್ವತ್ರಯ ತೆರಹಿಲ್ಲದ ಘನ Next

ತಾಪತ್ರಯ

ತಾಪತ್ರಯ

ಮೂರು ರೀತಿಯ ತಾಪ (ಕಷ್ಟ)ಗಳು. ಇವೆಂದರೆ, ಅಧಿಭೌತಿಕ, ಅಧಿದೈವಿಕ ಮತ್ತು ಆಧ್ಯಾತ್ಮಿಕ, ಪ್ರಕೃತಿಯ ವಿಕೋಪಗಳು (ಉದಾಹರಣೆಗೆ, ಬರ, ಪ್ರವಾಹ, ಅತಿವೃಷ್ಟಿ) ಅಧಿಭೌತಿಕ ತಾಪಗಳು. ಭೌತ ಪ್ರಕೃತಿಯಿಂದ ಇವು ಉಂಟಾಗುವುದರಿಂದ, ಇವಕ್ಕೆ ಅಧಿಭೌತಿಕ ಎಂದು ಹೆಸರು. ದೇವದೇವತೆಗಳನ್ನು ನಾವು ಸಕಾಲಕ್ಕೆ ಪೂಜಿಸದೆ ಅವರನ್ನು ತೃಪ್ತಿಪಡಿಸದಿದ್ದರೆ, ಅಥವಾ ಅವರನ್ನು ಅವಹೇಳನ ಮಾಡಿದರೆ, ಅವರಿಗೆ ಕೋಪಬಂದು, ನಮಗೆ ಕೆಲವು ರೀತಿಯ ತಾಪಗಳನ್ನುಂಟುಮಾಡುತ್ತಾರೆ. ಸಿಡುಬು ಮುಂತಾದ ರೋಗಗಳು ಅಧಿದೈವಿಕ ತಾಪಗಳಿಗೆ ಉದಾಹರಣೆಗಳು, ಕೆಲವು ತಾಪಗಳನ್ನು ನಾವೇ ಉಂಟುಮಾಡಿಕೊಳ್ಳುತ್ತೇವೆ. ಅತಿಯಾಗಿ ತಿನ್ನುವುದು, ನಮ್ಮ ಆರೋಗ್ಯಕ್ಕೆ ಒಗ್ಗದ ವಸ್ತುಗಳನ್ನು ಸೇವಿಸಿವುದು, ಕಳ್ಳತನ, ಸುಲಿಗೆ, ಕೊಲೆ ಮುಂತಾದ ಅನೈತಿಕ ಕಾರ್ಯಗಳನ್ನು ಮಾಡುವುದು ನಮ್ಮ ಮೇಲೆ ಕೆಲವು ದುಷ್ಪರಿಣಾಮಗಳನ್ನು ಬೀರುತ್ತವೆ. ಈ ಪರಿಣಾಮಗಳಿಗೆ ಪ್ರಕೃತಿಯಾಗಲಿ ದೇವದೇವತೆಗಳಾಗಲಿ ಹೊಣೆಯಲ್ಲ. ಅದಕ್ಕೆ ನಾವೇ ಕಾರಣರು. ಅತಿಯಾಗಿ ತಿನ್ನುವುದು ಮುಂತಾದ ಕ್ರಿಯೆಗಳು ತಮ್ಮ ದುಷ್ಪರಿಣಾಮವನ್ನು ಈ ಜನ್ಮದಲ್ಲೆ ಉತ್ಪಾದಿಸಿದರೆ, ಅನೈತಿಕ ಕಾರ್ಯಗಳು ತಮ್ಮ ಪರಿಣಾಮವನ್ನು ಕೆಲವು ವೇಳೆ ಮುಂದಿನ ಜನ್ಮದಲ್ಲಿ ಉತ್ಪಾದಿಸುತ್ತವೆ.

ಪುರಾತನ ಭಾರತೀಯ ದಾರ್ಶನಿಕರೆಲ್ಲರ ಪ್ರಕಾರ (ಚಾರ್ವಾಕರನ್ನುಳಿದು) ತಾಪತ್ರಯಗಳು ಅನಾದಿ. ಸಾವೇ ಅವುಗಳ ಅಂತ್ಯ ಎಂಬ ಭರವಸೆಯೂ ಇಲ್ಲ. ಏಕೆಂದರೆ, ನಮ್ಮ ನಮ್ಮ ಕರ್ಮಗಳಿಗೆ ತಕ್ಕಂತೆ ಅವೇ ಬೇರೆ ಬೇರೆ ರೂಪಗಳಲ್ಲಿ ಮುಂದಿನ ಜನ್ಮಗಳಲ್ಲಿಯೂ ಮರುಕಳಿಸುತ್ತವೆ. ಮೋಕ್ಷವೇ (ಲಿಂಗಾಂಗ ಸಾಮರಸ್ಯವೇ ಅವುಗಳ ಅಂತ್ಯ.)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ತತ್ವ, ತತ್ವಜ್ಞಾನ, ತತ್ವತ್ರಯ ತೆರಹಿಲ್ಲದ ಘನ Next