Previous ತಾಪತ್ರಯ ತ್ರಿಗುಣ Next

ತೆರಹಿಲ್ಲದ ಘನ

ತೆರಹಿಲ್ಲದ ಘನ

ಘನವೆಂದರೆ ಚಿತ್ತು, ಅರಿವು, ಪರಶಿವ. ಯಾವೆರಡು ಭೌತವಸ್ತುಗಳನ್ನು ತೆಗೆದುಕೊಂಡರೂ, ಅವುಗಳ ಮಧ್ಯೆ ತೆರವು ಇರುತ್ತದೆ. ತೆರವಿಲ್ಲದ ಯಾವೆರಡು ಭೌತವಸ್ತುಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಅರಿವು ಅಥವಾ ಚಿತ್ತು ಅಖಂಡವಾಗಿರುತ್ತದೆ. ನನ್ನ ಚಿತ್ತು ಮತ್ತು ನಿಮ್ಮ ಚಿತ್ತುಗಳ ನಡುವೆ ತೆರವು ಇರುವಂತೆ ಈಗ ಕಾಣುತ್ತದೆಯಾದರೂ, ಅನುಭಾವ ಪಡೆದವನಿಗೆ ಆತ್ಮಗಳು ವಿಶ್ವಾತ್ಮನ ಭಾಗಗಳಾಗಿ ಕಾಣುತ್ತವೆ. ಅಷ್ಟೇ ಅಲ್ಲ, ಅವನಿಗೆ ಭೌತವಸ್ತುಗಳಲ್ಲಿರುವ ಚಿತ್ತೂ ಕಾಣುತ್ತದೆ. ಅಂದರೆ, ವಿವಿಧ ಆತ್ಮ ಹಾಗೂ ವಿವಿಧ ವಸ್ತುಗಳಲ್ಲಿ ಅವನಿಗೆ ಚೈತನ್ಯ ಕಾಣುತ್ತದೆ. ವಸ್ತುಗಳಲ್ಲಿ ಅನೇಕತೆ ಹಾಗೂ ವೈವಿಧ್ಯ ಕಂಡರೂ, ಅವುಗಳಲ್ಲಿರುವ ಚಿತ್ತು ಒಂದೇ ಅದು ಅಖಂಡ. ಇದನ್ನು ಒಂದು ಉಪಮೆಯ ಮೂಲಕ ಸ್ಪಷ್ಟಪಡಿಸಬಹುದು. ಅನೇಕ ಜಾತಿಯ ಹೂಗಳನ್ನು ಒಂದು ದಾರದ ಮೂಲಕ ಮಾಲೆ ಮಾಡಿದಾಗ, ಹೂವುಗಳು ತಮ್ಮ ಅನೇಕತೆ ಹಾಗೂ ವೈವಿಧ್ಯಗಳನ್ನು ಕಳೆದುಕೊಳ್ಳುವುದಿಲ್ಲ. ಆದರೆ ಅವುಗಳಲ್ಲಿರುವ ದಾರ ಮಾತ್ರ ಒಂದೇ, ಆ ದಾರದಿಂದಾಗಿಯೇ ಅವುಗಳಲ್ಲಿ ಏಕತೆ ಬಂದಿರುವುದು. ಹಾಗೆಯೇ, ಭೌತ ಹಾಗೂ ಚಿದ್ ವಸ್ತುಗಳಲ್ಲಿ ಆ ಪರಶಿವನಿಂದಾಗಿ ಏಕತೆ ಮೂಡಿದಾಗ ಅವುಗಳಲ್ಲಿ ಅನೇಕತೆ ಹಾಗೂ ವೈವಿಧ್ಯ ನಷ್ಟವಾಗುವುದಿಲ್ಲ. ಆದರೆ ಅವುಗಳಲ್ಲಿ ಅಂತಸ್ಥವಾಗಿರುವ ಪರಶಿವನಲ್ಲಿ ವೈವಿಧ್ಯತೆ ಅಥವಾ ಅನೇಕತೆ ಇಲ್ಲ. ಒಂದು ವೇಳೆ, ಪರಶಿವನು ಕೆಲವು ವಸ್ತುಗಳಲ್ಲಿ ಇದ್ದು, ಇನ್ನು ಕೆಲವು ವಸ್ತುಗಳಲ್ಲಿ ಇರದಿದ್ದರೆ, ಆಗ ಚಿತ್ತಿಗೂ ಖಂಡತೆ ಇದೆ ಎನ್ನಬಹುದಾಗಿತ್ತು.

ಜ್ಞಾನಿಗಳಿಗೂ ಅನುಭಾವಿಗಳಿಗೂ ತೆರಹಿಲ್ಲದ ಘನ ಕಾಣಿಸಿಕೊಂಡರೆ ಅಜ್ಞಾನಿಗಳಿಗೆ, ವಸ್ತುಗಳ ಅನೇಕತೆ ಮತ್ತು ವೈವಿಧ್ಯದಿಂದಾಗಿ ತೆರಹಿಲ್ಲದ ಘನ ಕಾಣಿಸಿವುದಿಲ್ಲ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ತಾಪತ್ರಯ ತ್ರಿಗುಣ Next