Previous ಇನ್ನೂರ ಹದಿನಾರುಸ್ಥಲ ನೂರೊಂದು ಸ್ಥಲ Next

ಇನ್ನೂರ ಹದಿನಾರು ಸಕೀಲಗಳು

ಇನ್ನೂರ ಹದಿನಾರು ಸಕೀಲಗಳು

ಕೀಲ ಎಂದರೆ ಕೊಂಡಿ ಎಂದರ್ಥ. ಎರಡು ಭಿನ್ನವಾದ ಭಾಗಗಳನ್ನು ಕೀಲ ಅಥವಾ ಕೊಂಡಿ ಬಂಧಿಸುತ್ತದೆ. ಅದೇ ರೀತಿ, ಆಧ್ಯಾತ್ಮಿಕ ಜೀವನದಲ್ಲಿ ಉಪಯುಕ್ತವಾದ ಪರಿಕಲ್ಪನೆಗಳಲ್ಲಿ ಒಂದು ಸಮನ್ವಯ ಬೇಕಾಗುತ್ತದೆ. ಸಕೀಲಗಳು ಇಂಥ ಒಂದು ಸಮನ್ವಯವನ್ನು ನೀಡಬಲ್ಲವು.

ಯಾವ ಸ್ಥಲದ ಅಂಗನು ಯಾವ ಸ್ಥಲದ ಲಿಂಗವನ್ನು ಪೂಜಿಸಬೇಕು, ಆ ಲಿಂಗ ಯಾವ ಚಕ್ರದಲ್ಲಿದೆ, ಯಾವ ಚಕ್ರದಲ್ಲಿ ಯಾವ ಭೂತ (ತತ್ವ) ಪ್ರಾಧಾನ್ಯತೆ ಪಡೆದಿದೆ. ಅದು ಯಾವ ಶಕ್ತಿಯ ರೂಪ, ಅದರ ಅಧಿದೇವತೆ ಯಾರು, ಸಾಧಕನು ಯಾವ ರೀತಿಯಲ್ಲಿ ಪೂಜೆ ಸಲ್ಲಿಸಿ (ಯಾವ ರೀತಿಯ ಪೂಜಾರಿಯಾಗಿ), ಪರಶಿವನನ್ನು ತೃಪ್ತಿಪಡಿಸಬೇಕು ಎಂಬ ಪ್ರಶ್ನೆಗೆ ಸಕೀಲ ಸಿದ್ಧಾಂತ ಉತ್ತರ ಕೊಡುತ್ತದೆ.

ವಚನಕಾರರು ಷಡ್ವಿಧ ಸಕೀಲ, ಅಷ್ಟವಿಧ ಸಕೀಲ, ಹನ್ನೆರಡು ವಿಧದ ಸಕೀಲ ಇತ್ಯಾದಿಯಾಗಿ ವಿವಿಧ ರೀತಿಯ ಸಕೀಲಗಳ ಗುಂಪನ್ನು ಕುರಿತು ವಿವರಿಸಿದ್ದಾರೆ. ಪ್ರಸ್ತುತ ನಾವು ೨೪ ಸಕೀಲಗಳ ಸಿದ್ಧಾಂತದ ವಿವರಗಳನ್ನು ಗಮನಿಸೋಣ :

ಮೊದಲನೆ ಸ್ಥಲ : ಭಕ್ತಿ ಸ್ಥಲ, ಶ್ರದ್ಧಾಭಕ್ತಿ, ಆಧಾರ ಚಕ್ರ, ಅದರಲ್ಲಿ ಆಚಾರಲಿಂಗ ಪೃಥ್ವಿ ತತ್ವ, ಅದರ ಮುಖ್ಯಗುಣ ಗಂಧ; ಗಂಧವೇ ಪದಾರ್ಥ, ಸುಗಂಧವೆಂಬ ಪ್ರಸಾದ; ಸ್ಥೂಲತನು, ಸುಚಿತ್ತವೆಂಬ ಹಸ್ತ; ಘ್ರಾಣಮುಖ; ಬ್ರಹ್ಮಪೂಜಾರಿ, ಬ್ರಹ್ಮ ಅಧಿದೇವತೆ, ತಾರಾಕಾಕೃತಿ, ನಕಾರ ಪ್ರಣಮ; ವೇಣುನಾದ; ಪೀತವರ್ಣ; ಸತ್ ಎಂಬ ಲಕ್ಷಣ, ಕರ್ಮವೆಂಬ ಸಾದಾಖ್ಯ, ಪರ ವೆಂಬ ಸಂಜ್ಞೆ ಪೂರ್ವ ದಿಕ್ಕು, ಋಗ್ವೇದ. ಜೀವಾತ್ಮ, ಕ್ರಿಯಾಶಕ್ತಿ, ನಿವೃತ್ತಿಕಲೆ.

ಹೀಗೆಂದರೇನು ಎಂಬುದನ್ನು ತಿಳಿದುಕೊಳ್ಳಬೇಕಾದರೆ ನಾವು ಇವುಗಳನ್ನು ಹೊಂದಿಸಿ, ಅವುಗಳಲ್ಲಿರುವ ಸಂಬಂಧವನ್ನು ಕಾಣಬೇಕಾಗುತ್ತದೆ.

ಭಕ್ತಸ್ಥಲದಲ್ಲಿರುವ ಸಾಧಕನ ಸ್ಕೂಲ ತನುವಿನ ಪ್ರತಿ ಅಂಗವು ಪಂಚಭೂತಗಳಿಂದ ಮಾಡಲ್ಪಟ್ಟಿದ್ದರೂ, ಅವನ ಆಧಾರ ಚಕ್ರಕ್ಕೆ ಪೃಥ್ವಿ ತತ್ವವೇ ಪ್ರಧಾನ; ಗಂಧವೇ ಪ್ರಧಾನ ಗುಣವುಳ್ಳ ಪೃಥ್ವಿ ತತ್ವವು ಕ್ರಿಯಾಶಕ್ತಿಯ ಮತ್ತೊಂದು ರೂಪವಾಗಿದ್ದು, ಅದಕ್ಕೆ ಬ್ರಹ್ಮನೇ ಅಧಿದೇವತೆ; ಆಧಾರ ಚಕ್ರದ ಮಧ್ಯದಲ್ಲಿ ಆಚಾರಲಿಂಗವಿದೆ. ಪೃಥ್ವಿಗೆ ಗಂಧವೇ ಪ್ರಧಾನಗುಣವಾದುದರಿಂದ ಭಕ್ತನು ಅದನ್ನು ಪರಶಿವನಿಗೆ ಸಮರ್ಪಿಸಿ, ಅದನ್ನು ಪ್ರಸಾದವನ್ನಾಗಿ ಮಾಡಿಕೊಂಡು, ಅದನ್ನು ಸೇವಿಸಿ ತಾನು ಶುದ್ಧನಾಗಿ ಪರಶಿವನ ಅನುಗ್ರಹಕ್ಕೆ ಪಾತ್ರನಾಗಿ ಅನುಭಾವವನ್ನು ಪಡೆದು, ಲಿಂಗಾಂಗ ಸಾಮರಸ್ಯವೆಂಬ ಧ್ಯೇಯವನ್ನು ಸಿದ್ಧಿಸಿಕೊಳ್ಳಬೇಕು. ಆದುದರಿಂದ, ಅವನು ಗಂಧವನ್ನು ಬ್ರಹ್ಮನಿಗೆ ಅಂದರೆ, ಪರಶಿವನ ಕರ್ಮಸಾದಾಖ್ಯದಲ್ಲಿರುವ ಫ್ರಾಣವೆಂಬ ಬಾಯಿಗೆ, ತನ್ನ ಸುಚಿತ್ತವೆಂಬ ಹಸ್ತದಿಂದ ಅರ್ಪಿಸಿ, ಸುಗಂಧವೆಂಬ ಪ್ರಸಾದವನ್ನಾಗಿ ಮಾಡಿಕೊಳ್ಳುತ್ತಾನೆ. ಪರಶಿವನನ್ನು ಹೀಗೆ ಪೂಜಿಸುವ ಭಕ್ತನು ಬ್ರಹ್ಮಪೂಜಾರಿಯೆನಿಸಿಕೊಳ್ಳುತ್ತಾನೆ. ಇದು ಸ್ಥೂಲ ಕೈಯನ್ನು ಉಪಯೋಗಿಸಿ, ಸ್ಥೂಲವಸ್ತುಗಳನ್ನು ಅರ್ಪಿಸಿ, ಸ್ಥೂಲ ಪ್ರಸಾದಗಳನ್ನು ಸ್ವೀಕರಿಸುವ ಪೂಜೆಯಲ್ಲ ಎಂಬುದನ್ನು ನಾವು ಗಮನದಲ್ಲಿಡಬೇಕು.

ಇಂಥ ಸೂಕ್ಷ್ಮ ಪೂಜೆಯ ದೆಸೆಯೆಂದಾಗಿ, ಭಕ್ತನು ಅನುಭಾವದಲ್ಲಿ ತನ್ನ ಆಧಾರದಲ್ಲಿರುವ ಕುಂಡಲಿಯನ್ನು ಎಬ್ಬಿಸಿ, ಅಲ್ಲಿರುವ ಜೀವಾತ್ಮನನ್ನೂ, ಆಧಾರದ ಪೂರ್ವದಿಕ್ಕಿನಲ್ಲಿರುವ ಸತ್ ಎಂಬ ಲಕ್ಷಣವನ್ನೂ, ಪರವೆಂಬ ಸಂಜ್ಞೆಯನ್ನು, ತಾರಾಕಾಕೃತಿಯನ್ನೂ, ಪೀತವರ್ಣವನ್ನೂ, ವೇಣುನಾದವನ್ನೂ ಅನುಭವಿಸುತ್ತಾನೆ. ಇದರಿಂದ ಪೃಥ್ವಿ ತತ್ವವು ಶುದ್ಧವಾಗಿ ನಿವೃತ್ತಿ ಕಲೆಯೆನಿಸಿಕೊಳ್ಳುತ್ತದೆ; ಹಾಗೂ ಅವನಿಗೆ ಋಗ್ವೇದ ಜ್ಞಾನವು ಲಭಿಸುತ್ತದೆ.

ಎರಡನೆ ಸ್ಥಲ : ಮಹೇಶ ಸ್ಥಲ, ನಿಷ್ಠಾಭಕ್ತಿ, ಸ್ವಾಧಿಷ್ಟಾನಚಕ್ರ, ಗುರುಲಿಂಗ, ಸೂಕ್ಷ್ಮತನು, ಸುಬುದ್ದಿ ಹಸ್ತ, ಅಪ್ಪುವೆ ಅಂಗ ರಸ ಪದಾರ್ಥ, ಸುರಸ ಪ್ರಸಾದ ಜಿಹ್ವೆಮುಖ, ವಿಷ್ಣು ಪೂಜಾರಿ, ವಿಷ್ಣು ಅಧಿದೇವತೆ, ದಂಡಾಕೃತಿ, ಮಕಾರ ಪ್ರಣಮ; ಘಂಟಾನಾದ, ಶ್ವೇತವರ್ಣ, ಪಶ್ಚಿಮ ದಿಕ್ಕು, ಯಜುರ್ವೇದ; ಅಂತರಾತ್ಮ, ಜ್ಞಾನಶಕ್ತಿ, ಪ್ರತಿಷ್ಠಾಕಲೆ; ಕರ್ತೃ ಸಾದಾಖ್ಯ, ಚಿತ್ತವೆಂಬ ಲಕ್ಷಣ, ಗೂಢ ಎಂಬ ಸಂಜ್ಞೆ.

ಮಹೇಶಸ್ಥಲದಲ್ಲಿರುವವನ ಸೂಕ್ಷ್ಮತನುವು ಪಂಚಭೂತಗಳಿಂದ ಮಾಡಲ್ಪಟ್ಟಿದ್ದರೂ, ಅವನ ಸ್ವಾಧಿಷ್ಠಾನ ಚಕ್ರಕ್ಕೆ ಅಪ್‌ತತ್ವವೇ ಪ್ರಧಾನ ರಸವೇ ಪ್ರಧಾನ ಗುಣವುಳ್ಳ ಅಪ್ ತತ್ವವು ಜ್ಞಾನಶಕ್ತಿಯ ಮತ್ತೊಂದು ರೂಪವಾಗಿದ್ದು, ಅದಕ್ಕೆ ವಿಷ್ಣುವೇ ಅಧಿದೇವತೆ: ಸ್ವಾಧಿಷ್ಠಾನ ಚಕ್ರದ ಮಧ್ಯದಲ್ಲಿ ಗುರುಲಿಂಗವಿದೆ ಅಂದರೆ, ಪರಶಿವನ ಕರ್ತೃ ಸಾದಾಖ್ಯದಲ್ಲಿರುವ ಜಿಹ್ವೆ ಎಂಬ ಬಾಯಿಗೆ, ತನ್ನ ಸುಬುದ್ಧಿ ಎಂಬ ಸೂಕ್ಷ್ಮ ಹಸ್ತದಿಂದ ರಸವೆಂಬ ಪದಾರ್ಥವನ್ನು ಅರ್ಪಿಸಿ, ಸುರಸವೆಂಬ ಪ್ರಸಾದವನ್ನು ಪಡೆಯುತ್ತಾನೆ. ಪರಶಿವನನ್ನು ಹೀಗೆ ಪೂಜಿಸುವ ಭಕ್ತನು ವಿಷ್ಣು ಪೂಜಾರಿ ಎನಿಸಿಕೊಳ್ಳುತ್ತಾನೆ.

ಸೂಕ್ಷ್ಮ ಹಸ್ತದಿಂದ ಮಾಡುವ ಇಂಥ ಪೂಜೆಯಿಂದಾಗಿಯೂ ಸುರಸ ಎಂಬ ಪ್ರಸಾದವನ್ನು ಸೇವಿಸಿದುದರಿಂದಾಗಿಯೂ ಮಹೇಶನು ಸ್ವಾಧಿಷ್ಠಾನ ಚಕ್ರದಲ್ಲಿರುವ ಗುರುಲಿಂಗವನ್ನು ಧ್ಯಾನಿಸಿ, ಅಲ್ಲಿರುವ ತಾನು ಅಂತರಾತ್ಮವೆಂದು ತಿಳಿದು, ಸ್ವಾಧಿಷ್ಟಾನದ ಪಶ್ಚಿಮ ದಿಕ್ಕಿನಲ್ಲಿರುವ ಚಿತ್ತೆಂಬ ಲಕ್ಷಣವನ್ನೂ, ಗೂಢವೆಂಬ ಚಿಹ್ನೆಯನ್ನೂ, ದಂಡಾಕೃತಿಯನ್ನೂ, ಶ್ವೇತವರ್ಣವನ್ನೂ, ಘಂಟಾನಾದವನ್ನೂ ಅನುಭವಿಸಿ ಆನಂದಿಸುತ್ತಾನೆ. ಇದರಿಂದಾಗಿ ಸ್ವಾಧಿಷ್ಟಾನದ ಅಪ್ ತತ್ವವು ಶುದ್ಧವಾಗಿ ಮುಂದೆ ಅದು ಪ್ರತಿಷ್ಠಾ ಕಲೆಯೆನಿಸಿಕೊಳ್ಳುತ್ತದೆ. ಅಂಥ ಭಕ್ತನಿಗೆ ಯಜುರ್ವೇದದ ಜ್ಞಾನವುಂಟಾಗುತ್ತದೆ.

ಮೂರನೆ ಸ್ಥಲ : ಪ್ರಸಾದಿ ಸ್ಥಲ, ಕುಂಡಲಾಕೃತಿ, ಶಿಕಾರ ಪ್ರಣಮ, ಭೇರಿನಾದ, ಮಣಿಪೂರಕ ಚಕ್ರ, ಹರಿತವರ್ಣ, ಕಾರಣತನು, ನಿರಹಂಕಾರ ಹಸ್ತ, ಶಿವಲಿಂಗ, ನೇತ್ರ ಮುಖ, ಸಾವಧಾನ ಭಕ್ತಿ, ಸುರೂಪು ಪದಾರ್ಥ, ಸುರೂಪು ಪ್ರಸಾದ, ರುದ್ರ ಪೂಜಾರಿ, ರುದ್ರನಧಿ ದೇವತೆ, ಮೂರ್ತಿ ಸಾದಾಖ್ಯ, ಆನಂದವೆಂಬ ಲಕ್ಷಣ, ಶರೀರಸ್ಥವೆಂಬ ಸಂಜ್ಞೆ ಉತ್ತರ ದಿಕ್ಕು, ಸಾಮವೇದ, ಅಗ್ನಿಯೇ ಅಂಗ, ಪರಮಾತ್ಮ, ಇಚ್ಛಾಶಕ್ತಿ, ವಿದ್ಯಾಕಲೆ.
ಪ್ರಸಾದಿ ಸ್ಥಲದಲ್ಲಿರುವವನ ಕಾರಣ ತನುವಿನಲ್ಲಿರುವ ಮಣಿಪೂರಕ ಚಕ್ರಕ್ಕೆ ಅಗ್ನಿ ತತ್ವವೇ ಪ್ರಧಾನ ರೂಪವೇ ಪ್ರಧಾನ ಗುಣವುಳ್ಳ ಅಗ್ನಿತತ್ವವು ಇಚ್ಛಾಶಕ್ತಿಯ ಮತ್ತೊಂದು ರೂಪವಾಗಿದ್ದು ಅದಕ್ಕೆ ರುದ್ರನೇ ಅಧಿದೇವತೆ, ಮಣಿಪೂರಕ ಚಕ್ರದ ಮಧ್ಯದಲ್ಲಿ ಶಿವಲಿಂಗವಿದೆ; ಅಗ್ನಿತತ್ವಕ್ಕೆ ರೂಪವೇ ಪ್ರಧಾನಗುಣವಾದುದರಿಂದ ಪ್ರಸಾದಿಯು ಅದನ್ನು ರುದ್ರನಿಗೆ (ಅಂದರೆ ಪರಶಿವನ ಮೂರ್ತಿ ಸಾದಾಖ್ಯದಲ್ಲಿರುವ ನೇತ್ರವೆಂಬ ಬಾಯಿಗೆ), ತನ್ನ ನಿರಹಂಕಾರವೆಂಬ ಸೂಕ್ಷ್ಮ ಹಸ್ತದಿಂದ ಅರ್ಪಿಸಿ, ಸುರೂಪು ಎಂಬ ಪ್ರಸಾದವನ್ನು ಪಡೆಯುತ್ತಾನೆ; ಪರಶಿವನನ್ನು ಹೀಗೆ ಪೂಜಿಸುವ ಸಾಧಕನು ರುದ್ರನೆಂಬ ಪೂಜಾರಿ ಎನಿಸಿಕೊಳ್ಳುತ್ತಾನೆ.

ಸೂಕ್ಷ್ಮ ಹಸ್ತದಿಂದ ಮಾಡುವ ಪೂಜೆ ಮತ್ತು ಸುರೂಪು ಪ್ರಸಾದಿಗಳಿಂದಾಗಿ, ಪ್ರಸಾದಿಯು ಮಣಿಪೂರಕ ಚಕ್ರದಲ್ಲಿರುವ ಶಿವಲಿಂಗವನ್ನು ಧ್ಯಾನಿಸಿ, ಅಲ್ಲಿರುವ ತಾನು ಪರಮಾತ್ಮನೆಂದು ತಿಳಿದು, ಮಣಿಪೂರಕ ಚಕ್ರದ ಉತ್ತರ ದಿಕ್ಕಿನಲ್ಲಿರುವ ಆನಂದವೆಂಬ ಲಕ್ಷಣವನ್ನೂ, ಶರೀರಸ್ಥವೆಂಬ ಸಂಜ್ಞೆಯನ್ನೂ, ಕುಂಡಲಾಕೃತಿಯನ್ನೂ, ಹರಿತವರ್ಣವನ್ನೂ ಭೇರಿನಾದವನ್ನೂ, ಅನುಭವಿಸಿ ಆನಂದಿಸುತ್ತಾನೆ. ಇದರಿಂದಾಗಿ ಮಣಿಪೂರಕ ಚಕ್ರವನ್ನು ಸುತ್ತುವರಿದ ಇಚ್ಛಾಶಕ್ತಿಯು ಶುದ್ಧವಾಗಿ ಮುಂದೆ ಅದು ವಿದ್ಯಾಕಲೆ ಎನಿಸಿಕೊಳ್ಳುತ್ತದೆ. ಅಂಥ ಸಾಧಕನಿಗೆ ಸಾಮವೇದ ಸಿದ್ಧಿಸುತ್ತದೆ.

ನಾಲ್ಕನೆಯ ಸ್ಥಲ : ಪ್ರಾಣಲಿಂಗಿಸ್ಥಲ, ಅರ್ಧಚಂದ್ರಾಕೃತಿ, ವಕಾರಪ್ರಣಮ, ಮೇಘನಾದ, ಅನಾಹತಚಕ್ರ, ಮಾಂಜಿಷ್ಠವರ್ಣ, ನಿರ್ಮಲತನು, ಸುಮನಹಸ್ತ, ಜಂಗಮಲಿಂಗ, ತ್ವಕ್ ಎಂಬ ಮುಖ, ಅನುಭಾವ ಭಕ್ತಿ, ಸುಸ್ಪರ್ಶನಪದಾರ್ಥ, ಸುಸ್ಪರ್ಶನ ಪ್ರಸಾದ; ಈಶ್ವರ ಪೂಜಾರಿ, ಈಶ್ವರನಧಿದೇವತೆ ಅಮೂರ್ತಿಸಾದಾಖ್ಯ, ನಿತ್ಯವೆಂಬ ಲಕ್ಷಣ, ಲಿಂಗಕ್ಷೇತ್ರ ಎಂಬ ಸಂಜ್ಞೆ, ದಕ್ಷಿಣ ದಿಕ್ಕು, ಅಥರ್ವವೇದ, ವಾಯುವೇ ಅಂಗ, ನಿರ್ಮಲಾತ್ಮ, ಆದಿಶಕ್ತಿ, ಶಾಂತಿಕಲೆ.

ಪ್ರಾಣಲಿಂಗಿ ಸ್ಥಲದಲ್ಲಿರುವವನ ಅನಾಹತಚಕ್ರವನ್ನು ವಾಯುತತ್ವವು ಸುತ್ತುವರೆದಿದೆ. ಸ್ಪರ್ಶವೇ ಪ್ರಧಾನಗುಣವುಳ್ಳ ವಾಯುತತ್ವವು ಆದಿಶಕ್ತಿಯ ಮತ್ತೊಂದು ರೂಪವಾಗಿದ್ದು ಅದಕ್ಕೆ ಈಶ್ವರನೇ ಅಧಿದೇವತೆ ಈ ಚಕ್ರದ ಮಧ್ಯದಲ್ಲಿ ಜಂಗಮಲಿಂಗವಿದೆ ವಾಯುವಿಗೆ ಸ್ಪರ್ಶವೇ ಪ್ರಧಾನ ಗುಣವಾದುದರಿಂದ ಪ್ರಾಣಲಿಂಗಿಯು ಅದನ್ನು ಈಶ್ವರನಿಗೆ ಅಂದರೆ, ಪರಶಿವನ ಅಮೂರ್ತಿ ಸಾದಾಖ್ಯದಲ್ಲಿರುವ ತ್ವಕ್ ಎಂಬ ಬಾಯಿಗೆ, ತನ್ನ ನಿರ್ಮಲ ತನುವಿನ ಸುಮನ ಎಂಬ ಸೂಕ್ಷ್ಮ ಹಸ್ತದಿಂದ ಅರ್ಪಿಸಿ, ಸುಸ್ಪರ್ಶವೆಂಬ ಪ್ರಸಾದವನ್ನು ಭೋಗಿಸುತ್ತಾನೆ; ಪರಶಿವನನ್ನು ಹೀಗೆ ಪೂಜಿಸುವ ಸಾಧಕನನ್ನು ಈಶ್ವರಪೂಜಾರಿಯೆಂದು ಕರೆಯಲಾಗುತ್ತದೆ.

ಈ ಪೂಜೆಯನಂತರ, ಪ್ರಾಣಲಿಂಗಿಯು ಅನಾಹತ ಚಕ್ರದಲ್ಲಿರುವ ಜಂಗಮಲಿಂಗವನ್ನು ಧ್ಯಾನಿಸಿ, ಅಲ್ಲಿರುವ ತಾನು ನಿರ್ಮಲಾತ್ಮನೆಂದು ಅರಿತು, ಆ ಚಕ್ರದ ದಕ್ಷಿಣ ದಿಕ್ಕಿನಲ್ಲಿರುವ ನಿತ್ಯವೆಂಬ ಲಕ್ಷಣವನ್ನೂ, ಲಿಂಗಕ್ಷೇತ್ರವೆಂಬ ಸಂಜ್ಞೆಯನ್ನೂ, ಅರ್ಧಚಂದ್ರಾಕೃತಿಯನ್ನೂ ಮಾಂಜಿ ವರ್ಣವನ್ನೂ, ಮೇಘನಾದವನ್ನೂ ಅನುಭವಿಸಿ, ಆನಂದಿಸುತ್ತಾನೆ. ಇದರಿಂದಾಗಿ, ಅನಾಹತ ಚಕ್ರವನ್ನು ಸುತ್ತುವರಿದ ಆದಿಶಕ್ತಿಯು ಶುದ್ಧವಾಗಿ, ಮುಂದೆ ಅದು ಶಾಂತಿಕಲೆ ಎನಿಸಿಕೊಳ್ಳುತ್ತದೆ; ಅಂಥ ಸಾಧಕನಿಗೆ ಅಥರ್ವವೇದ ಸಿದ್ಧಿಸುತ್ತದೆ.

ಐದನೆ ಸ್ಥಲ: ಶರಣಸ್ಥಲ, ದರ್ಪಣಾಕೃತಿ, ಯಕಾರಪ್ರಣಮ, ಪ್ರಣವನಾದ, ವಿಶುದ್ಧಿಚಕ್ರ, ಕಪೋತ ವರ್ಣ, ಆನಂದ ತನು, ಸುಜ್ಞಾನ ಹಸ್ತ, ಪ್ರಸಾದಲಿಂಗ, ಶ್ರೋತ್ರವೆಂಬ ಮುಖ, ಆನಂದ ಭಕ್ತಿ, ಸುಶಬ್ದ ಪದಾರ್ಥ, ಸುಶಬ್ದ ಪ್ರಸಾದ, ಸದಾಶಿವ ಪೂಜಾರಿ, ಸದಾಶಿವನೆಂಬ ಅಧಿದೇವತೆ, ಶಿವಸಾದಾಖ್ಯ, ಪರಿಪೂಣವೆಂಬ ಲಕ್ಷಣ, ಅನಾದಿ ಎಂಬ ಸಂಖ್ಯೆ ಊರ್ಧ್ವದಿಕ್ಕು, ಅಜಪವೇದ, ಆಕಾರವೆಂಬ ಅಂಗ, ಶುದ್ಧಾತ್ಮ, ಪರಾಶಕ್ತಿ, ಶಾಂತ್ಯತೀತ ಕಲೆ.

ಶರಣಸ್ಥಲದಲ್ಲಿರುವವನ ವಿಶುದ್ಧಿ ಚಕ್ರವನ್ನು ಆಕಾಶ ತತ್ವವು ಸುತ್ತುವರೆದಿದೆ. ಶಬ್ದವನ್ನು ಪ್ರಧಾನ ಗುಣವಾಗಿ ಉಳ್ಳ ಆಕಾಶ ತತ್ವವು ಪರಾಶಕ್ತಿಯ ಮತ್ತೊಂದು ರೂಪು; ಅದಕ್ಕೆ ಸದಾಶಿವನೇ ಅಧಿದೇವತೆ ಈ ಚಕ್ರದ ಮಧ್ಯದಲ್ಲಿ ಪ್ರಸಾದಲಿಂಗವಿದೆ; ಶರಣನು ಆಕಾಶದ ಪ್ರಧಾನಗುಣವನ್ನು ಸದಾಶಿವನಿಗೆ ಅಂದರೆ, ಪರಶಿವನ ಶಿವನ ಸಾದಾಖ್ಯದಲ್ಲಿರುವ ಶೋತ್ರವೆಂಬ ಬಾಯಿಗೆ ತನ್ನ ಆನಂದ ತನುವಿನ ಸುಜ್ಞಾನ ಹಸ್ತದಿಂದ, ಸುಶಬ್ದವೆಂಬ ಪದಾರ್ಥವನ್ನು ಅರ್ಪಿಸಿ, ಅದನ್ನು ಸುಶಬ್ದವೆಂಬ ಪ್ರಸಾದವನ್ನಾಗಿಸಿಕೊಂಡು ಭೋಗಿಸುತ್ತಾನೆ. ಪರಶಿವನನ್ನು ಹೀಗೆ ಸೂಕ್ಷ್ಮ ರೀತಿಯಲ್ಲಿ ಪೂಜಿಸುವ ಸಾಧಕನನ್ನು ಸದಾಶಿವಪೂಜಾರಿಯೆಂದು ಕರೆಯಲಾಗುತ್ತದೆ.

ಈ ಸೂಕ್ಷ್ಮ ಪೂಜೆಯ ನಂತರ ಶರಣನು ವಿಶುದ್ಧಿ ಚಕ್ರದಲ್ಲಿರುವ ಪ್ರಸಾದಲಿಂಗವನ್ನು ಧ್ಯಾನಿಸಿ, ಅಲ್ಲಿರುವ ತಾನು ಶುದ್ಧಾತ್ಮನೆಂದು ಅರಿತು, ಆ ಚಕ್ರದ ಊರ್ಧ್ವ ದಿಕ್ಕಿನಲ್ಲಿರುವ ಪರಿಪೂರ್ಣವೆಂಬ ಲಕ್ಷಣವನ್ನೂ, ಅನಾದಿವತ್‌ ಎಂಬ ಸಂಜ್ಞೆಯನ್ನೂ, ದರ್ಪಣಾಕೃತಿಯನ್ನೂ, ಕಪೋತ ವರ್ಣವನ್ನೂ, ಪ್ರಣವನಾದವನ್ನೂ, ಅನುಭವಿಸಿ ಆನಂದಿಸುತ್ತಾನೆ. ಇದರಿಂದಾಗಿ ವಿಶುದ್ಧಿ ಚಕ್ರವನ್ನು ಸುತ್ತುವರಿದ ಪರಾಶಕ್ತಿಯು (ಆಕಾಶ ತತ್ವವು ಶುದ್ಧವಾಗಿ, ಮುಂದೆ ಅದು ಶಾಂತ್ಯತೀತ ಕಲೆ ಎನಿಸಿಕೊಳ್ಳುತ್ತದೆ. ಅಂಥ ಸಾಧಕನಿಗೆ ಅಜಪವೇದ ಸಿದ್ಧಿಸುತ್ತದೆ.

ಆರನೆಯ ಸ್ಥಲ : ಐಕ್ಯ ಸ್ಥಲ, ಜ್ಯೋತಿರಾಕೃತಿ, ಓಂಕಾರ ಪ್ರಣಮ್, ಸಿಂಹನಾದ, ಆಜ್ಞಾಚಕ್ರ, ಮಾಣಿಕ್ಯವರ್ಣ: ಶುದ್ದತನು, ಸದ್ಭಾವ ಹಸ್ತ, ಮಹಾಲಿಂಗ, ಹೃದಯವೆಂಬ ಮುಖ, ಸಮರಸ ಭಕ್ತಿ, ಸುತೃಪ್ತಿ ಎಂಬ ಪದಾರ್ಥ, ಸುತೃಪ್ತಿ ಎಂಬ ಪ್ರಸಾದ, ಮಹಾದೇವ ಪೂಜಾರಿ, ಮಹಾದೇವ ಎಂಬ ಅಧಿದೇವತೆ, ಮಹಾಸಾದಾಖ್ಯ ಅಖಂಡವೆಂಬ ಲಕ್ಷಣ, ಮಹವೆಂಬ ಸಂಖ್ಯೆ ಪಾತಾಳ ದಿಕ್ಕು, ಗಾಯತ್ರಿ ವೇದ, ಆತ್ಮನ ಲಿಂಗ, ಜ್ಞಾನಾತ್ಮ, ಚಿಚ್ಛಕ್ತಿ, ಶಾಂತ್ಯತೀತೋತ್ತರ ಕಲೆ.

ಐಕ್ಯಸ್ಥಲದಲ್ಲಿರುವ ಶುದ್ಧ ತನುವಿನಲ್ಲಿ ಆಜ್ಞಾ ಚಕ್ರವಿದ್ದು, ಅದಕ್ಕೆ ಆತ್ಮ ವಿಶ್ವಾಸವೇ ಪ್ರಧಾನ ಆತ್ಮತತ್ವವು ಚಿತ್ ಶಕ್ತಿಯ ಮತ್ತೊಂದು ರೂಪ. ಅದಕ್ಕೆ ಮಹಾದೇವನೆ ಅಧಿದೇವತೆ. ಈ ಚಕ್ರದ ಮಧ್ಯದಲ್ಲಿ ಮಹಾಲಿಂಗವಿದೆ: ಐಕ್ಯನು ಆತ್ಮದ ಪ್ರಧಾನಗುಣವನ್ನು ಮಹಾದೇವನಿಗೆ ಅಂದರೆ ಪರಶಿವನ ಮಹಾಸಾದಾಖ್ಯದಲ್ಲಿರುವ ಹೃದಯವೆಂಬ ಬಾಯಿಗೆ ಸದ್ಭಾವವೆಂಬ ಹಸ್ತದಿಂದ ಸುತೃಪ್ತಿಯೆಂಬ ಪದಾರ್ಥವನ್ನರ್ಪಿಸಿ, ಸುತೃಪ್ತಿಯೆಂಬ ಪ್ರಸಾದವನ್ನು ಪಡೆದು ಭೋಗಿಸುತ್ತಾನೆ. ಪರಶಿವನನ್ನು ಹೀಗೆ ಸೂಕ್ಷ್ಮ ರೀತಿಯಲ್ಲಿ ಪೂಜೆ ಮಾಡುವ ಸಾಧಕನಿಗೆ ಮಹಾದೇವ ಪೂಜಾರಿ ಎಂದು ಹೆಸರು.

ಈ ಸೂಕ್ಷ್ಮ ಪೂಜೆಯ ನಂತರ ಐಕ್ಯನು ಆಜ್ಞಾ ಚಕ್ರದಲ್ಲಿರುವ ಮಹಾಲಿಂಗವನ್ನು ಧ್ಯಾನಿಸಿ, ಅಲ್ಲಿರುವ ತಾನು ಜ್ಞಾನಾತ್ಮನೆಂಬುದನ್ನು ಅರಿತು, ಆ ಚಕ್ರದ ಪಾತಾಳ ದಿಕ್ಕಿನಲ್ಲಿರುವ ಅಖಂಡವೆಂಬ ಲಕ್ಷಣವನ್ನೂ, ಮಹ ಎಂಬ ಸಂಜ್ಞೆಯನ್ನೂ, ಜ್ಯೋತಿರಾಕೃತಿಯನ್ನೂ, ಮಾಣಿಕ್ಯ ವರ್ಣವನ್ನೂ ಸಿಂಹನಾದವನ್ನೂ, ಅನುಭವಿಸಿ ಆನಂದಿಸುತ್ತಾನೆ. ಇದರಿಂದಾಗಿ, ಆಜ್ಞಾ ಚಕ್ರವನ್ನು ಸುತ್ತುವರಿದ ಚಿತ್‌ಶಕ್ತಿಯು (ಆತ್ಮ ತತ್ವವು) ಶುದ್ಧವಾಗಿ, ಮುಂದೆ ಅದು ಶಾಂತ್ಯತೀತೋತ್ತರ ಕಲೆ ಎನಿಸಿಕೊಳ್ಳುತ್ತದೆ.

ಬಹಳಷ್ಟು ವಚನಕಾರರು ಕೇವಲ ಆರು ಸ್ಥಲಗಳು, ಆರು ಚಕ್ರಗಳು, ಆರು ಲಿಂಗಗಳು, ಆರು ಶಕ್ತಿಗಳು, ಇತ್ಯಾದಿಗಳನ್ನು ಹೇಳಿದರೆ, ಕೆಲವರು ಇವುಗಳ ಸಂಖ್ಯೆಯನ್ನು ಒಂಬತ್ತಕ್ಕೇರಿಸುತ್ತಾರೆ.

ಏಳನೆಯ ಸ್ಥಲ : ನಿಃಕಳಂಕ ಸ್ಥಲ, ನಿಃಕಲಾಕೃತಿ, ಬಕಾರ ಪ್ರಣಮ, ಭ್ರಮರನಾದ, ಬ್ರಹ್ಮಚಕ್ರ, ಜ್ಯೋತಿರ್ವಣ್ರ ಚಿದ್ರೂಪತನು, ಸ್ವತಂತ್ರ ಹಸ್ತ, ನಿಃಕಳಂಕ ಲಿಂಗ, ಬ್ರಹ್ಮರಂಧ್ರಮುಖ, ಸದ್ಭಾವ ಭಕ್ತಿ, ಪರಮಾನಂದ ಪದಾರ್ಥ, ಪರಮಾನಂದ ಪ್ರಸಾದ, ಶ್ರೀಗುರು ಪೂಜಾರಿ: ಪರಮೇಶ್ವರನೆಂಬ ಅಧಿದೇವತೆ, ಅಗತ್ಯ ಸಾದಾಖ್ಯ, ಅನಾಮಯವೆಂಬ ಲಕ್ಷಣ, ಅಪ್ರಮಾಣವೆಂಬ ಸಂಜ್ಞೆ, ಹೃತ್ಕಮಲವೆಂಬ ದಿಕ್ಕು, ಧನುರ್ವೇದ, ಚಿತ್ತೂರ್ಯನೆ ಅಂಗ, ಮಹವೆಂಬ ಆತ್ಮ, ನಿರಾಲಂಬ ಶಕ್ತಿ, ನಿರ್ವಂಚಕ
ಕಲೆ.

ನಿಃಕಲಂಕ ಸ್ಥಲದಲ್ಲಿರುವವನ ಚಿದ್ರೂಪ ತನುವಿನಲ್ಲಿ ಬ್ರಹ್ಮಚಕ್ರವಿದ್ದು, ಅದಕ್ಕೆ ಚಿತ್‌ರ್ಯನೇ ಅಂಗ: ಸೂರ್ಯತತ್ವವು ನಿರಾಲಂಬ ಶಕ್ತಿಯ ಮತ್ತೊಂದು ರೂಪ ಅದಕ್ಕೆ ಶ್ರೀಗುರು ಅಧಿದೇವತೆ ಈ ಚಕ್ರದಲ್ಲಿ ನಿಃಕಳಂಕ ಲಿಂಗವಿದೆ, ನಿಷ್ಕಳಂಕ ಸಾಧಕನು, ಶ್ರೀಗುರು (ಅಂದರೆ ಅಗತ್ಯ ಸಾದಾಖ್ಯದ ಬ್ರಹ್ಮರಂಧ್ರ ಎಂಬ ಬಾಯಿಗೆ), ಪರಮಾನಂದವೆಂಬ ಪದಾರ್ಥವನ್ನು ಸ್ವತಂತ್ರ ಹಸ್ತದಿಂದ ಅರ್ಪಿಸಿ, ಪರಮಾನಂದವೆಂಬ ಪ್ರಸಾದವನ್ನು ಪಡೆದು ಭೋಗಿಸುತ್ತಾನೆ. ಪರಶಿವನನ್ನು ಹೀಗೆ ಪೂಜಿಸುವವನಿಗೆ ಶ್ರೀಗುರು (ಪರಮೇಶ್ವರ) ಪೂಜಾರಿ ಎಂದು ಹೆಸರು.

ಈ ಸೂಕ್ಷ್ಮ ಪೂಜೆಯ ನಂತರ ನಿಃಕಲ ಸಾಧಕನು ಬ್ರಹ್ಮಚಕ್ರದಲ್ಲಿರುವ ನಿಃಕಲಲಿಂಗವನ್ನು ಧ್ಯಾನಿಸಿ, ಅಲ್ಲಿರುವ ತಾನು ಮಹವೆಂಬ ಆತ್ಮವೆಂದು ಅರಿತು, ಆ ಚಕ್ರದ ಹೃತ್ಕಮಲ ದಿಕ್ಕಿನಲ್ಲಿರುವ ಅನಾಮಯವೆಂಬ ಲಕ್ಷಣವನ್ನೂ, ಅಪ್ರಮಾಣವೆಂಬ ಸಂಜ್ಞೆಯನ್ನೂ, ಜ್ಯೋತಿರ್ವಣ್ರವನ್ನೂ, ಭ್ರಮರನಾದವನ್ನೂ ಅನುಭವಿಸಿ, ಆನಂದಿಸುತ್ತಾನೆ. ಇದರಿಂದಾಗಿ, ಬ್ರಹ್ಮಚಕ್ರವನ್ನು ಸುತ್ತುವರಿದ ನಿರಾಲಂಬ ಶಕ್ತಿಯು ಶುದ್ಧವಾಗಿ ನಿರ್ವಂಚಕ ಕಲೆಯೋನಿಸಿಕೊಳ್ಳುತ್ತವೆ. ಆ ಸಾಧಕನಿಗೆ ಧನುರ್ವೇದ ಸಿದ್ಧಿಸುತ್ತದೆ.

ಎಂಟನೆಯ ಸ್ಥಲ : ನಿರಾಲಂಬ (ನಿಶೂನ್ಯಾಸ್ಥಲ), ನಿಶೂನ್ಯಾಕೃತಿ, ಕ್ಷಕಾರ ಪ್ರಣಮ್, ದಿವ್ಯನಾದ, ಶಿಖಾಚಕ್ರ, ಮಹಾಜ್ಯೋತಿರ್ವರ್ಣ, ಚಿನ್ಮಯ ತನು, ನಿರಾಳ ಹಸ್ತ, ಶೂನ್ಯಲಿಂಗ, ಉನ್ಮನಿ ಮುಖ, ನಿರಹಂಕಾರ ಭಕ್ತಿ, ಪರಿಪೂರ್ಣ ಪದಾರ್ಥ, ಪರಿಪೂರ್ಣ ಪ್ರಸಾದ, ಪರಶಿವ ಪೂಜಾರಿ, ಪರಶಿವನಧಿದೇವತೆ, ಅವಿರಳಸಾದಾಖ್ಯ, ಅಗತ್ಯವೆಂಬ ಲಕ್ಷಣ, ನಿರ್ಮಾಯವೆಂಬ ಸಂಜ್ಞೆ ಘೋಷವೆಂಬ ದಿಕ್ಕು, ಮನೋರ್ಲಯ ವೇದ, ಚಿತ್‌ಚಂದ್ರನೆ ಅಂಗ, ದಿವ್ಯಾತ್ಮ, ನಿಭ್ರಾಂತ ಶಕ್ತಿ, ಅನಂತ ಕಲೆ.

ನಿರಾಲಂಬ ಸ್ಥಲದಲ್ಲಿರುವವನ ಚಿನ್ಮಯತನುವಿನಲ್ಲಿ ಶಿಖಾಚಕ್ರವಿದ್ದು, ಅದಕ್ಕೆ ಚಂದ್ರ ತತ್ವವೇ ಅಂಗ ಚಂದ್ರತತ್ವವು ನಿಭ್ರಾಂತ ಶಕ್ತಿಯ ಮತ್ತೊಂದು ರೂಪ ಅದಕ್ಕೆ ಪರಶಿವನೇ ಅಧಿದೇವತೆ ಈ ಚಕ್ರದಲ್ಲಿ ಶೂನ್ಯಲಿಂಗವಿದೆ, ನಿರಾಲಂಬ ಸ್ಥಲದ ಸಾಧಕನು ಪರಶಿವನಿಗೆ (ಅಂದರೆ, ಅವಿರಳ ಸಾದಾಖ್ಯದ ಉನ್ಮನಿ ಎಂಬ ಬಾಯಿಗೆ), ಪರಿಪೂರ್ಣ ಪದಾರ್ಥವನ್ನು, ನಿರಾಳ ಹಸ್ತದಿಂದ ಅರ್ಪಿಸಿ, ಪರಿಪೂರ್ಣ ಪ್ರಸಾದವನ್ನು ಪಡೆದು ಭೋಗಿಸುತ್ತಾನೆ. ಪರಶಿವನ್ನು ಹೀಗೆ ಪೂಜಿಸುವವನಿಗೆ ಪರಶಿವಪೂಜಾರಿ ಎಂದು ಹೆಸರು.

ಈ ಸೂಕ್ಷ್ಮ ಪೂಜೆಯ ನಂತರ ನಿರಾಲಂಬ ಸ್ಥಲದ ಸಾಧಕನು ಶಿಖಾಚಕ್ರದಲ್ಲಿರುವ ಶೂನ್ಯಲಿಂಗವನ್ನು ಧ್ಯಾನಿಸಿ, ಅಲ್ಲಿರುವ ತಾನು ದಿವ್ಯಾತ್ಮನೆಂದರಿತು, ಆ ಚಕ್ರದ ಘೋಷ ಎಂಬ ದಿಕ್ಕಿನಲ್ಲಿರುವ ಅಗಮ್ಯ ಲಕ್ಷಣವನ್ನೂ, ನಿರ್ಮಾಯೆಯೆಂಬ ಸಂಜ್ಞೆಯನ್ನೂ, ಮಹಾಜ್ಯೋತಿರ್ವಣ್ರವನ್ನೂ, ದಿವ್ಯನಾದವನ್ನೂ, ಅನುಭವಿಸಿ ಆನಂದಿಸುತ್ತಾನೆ. ಇದರಿಂದಾಗಿ ಶಿಖಾ ಚಕ್ರದ ನಿಭ್ರಾಂತ ಶಕ್ತಿಯು ಶುದ್ಧವಾಗಿ, ಅನಂತ ಕಲೆಯೆನಿಸಿಕೊಳ್ಳುತ್ತದೆ. ಈ ಸ್ಥಲದ ಸಾಧಕನಿಗೆ ಮನೋರ್ಲಯವೇದ ಸಿದ್ಧಿಸುತ್ತದೆ.

ಒಂಬತ್ತನೆ ಸ್ಥಲ: ನಿರಾತಂಕ ಸ್ಥಲ; ನಿರಂಜನಾಕೃತಿ, ಹಕಾರ ಪ್ರಣಮ, ಮಹಾನಾದ, ಪಶ್ಚಿಮ ಚಕ್ರ, ಅಖಂಡಜ್ಯೋತಿರ್ವರ್ಣ, ನಿರ್ಮುಕ್ತಿತನು, ನಿರ್ಮಾಯ ಹಸ್ತ, ನಿರಂಜನಲಿಂಗ, ಪಶ್ಚಿಮ ಎಂಬ ಮುಖ, ಅಪ್ರಮಾಣ ಭಕ್ತಿ, ಅವಿರಳ ಪದಾರ್ಥ, ಅವಿರಳ ಪ್ರಸಾದ, ಪರಮೇಶ್ವರ ಪೂಜಾರಿ, ಪರಮೇಶ್ವರನಧಿದೇವತೆ, ನಿಶ್ಚಲ ಸಾದಾಖ್ಯ, ನಿರ್ವಂಚಕ ಎಂಬ ಲಕ್ಷಣ, ಅವಿರಳ ಸಂಖ್ಯೆ ನಿರಾಳ ದಿಕ್ಕು, ಅಗತ್ಯವೇದ, ಶಿವಯೋಗಿಯೇ ಅಂಗ, ಚಿನ್ಮಯಾತ್ಮ, ನಿರವಯ ಶಕ್ತಿ, ಅನಂತ ಕಲೆ.

ನಿರಾತಂಕ ಸ್ಥಲದಲ್ಲಿರುವವನ ನಿರ್ಮುಕ್ತಿ ತನುವಿನಲ್ಲಿ ಪಶ್ಚಿಮ ಚಕ್ರವಿದ್ದು, ಅದರಲ್ಲಿ ನಿರಂಜನ ಲಿಂಗವಿದೆ. ಈ ಸ್ಥಲದ ಸಾಧಕನು ತನ್ನ ನಿರ್ಮಾಯವೆಂಬ ಹಸ್ತದಿಂದ ಈ ಚಕ್ರದ ಅಧಿದೇವತೆಯಾದ ಪರಮೇಶ್ವರನಿಗೆ, ಅಂದರೆ ಅವನ ನಿಶ್ಚಲ ಸಾದಾಖ್ಯದ ಪಶ್ಚಿಮ ಎಂಬ ಬಾಯಿಗೆ, ಅವಿರಳ ಪದಾರ್ಥವನ್ನು ಅರ್ಪಿಸಿ, ಅವಿರಳ ಪ್ರಸಾದವನ್ನು ಪಡೆದು, ಭೋಗಿಸುತ್ತಾನೆ; ಹಾಗೂ ಆ ಚಕ್ರದಲ್ಲಿರುವ ಪರಮೇಶ್ವರನನ್ನು ಕುರಿತು ಧ್ಯಾನಿಸಿ, ಸಾಕ್ಷಾತ್ಕಾರಿಸಿಕೊಂಡಾಗ, ಅಲ್ಲಿ ನಿರ್ವಂಚಕ ಎಂಬ ಲಕ್ಷಣ, ಅವಿರಳವೆಂಬ ಸಂಜ್ಞೆ ಅಖಂಡ ಮಹಾಜ್ಯೋತಿರ್ವಣ್ರವನ್ನು ಕಾಣುತ್ತಾನೆ ಹಾಗೂ ಮಹಾನಾದ ಕೇಳಿಸುತ್ತದೆ. ಇದರಿಂದ ಅವನ ನಿರವಯಶಕ್ತಿ ಶುದ್ಧವಾಗಿ ಅನಂತ ಕಲೆಯೆನಿಸಿಕೊಳ್ಳುವುದಲ್ಲದೆ, ಸಾಧಕನಿಗೆ ಅಗಮ್ಯವೇದ ಸಿದ್ಧಿಸುತ್ತದೆ.

ಈ ಒಂಬತ್ತು ಸ್ಥಲಗಳಲ್ಲಿ ಸಾಧಕನು ತೋರಿಸುವ ಭಕ್ತಿಗೆ ಕ್ರಮವಾಗಿ; ಶ್ರದ್ಧಾಭಕ್ತಿ, ನಿಷ್ಠಾಭಕ್ತಿ, ಅವಧಾನ ಅನುಭಾವಭಕ್ತಿ, ಆನಂದಭಕ್ತಿ, ಸಮರಸಭಕ್ತಿ, ಸದ್ಭಾವಭಕ್ತಿ, ನಿರಹಂಕಾರಭಕ್ತಿ, ಅಪ್ರಮಾಣಭಕ್ತಿ ಎಂಬ ಹೆಸರಿವೆ.

ಇನ್ನೂರಾ ಹದಿನಾರು ಸಕೀಲಗಳ ಸಿದ್ಧಾಂತದಲ್ಲಿ ಕಾಣುವ ಅಂಶವೇನೆಂದರೆ, ಇದರಲ್ಲಿ ಯಾವೊಂದೂ ಸ್ಕೂಲವಲ್ಲ (ಇಂದ್ರಿಯ ಗೋಚರವಲ್ಲ); ರೂಪು, ರಸ, ಗಂಧ, ಎಂಬ ವಿಷಯಾದಿಗಳೂ ಸಹ ಸೂಕ್ಷ್ಮವೆ. ಅವುಗಳನ್ನು ಅರ್ಪಿಸುವ ಸುಬುದ್ಧಿ ಇತ್ಯಾದಿ ಹಸ್ತಗಳೂ ಸೂಕ್ಷ್ಮವೆ, ಅವುಗಳನ್ನು ಸ್ವೀಕರಿಸುವ ಲಿಂಗಗಳು, ಅಧಿದೇವತೆಗಳು, ಪೂಜಾರಿಗಳು, ಚಕ್ರಗಳು, ಶಕ್ತಿಗಳು, ಭಕ್ತಿಗಳು ಎಲ್ಲವೂ ಸೂಕ್ಷ್ಮವೆ. ಯಾವುದೇ ವ್ಯಕ್ತಿ ಕೇವಲ ರೂಪ ಒಂದನ್ನೆ (ಗಂಧವನ್ನೂ ಶಬ್ದವನ್ನೂ ಬಿಟ್ಟು) ಅರ್ಪಿಸಲು ಸಾಧ್ಯವಿಲ್ಲ. ಎಲ್ಲ ಅರ್ಪಣೆ ಮಾನಸಿಕ, ಸಾಧಕನು "ನಾನು ಕಾಣುತ್ತಿರುವ ರೂಪನ್ನು ನಿನಗೆ ಅರ್ಪಿಸುತ್ತಿದ್ದೇನೆ" ಎಂದು ಮಾನಸಿಕವಾಗಿ ಅರ್ಪಿಸಬಹುದೇ ಹೊರತು, ಒಂದು ಹಣ್ಣನ್ನು ನೈವೇದ್ಯ ಮಾಡಿದಂತೆ ರೂಪೊಂದನ್ನೆ ಅಥವಾ ಮಾತ್ತಾವುದೇ ವಿಷಯವನ್ನು ಲಿಂಗಾರ್ಪಿತ ಮಾಡಲು ಸಾಧ್ಯವಿಲ್ಲ.

ಅಲ್ಲದೆ, “ನಾನು ಭಕ್ತ ಸ್ಥಲದಲ್ಲಿದ್ದೇನೆ, ನಾನು ಗುರುಲಿಂಗವನ್ನು ಪೂಜಿಸಬಾರದು, ಆಚಾರ ಲಿಂಗವನ್ನಷ್ಟೇ ಪೂಜಿಸಬೇಕು" ಎಂದಾಗಲಿ, "ನಾನು ಗಂಧವನ್ನರ್ಪಿಸಬೇಕೇ ಹೊರತು, ಶಬ್ದವನ್ನರ್ಪಿಸಬಾರದು" ಎಂದಾಗಲಿ ಯಾವ ಸಾಧಕನೂ ನಿರ್ಧರಿಸಲು ಸಾಧ್ಯವಿಲ್ಲ. ಆದರೆ, ಗಂಧಯುಕ್ತ ವಸ್ತುಗಳನ್ನು ಇಂದು, ರಸಯುಕ್ತ ವಸ್ತುವನ್ನು ನಾಳೆ, ಹೀಗೆ ಅರ್ಪಿಸಲು (ತ್ಯಾಗ ಮಾಡಲು) ಸಾಧ್ಯವಿದೆ. ಅದೇ ರೀತಿ ಚಕ್ರಗಳಲ್ಲಿರುವ ಲಿಂಗವನ್ನು ಹಂತ ಹಂತವಾಗಿ ಕುರಿತು ಧ್ಯಾನಿಸಲು ಸಾಧ್ಯವಿದೆ. ಒಂದೇ ಲಿಂಗ ಆರು ಲಿಂಗವೆಂಬ ವಿಭಜನೆ ಹೇಗೆ ಮಾನಸಿಕವೋ ಹಾಗೆಯೇ ಅರ್ಪಣೆ, ಪ್ರಸಾದ, ಶಕ್ತಿ, ಭಕ್ತಿ, ಮುಖ, ಹಸ್ತ, ಇತ್ಯಾದಿಗಳೂ ಮಾನಸಿಕವೇ. ಆದರೆ ಒಂದು ಚಕ್ರವನ್ನು ಜಾಗ್ರತಗೊಳಿಸಿದಾಗ, ಅಲ್ಲಿರುವ ಲಿಂಗ, ಅಲ್ಲಿರುವ ಶಕ್ತಿ, ಇತ್ಯಾದಿಗಳು ಕ್ರಿಯಾಶೀಲವಾಗಿವೆ ಎಂದು ನಾವು ತರ್ಕಿಸುತ್ತೇವೆ.

ನವವಿಧ ಅಂಗಗಳು ಪೃಥ್ವಿ, ಅಪ್ಪ, ತೇಜ, ವಾಯು, ಆಕಾಶ, ಆತ್ಮಾಂಗ, ತ್ಯಾಗಾಂಗ, ಭೋಗಾಂಗ, ಯೋಗಾಂಗ - ಇವು ಮನುಷ್ಯನ ಗುಣಗಳಿಗೆ ಕಾರಣವಾಗಿವೆ
ನವವಿಧ ಅಂಗಗಳು ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹತ್‌ಲಿಂಗ, ನಿಃಕಲಲಿಂಗ, ನಿಶೂನ್ಯಲಿಂಗ, ನಿರಂಜನಲಿಂಗ
ನವವಿಧ ಅಧಿದೇವತೆಗಳು ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ, ಮಹೇಶ್ವರ, ಪರಮೇಶ್ವರ, ಸರ್ವೆಶ್ವರ, ಮಹಾದೇವ - ಶರೀರಗಳ ಕಾವ್ಯಗಳ ಚಾಲನೆಗೆ ಇವರು ಕಾರಣರು
ನವವಿಧ ಆಕೃತಿಗಳು ತಾರಕ, ದಂಡಕ, ಕುಂಡಲ, ಅರ್ಧಚಂದ್ರ, ದರ್ಪಣ, ಜ್ಯೋತಿ, ನಿಷ್ಕಳ, ನಿಃ ಶೂನ್ಯ ನಿರಂಜನ - ಇವು ಆಯಾ ಚಕ್ರಗಳಿಗೆ ಸಂಬಂಧಿಸಿವೆ
ನವವಿಧ ಆತ್ಮರು ಜೀವಾತ್ಮ, ಅಂತರಾತ್ಮ, ಪರಮಾತ್ಮ, ನಿರ್ಮಲಾತ್ಮ, ಶುದ್ಧಾತ್ಮ, ಜ್ಞಾನಾತ್ಮ, ಮಹಾತ್ಮ, ದಿವ್ಯಾತ್ಮ, ಚಿನ್ಮಯಾತ್ಮ - ಇವು ಆತ್ಮನ ಪ್ರಗತಿಯ ದ್ಯೋತಕವಾಗಿವೆ
ನವವಿಧ ಕಲೆಗಳು ನಿವೃತ್ತಿ, ಪ್ರತಿಷ್ಠಾ, ವಿದ್ಯಾ, ಶಾಂತಿ, ಶಾಂತ್ಯಾತೀತ, ಶಾಂತ್ಯಾತೀತೋತ್ತರ, ಅನಾದಿ, ನಿರ್ಮಾಯ, ಅನಿರ್ವಾಚ್ಯ
ನವವಿಧ ಗಣಗಳು ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ, ನಿಷ್ಕಲ, ನಿಶೂನ್ಯ, ನಿರಂಜನ - ಇವು ಪ್ರಗತಿಯ ಸ್ಥಲಗಳು
ನವವಿಧ ಚಕ್ರಗಳು ಆಧಾರ, ಸ್ವಾಧಿಷ್ಟಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ, ಬ್ರಹ್ಮ, ಶಿಖಾ, ಪಶ್ಚಿಮ - ಇವು ಶಕ್ತಿಗೆ ಕೇಂದ್ರಸ್ಥಾನಗಳು
ನವವಿಧ ತನುಗಳು ಸ್ಕೂಲ, ಸೂಕ್ಷ್ಮ, ಕಾರಣ, ನಿರ್ಮಲ, ಆನಂದ, ಶುದ್ಧ, ಚಿದ್ರೂಪ, ಚಿನ್ಮಯ, ನಿರ್ಮುಕ್ತ - ಇವು ಮನುಷ್ಯನ ಅಂತರಂಗ ಬಹಿರಂಗದ ಶರೀರಗಳು
ನವವಿಧ ದಿಕ್ಕುಗಳು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಊರ್ಧ್ವ, ಪಾತಾಳ, ಪಾಯು, ದಿವ್ಯಾನಂದ, ಹೃತ್ಕಮಲ
ನವವಿಧ ನಾದಗಳು ಭ್ರಮರ, ವೇಣು, ಘಂಟಾ, ಭೇರೀ, ಮೇಘ, ಪ್ರಣಮ್, ದಿವ್ಯ, ಸಿಂಹ, ಮಹತ್ ಇವು ಯೌಗಿಕ ಚಿಹ್ನೆಗಳು
ನವವಿಧ ಪದಾರ್ಥಗಳು ಸುಗಂಧ, ಸುರಸ, ಸುರೂಪು, ಸುಸ್ಪರ್ಶನ, ಸುಶಬ್ದ, ಸುತೃಪ್ತಿ, ನಿಃ ಕಲಪರಾನಂದ, ನಿಜಾನಂದ ಪರಿಪೂರ್ಣ, ಮಹಾ ಅವಿಳಾನಂದ
ನವವಿಧ ಪೂಜಾರಿಗಳು ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ, ಮಹೇಶ್ವರ, ಪರಮೇಶ್ವರ, ಸರ್ವೆಶ್ವರ, ಮಹಾದೇವ - ಇವರು ಉತ್ಪತ್ತಿ-ಸ್ಥಿತಿ-ಲಯ ಕಾರಣರು
ನವವಿಧ ಪ್ರಣವಗಳು ನಕಾರ, ಮಕಾರ, ಶಿಕಾರ, ವಕಾರ, ಯಕಾರ, ಓಂಕಾರ, ಬಕಾರ, ಕ್ಷಕಾರ, ಹಕಾರ - ಇವು ಪರಮಾತ್ಮನ ಭಾವವನ್ನುಂಟು ಮಾಡತಕ್ಕವುಗಳು
ನವವಿಧ ಭಕ್ತಿಗಳು ಶ್ರದ್ಧಾ, ನೈಷ್ಠಿಕಾ, ಅವಧಾನ, ಅನುಭಾವ, ಆನಂದ, ಸಮರಸ, ಪರುಪೂರ್ಣ, ಅಪ್ರಮಾಣ, ನಿರವಯ
ನವವಿಧ ಮುಖಗಳು ಪ್ರಾಣ, ಜಿಹ್ನೆ, ನೇತ್ರ, ತ್ವಕ್ಕು, ಶೋತ್ರ, ಹೃದಯ, ಬ್ರಹ್ಮರಂಧ್ರ, ಉನ್ಮನಿ, ಪಶ್ಚಿಮ
ನವವಿಧ ಲಕ್ಷಣಗಳು ಸತ್, ಚಿತ್, ಆನಂದ, ನಿತ್ಯ, ಪರಿಪೂರ್ಣ, ಅಖಂಡ, ಅನಾಮಯ, ಅಗಮ್ಯ, ಅವಿರಳ
ನವವಿಧ ವರ್ಣಗಳು ಪೀತ, ಶ್ವೇತ, ಹರಿತ, ಮಾಂಜಿಷ್ಟ, ಕಪೋತ, ಮಾಣಿಕ್ಯ, ಜ್ಯೋತಿ, ಮಹಾಜ್ಯೋತಿ, ಅಗಣಿತ - ಇವು ಯೌಗಿಕ ಚಿಹ್ನೆಗಳು
ನವವಿಧ ವೇದಗಳು ಋಕ್, ಯಜುಸ್, ಸಾಮ, ಅಥರ್ವ, ಅಜಪೆ, ಗಾಯತ್ರೀ, ಧನುಸ್, ಗಂಧರ್ವ, ಸದ್ದೋಷ
ನವವಿಧ ಶಕ್ತಿಗಳು ಕ್ರಿಯಾ, ಜ್ಞಾನ, ಇಚ್ಛಾ, ಆದಿ, ಪರಾ, ಚಿತ್, ನಿರಾಲಂಬ, ನಿಭ್ರಾಂತ, ನಿರವಯ
ನವವಿಧ ಸಂಜ್ಞೆಗಳು ಪರ, ಗೂಢ, ಶರೀರಸ್ಥ, ಲಿಂಗಕ್ಷೇತ್ರ, ಅನಾದಿ, ಮಹತ್, ಅಪ್ರಮಾಣ, ನಿರ್ನಾಮ, ಅವಿರಳ -ಇವು ಲಿಂಗದ ಪ್ರಗತಿಗಳು
ನವವಿಧ ಸಾದಾಖ್ಯೆಗಳು ಕರ್ಮ, ಕರ್ತೃ, ಮೂರ್ತಿ, ಶಿವ, ಮಹಾ, ಅಗಮ್ಯ, ಅಗೋಚರ, ಅಪ್ರಮಾಣ - ಇವು ಮನುಷ್ಯನಲ್ಲಿಯ ಪರಿಸ್ಥಿತಿಗಳು
ನವವಿಧ ಹಸ್ತಗಳು ಸುಚಿತ್ರ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ, ಸದ್ಭಾವ, ನಿರ್ನಾಮ, ನಿಷ್ಕಳ, ನಿರಾಳ - ಇವು ಸ್ಥಲಗಳ ಪ್ರಗತಿಗೆ ಸಾಧನಗಳು
ನವವಿಧಪೂಜೆ ಅಭಿಷೇಕ, ಭಸ್ಮಧಾರಣ, ಗಂಧಧಾರಣ, ಪುಷ್ಪಧಾರಣ, ಧೂಪ ಪ್ರಸಾರಣ, ದೀಪ ಪ್ರಕಾಶನ, ನೈವೇದ್ಯ ಸಮರ್ಪಣ, ತಾಂಬೂಲ ಪ್ರದಾನ, ವಸ್ತ್ರಪ್ರಾವರಣ

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಇನ್ನೂರ ಹದಿನಾರುಸ್ಥಲ ನೂರೊಂದು ಸ್ಥಲ Next