Previous ತ್ರಿವಿಧ ಇಪ್ಪತ್ತುನಾಲ್ಕು ಶೀಲ Next

ಚತುರ್ವಿಧ ಪ್ರಸಾದ

ಚತುರ್ವಿಧ ಪ್ರಸಾದ

ಪ್ರಸಾದದ ಪ್ರಕಾರಗಳನ್ನು ವಿವರಿಸುವಾಗ ವಚನಕಾರರಲ್ಲಿ ಒಮ್ಮತವಿಲ್ಲ. ಕೆಲವರು ಪ್ರಸಾದವು ತ್ರಿವಿಧವೆಂದೂ, ಮತ್ತೆ ಕೆಲವರು ಪ್ರಸಾದವು ಏಕಾದಶ ವಿಧವೆಂದೂ ಹೇಳಿದರೆ, ಮತ್ತೆ ಕೆಲವರು ಪ್ರಸಾದವು ಚತುರ್ವಿಧವೆಂದು ಹೇಳಿದ್ದಾರೆ. ಚತುರ್ವಿಧ ಪ್ರಸಾದದ ಬಗ್ಗೆಯೂ ವಚನಕಾರರಲ್ಲಿ ಒಮ್ಮತವಿಲ್ಲ. ಚತುರ್ವಿಧ ಪ್ರಸಾದದ ಬಗೆಗೆ ಕನಿಷ್ಠ ಮೂರು ಅಭಿಪ್ರಾಯಗಳಿವೆ.

೧. ಕಾಡಸಿದ್ದೇಶ್ವರನೆಂಬ ಶರಣನು ಚತುರ್ವಿಧ ಪ್ರಸಾದವೆಂದರೆ, ಅಚ್ಚ, ನಿಚ್ಚ, ಸಿದ್ಧ ಮತ್ತು ಸಮಯವೆಂಬ ನಾಲ್ಕು ವಿಧದ ಪ್ರಸಾದವೆನ್ನುತ್ತಾನೆ. ಅಲ್ಲದೆ, ಅವೆಲ್ಲವನ್ನೂ ಈ ಕೆಳಗಿನಂತೆ ವಿವರಿಸಿದ್ದಾನೆ.

ಗುರುವು (ಆಚಾರ್ಯನು) ಶುದ್ಧ ಪ್ರಸಾದದ ಪ್ರತೀಕ. ಅವನಿಂದ ದೀಕ್ಷೆ ಪಡೆದ ಭಕ್ತನು ತಾನೂ ಗುರುವಿನಂತಾಗಬೇಕು ಎಂದು ಪ್ರತಿಜ್ಞೆ ಮಾಡಬೇಕು. ಹೀಗೆ ಶುದ್ಧ ಪ್ರಸಾದದ ಸ್ವರೂಪಾಚಾರ್ಯನನ್ನು ತನುವಿನಲ್ಲಿ ಸ್ವಾಯತ ಮಾಡಿಕೊಂಡು (ಅಂದರೆ, ಆಚಾರ್ಯನು ಬೋಧಿಸಿದ ಆಚಾರಗಳನ್ನು ತನುವಿನಲ್ಲಿ ರೂಢಿಸಿಕೊಂಡು) ಆ ಮೂಲಕ ತನುವಿನ ಕೆಟ್ಟ ಗುಣಗಳನ್ನು ನಷ್ಟ ಮಾಡಿಕೊಂಡರೆ, ಆಗ ನಾವು ತೆಗೆದುಕೊಂಡುದುದು ಅಚ್ಚ ಪ್ರಸಾದ.

ಗುರುವು ಕರುಣೆಯಿಂದ ಕೊಡುವ ಇಷ್ಟಲಿಂಗವೂ ಒಂದು ಪ್ರಸಾದವೇ. ಗುರು ಕೊಟ್ಟ ಸಿದ್ಧ ಪ್ರಸಾದರೂಪವಾದ ಚಿಲ್ಲಿಂಗವನ್ನು ಭಕ್ತನು ಮನಸ್ಸಿನಲ್ಲಿ ಸ್ವಾಯತ ಮಾಡಿಕೊಂಡರೆ, ಅದರಿಂದ ಮನಸ್ಸಿನ ದುರ್ಗುಣಗಳು ನಷ್ಟವಾಗಬೇಕು. ಹಾಗೆ ನಷ್ಟವಾದರೆ ನಾವು ತೆಗೆದುಕೊಂಡ ಪ್ರಸಾದ ನಿಚ್ಚ (ನಿತ್ಯ) ಪ್ರಸಾದ, ಲಿಂಗವು ನಿತ್ಯವಾದುದರಿಂದ, ಹಾಗೂ ಲಿಂಗವೇ ಪ್ರಸಾದವಾದುದರಿಂದ, ಅದು ನಿತ್ಯ ಪ್ರಸಾದ (ನಿತ್ಯ-ಶಾಶ್ವತವಾದ ಲಿಂಗವೆಂಬ ಪ್ರಸಾದ) ಎನಿಸಿಕೊಳ್ಳುತ್ತದೆ.

ಗುರು ಮತ್ತು ಲಿಂಗ ಹೇಗೆ ಪ್ರಸಾದಗಳೋ ಹಾಗೆಯೇ ಜಂಗಮವೂ ಸಹ ಒಂದು ಪ್ರಸಾದವೇ, ಸಿದ್ಧ ಪ್ರಸಾದರೂಪನಾದ ಜಂಗಮವನ್ನು ಆತ್ಮದಲ್ಲಿ ಸ್ವಾಯತ ಮಾಡಿಕೊಂಡರೆ ಆಗ ಆತ್ಮದ ಜೀವತ್ವ ಭಾವ ನಷ್ಟವಾಗುತ್ತದೆ; ಆಗ ನಾವು ತೆಗೆದುಕೊಂಡುದುದು ಸಮಯ ಪ್ರಸಾದ, ಶುದ್ಧ, ಸಿದ್ಧ ಮತ್ತು ಪ್ರಸಾದ ಸ್ವರೂಪವಾದ ಮಹಾಲಿಂಗವೂ ಒಂದು ಪ್ರಸಾದವೇ. ಆ ಮಹಾಲಿಂಗವನ್ನು ನಾವು ನಮ್ಮ ಸರ್ವಾಂಗದಲ್ಲಿ ಸ್ವಾಯತ ಮಾಡಿಕೊಂಡರೆ, ಆಗ ಸರ್ವಾಂಗಗಳ ದುಷ್ಟಗುಣಗಳು ನಷ್ಟವಾಗಿ, ಪೂರ್ಣಭಕ್ತಿ ನೆಲೆಸುತ್ತದೆ. ಹೀಗೆ ಪೂರ್ಣ ಭಕ್ತಿ ನೆಲೆಸಿದರೆ, ನಾವು ತೆಗೆದುಕೊಳ್ಳುವ ಪ್ರಸಾದ ಏಕ ಪ್ರಸಾದ. ಇಲ್ಲಿ, ಭಕ್ತನು ತನ್ನನ್ನು ತಾನೇ ಅರ್ಪಿಸಿಕೊಂಡು (ಹಾಗೂ ಪ್ರಸಾದವನ್ನಾಗಿ ಮಾಡಿಕೊಂಡು) ಪ್ರಸಾದಿಗೂ ಪ್ರಸಾದಕ್ಕೂ ಇರುವ ಅಂತರವನ್ನು ಅಳಿಸಿಹಾಕುವುದೇ ಏಕಪ್ರಸಾದದ ಅರ್ಥ. ಆದರೆ ಚತುರ್ವಿಧ ಪ್ರಸಾದವು ಪ್ರಸಾದಿಗಿಂತ ಭಿನ್ನವೆಂಬುದನ್ನು ಗಮನಿಸಬೇಕು. (೧೦:೧೬೨)

೨. ಕುಷ್ಟಗಿ ಕರಿಬಸವೇಶ್ವರನೆಂಬ ವಚನಕಾರನ ಪ್ರಕಾರ, ಚತುರ್ವಿಧ ಪ್ರಸಾದವೆಂದರೆ, ಗುರುಪ್ರಸಾದ, ನಿತ್ಯ ಪ್ರಸಾದ, ಜ್ಞಾನ ಪ್ರಸಾದ ಮತ್ತು ಸಿದ್ಧ ಪ್ರಸಾದ ಎಂಬ ನಾಲ್ಕು ವಿಧದ ಪ್ರಸಾದ. ಅವನ ಪ್ರಕಾರ ಗುರುವಿನ ಮುಖಾಂತರ ಬಂದುದು ಗುರುಪ್ರಸಾದ ಲಿಂಗದ ಮುಖಾಂತರ ಬಂದುದು ನಿತ್ಯ ಪ್ರಸಾದ ಜಂಗಮದ ಮುಖಾಂತರ ಬಂದುದು ಜ್ಞಾನಪ್ರಸಾದ ಮತ್ತು ಜ್ಞಾನದ ಮುಖಾಂತರ ಬಂದುದು ಸಿದ್ಧ ಪ್ರಸಾದ.

ಗುರು ಕೊಟ್ಟ ಪ್ರಸಾದ ಗುರುಪ್ರಸಾದ. ಲಿಂಗವು ನಿತ್ಯವಾದುದರಿಂದ, ಲಿಂಗಮುಖದಿಂದ ಬಂದುದು ನಿತ್ಯಪ್ರಸಾದವೆನಿಸಿಕೊಳ್ಳುತ್ತದೆ. ಜಂಗಮವೆಂದರೆ ಲಿಂಗಾಂಗ ಸಾಮರಸ್ಯದ ಮೂಲಕ ಜ್ಞಾನ ಪಡೆದಾತ. ಅಂಥವನು ಮಾತ್ರ ಬೇರೆಯವರಿಗೆ ಜ್ಞಾನವನ್ನು ನೀಡಬಲ್ಲ. ಅವನಿಂದ ಬಂದ ಜ್ಞಾನವೂ ಒಂದು ಪ್ರಸಾದವೇ. ವಾಸ್ತವವಾಗಿ, ಜ್ಞಾನಪ್ರಸಾದವು ಹಣ್ಣು, ಹಾಲು, ಮುಂತಾದ ಭೌತಿಕ ಪ್ರಸಾದಗಳಿಗಿಂತ ಹೆಚ್ಚು ಶ್ರೇಷ್ಠವಾದುದು. ಜಂಗಮನಿಂದ ಪಡೆದ ಜ್ಞಾನದ ಮೂಲಕ ಭಕ್ತನು ಆಧ್ಯಾತ್ಮಿಕ ಸಿದ್ದಿಯನ್ನು ಪಡೆದು, ಸಿದ್ಧವೆನಿಸಿಕೊಳ್ಳುತ್ತಾನೆ ಅಥವಾ ಜ್ಞಾನ ಮುಖದಲ್ಲಿ ಬಂದ ಪ್ರಸಾದವು ಸಿದ್ಧ ಪ್ರಸಾದವೆನಿಸಿಕೊಳ್ಳುತ್ತದೆ. (೧೦:೫೧೨)

೩. ಆದರೆ ಗುರುಸಿದ್ದ ದೇವರು ಎಂಬ ವಚವಕಾರನ ಪ್ರಕಾರ, ಚತುರ್ವಿಧ ಪ್ರಸಾದದ ಪಟ್ಟಿಯಲ್ಲಿ ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ, ಮತ್ತು ನಿಜಪ್ರಸಾದಗಳು ಸೇರಿವೆ. ಮೇಲೆ ಹೇಳಿದ ಪದಗಳೇ ಇಲ್ಲಿಯೂ ಬಳಕೆಯಾಗಿದ್ದರೂ, ಅವುಗಳ ಅರ್ಥದಲ್ಲಿ ಭಿನ್ನತೆಯಿದೆ. ಅವನ ಪ್ರಕಾರ, ದೀಕ್ಷಾವಿಧಿಗಳ ಪ್ರಕಾರ ಗುರುವು ಶಿಷ್ಯನಿಗೆ ಕೊಡುವ ಇಷ್ಟಲಿಂಗವೇ ಗುರು ಪ್ರಸಾದ ಇಷ್ಟಲಿಂಗ ಪೂಜಾವಿಧಿಗಳ ಪ್ರಕಾರ, ಗುರುವು ಶಿಷ್ಯನಿಗೆ ದಶವಿಧ ಪಾದೋದಕ ಮತ್ತು ಏಕಾದಶ ಪ್ರಸಾದವನ್ನು ಕರುಣಿಸುವುದೇ ಲಿಂಗಪ್ರಸಾದ. ಸೃಷ್ಟಿ ವಿಚಾರ, ಆತ್ಮ ವಿಚಾರ, ಮನುಷ್ಯನಲ್ಲಿರುವ ಯಾವ ಕಲಾಶಕ್ತಿಗೆ ಯಾರು ಅಧಿದೇವತೆ, ಯಾವ ಭಕ್ತಿಗೆ ಯಾವ ಲಿಂಗ, ಯಾವ ಚಕ್ರದಲ್ಲಿ ಯಾವ ಲಿಂಗವಿದೆ, ಇತ್ಯಾದಿ ಸಕೀಲಗಳ ರಹಸ್ಯವನ್ನು ಜಂಗಮನು (ಜ್ಞಾನವನ್ನು ಪಡೆದವನು) ಶಿಷ್ಯನಿಗೆ ಬೋಧಿಸುವುದರಿಂದ, ಆ ಬೋಧನೆಯೇ ಜಂಗಮ ಪ್ರಸಾದವೆನಿಸಿಕೊಳ್ಳುತ್ತದೆ. ಶಿಷ್ಯನು ಈ ಬೋಧನೆಗನುಗುಣವಾಗಿ ನಡೆದುಕೊಂಡು, ಸರ್ವಾಚಾರ, ಸಂಪತ್ತಿನೊಡಗೂಡಿ ಭಿನ್ನಭಾವವ ತ್ಯಜಿಸಿ, ತಾನು ಮತ್ತು ಲಿಂಗ (ಪರಶಿವ) ಒಂದೇ ಎಂಬ ಐಕ್ಯ ಭಾವವನ್ನು ಅನುಭಾವದ ಮೂಲಕ ಪಡೆದುಕೊಂಡರೆ, ತಾನೇ ನಿಜ ಪ್ರಸಾದವಾಗುತ್ತಾನೆ. (೧೦:೬೭೯)

ವಾಸ್ತವವಾಗಿ, ಅಲ್ಪ ಸ್ವಲ್ಪ ಬದಲಾವಣೆಗಳನ್ನು ಹೊರತುಪಡಿಸಿ, ಚತುರ್ವಿಧ ಪ್ರಸಾದದ ಬಗೆಗಿನ ಈ ಶರಣರ ಕಲ್ಪನೆಗಳು ಒಂದೇ ತೆರನಿದ್ದು, ಅವುಗಳ ಹೆಸರುಗಳಷ್ಟೇ ಭಿನ್ನವಾಗಿವೆ, ಎಂಬುದನ್ನು ನಾವು ಗಮನಿಸಬಹುದು.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ತ್ರಿವಿಧ ಇಪ್ಪತ್ತುನಾಲ್ಕು ಶೀಲ Next