ಪರ | ಚತುರ್ವಿಧ ಫಲ ಪದವಿ |
ನಿವೃತ್ತಿ |
೧. ಮನುಷ್ಯನು ಸಂಪೂರ್ಣವಾಗಿ ವಿಕಸನಗೊಂಡ ನಂತರ, ಆತನಲ್ಲಿದ್ದ ಮೂಲಗುಣಗಳು, ಶಕ್ತಿ ಮುಂತಾದುವು ಅವುಗಳ ಉಗಮಸ್ತಾನಗಳಲ್ಲೇ ಕ್ರಮೇಣ ಅಡಗಿಹೋಗಿ ಪರತತ್ವದಲ್ಲಿ ಲೀನವಾಗುವ ಕ್ರಿಯೆ; ಲಿಂಗದಲ್ಲಿ ಒಂದಾಗುವಿಕೆ: ದ್ವೈತಲಯವೆನಿಪುದೆ ನಿವೃತ್ತಿ ನಿವೃತ್ತಿಯೆಂದೆನಿಪುದೇ ವಿಶ್ರಾಂತಿಯೆಂದೆನಿಪುದು (ಶಿವಚಂ. ೫೨-೨೧); ಮನುಷ್ಯನಲ್ಲಿ ಚಕ್ರಗಳು, ಶಕ್ತಿಗಳು, ತತ್ವಗಳು, ಭಕ್ತಿಗಳು, ಲಿಂಗಗಳು, ಅಂಗಗಳು, ಕಲೆಗಳು, ನಾದಗಳು, ಮಹಾಭೂತಗಳು ಇವೇ ಮೊದಲಾದವುಗಳು ಇವೆ. ನಿವೃತ್ತಿಯಲ್ಲಿ ಇವೆಲ್ಲವೂ ಅಡಗಿಹೋಗುತ್ತವೆ. ಆಗ ಯಾವುವು ಸ್ಥೂಲರೂಪವಾಗಿಯೋ ಅವುಗಳಿಗೆ ಸಂಬಂಧಿಸಿದ ಸೂಕ್ಷ್ಮ ರೂಪಗಳಲ್ಲಿ ಅಡಗುತ್ತ ಅಡಗುತ್ತ ಕಡೆಗೆ ಪರಮಾತ್ಮನಲ್ಲಿ ಲಯವಾಗಿ ಹೋಗುತ್ತವೆ. ಇದು ನಿವೃತ್ತಿ ಎಂದೆನಿಸಿಕೊಳ್ಳಲ್ಪಡುತ್ತದೆ (ಶಿವಾಕೋ. ೮೧-೯೪).
೨. ಮೂಲಪ್ರಣವದಿಂದ ಉತ್ಪತ್ತಿಯಾಗುವ ಶಾಂತ್ಯತೀತ, ಶಾಂತಿ, ವಿದ್ಯಾ, ಪ್ರತಿಷ್ಠಾ ಮತ್ತು ನಿವೃತ್ತಿ ಎಂಬ ಪಂಚಕಲೆಗಳಲ್ಲಿ ಒಂದು; ನಾದ ಬಿಂದು ಕಲೆಗಳು ಮೂಲಚಿತ್ತಿನೊಂದಿಗೆ ಬೆರೆತಾಗ ಪ್ರಣವವು ಪ್ರಕಟಗೊಳ್ಳುತ್ತದೆ. ಈ ಪ್ರಣವದಲ್ಲಿ ನ, ಮ, ಶಿ, ವ, ಯ ಎಂಬ ಮಂತ್ರಾಕ್ಷರಗಳೂ ಈ ಮಂತ್ರಾಕ್ಷರಗಳಿಂದ ಪಂಚಕಲೆಗಳೂ ಪಂಚಕಲೆಗಳಿಂದ ಪಂಚಶಕ್ತಿಗಳೂ ಉತ್ಪತ್ತಿಯಾಗುತ್ತವೆ. ಪಂಚಕಲೆಗಳಲ್ಲಿ ಒಂದಾದ ನಿವೃತ್ತಿ ಕಲೆಯು ಪ್ರಪಂಚದ ಏಳಿಗೆಗೆ ಸಹಾಯ ಮಾಡುತ್ತದೆ ; ಪಂಚಾಕ್ಷರಗಳಿಂದ ಶಾಂತ್ಯಾತೀತ, ಶಾಂತಿ, ವಿದ್ಯಾ, ಪ್ರತಿಷ್ಠಾ ಮತ್ತು ನಿವೃತ್ತಿ ಈ ಕಲೆಗಳು ಅನುಕ್ರಮವಾಗಿ ಉದಯವಾಗುತ್ತವೆ (ಶಿವಾಕೋ, ೨೬-೩೦).
೩. ದೇಹದಲ್ಲಿರುವ ಆರು ಚಕ್ರಗಳು ಮತ್ತು ಮಿದುಳಿನಲ್ಲಿರುವ ಮೂರು ಚಕ್ರಗಳು -ಹೀಗೆ ಒಟ್ಟು ಒಂಬತ್ತು ಚಕ್ರಗಳಿಗೆ ಅನುಕ್ರಮವಾಗಿರುವ ನಿವೃತ್ತಿ, ಪ್ರತಿಷ್ಠಾ, ವಿದ್ಯಾ, ಶಾಂತಿ, ಶಾಂತ್ಯಾತೀತ, ಶಾಂತ್ಯಾತೀತೋತ್ತರ, ಅನಾದಿ, ನಿರ್ಮಾಯ ಮತ್ತು ಅನಿರ್ವಾಚ್ಯ ಎಂಬ ಒಂಬತ್ತು ಬಗೆಯ ಕಲೆಗಳಲ್ಲಿ ಒಂದು: ಈ ಚಕ್ರಗಳಿಗೆ ...ಕಲೆಗಳು ಇವೆ. ಅವು ಯಾವುವೆಂದರೆ ನಿವೃತ್ತಿ, ಪ್ರತಿಷ್ಠಾ, ವಿದ್ಯಾ, ಶಾಂತಿ, ಶಾಂತ್ಯತೀತ, ಶಾಂತ್ಯತೀತೋತ್ತರ ಇವು ಇವೆ. ಕಡೆಯವುಗಳು ಅನುಕ್ರಮವಾಗಿ ಅನಾದಿ, ನಿರ್ಮಾಯ, ಅನಿರ್ವಾಚ್ಯ ಎಂಬವುಗಳಿವೆ (ಶಿವಾಕೋ. ೪೦-೩೮).
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಪರ | ಚತುರ್ವಿಧ ಫಲ ಪದವಿ |