ಸೃಷ್ಟಿಯ ಕ್ರಮ | ಚತುರ್ವಿಧ ಪ್ರಸಾದ |
ತ್ರಿವಿಧ |
೧. ಮೂರು ಬಗೆ; ಮೂರು ಪ್ರಕಾರ : ವಚನ ಸಾಹಿತ್ಯದಲ್ಲಿ ಬಹುವಾಗಿ ಬಳಸಿರುವ ಈ ಪದಕ್ಕೆ ಸಂದರ್ಭಾನುಸಾರವಾಗಿ ಅನೇಕ ಬಗೆಯ ವಿಶೇಷಾರ್ಥಗಳು ಬರುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ.
೨. ಗುರು, ಲಿಂಗ, ಜಂಗಮ : ತನುವ ಕೊಟ್ಟು ಗುರುವನೊಲಿಸಬೇಕು ಮನವ ಕೊಟ್ಟು ಲಿಂಗವನೊಲಿಸಬೇಕು ಧನವ ಕೊಟ್ಟು ಜಂಗಮವನೊಲಿಸಬೇಕು ಈ ತ್ರಿವಿಧವ ಹೊಳಗು ಮಾಡಿ ಹಳ್ಳಿಯ ಹೊಯಿಸಿ ಕುಲಹ ಪೂಜಿಸುವ ಗೊರವರ ಮೆಚ್ಚ (ಬಸವ. ಸಮವ. ೧-೫೨-೨೦೬).
೩. ಲಿಂಗ, ಜಂಗಮ, ಪ್ರಸಾದ : ಲಿಂಗದಲ್ಲಿ ಕಠಿಣವುಂಟೆ ಜಂಗಮದಲ್ಲಿ ಕುಲವುಂಟೆ ಪ್ರಸಾದದಲ್ಲಿ ಅರುಚಿಯುಂಟೆ ಈ ತ್ರಿವಿಧದಲ್ಲಿ ಭಾವಭೇದವನಗಿಸುವೆನು (ಬಸವ. ಸಮವ. ೧-೭೦-೨೮೬); ಲಿಂಗ ಬಂದು ಮನವನಿಂಬುಗೊಂಬುದು, ಜಂಗಮ ಬಂದು ಧನವನಿಂಬುಗೊಂಬುದು, ಪ್ರಸಾದ ಬಂದು ತನುವನಿಂಬುಗೊಂಬುದು [ಈ] ತ್ರಿವಿಧವು ತಾನೆ ...ನೀನೊಲಿದ ಶರಣಂಗೆ ದೃಷ್ಟ (ಚೆನ್ನಬ. ಸಮವ. ೩-೧೯-೫೮),
೪. ತನು, ಮನ, ಧನ : ತನುವ ಕೊಟ್ಟು ತನು ಬಯಲಾಯಿತು ಮನವ ಕೊಟ್ಟು ಮನ ಬಯಲಾಯಿತ್ತು ಧನವ ಕೊಟ್ಟು ಧನ ಬಯಲಾಯಿತ್ತು. ಈ ತ್ರಿವಿಧವನು ಕೊಟ್ಟು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಬಯಲ ಸಮಾಧಿಯಾಯಿತ್ತು (ಚೆನ್ನಬ. ಸಮವ. ೩-೪೫೭-೧೨೯೭).
೫. ಶುದ್ಧ, ಸಿದ್ಧ, ಪ್ರಸಿದ್ಧ ಪ್ರಸಾದಗಳು: ಶುದ್ಧಪ್ರಸಾದ ಗುರುವಿನದು ಸಿದ್ಧಪ್ರಸಾದ ಲಿಂಗದದು ಪ್ರಸಿದ್ಧ ಪ್ರಸಾದ ಜಂಗಮದದು ಇಂತೀ ತ್ರಿವಿಧ ಒಂದಾದವರ ತೋಜಾ (ಬಸವ. ಸಮವ. ೧-೨೦೧-೭೯೧),
೬. ಉತ್ಪತ್ತಿ, ಸ್ಥಿತಿ, ಲಯಗಳೆಂಬ ಮೂರು ಅವಸ್ಥೆಗಳು: ಮೂಜಗದಲ್ಲಿ ನಿ[ರು]ತರು ಕೂಡಲಸಂಗನ ಶರಣರು ತ್ರಿವಿಧವನಡೆಯರು (ಬಸವ. ಸಮವ. ೧-೨೩೫-೯೦೨).
೭. ಮನಸ್ಥಲ, ತನುಸ್ಥಲ, ಕರಸ್ಥಲ : ಹರ... ಗುರುರೂಪಾಗಿ ಬಂದು ಮನಸ್ಥಲಕ್ಕೆ ಮಂತ್ರವಾದ ತನುಸ್ಥಲಕ್ಕೆ ಪ್ರಸಾದವಾದ ಕರಸ್ಥಲಕ್ಕೆ ಲಿಂಗವಾದ ಇಂತೀ ತ್ರಿವಿಧದಲ್ಲಿ ತ್ರಿವಿಧ ಸಾಹಿತ್ಯವಾದನಯ್ಯಾ (ಚೆನ್ನಬ, ಸಮವ. ೩-೧೦-೨೨).
೮. ತನುಶುದ್ಧ, ಮನಃಶುದ್ಧ ಭಾವಶುದ್ಧ ಎಂಬ ಮೂರು ಬಗೆಯ ಶುದ್ಧಜೀವರು : ತನುಶುದ್ಧನಾಗಿ ಇಷ್ಟಲಿಂಗವ ಪೂಜಿಸಬೇಕು ಮನಶುದ್ಧನಾಗಿ ಪ್ರಾಣಲಿಂಗವ ಧ್ಯಾನಿಸಬೇಕು ಭಾವಶುದ್ಧನಾಗಿ, ಭಾವಲಿಂಗವ ಭಾವಿಸಬೇಕು ಇಂತೀ ತ್ರಿವಿಧವನಡೆಯದೆ... ಆನು ಶುದ್ಧನಾದೆನೆಂಬ ಕ್ರಿಯಾ ಕೃತಿಯಾದ ಪಾತಕನ ನಾಯಕ ನರಕದಲ್ಲಿಕ್ಕುವ (ಚೆನ್ನಬ, ಸಮವ. ೩-೨೯೮-೯೩೯).
೯. ಕರ್ಮಕಾಂಡ, ಭಕ್ತಿಕಾಂಡ, ಜ್ಞಾನಕಾಂಡ ಎಂಬ ಮೂರು ಪ್ರಕಾರಗಳು: ಕರ್ಮಕಾಂಡ ಭಕ್ತಿಕಾಂಡ ಜ್ಞಾನಕಾಂಡ ಈ ತ್ರಿವಿಧದಲ್ಲಿ ವಂಚಕನಾದಡೆ ಈಸು ವಿಧದೊಳಗೆ ಅಂಗವಿಲ್ಲ (ಬಸವ. ಸಮವ. ೧-೨೩೨-೮೮೯),
೧೦. ಹೊನ್ನು, ಹೆಣ್ಣು, ಮಣ್ಣುಗಳೆಂಬ ಮೂರು ಬಗೆಯ ಕಾಮನೆಗಳು : ನೆನೆವ ಮನಕ್ಕೆ ಮಣ್ಣನೆ ತೋಟೆದೆ ನೋಡುವ ಕಣ್ಣಿಗೆ ಹೆಣ್ಣನೆ ತೋಳದೆ ಪೂಜಿಸುವ ಕೈಗೆ ಹೊನ್ನನೆ ತೋಟೆದೆ ಇಂತೀ ತ್ರಿವಿಧವನೆ ತೋಟೆ ಕೊಟ್ಟು ಮಱಹನಿಕ್ಕಿದೆಯಯ್ಯಾ (ನಾಗಣ್ಣ, ಸಮವ. ೮-೪-೮); ಅಜೆವು ಬಾಹ್ಯವಾಗಿ ತ್ರಿವಿಧಕ್ಕೆ ಕಚ್ಚಾಡಲೇತಕ್ಕೆ (ಘಟ್ಟಿವಾ, ಸಮವ. ೭-೧೫೨-೪೩೦).
೧೧. ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯ ಪ್ರಸಾದಿಗಳೆಂಬ ಮೂವರು ಪ್ರಸಾದಿಗಳು.
೧೨. ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕವೆಂಬ ಮೂರು ಬಗೆಯ ಕಷ್ಟಗಳು. ೧೩. ತ್ಯಾಗಾಂಗ, ಭೋಗಾಂಗ, ಯೋಗಾಂಗ ಎಂಬ ಅಂಗತ್ರಯಗಳು.
೧೪, ಕಾಯ, ವಾಚ, ಮನವೆಂಬ ತ್ರಿಕರಣಗಳು.
೧೫. ವಿಶ್ವ, ತೈಜಸ, ಪ್ರಾಜ್ಞ ಎಂಬ ಜೀವತ್ರಯಗಳು.
೧೬. ಸ್ಥೂಲ, ಸೂಕ್ಷ್ಮ, ಕಾರಣ ಎಂಬ ಶರೀರತ್ರಯಗಳು.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಸೃಷ್ಟಿಯ ಕ್ರಮ | ಚತುರ್ವಿಧ ಪ್ರಸಾದ |