*
ಅಂಕಿತ:
|
ಸೌರಾಷ್ಟ್ರ ಸೋಮೇಶ್ವರ
|
ಕಾಯಕ:
|
ವ್ಯಾಪಾರ
|
ಅಂಗದ ಮೇಲಣ ಲಿಂಗ ಹಿಂಗಿದಾತ ಭವಿ ಎಂಬರು.
ಅಂಗದ ಮೇಲಣ ಲಿಂಗ ಹಿಂಗದಾತನ ಭಕ್ತನೆಂಬರು.
ಅಂಗದೊಳಗೆ ಬೆರಸಿರ್ಪ ಲಿಂಗದ ಹೊಲಬನಾರೂ ಅರಿಯರು.
ಆ ಲಿಂಗವಿಲ್ಲದೆ ಒಂದು ಕ್ಷಣ ಒಂದಂಗ ಸುಳಿವುದೆ?
ಅಂಗದೊಳಗಣ ಲಿಂಗ ಹಿಂಗದೆ ಆರಾಧಿಸಬಲ್ಲಡೆ ಹಿಂಗುವದು ಭವಮಾಲೆ
ಸೌರಾಷ್ಟ್ರ ಸೋಮೇಶ್ವರಾ.
ಈತ ಮೂಲತಃ ಸೌರಾಷ್ಟ್ರಕ್ಕೆ ಸೇರಿದವನು. ವ್ಯಾಪಾರ ನಿಮಿತ್ತ ಪುಲಿಗೆರೆಗೆ ಬಂದು, ಜೈನಕನ್ಯೆ ಪದ್ಮಾವತಿಯನ್ನು
ಪ್ರೇಮಿಸಿ, ಮದುವೆಯಾಗಿ, ಮಾವನೊಲದಿಗೆ ವಾದಕ್ಕೆ ನಿಂತು, ಸೌರಾಷ್ಟ್ರದಿಂದ ಸೋಮೇಶ್ವರನನ್ನು ಕರೆತಂದು,
ಪುಲಿಗೆರೆ (ಲಕ್ಷೇಶ್ವರ)ಯ ಸುರಹೊನ್ನೆ ಬಸದಿಯಲ್ಲಿ ಸ್ಥಾಪಿಸಿದನೆಂದು ಅದಯ್ಯನ ರಗಳೆ, ಸೋಮನಾಥ ಚಾರಿತ್ರ
ಮೊದಲಾದ ಕಾವ್ಯಗಳಿಂದ ತಿಳಿದುಬರುತ್ತದೆ. ಕಾಲ ಕ್ರಿ, ಶ. ೧೧೬೫.
’ಸೌರಾಷ್ಟ್ರ ಸೋಮೇಶ್ವರ' ಅಂಕಿತದಲ್ಲಿ ವಚನ ಮತ್ತು ಸ್ವರವಚನಗಳನ್ನು ರಚಿಸಿದ್ಧಾನೆ. ೪೦೩ ವಚನಗಳು
ದೊರೆತಿವೆ. ಶರಣ ಧರ್ಮ ತತ್ವಗಳ ವಿವೇಚನೆ ಅವುಗಳಲ್ಲಿ ವ್ಯಾಪಕವಾಗಿ ನಡೆದಿದೆ. ಸಾಹಿತ್ಯಿಕ ಸತ್ವ,
ತಾತ್ವಿಕ ಪ್ರೌಢಿಮೆ ಎರಡೂ ಈತನ ವಚನಗಳಲ್ಲಿ ಮೇಳೈಸಿರುವುದು ವಿಶೇಷವೆನಿಸಿದೆ. ಇವನ ವಚನಗಳ ಮೇಲೆ ಬಸವಣ್ಣ
- ಅಲ್ಲಮರ ಪ್ರಭಾವ ವಿಶೇಷವಾಗಿ ಆಗಿದೆ. ಶರಣ ಚಳುವಳಿಯ ಪ್ರಮುಖರಲ್ಲಿ ಆದಯ್ಯ ಒಬ್ಬ, ಶೈವಪ್ರಭೇದಗಳನ್ನು
ಹೇಳಿ ಲಿಂಗಾಯತದ ವೈಶಿಷ್ಟ್ಯವನ್ನು ಚೆನ್ನಾಗಿ ತಿಳಿಯಪಡಿಸಿರುವನು, `ವೇದಗಳ ಹಿಂದೆ ಹರಿಯದಿರು ಎಂದು
ಹೇಳುವ ಮೂಲಕ ಶರಣಧರ್ಮಕ್ಕೆ ಹೆಚ್ಚಿನ ಒತ್ತುಕೊಡುವನು. ಬೆಡಗಿನ ವಚನಗಳು ಸಾಕಷ್ಟು ಬಳಕೆಗೊಂಡಿವೆ.
ಹಾಲ ಹಿಡಿದು ಬೆಣ್ಣೆಯನರಸಲುಂಟೆ ?
ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ ?
ಲಿಂಗತೀರ್ಥಪ್ರಸಾದವ ಕೊಂಡು
ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇಕೆ ?
ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೆನಾದಡೆ,
ತಡೆಯದೆ ಹುಟ್ಟಿಸುವ ಶ್ವಾನನ ಗರ್ಭದಲ್ಲಿ.
ಅದೆಂತೆಂದಡೆ:
ಇಷ್ಟಲಿಂಗಮವಿಶ್ವಸ್ಯ ತೀರ್ಥಲಿಂಗಂ ತು ಯೋ ಭಜೇತ್
ಶುನಾಂ ಯೋನಿಃ ಶತಂ ಗತ್ವಾ ಚಂಡಾಲಗೃಹಮಾವಿಶೇತ್
ಎಂದುದಾಗಿ, ಗುರು ಕೊಟ್ಟ ಲಿಂಗದಲ್ಲಿ
ಎಲ್ಲಾ ತೀರ್ಥಂಗಳೂ ಎಲ್ಲಾ ಕ್ಷೇತ್ರಂಗಳೂ ಇದ್ದಾವೆಂದು
ಭಾವಿಸಿ ಮುಕ್ತರಪ್ಪುದಯ್ಯಾ.
ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದುಮಾಡಿ,
ತೀರ್ಥಲಿಂಗವ ಹಿರಿದುಮಾಡಿ ಹೋದವಂಗೆ
ಅಘೋರನರಕ ತಪ್ಪದು ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
*