ಅಮರಗುಂಡದ ಮಲ್ಲಿಕಾರ್ಜುನ ತಂದೆ | |
*
ಅಂಕಿತ: |
ಮಹಾಮಹಿಮ ಮಾಗುಡದ ಮಲ್ಲಿಕಾರ್ಜುನಾ (ಈಶ್ವರೀಯ ವರದ ಮಹಾಲಿಂಗ) |
ಕಾಯವೆಂಬ ಪಟ್ಟಣಕ್ಕೆ ಸತ್ಯವೆಂಬ ಕೋಟೆಯನಿಕ್ಕಿ,
ಧರ್ಮಾರ್ಥಕಾಮಮೋಕ್ಷಂಗಳೆಂಬ
ಉಕ್ಕಡದವರೆಚ್ಚತ್ತಿರಿ! ಎಚ್ಚತ್ತಿರಿ!
ಭಯ ಘನ! ಭಯ ಘನ!
ಅಜ್ಞಾನವೆಂಬ ತೀವ್ರ ಕತ್ತಲೆ ಕರ ಘನ! ಕರ ಘನ!
ಒಂಬತ್ತು ಬಾಗಿಲ ಜತನವ ಮಾಡಿ! ಜತನವ ಮಾಡಿ!
ಜ್ಞಾನಜ್ಯೋತಿಯ ಪ್ರಬಲವ ಮಾಡಿ! ಪ್ರಬಲವ ಮಾಡಿ!
ಐವರು ಕಳ್ಳರು ಕನ್ನವ ಕೊರೆವುತೈದಾರೆ,
ಸುವಿಧಾನವಾಗಿರಿ! ಸುವಿಧಾನವಾಗಿರಿ!
ಜೀವಧನವ ಜತನವ ಮಾಡಿ! ಜತನವ ಮಾಡಿ!
ಭಳಿರೆಲಾ! ಭಳಿರೆಲಾ!
ಪಟ್ಟಣದ ಮೂಲಸ್ಥಾನದ ಶಿಖರದ ಮೇಲಣ
ಬಾಗಿಲ ತೆರೆದು, ನಡೆವುದೆ ಸುಪಥ ಸ್ವಯಂಭುನಾಥನಲ್ಲಿಗೆ.
ಇದನರಿತು ಮಹಾಮಹಿಮ ಮಾಗುಡದ ಮಲ್ಲಿಕಾರ್ಜುನದೇವರಲ್ಲಿ
ಎಚ್ಚರಿಕೆಗುಂದದಿರಿ! ಎಚ್ಚರಿಕೆಗುಂದದಿರಿ!
ಹೆಸರಿನ ಹಿಂದಿರುವ ವಿಶೇಷಣ 'ಅಮರಗುಂಡ' ಅಂದರೆ ಇಂದಿನ ತುಮಕೂರು ಜಿಲ್ಲೆಯ ಗುಬ್ಬಿ ಈತನ ಸ್ಥಳ ವಾಗಿರಬೇಕು. ಕಾಲ-೧೧೬೦. 'ಮಾಗುಡದ ಮಲ್ಲಿಕಾಜು೯ನ' ಅಂಕಿತದಲ್ಲಿ ಎರಡು ವಚನಗಳು ದೊರೆತಿವೆ. ಒಂದರಲ್ಲಿ ಕಾಯವೆಂಬ ಪಟ್ಟಣವನ್ನು ರಕ್ಷಿಸಿಕೊಳ್ಳುವ ರೀತಿಯನ್ನು, ಮತ್ತೊಂದರಲ್ಲಿ ಲಿಂಗದ ಮಹಿಮೆಯನ್ನು ಹೇಳಲಾಗಿದೆ. ಎರಡರಲ್ಲಿಯೂ ಅನುಭಾವ, ಅಧ್ಯಾತ್ಮ ಕೆನೆಗಟ್ಟಿದೆ.
ವರ್ಣವಿಲ್ಲದ ಲಿಂಗಕ್ಕೆ
ರೂಪು ಪ್ರತಿಷ್ಠೆಯ ಮಾಡುವ ಪರಿಯಿನ್ನೆಂತೊ?
ಪ್ರಳಯವಿಲ್ಲದ ಲಿಂಗಕ್ಕೆ
ಪ್ರಾಣಪ್ರತಿಷ್ಠೆಯ ಮಾಡುವ ಪರಿಯಿನ್ನೆಂತೊ?
ನೆನೆಯಬಾರದ ಲಿಂಗಕ್ಕೆ
ಅನುಗ್ರಹವ ಮಾಡುವ ಪರಿಯಿನ್ನೆಂತೊ?
ನುಡಿಯಬಾರದ ಲಿಂಗಕ್ಕೆ
ಜಪಪೂಜೆಯದೆಂತೊ?
ಇಲ್ಲದ ಲಿಂಗವ ಧರಿಸುವ ಪರಿಯಿನ್ನೆಂತೊ?
ಮಹಾಮಹಿಮ ಮಾಗುಡದ ಮಲ್ಲಿಕಾರ್ಜುನಾ ಇದರಂತುವ ನೀವೆ ಬಲ್ಲಿರಿ.
*