*
ಅಂಕಿತ: |
ಸಿದ್ಧಸೋಮನಾಥ |
ಕಾಯಕ: |
ಬಟ್ಟೆ ನೇಯುವುದು |
ಸಾವಯನಲ್ಲ, ಸ್ವರೂಪ ಕುರುಹಿಡಿಯನಾಗಿ.
ನಿರವಯನಲ್ಲ, ನಿರೂಪ ಭಾವಿಸನಾಗಿ.
ದ್ವೈತಿಯಲ್ಲ, ಸೇವ್ಯಸೇವಕನೆಂಬ ಉಭಯವಳಿದುಳಿದನಾಗಿ.
ಅದ್ವೈತಿಯಲ್ಲ, `ನಾಹಂ-ಕೋಹಂ-ಸೋಹಂವೆಂಬ ಭ್ರಮೆಯಳಿದುಳಿದನಾಗಿ.
ಇಂತೀ ಸಕಲಭ್ರಮೆಯಳಿದು ಮಹಾಘನದಲ್ಲಿ ನಿಷ್ಪತಿಯಾಗಿಪ್ಪ
ಸಿದ್ಧಸೋಮನಾಥಲಿಂಗಾ, ನಿಮ್ಮ ಶರಣ.
ಈತನ ಸ್ಥಳ ಸೊಲ್ಲಾಪುರ. ಕಾಯಕ-ಬಟ್ಟೆ ನೇಯುವುದು. ಹೆಂಡತಿ-ವರದಾನಿ. ಕಾಲ-೧೧೬೦. ಮಹಾರಾಷ್ಟ್ರದ ಪುಳಜೆಯಲ್ಲಿ ಈತನನ್ನು ಕುರಿತ ಶಾಸನಗಳು ದೊರೆತಿವೆ. ಒಂದು ಶಾಸನ ಯಾದವ ಚಕ್ರವರ್ತಿ ಸಿಂಘಣನಿಂದ ಅಮುಗಿದೇವ ಪೊಜಿತನಾದುದನ್ನು ತಿಳಿಸಿದರೆ, ಮತ್ತೊಂದು 'ಮಹೇಶ್ವರಗಣ ಕುಲಾನ್ವಯ ದಿವಾಕರ, ಶರಣ ಸಂತಾನ, ಸಿದ್ಧಕುಲಾಣ೯ವ ಪ್ರವಧ೯ನ ಸುಧಾಕರ' ಎ೦ದು ಇವನನ್ನು ಹೊಗಳಿದೆ. ಸೊಲ್ಲಾಪುರದ ಕಪಿಲಸಿದ್ಧ ಮಲ್ಲಿಕಾರ್ಜುನನಿಂದ ತನ್ನ ಗೃಹೋಪಕರಣದ ಗಂಟನ್ನು ಹೊರಿಸಿಕೊಂಡು ಹೋಗಿ, ಸಿದ್ಧ ರಾಮನಿಗೆ ಬುದ್ದಿಕಲಿಸಿದ ಕಥೆ, ಕಾವ್ಯ-ಪುರಾಣಗಳಲ್ಲಿ ಪ್ರಸಿದ್ಧವಾಗಿದೆ.
'ಸಿದ್ಧಸೋಮನಾಥ" ಅಂಕಿತದಲ್ಲಿ ಈತ ರಚಿಸಿದ ೩೦ ವಚನಗಳು ಉಪಲಬ್ಧವಾಗಿವೆ. ಅವುಗಳಲ್ಲಿ ಈತನ ಇಷ್ಟಲಿಂಗ ನಿಷ್ಟೆ, ಶರಣತತ್ವ ನಿರೂಪಣೆ ಕಲಡುಬರುತ್ತವೆ.
ಕಕ್ಕಯ್ಯನ ಪ್ರಸಾದವ ಕೊಂಡೆನ್ನ ಕುಲಸೂತಕ ಹೋಯಿತ್ತಯ್ಯಾ,
ಚೆನ್ನಯ್ಯನ ಪ್ರಸಾದವ ಕೊಂಡೆನ್ನ ಛಲಸೂತಕ ಹೋಯಿತ್ತಯ್ಯಾ,
ದಾಸಯ್ಯನ ಪ್ರಸಾದವ ಕೊಂಡೆನ್ನ ತನುಸೂತಕ ಹೋಯಿತ್ತಯ್ಯಾ,
ಚಂದಯ್ಯನ ಪ್ರಸಾದವ ಕೊಂಡೆನ್ನ ಮನಸೂತಕ ಹೋಯಿತ್ತಯ್ಯಾ,
ತೆಲುಗ ಜೊಮ್ಮಯ್ಯನ ಪ್ರಸಾದವ ಕೊಂಡೆನ್ನ ನೆನಹುಸೂತಕ ಹೋಯಿತ್ತಯ್ಯಾ,
ಬಿಬ್ಬ ಬಾಚಯ್ಯನ ಪ್ರಸಾದವ ಕೊಂಡೆನ್ನ ಭಾವಸೂತಕ ಹೋಯಿತಯ್ಯಾ,
ಮೋಳಿಗಯ್ಯನ ಪ್ರಸಾದವ ಕೊಂಡೆನ್ನ ಜನನಸೂತಕ ಹೋಯಿತ್ತಯ್ಯಾ,
ಕೋಲ ಶಾಂತಯ್ಯನ ಪ್ರಸಾದವ ಕೊಂಡೆನ್ನಂತರಂಗದ ಸೂತಕ ಹೋಯಿತ್ತಯ್ಯಾ,
ಮೇದಾರ ಕೇತಯ್ಯನ ಪ್ರಸಾದವ ಕೊಂಡೆನ್ನ
ಬಹಿರಂಗದ ಸೂತಕ ಹೋಯಿತ್ತಯ್ಯಾ,
ಘಟ್ಟಿವಾಳಯ್ಯನ ಪ್ರಸಾದವ ಕೊಂಡೆನ್ನ ಸರ್ವಾಂಗದ ಸೂತಕ ಹೋಯಿತ್ತಯ್ಯಾ
ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು, ಮಡಿವಾಳಯ್ಯ, ಸಿದ್ಧರಾಮಯ್ಯ,
ಸೊಡ್ಡರ ಬಾಚರಸರು, ಹಡಪದಪ್ಪಣ್ಣ, ಶಂಕರ ದಾಸಿಮಯ್ಯ,
ಹೆಂಡದ ಮಾರಯ್ಯಾ, ಗಾಣದ ಕಣ್ಣಪ್ಪಯ್ಯ, ಕೈಕೂಲಿ ಚಾಮಯ್ಯ,
ಬಹುರೂಪಿ ಚೌಡಯ್ಯ, ಕಲಕೇತ ಬ್ರಹ್ಮಯ್ಯ ಮೊದಲಾದ
ಶಿವಗಣಂಗಳ ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ,
ಮಹಾಘನ ಸದ್ಗುರು ಸಿದ್ಧಸೋಮನಾಥಲಿಂಗವೆ
ನಿಮ್ಮ ಧರ್ಮ, ನಿಮ್ಮ ಧರ್ಮ.
*