Previous ಆಗ್ಘವಣಿ ಹಂಪಯ್ಯ ಆನಾಮಿಕ ನಾಚಯ್ಯ Next

ಅಜಗಣ್ಣ

*
ಅಂಕಿತ: ಮಹಾಘನ ಸೋಮೇಶ್ವರ

ಅಂಗದಾಶ್ರಯವ ಕಳೆದು, ಲಿಂಗದಾಶ್ರಯವ ಮಾಡಿದ
ಗುರುವೆ ಶರಣು, ಶ್ರೀಗುರುಲಿಂಗವೆ ಶರಣು,
ಪರಮಸುಖವ ತೋರಿದೆಯಾಗಿ.
ಮಹಾಘನ ಸೋಮೇಶ್ವರನ ಸಾಹಿತ್ಯವ ಮಾಡಿ
ನಿಜ ನಿವಾಸದಲ್ಲಿರಿಸಿದೆಯಾಗಿ ಗುರುವೆ ಶರಣು.

ಶರಣೆ ಮುಕ್ತಾಯಕ್ಕನ ಸೋದರನೀತ. ಊರು-ಲಕ್ಕುಂಡಿ. ಅಲ್ಲಿನ ಸೋಮೇಶ್ವರ ಈತನ ಅರಾಧ್ಯ ಧೈವ. ಇಷ್ಟಲಿಂಗವನ್ನು ಬಾಯಿಯಲ್ಲಿ ಧರಿಸುತ್ತಿದ್ದ ವಿಶಿಷ್ಟ ಗುಪ್ತಭಕ್ತ. ಭಾವಲಿಂಗ ಪೂಜೆ ಇವನ ಮನಸ್ಥಿತಿ. ಐಕ್ಯಸ್ಥಲದ ಪ್ರತಿನಿಧಿ ಎ೦ದು ಅನೇಕ ವಚನಕಾರರು ಈತನನ್ನು ಪ್ರಶಂಸಿಸಿದ್ದಾರೆ. ಮುಕ್ತಾಯಕ್ಕನ ವಚನಗಳಲ್ಲಿ ಈತನ ಘನವ್ಯಕ್ತಿತ್ವ ಮೈವೆತ್ತು ನಿಂತಿದೆ. ಕಾಲ-೧೧೬೦. 'ಮಹಾಘನ ಸೋಮೇಶ್ವರ’ ಎಂಬ ಅಂಕಿತದಲ್ಲಿ ಬರೆದ ಈತನ ೧೦ ವಚನಗಳು ದೊರೆತಿವೆ. ಗುರುವಿನ ಲಕ್ಷಣ, ಗುರು ಶಿಶ್ಯರ ಸಂಬಂಧದ ಸ್ವರೂಪ, ಶರಣನ ಅನನ್ಯವ್ಯಕ್ತಿತ್ವ ಇವುಗಳಲ್ಲಿ ವ್ಯಕ್ತವಾಗಿದೆ. "ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ ಸಮ ಎಂದು ಚೆನ್ನಬಸವನ್ಣ ಹೇಳುವಲ್ಲಿ ಈತನ ವಚನಗಳ ಶ್ರೇಷ್ಠತೆ ಸೊಚಿತವಾಗಿದೆ.

ಸಜ್ಜನವೆ ಮಜ್ಜನ, ಸದಾಚಾರವೆ ಧೂಪಾರತಿ,
ಆಗಮವೆ ಪೂಜೆಯಾಗಿ ಅಂಗವಿರಹಿತವಾದಲ್ಲಿ
ಉದಯಾಸ್ತಮಾನವಿಲ್ಲದ ಲಿಂಗಾರ್ಚನೆ,
ಮಹಾಘನಸೋಮೇಶ್ವರಾ, ನಿಮ್ಮ ಶರಣಂಗೆ.

ಲಕ್ಕುಂಡಿಯಲ್ಲಿ ಶರಣ ಅಜಗಣ್ಣ ಗದ್ದುಗೆ ಪತ್ತೆ

ಜಾತಿ ಪದ್ಧತಿ, ಮೌಲ್ಯ, ನಿಮೂರ್ಲನ ಮಾಡಲು ಸಮಾಜ ಜಾಗೃತಿ ಮಾಡಿದ 12ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಲಕ್ಕುಂಡಿಯ ಶರಣ ಅಜ್ಜಗಣ್ಣನವರ ಗದ್ದುಗೆಯು ನೂರೊಂದು ದೇಗುಲ, ಕಲ್ಯಾಣಿಗಳ ಐತಿಹ್ಯವಿರುವ ಐತಿಹಾಸಿಕ ಕಲ್ಯಾಣಿ, ಮುಸ್ಕಿನಭಾವಿ ಹತ್ತಿರದ ಹಾಲ್ಲಪ್ಪ ಮುಗಬಾದಿ ಅವರ ತೋಟದ ಜಮೀನಿನಲ್ಲಿ ಗದ್ದುಗೆ ... ಪತ್ತೆಯಾಗಿದೆ.

ಗ್ರಾಮದ ಹಿರಿಯರು ಈ ಉತ್ಖನನ ಕಾಮಗಾರಿಯನ್ನು ಕೈಗೊಂಡ ಹಿನ್ನೆಲೆಯಲ್ಲಿ: ಈ ಗದ್ದುಗೆ ಕಂಡಿದೆ. ಗದ್ದುಗೆ ಪತ್ತೆಯಾದ ಕೂಡಲೇ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ವೀಕ್ಷಿಸಿಸುವುದು ಕಂಡು ಬಂತು.

ಆನುಭವಿಗಳಿಂದ ಪತ್ತೆ.

ನೂರಾರು ವರ್ಷಗಳಿಂದಲೇ ಈ ಗದ್ದುಗೆ ಈ ಜಾಗದಲ್ಲಿಯೇ ಇದೆ, ಎಂದು ಇಲ್ಲಿಯ ಹಿರಿಯ ಅನುಭವಿಗಳು ಹೇಳುತ್ತಿದ್ದರು. ಇದನ್ನು ಅರಿತ ಗ್ರಾಮದ ಮುಖ್ಯಸ್ಥರು ದಂಡಿನ ದುರ್ಗಾದೇವಿ ಕೆರೆಯ ಪಕ್ಕದಲ್ಲಿ ಇರುವ ಜಮೀನಿನ ಹೊಡ್ಡಿನಲ್ಲಿ ಜಿ.ಸಿ.ಬಿ. ಮೂಲಕ 8 ಘಂಟೆಗಳ ಕಾಲ ಅಗೆದ ಆನಂತರ ಗದ್ದುಗೆ ಪತ್ತೆಯಾಯಿತು. ಶಿಬಿ ಚಕ್ರವರ್ತಿ ಆಳ್ವಿಕೆಯ ಕಾಲದಲ್ಲಿಯೇ ನಿರ್ಮಿಸಿದ ದಂಡಿನ ದುರ್ಗಾದೇವಿ ಕೆರೆಯನ್ನು ಈ ಹಿಂದೆ ಭೀಕರ ಬರಗಾಲ ಬಂದಾಗ ಹೂಳು ತೆಗೆಸಲಾಗಿತ್ತು. ಆಗ ಈ ದಂಡೆ ಮೇಲಿದ್ದ ಅಜಗಣ್ಣ ಗದ್ದುಗೆಯ ಮುಚ್ಚಿ ಹೋಯಿತು. ಆನಂತರ ಈ ಬಗ್ಗೆ ಪರಿಶೀಲನೆ ಮಾಡದೆ ಮರೆತ ಹೋಗಿತ್ತು ಎಂದು ಹಿರಿಯರು ಹೇಳುತ್ತಾರೆ. ಹತ್ತು ವರ್ಷಗಳ ಹಿಂದೆ ಸರ್ಕಾರ ಗ್ರಾಮದಲ್ಲಿ ಉತ್ಖನನ ಕಾರ್ಯ ಕೈಗೊಂಡಾಗ ದೇವಸ್ಥಾನದ ತಳಪಾಯಗಳು ಕಂಡು ಬಂದಿದ್ದವು ಎಂಬುದನ್ನು ಸ್ಮರಿಸಬಹುದಾಗಿದೆ.

ಅಜಗಣ್ಣ 12ನೇ ಶತಮಾನದಲ್ಲಿದ್ದ ಗುರು ಬಸವಣ್ಣ ಅಲ್ಲಮಪ್ರಭು, ಸಮಕಾಲೀನರಾದ ಆಜಗಣ್ಣ ಜಾತಿ ಪದ್ಧತಿ ಮತ್ತು ಮೌಢ್ಯವನ್ನು ಹೋಗಲಾಡಿಸಲು ಶ್ರಮಿಸಿದ ಸತ್ಯ ಶರಣ, ಮುಂದೆ ಆಗುವ ಮತ್ತು ಪ್ರಸ್ತುತ ಘಟನೆಗಳ ಬಗ್ಗೆ ಮೊದಲೇ ತಿಳಿದುಕೊಂಡಿದ್ದ ತಪಶಿದ್ಧಿ ಶರಣ ಎನಿಸಿಕೊಂಡವರು. ಇನ್ನೂ ಪ್ರಮುಖವಾಗಿ ಲಕ್ಕುಂಡಿಯಲ್ಲಿ ಹುಟ್ಟಿ ಬೆಳೆದ ಅಜಗಣ್ಣ ಅವರು ತಂದೆ ನಿಧನದ ಅನಂತರ ತಂಗಿ ಮುಕ್ತಾಯಕ್ಕನೊಂದಿಗೆ ಬಾಂಧವ್ಯದಿಂದ ಬೆಳೆದವರು, ಗುರು ಶಿಷ್ಯರಾಗಿ, ತಂದೆ ಮಗಳಾಗಿ, ಇಬ್ಬರು ಆಧ್ಯಾತ್ಮಿಕ ಚಿಂತಕರಾಗಿ ಈ ಸಮಾಜವನ್ನು ತಿದ್ದಲು ಶ್ರಮಿಸಿ ಈ ನಾಡಿನಲ್ಲಿ ಇಂದಿಗೂ ಅಜಗಣ್ಣ ಮುಕ್ತಾಯಕ್ಕೆ ಎಂದು ಹೆಸರುವಾಸಿಯಾದ ಜೀವನ ಚರಿತ್ರೆ ಎಂದು ಶರಣರ ವಚನ ಪುಸ್ತಕದಲ್ಲಿ ಉಲ್ಲೇಖವಿದೆ.

ಸಮಾಜ ಸೇವಕ ಅರುಣ ಅಣ್ಣಿಗೇರಿಯವರ ಸಹಾಯಧನದೊಂದಿಗೆ ಉತ್ಖನನ ಕಾರ್ಯಕೈಗೊಂಡಾಗ ಅಜಗಣ್ಣನ ಗದ್ದಾಗ ಪತ್ತೆಯಾಗಿದೆ. ಆದರೆ, ಅಜಗಣ್ಣನ ಗದ್ದುಗೆ ಇದೆ ಎಂದು ಯಾವುದೇ ಪುರಾವೆಗಳಿಲ್ಲ, ಗ್ರಾಮಸ್ಥರು ತಮ್ಮ ಹಿಂದಿನ ಅನುಭವದಿಂದ ಕಂಡಿದ್ದರ ಆಧಾರ ಮೇಲೆ ಗದ್ದುಗೆಯನ್ನು ಹೊರತೆಗೆದಿದ್ದಾರೆ. ಆದರೆ ಭಾರತೀಯ ಪುರಾತತ್ವ ಇಲಾಖೆಯವರು ಪರಿಶೀಲನೆ ಮಾಡಿ ಅಜಗಣ್ಣನ ಗದ್ದುಗೆ ಇದೆ ಎಂಬುದನ್ನು ಖಚಿತಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅರುಣ ಅಣ್ಣಿಗೇರಿ, ಎಂ.ಎನ್. ಉಮಚಗಿ, ಎನ್.ಐ. ಕಿಟಗೇರಿ ಕೊಟ್ರಯ್ಯ. ನರಗುಂದಮಠ, ಮಹೇಶ, ಮುಸ್ಕಿನಭಾವಿ, ವಿರುಪಾಕ್ಷಪ್ಪ ಕಲಕೇರಿ, ಹಾಲಪ್ಪ, ಮುಸ್ಕಿನಭಾವಿ, ಶಿವಪ್ಪ ಸಜ್ಜನರ, ಅಶೋಕ ಮುಸ್ಕಿನಭಾವಿ, ರಾಚಪ್ಪ, ನಾಲ್ವಡ ಸುಭಾಸ, ಅಬ್ಬಿಗೇರಿ, ಕುಶಾಲ ಕದಲೂರು ಈ ಸಂದರ್ಭದಲ್ಲಿದ್ದರು.

ಲಕ್ಕುಂಡಿಯಲ್ಲಿ ಶರಣ ಅಜಗಣ್ಣ ಗದ್ದುಗೆ ಪತ್ತೆ
ಪರಿವಿಡಿ (index)
*
Previous ಆಗ್ಘವಣಿ ಹಂಪಯ್ಯ ಆನಾಮಿಕ ನಾಚಯ್ಯ Next