| ಉರಿಲಿಂಗಪೆದ್ದಿ :👈 | 👉:ಉಳಿಯುಮೇಶ್ವರ ಚಿಕ್ಕಣ್ಣ |
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ |
| ಅಂಕಿತ: | ಉರಿಲಿಂಗಪೆದ್ದಿಗಳರಸ |
ಕಲ್ಯಾಣದ ಅನುಭವ ಮಂಟಪದಲ್ಲಿ ಕೆಳಸ್ಥರದಿಂದ ಬಂದಂತಹ ಅನೇಕ ಜನ ಶರಣರಲ್ಲಿ ಪ್ರಮುಖರಾದವರು ಶರಣ ಉರಿಲಿಂಗಪೆದ್ದಿ ಮತ್ತು ಆತನ ಪುಣ್ಯಸ್ತ್ರೀ ಕಾಳವ್ವೆ.
ಈ ಕಾಳವ್ವೆ ಹೆಸರಿನ ಶರಣರೆಯರು ಅನುಭವ ಮಂಟಪದಲ್ಲಿ ಕಂಡುಬರುವುದು ನಾಲ್ಕು ಜನ .ಒಂದು ಈ ಉರಿಲಿಂಗ ಪೆದ್ದಿಗಳ ಪುಣ್ಯ ಸ್ತ್ರೀ ಕಾಳವ್ವೆ, ಎರಡನೆಯದು ಕದಿರೆ ಕಾಯಕದ ಕಾಳವ್ವೆ, ಮೂರನೆಯದು ಬಾಚಿ ಕಾಯಕದ ಬಸವಯ್ಯಗಳ ಪುಣ್ಯ ಸ್ತ್ರೀ ಕಾಳವ್ವೆ ಮತ್ತು ನಾಲ್ಕನೆಯದು ಸಿದ್ಧ ಬುದ್ಧಯ್ಯಗಳ ಪುಣ್ಯ ಸ್ತ್ರೀ ಕಾಳವ್ವೆ.
ಈ ಕಾಳವ್ವೆಯ ಜೀವನ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಚರಿತ್ರೆಯಲ್ಲಿ ಯಾವ ಮಾಹಿತಿಯೂ ದೊರೆಯುವುದಿಲ್ಲ. ಆದರೆ ಈಕೆಯ ಗಂಡ ಉರಿಲಿಂಗ ಪೆದ್ದಿ ಮೊದಲು ಕಳ್ಳನಾಗಿದ್ದು, ನಂತರ ಪರಿವರ್ತನೆಯಾಗಿ ಶರಣನಾದನೆಂದು ಮಾತ್ರ ತಿಳಿಯುತ್ತದೆ. ಸದ್ಯ ಈಕೆ ರಚಿಸಿದ ೧೨ ವಚನಗಳು ದೊರೆತಿವೆ. 'ಉರಿಲಿಂಗಪೆದ್ದಿಗಳರಸ' ಎ೦ಬುದು ಅವುಗಳ ಅಂಕಿತ. ಭಕ್ತನ ಲಕ್ಷಣ, ವ್ರತಾಚರಣೆಯ ಮಹತ್ವ, ಪ್ರಸಾದದ ಮಹಿಮೆ, ಕಾಯಕನಿಷ್ಠೆ, ಕುಲ-ಜಾತಿಗಳ ಬಗೆಗೆ ನಿಷ್ಠುರ ವಿಡಂಬನೆ, ಈಕೆಯ ವಚನಗಳಲ್ಲಿ ತೋರುವ ಮುಖ್ಯ ಅಂಶಗಳು. ಹಾಗಾಗಿ ಶರಣೆ ಕಾಳವ್ವೆಯ ಜೀವನವನ್ನು ನಾವು ಆಕೆಯ ವಚನಗಳ ಮೂಲಕವೇ ತಿಳಿದುಕೊಳ್ಳಬೇಕಾಗುತ್ತದೆ.
ಅನುಭವ ಮಂಟಪದಲ್ಲಿ ಬಸವಣ್ಣನವರು ಅಲ್ಲಿಗೆ ಬಂದ ಸದಸ್ಯರೆಲ್ಲರಿಗೂ ' ಇಷ್ಟಲಿಂಗ ' ದೀಕ್ಷೆಯನ್ನು ನೀಡಿ ಮೊದಲು ಕಲಿಸಿದ ಪ್ರಮುಖವಾದಂತಹ ತತ್ವ ಎಂದರೆ ಅದು ಕಾಯಕ ಮತ್ತು ದಾಸೋಹ. ಹಾಗಾಗಿ ಅಲ್ಲಿದ್ದ ಎಲ್ಲರೂ ಕಾಯಕ ಪರಿಣಾಮಗಳಾಗಿದ್ದರು.ಇಂಥ ಕಾಯಕ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ತಲೆಮಾರುಗಳಿಂದ ಬಂದ ಕಸಬು ಎನ್ನುವಂತಹ ರೂಪದಲ್ಲಿರದೆ, ನಮ್ಮ ಶರಣರು ಪೂರ್ವಾಶ್ರಮದಲ್ಲಿ ಯಾವುದೇ ಜಾತಿ ಕಸಬುನಿಂದ ಬಂದವರಾಗಿದ್ದರೂ ಕೂಡ ಶರಣರಾದ ಮೇಲೆ ಅವರು ಭಿನ್ನವಾದ ಕಾಯಕವನ್ನು ಹಿಡಿದುಕೊಂಡಂತಹ ಅನೇಕ ಉದಾಹರಣೆಗಳನ್ನು ನಾವು ನೋಡುತ್ತೇವೆ. ಹೀಗಾಗಿ ಅವರೆಲ್ಲರೂ ಮೊದಲು ಕಾಯಕಕ್ಕೆ ಮೊದಲ ಆದ್ಯತೆ ಮತ್ತು ಗೌರವವನ್ನು ಕೊಡುತ್ತಿದ್ದರು; ಅದನ್ನೇ ಮುಖ್ಯವಾಗಿ ಪ್ರತಿಪಾದಿಸಿದವರು. ಇದಕ್ಕೆ ಉದಾಹರಣೆಯಾಗಿ ಈ ಕಾಳವ್ವೆಯ ಒಂದು ವಚನವನ್ನು ನಾವು ನೋಡಬಹುದು.
ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯಶುದ್ಧವಿಲ್ಲದುದು ಕಾಯಕವಲ್ಲ
ಆಸೆಯೆಂಬುದು ಭವದ ಬೀಜ
ನಿರಾಸೆಯೆಂಬುದು ನಿತ್ಯಮುಕ್ತಿ.
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ.
ಎನ್ನುವಲ್ಲಿ ಭಕ್ತನಾದವನು ಅಂದರೆ ಪರಮಾತ್ಮನ ಬಗ್ಗೆ ಶ್ರದ್ಧೆ ಉಳ್ಳವನು, ಸತ್ಯದ ಅರಿವುಳ್ಳವನು ಅವನು ಭಕ್ತ. ಇಂಥ ಭಕ್ತನಾದವನು ಬರೀ ಧ್ಯಾನದಲ್ಲೇ ಕೂಡುವುದೇ ಭಕ್ತಿ ಅಂತಲ್ಲ .ಅವನಿಗೆ ಮುಖ್ಯವಾಗಿ ಕಾಯಕ ಇರಬೇಕು. ಅದರಲ್ಲಿ ಮೋಸ ,ವಂಚನೆ, ಅಪವಿತ್ರತೆಗಳಿಗೆ ಅವಕಾಶ ಇರಬಾರದು.ಇಂಥ ಕಾಯಕದ ಬಗ್ಗೆ ಭಕ್ತನಾದವನು ಯಾವುದೇ ಮೋಹ ಆಸೆಗಳನ್ನು ಇಟ್ಟುಕೊಳ್ಳಬಾರದು.ಅದು ಅಜ್ಞಾನದ ಜೀವಕ್ಕೆ ಬೀಜ ಅಂಕುರುವಾದಂತಾಗುತ್ತದೆ. ಹಾಗಾಗಿ ಕಾಯಕ ಪರಿಣಾಮಿಗೆ ನಿರಾಸೆಯೆಂಬುದೇ ಇರಬೇಕು. ನಿರಾಸೆಯೆಂದರೆ ".......ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ತಲೆದಂಡ ತಲೆದಂಡ ಕೂಡಲಸಂಗಮದೇವ " ಎನ್ನುತ್ತಾರೆ ಬಸವಣ್ಣನವರು. ಅಂದರೆ ಭಕ್ತನಾದವನಿಗೆ ಸಂಗ್ರಹ ಗುಣ ಇರಬಾರದು.ಯಾವ ಭಕ್ತನಲ್ಲಿ ಅಂತಹ ಗುಣ ಇರುವುದಿಲ್ಲವೋ ಅವನೇ ನಿಜವಾದ ನಿತ್ಯ ಮುಕ್ತನಾಗುತ್ತಾನೆ. ಈ ಜೀವನದ ಪರಮ ಗುರಿ ಎಂದರೆ ಅದು 'ಮುಕ್ತಿ' .ಈ ಜಂಜಡದಿಂದ ಮುಕ್ತಿ ಆಗಬೇಕೆಂಬುದು, ಬಿಡುಗಡೆಗೊಳ್ಳಬೇಕೆಂಬುದು ಪ್ರತಿಯೊಬ್ಬ ಮನುಷ್ಯನ ಸಹಜವಾದ ಅಭಿಪ್ರಾಯ ಅಪೇಕ್ಷೆ, ಆಸೆಯಾಗಿದೆ .ಹಾಗಾಗಿ ಆಕೆ ಇಂತಹ ಕಾಯಕ, ಸತ್ಯ ಶುದ್ಧತೆಯ ಭಕ್ತಿ ಪರಮಾತ್ಮನಿಗೆ ಸಮೀಪವಾದದ್ದು ಎಂದು ಹೇಳುತ್ತಾಳೆ.
ಕಾಯಕ ಪರಿಣಾಮಯಾದ ಭಕ್ತ ಸತ್ಯ ಮತ್ತು ಶುದ್ಧತೆಯಿಂದ ಪರಿಪೂರ್ಣನಾದವನಾಗಿರಬೇಕು ಎಂಬುದು ಈ ಕಳವೆಯ ಸ್ಪಷ್ಟ ನಿಲುವು ಎಂಬುದನ್ನು ನಾವೀಗಾಗಲೇ ತಿಳಿದುಕೊಂಡಿದ್ದೇವೆ .ಈಗ ಮುಂದುವರೆದು ತಾನು ಕಂಡಿರುವ ಭಕ್ತರನ್ನು ಮತ್ತೊಂದು ವಚನದಲ್ಲಿ ಹೇಗೆ ಹೇಳುತ್ತಾಳೆ,.....
ತೂಬರದ ಕೊಳ್ಳಿಯಂತೆ ಉರಿವಾತ ಭಕ್ತನೆ?
ಹುಸಿದು ತಂದು ಮಾಡುವಾತ ಭಕ್ತನೆ?
ಭಕ್ತರ ಕುಲವನೆತ್ತಿ ನಿಂದಿಸುವಾತ ಭಕ್ತನೆ?
ತನ್ನ ಪ್ರಾಣದ ಮೇಲೆ ಬಂದಡೂ ಬರಲಿ, ಇವರ ಬಿಡಬೇಕು.
ಬಿಡದಿರಲು ಉರಿಲಿಂಗ ಪೆದ್ದಿಗಳರಸನೊಲ್ಲನವ್ವಾ.
ಭಕ್ತನಾದವನು ಟೊಳ್ಳಾದ ಅಂದರೆ ಬೆಂಕಿಗೆ ಸುಲಭವಾಗಿ ಹೊತ್ತಿಕೊಳ್ಳುವ ಕಟ್ಟಿಗೆಯಂತವನಲ್ಲ, ಕಾಯಕದಿಂದ ಮಾತ್ರವಲ್ಲದೇ ಸುಳ್ಳು ಕಾರಣ ಹೇಳಿ ದುಡಿಯದೇ ಪ್ರತಿಫಲವ ತರುವವನಲ್ಲ, ಇಷ್ಟಲಿಂಗ ದೀಕ್ಷಿತನಾಗಿ,ಭಕ್ತನೆನಿಸಿದ ಮೇಲೆ ಜಾತಿ ಗೋತ್ರವ ನೋಡುವವನಲ್ಲ, ಒಂದು ವೇಳೆ ಭಕ್ತನೆನಿಸಿಕೊಂಡೂ ಸಹ ಭಕ್ತರನ್ನು ನಿಂದಿಸಿದರೆ ಅತ್ಯಂತ ಕೀಳು ಪ್ರಾಣಿ ಎನಿಸಿಕೊಂಡ ಹಂದಿಯ ಹೊಟ್ಟೆಯಲ್ಲಿ ಕೋಟ್ಯಾಂತರ ಬಾರಿ ಜನ್ಮತಾಳಬೇಕಾಗುತ್ತದೆ. ಇಲ್ಲವೇ ಕುಷ್ಠ ರೋಗಿಯ ಅಥವ ದಾಸಿಯ ಗರ್ಭದಲ್ಲಿ ಏಳೇಳು ಬಾರಿ ಹುಟ್ಟಬೇಕಾಗುತ್ತದೆ. ಹಾಗಾಗಿ ಭಕ್ತನಾದವನಿಗೆ ತನ್ನ ಪ್ರಾಣಕ್ಕೆ ಏನೇ ಕಷ್ಟಗಳು ಬಂದರೂ ಸಹ ತನ್ನ ಸತ್ಯತನವನ್ನು ಬಿಡದೇ ಪಾಲಿಸಬೇಕು; ಅಂಥವನೇ ನಿಜವಾದ ಭಕ್ತ ಎನಿಸಿಕೊಳ್ಳುತ್ತಾನೆ.
ಇಂಥ ಭಕ್ತ ತನ್ನ ಸತ್ಯ ಶುದ್ಧತೆ ನೆಲೆಯ ಕಾಯಕದಿಂದ ಬಂದ ಪ್ರತಿಫಲದಿಂದ ದಾಸೋಹ ಮಾಡುತ್ತಾನೆ .ಆ ದಾಸೋಹದಲ್ಲಿ ಆರೋಗಣೆ ಮಾಡುವುದನ್ನು ಪ್ರಸಾದ ಎನ್ನುತ್ತೇವೆ. ಇಂತಹ ಪ್ರಸಾದದ ಬಗ್ಗೆ ಕಾಳವ್ವೆ ಹೀಗೆ ಹೇಳುತ್ತಾಳೆ.
ಉಂಡೊಡೆಯರಲ್ಲಿ ಕೊಂಬ ಪ್ರಸಾದ ಕಾರಿದ ಕೂಳು.
ಸಣ್ಣವರಲ್ಲಿ ಕೊಂಬ ಪ್ರಸಾದ ಸಂತೆಯ ಸೂಳೆಯ ಎಂಜಲು.
ಅಳಿಯನಲ್ಲಿ ಕೊಂಬ ಪ್ರಸಾದ ಅಮೇಧ್ಯ.
ಮಕ್ಕಳಲ್ಲಿ ಕೊಂಬ ಪ್ರಸಾದ ಗೋಮಾಂಸ.
ತಮ್ಮನಲ್ಲಿ ಕೊಂಬ ಪ್ರಸಾದ ಸಿಂಗಿ .
ನಂಟರಲ್ಲಿ ಕೊಂಡು ಪ್ರಸಾದ ನರಮಾಂಸ.
ವಂದಿಸಿ ನಿಂದಿಸಿ ಕೊಂಬ ಪ್ರಸಾದವ
ಉರಿಲಿಂಗಪೆದ್ದಿಗಳ ರಸನೊಲ್ಲನವ್ವಾ.
ಭಕ್ತನಾದವನು ಅಥವಾ ಜಂಗಮನಾದವನು ಪ್ರಸಾದ ಸ್ವೀಕರಿಸಬೇಕಾದರೆ, ಪ್ರಸಾದವನ್ನು ಆರೋಗಣೆ ಮಾಡಿಸುವವನು ಅಂದರೆ ದಾಸೋಹಿಯಾದವನು ಕಡ್ಡಾಯವಾಗಿ ಕಾಯಕ ಪರಿಣಾಮ ಆಗಿರಬೇಕು ಎಂಬುದು ಶರಣರ ಸಿದ್ಧಾಂತ.ಆದರೆ ಭಕ್ತವೇಷಧಾರಿಗಳಾದವರು ಅಂತಹ ಕಾಯಕ ಪರಿಣಾಮಿಗಳಲ್ಲಿ ಆರೋಗಣೆ ಮಾಡದೇ ಅಥವಾ ತಾವು ಕೂಡ ಕಾಯಕ ಮಾಡದೇ ಕೇವಲ ಒಬ್ಬ ಒಡೆಯರಲ್ಲಿ ಅಂದರೆ ದುಡಿಯದೇ ಹಿರಿಯರ ಆಸ್ತಿಯಲ್ಲಿ ಯಾರೋ ದುಡಿದು ಸಂಪಾದಿಸಿಕೊಟ್ಟ ಅನ್ನವನ್ನು ಉಣ್ಣುವವರಿಂದ ಪಡೆದು ತಾವು ತಿನ್ನುವುದು ಅದು ಪ್ರಸಾದವೆನಿಸಿಕೊಳ್ಳುವುದಿಲ್ಲ. ಬದಲಿಗೆ ನಾವು ಸೇವಿಸಿದ ಆ ಅನ್ನ ಅಜೀರ್ಣವಾಗಿ ವಾಪಸ್ಸು ವಾಂತಿ ಮಾಡಿಕೊಂಡಾಗ ಬರುವ ಅಂದರೆ ಕಾರಿಕೊಂಡ ಕೂಳಿನಂತೆ ಅದು ಭಾಸವಾಗುತ್ತದೆ .ಹಾಗೇ ತಾನು ದುಡಿಯದೇ, ತನಗಿಂತಲೂ ಚಿಕ್ಕವರಲ್ಲಿ ಅವರು ದುಡಿದವರೋ, ದುಡಿಯದವರೋ ಅವರಲ್ಲಿ ಇರುವಂತಹ ಅನ್ನವನ್ನು ಪಡೆದು ತಿಂದರೆ ಅದು ಸಂತೆಯಲ್ಲಿ ಸುಳಿದಾಡುವ ಅತ್ಯಂತ ಕೆಟ್ಟ ಸ್ಥರದ ಹೆಣ್ಣಾದ ಸೂಳೆಯ ಎಂಜಲಿನಂತೆ. ಮತ್ತೊಂದು, ಮನೆಯ ಅಳಿಯನ ಮನೆಯಲ್ಲಿ ಪ್ರೀತಿಯ ಊಟ ಎಂದು ಪ್ರಸಾದ ಮಾಡಿದರೆ ಅದು ಕೂಡ ಅಮೇಧ್ಯ ಅಂದರೆ ಮಾಂಸದಂತೆ. ನಮಗಿಂತ ಚಿಕ್ಕವನು ನಮ್ಮ ತಮ್ಮ ಎಂದು ಅವನ ಸಂಪಾದನೆಯನ್ನು ತಿಂದರೆ ಅದು ಸರ್ಪದ ವಿಷದಂತೆ.ನಮ್ಮ ಬಂಧುಗಳು ಎಂಬ ಭಾವದಿಂದ ಅವರ ಮನೆಯಲ್ಲಿ ಅವರು ದುಡಿದದ್ದರಲ್ಲಿ ಉಂಡರೆ ಅದು ನಿರ್ಮಾಣಕ್ಕೆ ಸಮವಾಗುತ್ತದೆ.ಅಷ್ಟೇ ಅಲ್ಲ ನಾವು ದುಡಿಯದೇ ಅಂದರೆ ಕಾಯಕ ಮಾಡದೆ ಯಾರನ್ನೋ ನಿಂದಿಸಿಯಾಗಲೀ,ಅಥವ ಅವರಲ್ಲಿ ಬೇಡಿಯಾಗಲಿ ತಿಂದರೆ ದೇವನು ಒಪ್ಪಲಾರ ಎನ್ನುತ್ತಾಳೆ. ಅಷ್ಟೇ ಅಲ್ಲ,
ನಿಂದಿಸಿ ಕೊಂಬ ಪ್ರಸಾದ ಕುನ್ನಿಯ ಪ್ರಸಾದ,
ಅವರು ತ್ರಿವಿಧಕ್ಕೆ ಇಚ್ಛಿಸರು.
ಅಲ್ಲಿ ನಿಂದಿಸಿ ಅವರ ಬಿಟ್ಟಲ್ಲಿ,
ಅವರ ಹಿಂದೆ ಕೊಂಡುದು ಅವರ ಮಲ ಮೂತ್ರ ;
ಮುಂದೆ ಹುಳುಗೊಂಡವಯ್ಯಾ,
ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.
ಪ್ರಸಾದವು ಭಕ್ತನಲ್ಲಿ ಪ್ರಸನ್ನತಾ ಭಾವವನ್ನು ಫುಳಕಗೊಳಿಸುವಂಥದ್ದು.ಇಂಥ ಭಾವ ಭಕ್ತನಲ್ಲಿ ಮೂಡಬೇಕಾದರೆ ಆ ಪ್ರಸಾದವು ಕಾಯಕದ ಮೂಲದಿಂದ ಬಂದು,ದಾಸೋಹವಾಗಿ ಆರೋಗಣೆಗೊಳ್ಳುವಾಗ....".......ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೇಕು....." ಎಂದು ಗುರು ಬಸವಣ್ಣನವರು ಹೇಳುತ್ತಾರೆ. ಹೀಗಿದ್ದಾಗ,ಆರೋಗಣೆಯ ವೇಳೆಯಲ್ಲಿ ಪ್ರಸನ್ನತಾ ಭಾವದಿಂದ ಶಿವಶರಣರನ್ನು ನೆನೆಯದೇ ಮನೋ ವಿಕಾರದಿಂದ ಮತ್ತೊಬ್ಬರನ್ನು ನಿಂದಿಸುತ್ತ,ಜರಿಯುತ್ತ ಆರೋಗಣೆ ಮಾಡುವದು ಭಕ್ತನ ಪ್ರಸಾದ ಸೇವನೆ ಎನಿಸದೇ ಅದು ನಾಯಿಯೊಂದು ತಿಂದಂತಾಗುತ್ತದೆ. ಇಂಥ ಮನೋವಿಕಾರಿಗಳು ಗುರು ಲಿಂಗ ಜಂಗಮರನ್ನು ಗೌರವಿಸಲು ಬಯಸದವರು, ಇಂಥ ಮನೋವಿಕಾರಿಗಳು ಮತ್ತೊಬ್ಬರನ್ನು ನಿಂದಿಸುತ್ತ ಆರೋಗಣೆ ಮಾಡಿದರೆ ಅದು ತಾವು ನಿಂದಿಸಿದವರ ಮಲಮೂತ್ರ ಸೇವಿಸಿದಂತಾಗುತ್ತದೆ. ಪ್ರಸಾದವನಾರೋಗಿಸುವವನ ಇಂಥ ಮನಸ್ಥಿತಿ ಆ ದೇವನಿಗೆ ಸಲ್ಲದು ಎನ್ನುತ್ತಾಳೆ.
ಹೀಗೆ ಕಾಯಕ,ಭಕ್ತ ಮತ್ತು ಪ್ರಸಾದಗಳ ಕುರಿತಾಗಿ ನಿರೂಪಿಸಿದ ಶರಣೆ ಕಾಳವ್ವೆ ಮುಂದುವರೆದು ವ್ರತದ ಬಗೆಗೂ ಮಾತನಾಡುವದನ್ನು ನಾವು ಗಮನಿಸಬಹುದಾಗಿದೆ.
ಅರ್ಥಪ್ರಾಣಾಭಿಮಾನದ ಮೇಲೆ ಬಂದಡೂ ಬರಲಿ,
ವ್ರತಹೀನನ ನೆರೆಯಲಾಗದು;
ನೋಡಲು ನುಡಿಸಲು ಎಂತೂ ಆಗದು.
ಹರಹರಾ,ಪಾಪ ವಶದಿಂದ ನೋಡಿದಡೆ,
ರುದ್ರ ಜಪ ಮಾಹೇಶ್ವರಾ ರಾಧನೆಯ ಮಾಳ್ಪುದು.
ಇಂತಲ್ಲದವರ ಉರಿಲಿಂಗ ಪೆದ್ದಿಗಳರಸ ನಕ್ಕು ಕಳೆವನವ್ವಾ.(ವ.ಸಂ.೧)
ವ್ರತಸ್ಥ ಅಂದರೆ ದೇವರು, ಧರ್ಮ ಮತ್ತು ಆಧ್ಯಾತ್ಮಿಕತೆಗಳಲ್ಲಿ ಬದ್ಧತೆ,ಸಂಕಲ್ಪ ಹಾಗೂ ಪ್ರತಿಜ್ಞಾ ಭಾವಗಳುಳ್ಳವನೆಂದು ಅರ್ಥೈಸಲಾಗಿದೆ.ಆದರೆ ತಾನು ವ್ರತಸ್ಥ ಎಂದು ಹೇಳಿಕೊಳ್ಳುತ್ತಲೇ ದೇವರು,ಧರ್ಮ, ಆಧ್ಯಾತ್ಮಿಕತೆಗಳಲ್ಲಿ ಬದ್ಧತೆ,ಸಂಕಲ್ಪ ಮತ್ತು ಪ್ರತಿಜ್ಞಾ ಭಾವವಿಲ್ಲದಿದ್ದರೆ ಇಂಥವರನ್ನು ಯಾವತ್ತೂ ಮಾತನಾಡಿಸಲೂ ಆಗದು,ಏಕೆಂದರೆ ಇಂಥವರು ಯಾರ ಮೇಲೂ ಭಕ್ತಿ ಮತ್ತು ಗೌರವಗಳನ್ನು ಹೊಂದಿದವರಲ್ಲ.ಮೇಲಾಗಿ ಎಲ್ಲವನ್ನೂ ಪಾಪ ವಶದಿಂದಲೇ ನೋಡುತ್ತಾರೆ.ಹಾಗಾಗಿ ಇಂಥವರು ವ್ರತಧಾರಿಗಳಾಲು ಸಾಧ್ಯವಿಲ್ಲ ಎನ್ನುತಾಳೆ. ಅಲ್ಲದೇ......
ಅಯ್ಯಾ ಸೂಳೆಗೆ ಹುಟ್ಟಿದ ಮಕ್ಕಳಿಗೆ,
ಕೊಟ್ಟವರೊಳು ಸಮ್ಮೇಳನ,
ಕೊಡದವರೊಳು ಕ್ರೋಧ.
ವ್ರತಹೀನರೊಳು ಮೇಳ,
ವ್ರತ ನಾಯಕರೊಳು ಆ ಮೇಳ.
ಸುಡು ಸುಡು! ಅವರ ಕೂಡಿದಡೆ
ಉರಿಲಿಂಗಪೆದ್ದಿಗಳರಸನೊಲ್ಲನವ್ವಾ
ವ್ರತ ಎನ್ನುವದು ಕೇವಲ ದೇವರು, ಧರ್ಮ ಮತ್ತು ಆಧ್ಯಾತ್ಮಿಕಗಳಿಗಷ್ಟೇ ಸೀಮಿತವಾದದ್ದಲ್ಲ.ಅದು ದಾಂಪತ್ಯ ಜೀವನಕ್ಕೂ ಕೂಡ ಸೀಬಂಧಿಸಿದ್ದುದು.ಹಾಗಾಗಿ ಕುಟುಂಬದ ವ್ರತಸ್ಥರಾದವರು ತಮ್ಮ ಹೆಂಡತಿ ತಮ್ಮ ಗಂಡ ಎಂಬ ಬದ್ಧತೆಯಲ್ಲಿಯೇ ಬದುಕುವದೇ ಸಾರ್ಥಕವಾದುದು.ಆದರೆ ಇಂಥ ವ್ರತದ ಬದ್ಧತೆಯನ್ನು ಅನುಸರಿಸದವರು ವ್ರತಹೀನರು; ಅಂಥವರನ್ನು ಸುಡಲೇಬೇಕೆಂದು ಹೇಳುತ್ತಾಳೆ.
ಹಾಗೆಯೇ ಮುಂದುವರೆದು ವ್ರತದ ಮಹತ್ವದ ಬಗ್ಗೆ ಹೇಳುತ್ತ......
ವ್ರತವೆಂಬುದು ನಾಯಕರತ್ನ;
ವ್ರತವೆಂಬುವದು ಸುಪ್ಪಾಣಿಯ ಮುತ್ತು.
ವ್ರತವೆಂಬುದು ಜೀವನ ಕಳೆ;
ವ್ರತವೆಂಬುದು ಸುಯಿದಾನ,
ವ್ರತ ತಪ್ಪಲು, ಉರಿಲಿಂಗ ಪೆದ್ದಿಗಳರಸನೊಲ್ಲನವ್ವಾ.
ಎಂಬೀ ವಚನದಲ್ಲಿ ದೇವರು, ಧರ್ಮ ಮತ್ತು ಆಧ್ಯಾತ್ಮಿಕತೆಗಳಲ್ಲಿ ಶ್ರದ್ಧೆ, ಬದ್ಧತೆಗಳಂಥ ಮೌಲ್ಯಗಳನ್ನು ಅಳವಡಿಸಿಕೊಂಡವನೇ ನಿಜವಾದ ವ್ರತಧಾರಿ. ವ್ರತಧಾರಿಯಾದವನು ನಿಜಕ್ಕೂ ವ್ರತಾಚಾರಿಗಳನ್ನು ನಾಯಕರತ್ನ ಎನ್ನುತ್ತಾಳೆ. ಇಂಥ ಪರಿಶುದ್ಧವಾದ ವ್ರತವು ಕಪ್ಪೆಚಿಪ್ಪಿನಲ್ಲಿ ದೊರೆದ ಸುಪ್ಪಾಣಿಯಂತೆ, ವ್ರತವೆಂಬುದು ಜೀವನ ಕಳೆ, ವ್ರತವೆಂಬುದು ಸುಳಿದಾಡುವ(ಅರಿವು-ಎಚ್ಚರ) ಇಂಥ ವ್ರತಸ್ಥನು ತನ್ನ ಪ್ರಜ್ಞೆಯನ್ನು ಕಳೆದುಕೊಂಡರೆ ಅದು ಆಗ ದೇವರಿಗೆ ಸಲ್ಲುವುದಿಲ್ಲ ಎನ್ನುತ್ತಾ ಕೊನೆಯದಾಗಿ........
ವ್ರತ ಹೋದಾಗಳೆ ಇಷ್ಟಲಿಂಗದ ಕಳೆ ನಷ್ಟವವ್ವಾ,
ಅವರು ಲಿಂಗವಿದ್ದೂ ಭವಿಗಳು.
ಅದು ಹೇಗೆಂದಡೆ : ಪ್ರಾಣವಿಲ್ಲದ ದೇಹದಂತೆ.
ಉರಿಲಿಂಗಪೆದ್ದಿಗಳರಸ ಬಲ್ಲನೊಲ್ಲನವ್ವಾ.
ಭಕ್ತನಾದವನು ವ್ರತದ ಬದ್ಧತೆಯ ಗುಣವನ್ನು ಕಳೆದುಕೊಂಡರೆ, ಅದರಿಂದ ಇಷ್ಟಲಿಂಗದ ಕಳೆಯೇ ನಷ್ಟವಾಗುತ್ತದೆ;ಅವರು ಲಿಂಗವಿದ್ದೂ ಪ್ರಾಣವಿಲ್ಲದ ದೇಹದಂತೆ ಭವಿಗಳಾಗುತ್ತಾರೆ, ಎನ್ನುತ್ತಾಳೆ.
ಹೀಗೆ ಕಾಯಕ, ಭಕ್ತ,ಪ್ರಸಾದ ಹಾಗೂ ವ್ರತಗಳ ಬಗೆಗೆ ಹೇಳಿದ ನಂತರ ಕೊನೆಯದಾಗಿ.....
ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜ ಕುಲಜರಂದೆಂಬರು.
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳು ಜಾತಿ ಎಂಬರು.
ಅವರೆಂತು ಕೀಳು ಜಾತಿಯಾದರು?
ಜಾತಿಗಳು ನೀವೇಕೆ ಕೀಳಾಗಿರೊ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು.
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು.
ಅದೆಂತೆಂದಡೆ ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು.
ಸಿದ್ದಲಿಂಗಯ್ಯ ತುಪ್ಪವನ್ನು ಸಗ್ಗಡೆಯ ನೇರನು
ಶುದ್ಧವೆಂದು ಕುಡಿಯುವ ಬುದ್ಧಿಗೆ ನಾಯಕ ನರಕ ತಪ್ಪದಯ್ಯಾ.
ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.
ಎನ್ನುವ ಈ ವಚನದಲ್ಲಿ ಕಾಳವ್ವೆ ಬಹು ಮಹತ್ವವಾದ ಪ್ರಶ್ನೆಯನ್ನು ಇಡುತ್ತಾಳೆ. ಈ ಸಮಾಜದಲ್ಲಿ ಮೇಲ್ಜಾತಿಯವರಾಗಲಿ, ಕೆಳ ಜಾತಿಯವರಾಗಲಿ, ಮಾಂಸಹಾರವನ್ನು ಬಿಟ್ಟಿಲ್ಲ. ಆದರೂ ಮೇಲ್ಜಾತಿಯವರು ಮಾಂಸಹಾರವನ್ನು ಕೀಳು ಜನ ಎಂದು ಶ್ರೇಣಿಕೃತ ವ್ಯವಸ್ಥೆಯಲ್ಲಿ ಗುರುತಿಸುತ್ತಾರೆ. ಆದರೆ ಕೀಳು ಜೀವಿಗಳಲ್ಲಿ ಗುರುತಿಸಿಕೊಂಡಿರುವ ಕುರಿ, ಕೋಳಿ, ಮೀನನ್ನು ತಿನ್ನುವವರು ಮೇಲ್ಜಾತಿಯವರು. ಶ್ರೇಷ್ಠ ಪ್ರಾಣಿಯಾದ ೩೩ ಕೋಟಿ ದೇವತೆಗಳ ವಾಸಸ್ಥಾನವೆನಿಸಿದ ಗೋವನ್ನು ತಿನ್ನುವವರು ಕೆಳ ಜಾತಿಯ ಮಾದಿಗರು. ಕೀಳು ಜೀವಿಗಳಾದ ಕುರಿ, ಕೋಳಿ, ಮೀನುಗಳನ್ನು ತಿನ್ನುವವರು ಮೇಲ್ಜಾತಿಯವರು, ಶ್ರೇಷ್ಠ ಪ್ರಾಣಿಯಾದಂತಹ ಪಶುವನ್ನು ತಿನ್ನುವವ ಕೆಳಜಾತಿಯ ಮಾದಿಗ. ಕೀಳು ಜೀವಿಗಳನ್ನು ತಿನ್ನುವವ ಮೇಲ್ಜಾತಿಯವ, ಶ್ರೇಷ್ಠ ಪ್ರಾಣಿ ತಿನ್ನುವವ ಕೆಳ ಜಾತಿಯವನಾದುದು ಹೇಗೆ ಎಂಬುದು ಈಕೆಯ ಬಹಳ ಮಹತ್ವದ ಪ್ರಶ್ನೆಯಾಗಿದೆ. ಯಾವ ಕಾಲಕ್ಕೂ ಇದಕ್ಕೆ ಉತ್ತರ ಸಿಗದೇ ಈ ವ್ಯವಸ್ಥೆ ಆಕೆಯ ಪ್ರಶ್ನೆಗೆ ತತ್ತರಿಸಿ ಹೋಗಿದೆ.
ಹೀಗೆ ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಶರಣ ಸಿದ್ದಾಂತಗಳನ್ನು ಮತ್ತು ಸಾಮಾಜಿಕ ನೀತಿಗಳನ್ನು ವೈಚಾರಿಕ ನೆಲೆಯಲ್ಲಿ, ಸೈದ್ಧಾಂತಿಕ ಬದ್ಧತೆಯ ನೆಲೆಯಲ್ಲಿ ನಿರೂಪಿಸುತ್ತಾ, ಇಡೀ ಶರಣ ಗಣದಲ್ಲಿ ಬಹು ಬೆರಗಿನ ಶರಣೆಯಾಗಿ ನಿಲ್ಲುತ್ತಾಳೆ.
ಕೃತಯುಗ ಮುವತ್ತೆರಡುಲಕ್ಷವರುಷದಲ್ಲಿ ಹೋಮವನಿಕ್ಕುವಾಗ
ಕುಂಜರನೆಂಬ ಆನೆಯ ಕೊಂದು ಹೋಮವನಿಕ್ಕಿದರು ಬ್ರಾಹ್ಮಣರು.
ತ್ರೇತಾಯುಗ ಹದಿನಾರುಲಕ್ಷವರುಷದಲ್ಲಿ ಬ್ರಾಹ್ಮಣರು ಹೋಮವನಿಕ್ಕುವಾಗ
ಮಹಿಷನೆಂಬ ಕರಿ ಎಮ್ಮೆಯ ಮಗನ ಕೊಂದು ಹೋಮವನಿಕ್ಕಿದರು ಬ್ರಾಹ್ಮಣರು
ದ್ವಾಪರಯುಗ ಎಂಟುಲಕ್ಷವರುಷದಲ್ಲಿ ಹೋಮವನಿಕ್ಕುವಾಗ
ಅಶ್ವನೆಂಬ ಕುದುರೆಯ ಕೊಂದು ಹೋಮವನಕ್ಕಿದರು ಬ್ರಾಹ್ಮಣರು,
ಕಲಿಯುಗ ನಾಲ್ಕುಲಕ್ಷವರುಷದಲ್ಲಿ ಹೊಮವನಿಕ್ಕುವಾಗ
ಜಾತಿಯಾಡಿನ ಮಗನ ಹೊತನಕೊಂದು ಹೋಮವನಿಕ್ಕಿದರು ಬ್ರಾಹ್ಮಣರು
"ಅಣೋರಣೀಯಾನ್ ಮಹತೋ ಮಹಿಯಾನ್ "ಎಂದುದಾಗಿ,
ಶಿವಭಕ್ತ ಹೊತ್ತಾರೆಯೆದ್ದು ಗುರುಲಿಂಗಜಂಗಮಕ್ಕೆ ಶರಣೆನ್ನದೆ
ಮುನ್ನ ಒಂಟಿಬ್ರಾಹ್ಮಣನ ಕಂಡು ಶರಣಾರ್ಥಿ ಎಂದಡೆ
ಎಂಭತ್ತುನಾಲ್ಕು ಲಕ್ಷ ಯೋನಿಯಲ್ಲಿ
ಹಂದಿಯ ಬಸುರಲ್ಲಿ ಬಪ್ಪುದು ತಪ್ಪುದು ಕಾಣಾ,
ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ / ಕಾಳವ್ವೆ ಸವಸ5/734/5
ಭಕ್ತನ ಲಕ್ಷಣ, ವ್ರತಾಚರಣೆಯ ಮಹತ್ವ, ಪ್ರಸಾದದ ಮಹಿಮೆ, ಕಾಯಕನಿಷ್ಠೆ ಈಕೆಯ ವಚನಗಳಲ್ಲಿ ಕಂಡು ಬರುವ ಮುಖ್ಯ ವಿಷಯಗಳು. ಈಕೆ ಏಕೈಕ ದಲಿತ ವಚನಕಾರ್ತಿ. ಈಕೆಯ ಪತಿ ಉರಿಲಿಂಗಪೆದ್ದಿ ಕನ್ನಡದ ಶ್ರೇಷ್ಠ ಅನುಭಾವಿ - ವಚನಕಾರ. ಕೆಳವರ್ಗಕ್ಕೆ ಸೇರಿದ ಈತ ಉರಿಲಿಂಗದೇವರ ಕೃಪೆಗೆ ಪಾತ್ರನಾಗಿ ಕೊರಳಿಮಠದ ಪಟ್ಟವನ್ನು ವಹಿಸಿದುದು ಮಹತ್ವದ ಸಂಗತಿ.
| ಉರಿಲಿಂಗಪೆದ್ದಿ :👈 | 👉:ಉಳಿಯುಮೇಶ್ವರ ಚಿಕ್ಕಣ್ಣ |