ದುಗ್ಗಳೆ

*
ಅಂಕಿತ: ದಾಸಯ್ಯ ಪ್ರಿಯ ರಾಮನಾಥ
ಕಾಯಕ: ನೆಯ್ಗೆ

೭೮೫
ಬಸವಣ್ಣನಿಂದ ಗುರುಪ್ರಸಾದಿಯಾದೆನು.
ಚೆನ್ನಬಸವಣ್ಣನಿಂದ ಲಿಂಗಪ್ರಸಾದಿಯಾದೆನು.
ಪ್ರಭುದೇವರಿಂದ ಜಂಗಮಪ್ರಸಾದಿಯಾದೆನು.
ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು.
ಇಂತೀ ಚತುರ್ವಿಧವು ಏಕೀಭವಿಸಿ ಪ್ರಾಣಲಿಂಗವಾದ
ಮಹಾಮಹಿಮಂಗೆ ಶರಣೆಂದು ಬದುಕಿದೆನಯ್ಯಾ
ದಾಸಯ್ಯಪ್ರಿಯ ರಾಮನಾಥ.

ಈಕೆ ಜೇಡರ ದಾಸಿಮಯ್ಯನ ಧರ್ಮಪತ್ನಿ. ಸ್ಥಳ ಮುದನೂರು. ಕಾಯಕ ಬಟ್ಟೆ ನೇಯುವುದು. ಪುರಾಣಗಳಲ್ಲಿ ದಾಸಿಮಯ್ಯನ ಜೊತೆ ಈಕೆಯ ಕಥೆ ಪ್ರಸಿದ್ಧವಾಗಿದೆ. ಈಕೆಯ ಎರಡು ವಚನಗಳು ದೊರೆತಿವೆ. ಅಂಕಿತ 'ದಾಸಯ್ಯ ಪ್ರಿಯ ರಾಮನಾಥ'. ಅವುಗಳಲ್ಲಿ ಬಸವ, ಅಲ್ಲಮ, ಚೆನ್ನಬಸವ, ಮರುಳ ಶಂಕರದೇವ, ಸಿದ್ಧರಾಮ, ಅಜಗಣ್ಣರನ್ನು ನೆನೆದಿದ್ದಾಳೆ. ಇದರಿಂದ ಬಸವಣ್ಣನವರ ಕಾಲದಲ್ಲಿ ಈಕೆ ಬದುಕಿದ್ದಳೆಂದು ತಿಳಿದುಬರುತ್ತದೆ.

೭೮೬
ಭಕ್ತನಾದಡೆ ಬಸವಣ್ಣನಂತಾಗಬೇಕು.
ಜಂಗಮವಾದಡೆ ಪ್ರಭುದೇವರಂತಾಗಬೇಕು.
ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು.
ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು.
ಐಕ್ಯನಾದಡೆ ಅಜಗಣ್ಣನಂತಾಗಬೇಕು.
ಇಂತಿವರ ಕಾರುಣ್ಯಪ್ರಸಾದವ ಕೊಂಡು
ಸತ್ತಹಾಗಿರಬೇಕಲ್ಲದೆ ತತ್ವದ ಮಾತು ಎನಗೇಕಯ್ಯಾ
ದಾಸಯ್ಯಪ್ರಿಯ ರಾಮನಾಥಾ ?


*
Previousದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮದೇಶಿಕೇಂದ್ರ ಸಂಗನಬಸವಯ್ಯNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.