*
ಸತ್ಯಕ್ಕ
ಅಂಕಿತ: |
ಶಂಭು ಜಕ್ಕೇಶ್ವರಾ |
ಕಾಯಕ: |
ಶರಣರ ಮನೆಯ ಅಂಗಳದ ಕಸಗುಡಿಸುವುದು |
1219
ತಲೆಯ ಮೇಲೆ ತಲೆಯುಂಟೆ ?ಹಣೆಯಲ್ಲಿ ಕಣ್ಣುಂಟೆ ?
ಗಳದಲ್ಲಿ ವಿಷವುಂಟೆ ? ದೇವರೆಂಬವರಿಗೆಂಟೊಡಲುಂಟೆ ?
ತಂದೆಯಿಲ್ಲದವರುಂಟೆ ? ತಾಯಿಯಿಲ್ಲದವರುಂಟೆ ?
ಎಲವೊ, ನಿನ್ನ ಹಣೆಯಲ್ಲಿ ನೇಸರುಮೂಡದೆ ?
ಶಂಭುಜಕ್ಕೇಶ್ವರನಲ್ಲದೆ ಉಳಿದ ದೈವಂಗಳುಂಟೆ ?
ಈಕೆಯ ಸ್ಥಳ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಹಿರೇಜಂಬೂರು. ಶಿವಭಕ್ತರ ಮನೆಯ ಅಂಗಳ ಕಸಗುಡಿಸುವುದು
ಈಕೆಯ ಕಾಯಕ. 'ಶಂಭುಜಕ್ಕೇಶ್ವರ' ಅಂಕಿತದಲ್ಲಿ ೨೭ ವಚನಗಳು ಲಭಿಸಿವೆ. ಶಿವಪಾರಮ್ಯ, ಜೊತೆಗೆ ಸದ್ಭಕ್ತರ
ಮಹಿಮೆ, ಸತಿ-ಪತಿ ಭಾವ, ಸದಾಚಾರದಲ್ಲಿ ನಡೆಯುವ ಗುರು-ಶಿಷ್ಯ-ಜಂಗಮರ ಗುಣಲಕ್ಷಣ, ಡಾಂಭಿಕ ಭಕ್ತರ ಟೀಕೆ,
ಸ್ತ್ರೀಪುರುಷ ಸಮಾನತೆಯ ಸಂದೇಶ ಇಲ್ಲಿ ವ್ಯಕ್ತವಾಗಿದೆ.
1229
ಲಂಚವಂಚನಕ್ಕೆ ಕೈಯಾನದಭಾಷೆ.
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಅದೇನು ಕಾರಣವೆಂದರೆ, ನೀವಿಕ್ಕಿದ ಬಿಕ್ಷದಲ್ಲಿಪ್ಪೆನಾಗಿ.
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೆ ಎನ್ನ ನರಕದಲ್ಲಿ ಅದ್ದಿ ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ.
ಶಿವಪಾರಮ್ಯ ಹಾಗೂ ಏಕದೇವೋಪಾಸನಾನಿಷ್ಠೆ. ಸತಿ - ಪತಿ ಭಾವದ ನಿರೂಪಣೆ ಅವಳ ವಚನಗಳಲ್ಲಿದೆ. ಲಿಂಗ ಭೇದವನ್ನು ಅಲ್ಲಗಳೆಯುವ ಈಕೆ, ಪುರುಷಸಮಾನತೆಯನ್ನು ಎತ್ತಿ ಹಿಡಿದಿರುವಳು.
ಉದಕದೊಳಗಣ ಕಿಚ್ಚಿನಂತೆ ಲಿಂಗೈಕ್ಯವು.
ವಾಯುನುಂಗಿದ ಪರಿಮಳದಂತೆ ಲಿಂಗೈಕ್ಯವು.
ಉರಿಯೊಳಡಗಿದ ಕರ್ಪೂರದಂತೆ ಲಿಂಗೈಕ್ಯವು.
ಭಾವವನಡಸಿದ ಬಯಲಿನಂತೆ ಲಿಂಗೈಕ್ಯವು.
ಅರಿವು ನುಂಗಿದ ಮರಹಿನಂತೆ ಲಿಂಗೈಕ್ಯವು.
ಯತೋ ವಾಚೋ ನಿವರ್ತಂತೇ ಅಪ್ರಾಪ್ಯಮನಸಾ ಸಹೃ ರಿಂದುದಾಗಿ,
ವಾಙ್ಮನಕ್ಕೆ ಅಗೋಚರವಾದ ಮಹಾಶರಣನ ಒಳಗೊಂಡು
ಥಳಥಳಿಸಿ ಬೆಳಬೆಳಗಿ ಹೊಳೆವುತ್ತ,
ನಿಶ್ಶಬ್ದಬ್ರಹ್ಮವಾಗಿರ್ದನಯ್ಯಾ ನಮ್ಮ ಶಂಭುಜಕ್ಕೇಶ್ವರನು.
ಅರ್ಚನೆ ಪೂಜನೆ ನೇಮವಲ್ಲ;
ಮಂತ್ರತಂತ್ರ ನೇಮವಲ್ಲ;
ಧೂಪ ದೀಪಾರತಿ ನೇಮವಲ್ಲ;
ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ.
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ
*